ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

West Bengal Election ground report by Raghava Sharma Nidle: ಮಮತಾ ಪ್ರಾಬಲ್ಯಕ್ಕೆ ಮಹಿಳೆಯರದ್ದೇ ಪೌರೋಹಿತ್ಯ

ಹಾಲಿ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಸ್ಪರ್ಧಿಸುತ್ತಿರುವ 291 ಕ್ಷೇತ್ರಗಳಲ್ಲಿ 52 ಅಭ್ಯರ್ಥಿಗಳು ಮಹಿಳೆಯರು. ಅಂದರೆ ಶೇ.27ರಷ್ಟು ಅವರೇ ಇದ್ದಾರೆ. 253 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಿರುವ ಎಡಪಕ್ಷಗಳು 34 (ಶೇ.13.4) ಮಹಿಳೆಯರಿಗೆ ಟಿಕೆಟ್ ನೀಡಿವೆ. ಎಲ್ಲಾ 294 ಸೀಟುಗಳಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ 35 (ಶೇ. 11.9) ಮತ್ತು ಬಿಜೆಪಿ 33 (ಶೇ.11.2) ಮಹಿಳೆಯರನ್ನು ಚುನಾವಣಾ ಅಖಾಡಕ್ಕಿಳಿಸಿವೆ.

ಮಮತಾ ಪ್ರಾಬಲ್ಯಕ್ಕೆ ಮಹಿಳೆಯರದ್ದೇ ಪೌರೋಹಿತ್ಯ

-

ಗ್ರೌಂಡ್‌ ರಿಪೋರ್ಟ್‌

ವಿಶ್ವವಾಣಿ ಬಂಗಾಳ ಚುನಾವಣಾ ಯಾತ್ರೆ

ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ನಗರದಲ್ಲಿ ಹರಿಯುತ್ತಿದ್ದ ಟೋರ್ಸಾ ನದಿ ದಂಡೆಗೆ ಬೆಸೆದು ಕೊಂಡಿದ್ದ ಹಳ್ಳಿಯೊಂದರಲ್ಲಿ ಸಂಜೆ 5.30ರ ಸುಮಾರಿಗೆ ವಾಕ್ ಮಾಡುತ್ತಿದ್ದೆ. ನಾಲ್ವರು ಮಹಿಳೆ ಯರು ಗ್ರಾಮದ ಮಧ್ಯ ವಯಸ್ಸಿನ ಕಲ್ಯಾಣ್ ಬಸು ಎಂಬ ಪುರುಷನೊಬ್ಬನ ಜತೆ ಹರಟುತ್ತಿದ್ದರು.

ನನ್ನನ್ನು ಅವರಿಗೆ ಪರಿಚಯ ಮಾಡಿಕೊಂಡ ಬಳಿಕ ಮಾತನಾಡಿದ ಕಲ್ಯಾಣ್ ಬಸು, “ಬಿಜೆಪಿಯ ಮಹಿಳಾ ಮೀಸಲು ವಿಧೇಯಕವೇ ದೊಡ್ಡ ನಾಟಕ. ಬಂಗಾಳ ಚುನಾವಣೆ ಮಧ್ಯೆ ಅದನ್ನು ಮಂಡಿಸಿ, ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ ವಿಧೇಯಕದ ಜತೆ ಜೋಡಿಸಿ, ‘ವಿಧೇಯಕಕ್ಕೆ ಸೋಲಾಯ್ತು’ ಎಂದು ಮೊಸಳೆ ಕಣ್ಣೀರು ಹಾಕುವ ಬಿಜೆಪಿಯ ತಂತ್ರ ಜನರಿಗೆ ಗೊತ್ತಾಗುವುದಿಲ್ಲ ಎಂದುಕೊಂಡಿದ್ದಾರಾ?" ಎಂದು ಪ್ರಶ್ನಿಸಿದರು.

ಜತೆಗೆ “ಬಂಗಾಳದಲ್ಲಿ ಮಹಿಳೆಯರ ವೋಟುಗಳನ್ನು ಗೆಲ್ಲಲೆಂದೇ ಬಿಜೆಪಿಯು ವಿಧೇಯಕದ ನಾಟಕ ಮಾಡಿದೆ. ನಾವು ಮಮತಾ ದೀದಿಗೇ ಮತ ಹಾಕುವುದು" ಎಂದು ಖಚಿತಪಡಿಸಿದರು. ಮಾತುಕತೆ ಮಧ್ಯೆ ಪ್ರವೇಶಿಸಿದ ಮತ್ತಿಬ್ಬರು ಪುರುಷರು ಕೂಡ ಬಸುಗೆ ದನಿಗೂಡಿಸಿ, ಅಲ್ಲಿಂದ ತೆರಳಿದರು.

ನಂತರ ನಾಲ್ವರು ಮಹಿಳೆಯರಲ್ಲಿ ಮಾತನಾಡಿ, “ನಿಮ್ಮ ಮನಸ್ಸಿನಲ್ಲಿ ಏನಿದೆ? ಅವರ ಮಾತು ಗಳಿಂದ ಪ್ರಭಾವಿತರಾಗಿ ಹೇಳಬೇಡಿ" ಎಂದು ನಗುತ್ತಲೇ ಕೇಳಿದೆ. ಅವರೂ ನಗುತ್ತಾ, “ನೋಡಿ ಸರ್, ಎಲ್ಲಕ್ಕಿಂತ ಮುಖ್ಯವಾಗಿ ನಮಗೆ ಶಾಂತಿ ಮುಖ್ಯ. ನಮ್ಮ ಊರಲ್ಲಿ ಸಂಘರ್ಷ ಇಲ್ಲ. ನಾವು ಗೃಹಿಣಿ ಯರು. ಪಕ್ಷಗಳ ರಾಜಕಾರಣದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ದೀದಿ-ಮೋದಿ ಇಬ್ಬರೂ ಮಹಿಳೆಯರ ಪರ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: West Bengal Election ground report by Raghava Sharma Nidle: ಕೆಂಬಾವುಟದ ಜಾಗದಲ್ಲೀಗ ಕೇಸರಿ ಬಾವುಟ

ಸದ್ಯಕ್ಕೆ ನಮಗೆ ದೀದಿ ಜತೆ ಸಮಸ್ಯೆ ಇಲ್ಲ. ಸಂಜೆ ಭಯವಿಲ್ಲದೆ ಇಲ್ಲಿ ಹರಟುತ್ತಿದ್ದೇವೆ ಎಂದರೆ ಸುರಕ್ಷಿತರಾಗಿದ್ದೇವೆ ಎಂದೇ ಅರ್ಥ" ಎಂದು ಹೇಳಿ, ತಮ್ಮ ಮತ ಯಾರಿಗೆ ಎಂಬ ಸುಳಿವು ನೀಡಿದರು.

ಶೇ.33ರಷ್ಟು ಮಹಿಳಾ ಮೀಸಲಾತಿ ವಿಧೇಯಕಕ್ಕೆ ಲೋಕಸಭೆಯಲ್ಲಿ ಸೋಲುಂಟಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರೂ, ಪಶ್ಚಿಮ ಬಂಗಾಳದ ಮತದಾನದ ಮೇಲೆ ಅದು ಭಾರಿ ಪರಿಣಾಮ ಬೀರುವುದೇ ಎಂಬ ಬಗ್ಗೆ ಅನೇಕರಿಗೆ ಅನುಮಾನವಿದೆ.

ಏಕೆಂದರೆ, ಮಹಿಳಾ ಪ್ರಾತಿನಿಧ್ಯದ ವಿಷಯದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಎಲ್ಲಾ ಪಕ್ಷಗಳನ್ನು ಹಿಂದಿಕ್ಕಿ, ಹೆಚ್ಚು ಟಿಕೆಟ್‌ಗಳನ್ನು ಮಹಿಳೆಯರಿಗೆ ಈ ಸಲವೂ ನೀಡಿದೆ. ಭಾರತದ ಯಾವುದೇ ರಾಜಕೀಯ ಪಕ್ಷವನ್ನು ಈ ವಿಷಯದಲ್ಲಿ ಟಿಎಂಸಿ ಜತೆ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ.

ಹಾಲಿ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಸ್ಪರ್ಧಿಸುತ್ತಿರುವ 291 ಕ್ಷೇತ್ರಗಳಲ್ಲಿ 52 ಅಭ್ಯರ್ಥಿ ಗಳು ಮಹಿಳೆಯರು. ಅಂದರೆ ಶೇ.27ರಷ್ಟು ಅವರೇ ಇದ್ದಾರೆ. 253 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಿರುವ ಎಡಪಕ್ಷಗಳು 34 (ಶೇ.13.4) ಮಹಿಳೆಯರಿಗೆ ಟಿಕೆಟ್ ನೀಡಿವೆ. ಎಲ್ಲಾ 294 ಸೀಟುಗಳಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ 35 (ಶೇ. 11.9) ಮತ್ತು ಬಿಜೆಪಿ 33 (ಶೇ.11.2) ಮಹಿಳೆಯರನ್ನು ಚುನಾವಣಾ ಅಖಾಡಕ್ಕಿಳಿಸಿವೆ.

ಕಳೆದ 15 ವರ್ಷಗಳಿಂದ ಮಹಿಳಾ ಮುಖ್ಯಮಂತ್ರಿ ಇರುವ ಬಂಗಾಳದಲ್ಲಿ ಟಿಎಂಸಿ, ಮಹಿಳಾ ಪ್ರಾತಿನಿಧ್ಯಕ್ಕೆ ಆದ್ಯತೆ ನೀಡಿರುವುದು ಅದರ ರಾಜಕೀಯ ಪ್ರಾಬಲ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಹಿಂದಿನ ಹಲವು ಚುನಾವಣೆಗಳಲ್ಲಿ ಕೂಡ ಟಿಎಂಸಿ ಗಮನಾರ್ಹ ಪ್ರಮಾಣದಲ್ಲಿ ಮಹಿಳೆಯರಿಗೆ ಪ್ರಾಮುಖ್ಯ ನೀಡಿದ್ದು, 2024ರ ಲೋಕಸಭೆ ಚುನಾವಣೆಯಲ್ಲಿ ಟಿಎಂಸಿಯಿಂದ ಗೆದ್ದ 34 ಸಂಸದರ ಪೈಕಿ 12 ಮಂದಿ ಮಹಿಳೆಯರೇ ಇದ್ದಾರೆ.

Modi at shop ok

2021ರ ವಿಧಾನಸಭೆ ಚುನಾವಣೆಗೆ ಟಿಎಂಸಿ 50 ಮಹಿಳೆಯರಿಗೆ ಟಿಕೆಟ್ ನೀಡಿತ್ತು. ಈ ಬಾರಿ ಆ ಸಂಖ್ಯೆಯನ್ನು 52ಕ್ಕೆ ಏರಿಸಿದೆ. ಈ ವಾಸ್ತವ ಬಿಜೆಪಿಗೂ ಗೊತ್ತಿರುವುದರಿಂದ ಮಹಿಳಾ ಪ್ರಾತಿನಿಧ್ಯದ ವಿಷಯದಲ್ಲಿ ದೀದಿಯನ್ನು ಮೂಲೆಗುಂಪು ಮಾಡುವುದು ಕಷ್ಟ. ಕಾನೂನು-ಸುವ್ಯವಸ್ಥೆ ವಿಷಯದ ಸರಕಾರವನ್ನು ಟಾರ್ಗೆಟ್ ಮಾಡಬೇಕಿರುವುದರಿಂದ, ಅದನ್ನು ಸಾಂಕೇತಿಕವಾಗಿ ಬಿಂಬಿಸಲೆಂದೇ ಕೋಲ್ಕತ್ತಾದ ಆರ್.ಜಿ. ಕರ್ ಹಾಸ್ಪಿಟಲ್‌ನಲ್ಲಿ ಅತ್ಯಾಚಾರ- ಹತ್ಯೆಗೊಳಗಾದ ಮೆಡಿಕಲ್ ವಿದ್ಯಾರ್ಥಿನಿಯ ತಾಯಿ ರತ್ನಾ ದೇಬನಾಥ್‌ಗೆ ಪಾಣಿಹಾತಿ ಎಂಬ ಕ್ಷೇತ್ರದಲ್ಲಿ ಟಿಕೆಟ್ ನೀಡಿದೆ.

ಇದು ಟಿಎಂಸಿಯ ಪ್ರಬಲ ಮಹಿಳಾ ಮತಬ್ಯಾಂಕ್ ಅನ್ನು ತನ್ನೆಡೆಗೆ ಸೆಳೆದುಕೊಳ್ಳುವ ತಂತ್ರದ ಒಂದು ಭಾಗ. ರತ್ನ ದೇಬನಾಥ್ ಚುನಾವಣೆ ಗೆಲ್ಲುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ರಾಜ್ಯದ ಸಂತ್ರಸ್ತ, ವಂಚಿತ ಮಹಿಳೆಯರೊಂದಿಗೆ ನಾವಿದ್ದೇವೆ ಎನ್ನುವುದು ಈ ರಣನೀತಿಯ ಸಂದೇಶ.

25 ವರ್ಷ ಮೇಲ್ಪಟ್ಟ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ 1500 ರು. ನೆರವಿನ ಜತೆಗೆ ದೀದಿ ಸರಕಾರ ‘ರೂಪಶ್ರೀ’ ಯೋಜನೆಯಡಿಯಲ್ಲಿ, 22.02 ಲಕ್ಷ ಮಹಿಳೆಯರಿಗೆ ಅವರ ವಿವಾಹದ ಸಮಯದಲ್ಲಿ 25000 ರು.ಗಳ ಆರ್ಥಿಕ ನೆರವು ನೀಡಿದೆ. ಸರಕಾರ ಈ ಯೋಜನೆಗೆ 5,558.66 ಕೋಟಿ ರು. ಖರ್ಚು ಮಾಡಿದೆ. ಆರ್ಥಿಕ ಸಂಕಟದಿಂದ ಹೆಣ್ಣುಮಕ್ಕಳಿಗೆ ಮದುವೆ ಮಾಡಲು ಹೆಣಗುವ ಗ್ರಾಮೀಣ ಕುಟುಂಬಗಳಿಗೆ ಈ ಯೋಜನೆ ನೆರವಾಗಿದೆ.

ಅದೇ ರೀತಿ, ‘ಕನ್ಯಾಶ್ರೀ’ ಯೋಜನೆಯು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದ್ದು ಸುಮಾರು 1 ಕೋಟಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಮುಂದುವರಿಸಲು ಆರ್ಥಿಕ ನೆರವು ಸಿಕ್ಕಿದೆ. ಈ ಯೋಜನೆಗಾಗಿ ಸರಕಾರ 16,554 ಕೋಟಿ ರು. ವ್ಯಯ ಮಾಡಿದೆ.

Screenshot_1 ok

ಕೂಚ್ ಬೆಹಾರ್‌ನ ದಿನ್ಹಟಾ ಮೀಸಲು ಕ್ಷೇತ್ರದಲ್ಲಿ ಓಡಾಡುತ್ತಿದ್ದಾಗ “15 ವರ್ಷಗಳ ಆಡಳಿತದ ನಂತರ ಹೊಸ ಸರಕಾರಕ್ಕೆ ಅವಕಾಶ ನೀಡಬೇಕಲ್ಲವೇ?" ಎಂದು ಕೆಲ ಯುವಕರು ನನ್ನ ಬಳಿ ಹೇಳುತ್ತಿದ್ದರು. ಯುವಕರ ಮಾತು ಕೇಳಿ, “ದೀದಿ ಆಪ್ ಕ್ಯಾ ಕಹೇಂಗೆ?" ಎಂದು ಪಕ್ಕದಲ್ಲಿ ಚಹಾ ಅಂಗಡಿ ನಡೆಸುತ್ತಿದ್ದ ದೇವಿಕಾ ಬಳಿ ಕೇಳಿದೆ. ತಕ್ಷಣವೇ ಆಕೆ, “ಲಕ್ಷ್ಮೀರ್ ಭಂಡಾರ್" ಎಂದು ಜೋರಾಗಿ ನಕ್ಕಳು. ಅಂದರೆ, ಮಮತಾ ಸರಕಾರ ಮಹಿಳೆಯರ ಖಾತೆಗೆ ಜಮೆ ಮಾಡುತ್ತಿರುವ 1500 ರು. ಹಣದ ಬಗ್ಗೆ ಆಕೆ ಖುಷಿಯಾಗಿದ್ದಾಳೆ.

ಬಿಹಾರದಲ್ಲಿ ನಿತೀಶ್ ಕುಮಾರ್ ತಮ್ಮ ಹಲವು ವರ್ಷಗಳ ಆಡಳಿತದಲ್ಲಿ ಶರಾಬು ನಿಷೇಧ ಸೇರಿ ದಂತೆ ಅನೇಕ ಮಹಿಳಾ ಪರ ಯೋಜನೆಗಳನ್ನು ಜಾರಿಗೊಳಿಸಿದ್ದರಿಂದ ಈಗಲೂ ರಾಜ್ಯದ ಗ್ರಾಮೀಣ ಮಹಿಳೆಯರು ಅವರನ್ನು ದೇವರಂತೆ ಕಾಣುತ್ತಾರೆ. ಆರ್ಥಿಕವಾಗಿ ಹಿಂದುಳಿದ, ಬಡತನದಿಂದ ಜರ್ಜರಿತಗೊಂಡ ಕುಟುಂಬಗಳಿಗೆ ಸಣ್ಣ ಪ್ರಮಾಣದ ಆರ್ಥಿಕ ಸಹಾಯ ಕೂಡ ದೊಡ್ಡ ವಿಷಯ ಎನಿಸುತ್ತದೆ. ಮಧ್ಯಮ-ಮೇಲ್ಮಧ್ಯಮ ವರ್ಗದ ಆಲೋಚನೆಗಳು ಬೇರೆ ರೀತಿ ಇದ್ದರೂ, ಗ್ರಾಮೀಣ ಭಾಗದ ಬಹುಪಾಲು ಮಂದಿ ತಮ್ಮ 2 ಹೊತ್ತಿನ ಊಟದ ಬಗ್ಗೆಯೇ ಹೆಚ್ಚು ಯೋಚಿಸುತ್ತಾರೆ.

2014ರ ನಂತರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯವರು ಕೂಡ ಈ ವಾಸ್ತವ ಅರಿತು ಮಹಿಳಾ ಕೇಂದ್ರಿತ ರಾಜಕಾರಣಕ್ಕೆ ಮುಂದಾಗಿ, ಅದನ್ನೂ ಒಂದು ವೋಟ್ ಬ್ಯಾಂಕ್ ಎಂದು ಪರಿಗಣಿಸಿ, ಆ ದಿಕ್ಕಿನಲ್ಲಿ ಯೋಜನೆಗಳನ್ನು ಪ್ರಕಟಿಸುತ್ತಾ ಚುನಾವಣೆಗಳಲ್ಲಿ ಮತ ಕೇಳುತ್ತಿದ್ದಾರೆ.

ಮಹಿಳಾ ಮೀಸಲಾತಿ ವಿಧೇಯಕಕ್ಕೆ ವಿಪಕ್ಷಗಳ ಒಪ್ಪಿಗೆ ಸಿಗದೆ ಸೋಲಾಗುತ್ತದೆ ಎಂಬ ಕಲ್ಪನೆ ಇದ್ದರೂ, ಬಂಗಾಳದಲ್ಲಿ ಮಹಿಳಾ ಪರ ಯೋಜನೆ ಮತ್ತು ಪ್ರಾತಿನಿಧ್ಯದಲ್ಲಿ ಹಲವು ಹೆಜ್ಜೆ ಮುಂದೆ ಇರುವ ಮಮತಾ ಬ್ಯಾನರ್ಜಿಯವರ ಪಕ್ಷವನ್ನು ಸೋಲಿಸಲು ‘ಅನ್ನಪೂರ್ಣ’ ಯೋಜನೆ ಅಡಿಯಲ್ಲಿ ತಿಂಗಳಿಗೆ 3000 ರು. ನೀಡುತ್ತೇವೆ ಎಂದರೆ ಸಾಲದು ಎನ್ನುವುದು ಬಿಜೆಪಿ ನಾಯಕರಿಗೆ ಗೊತ್ತಿಲ್ಲದೇ ನಲ್ಲ. ಇದರ ಜತೆಗೆ, ‘ಮಹಿಳಾ ಮೀಸಲಾತಿ ವಿಧೇಯಕವನ್ನು ಪಾಸ್ ಮಾಡುವ ಐತಿಹಾಸಿಕ ಅವಕಾಶವನ್ನು ಟಿಎಂಸಿ ಸೇರಿ ವಿಪಕ್ಷಗಳು ಹಾಳು ಮಾಡಿದವು’ ಎಂಬ ನರೇಟಿವ್ ಅನ್ನು ಬಂಗಾಳ ದಲ್ಲಿ ಬಿಗಿಗೊಳಿಸಬೇಕು ಎಂದೂ ಅವರಿಗೆ ತಿಳಿದಿದೆ.

ವಿಧೇಯಕಕ್ಕೆ ಸೋಲಾಯ್ತು ಎಂದು ಮಹಿಳೆಯರೆಲ್ಲರೂ ಬಿಜೆಪಿಗೆ ಜೈ ಎನ್ನದಿದ್ದರೂ ಬಿರುಸಿನ ಸೆಣೆಸಾಟಕ್ಕೆ ಸಾಕ್ಷಿಯಾಗುತ್ತಿರುವ ಬಂಗಾಳದಲ್ಲಿ ಸಣ್ಣ ಪ್ರಮಾಣದ ಮಹಿಳಾ ವೋಟ್ ಶಿ- ಕೂಡ ಫಲಿತಾಂಶವನ್ನು ಆಚೀಚೆ ಮಾಡಬಲ್ಲದು. ಬಿಜೆಪಿ ಅದನ್ನೇ ನಿರೀಕ್ಷಿಸುತ್ತಿದೆ. 2016 ಮತ್ತು 2021ರ ವಿಧಾನಸಭೆ ಚುನಾವಣೆಗಳಲ್ಲಿ ಟಿಎಂಸಿಯ ಮಹಿಳಾ ಮತ ಗಳಿಕೆ ಶೇ.47 ಮತ್ತು ಶೇ.49ರಷ್ಟು ಇತ್ತು. ಎಡಪಕ್ಷಗಳ ಮತ್ತು ಕಾಂಗ್ರೆಸ್ಸಿನ ರಾಜಕೀಯ ಪ್ರಾಬಲ್ಯ 2011ರಿಂದ ಕುಸಿದ ನಂತರ ಈ ಮೈತ್ರಿ ಕೂಟದ ಮಹಿಳಾ ಮತಬ್ಯಾಂಕ್ ಬಿಜೆಪಿ ಕಡೆ ತಿರುಗಿತು. ಆದರೆ 15 ವರ್ಷಗಳ ಹಿಂದೆ ದೀದಿಯನ್ನು ಬೆಂಬಲಿಸಿದ್ದ ಬಹುತೇಕ ಮಹಿಳಾ ಮತದಾರರು, 2016 ಮತ್ತು 2021ರಲ್ಲೂ ತಮ್ಮ ಬೆಂಬಲ ಮುಂದುವರಿಸಿದರು.

2026ರಲ್ಲಿ ರಾಜಕೀಯ ಚಿತ್ರಣ ಕೊಂಚ ಬದಲಾದ ಹಾಗೆ ಕಾಣುತ್ತಿದ್ದರೂ, ತಾನು ಬಂಗಾಳದ ಜನನಿ, ಜನ್ಮದಾತೆ ಮತ್ತು ಜನತೆಯ (ಮಾ, ಮಾಟಿ, ಮಾನುಷ್) ಪ್ರತಿನಿಧಿ ಎನ್ನುತ್ತಾ ಅವರ ಹೃದಯ ಗೆಲ್ಲಲು ದೀದಿ ಯತ್ನಿಸಿದ್ದಾರೆ.

ರೈಟ್‌ಗೆ ವಾಲಿದ ಲೆಫ್ಟ್ ಕುಟುಂಬ..!

ನಾನು ಸಿಲಿಗುರಿಯಿಂದ ಕೋಲ್ಕತ್ತಾ ರೈಲಿನಲ್ಲಿ ತೆರಳುತ್ತಿದ್ದಾಗ ಕೋಲ್ಕತ್ತಾದ ‘ಉತ್ತರ ದಂ ದಂ’ ನಿವಾಸಿಗಳಾದ ಅರ್ಘ್ಯಧಾಮ್ ಮತ್ತು ಆತನ ಪತ್ನಿ ಕೂಡ ಪಕ್ಕದಲ್ಲಿ ಕುಳಿತಿದ್ದರು. ಬಂಗಾಳದಲ್ಲಿ ಈ ಸಲ ಬದಲಾವಣೆ ಆಗಬೇಕು ಎನ್ನುವುದು ಇಬ್ಬರ ನಿಲುವಾಗಿತ್ತು. “ನಮ್ಮ ರಾಜ್ಯವನ್ನು ಹೊರಗೆ ಬಹಳ ಚೆನ್ನಾಗಿ ಬಿಂಬಿಸಲಾಗುತ್ತದೆ. ಆದರೆ ಬಾಹ್ಯ ಮತ್ತು ಆಂತರಿಕ ಸೌಂದರ್ಯಕ್ಕೆ ತುಂಬಾ ವ್ಯತ್ಯಾಸವಿದೆ. ಬಾಹ್ಯಕ್ಕೆ ಅಂದದ ಪೈಂಟ್ ಹೊಡೆದು ಆಕರ್ಷಣೀಯವಾಗಿ ಕಾಣುವಂತೆ ಸರಕಾರ ಮಾಡಿದೆ. ಆದರೆ ಒಳಗಿನ ಹೃದಯ ಇಡೀ ಕಲುಷಿತಗೊಂಡಿದೆ. ಭ್ರಷ್ಟಾಚಾರ ಇಲ್ಲಿ ತಾಂಡವ ವಾಡುತ್ತಿದೆ. ಒಮ್ಮೆ ಬಿಜೆಪಿಗೆ ಅವಕಾಶ ಕೊಟ್ಟು ನೋಡಬೇಕು. 15 ವರ್ಷ ದೀದಿಗೆ ಸರಕಾರ ನಡೆಸಲು ಬಿಟ್ಟಿಲ್ಲವೇ? ರಾಜ್ಯ ಅಭಿವೃದ್ಧಿ ಹಾದಿಯಲ್ಲಿ ಇಲ್ಲ ಎಂದರೆ ಮಹಿಳಾ ಸಿಎಂ ಇದ್ದರೆಷ್ಟು ಬಿಟ್ಟರೆಷ್ಟು? ಮಹಿಳೆಯರಿಗೆ ಆದ್ಯತೆ ನೀಡುತ್ತೇವೆ ಎನ್ನುತ್ತಾ ಭ್ರಷ್ಟಾಚಾರ, ಹಿಂಸಾಚಾರದ ಬಗ್ಗೆ ಜಾಣಕುರುಡು ಪ್ರದರ್ಶಿಸುವುದು ಸರಿಯೇ?" ಎಂದು ಖಾಸಗಿ ಉದ್ಯೋಗಿ ಅರ್ಘ್ಯಧಾಮ್ ಹೇಳುತ್ತಾರೆ. ಅವರ ಪತ್ನಿ ಪ್ರಾಥಮಿಕ ಶಾಲೆಯೊಂದರಲ್ಲಿ ಮುಖ್ಯೋಪಾಧ್ಯಾಯಿನಿಯಾಗಿದ್ದು, “ಮಹಿಳೆಯರಿಗೆ ಭದ್ರತೆ ಇಲ್ಲ. ಪರಿಸ್ಥಿತಿ ಚಿಂತಾಜನಕವಾಗಿದೆ. ಉಚಿತ ಹಣವೊಂದನ್ನೇ ನೋಡಿ ಜನ ಮತಹಾಕಬಾರದು" ಎಂದರು. ಆರ್ಘ್ಯಧಾಮ್ ಅವರ ಕುಟುಂಬ ಮೂಲತಃ ವಾಮಪಂಥೀಯ ವಿಚಾರಧಾರೆ ಹೊಂದಿದ್ದು, ಎಡಪಕ್ಷಗಳನ್ನೇ ಬೆಂಬಲಿಸುತ್ತಾ ಬಂದಿದೆ. ಆರ್ಘ್ಯಧಾಮ್ ಅಜ್ಜಿ 85 ವರ್ಷದ ಮುಕ್ತಿರಾಣಿ ಧಾಮ್ ಸಿಪಿಐನ ಸಕ್ರಿಯ ಕಾರ್ಯಕರ್ತೆ ಆಗಿದ್ದರಂತೆ. ಅವರು ಕೂಡ ಟಿಎಂಸಿಯನ್ನು ಸೋಲಿಸಲು ಬಿಜೆಪಿಗೆ ವೋಟ್ ಹಾಕುವುದು ಅನಿವಾರ್ಯ ಎಂಬ ತೀರ್ಮಾನಕ್ಕೆ ಬಂದಿದ್ದಾರಂತೆ. ಕುಟುಂಬದ ಎಲ್ಲಾ ಸದಸ್ಯರೂ ಟಿಎಂಸಿ ವಿರುದ್ಧ ಸಿಟ್ಟಾಗಿದ್ದು, ಬದಲಾವಣೆ ಜತೆ ನಿಲ್ಲಲಿದ್ದೇವೆ ಎನ್ನುತ್ತಿದ್ದಾರೆ. “ನಾವು ಬಿಜೆಪಿಯ ವಿಚಾರಧಾರೆ ಒಪ್ಪುವುದಿಲ್ಲ. ಈಗಲೂ ಕುಟುಂಬ ದವರು ಸಿಪಿಐ ಸಿದ್ಧಾಂತ ನಂಬುತ್ತಾರೆ. ಆದರೆ, ಟಿಎಂಸಿಯ ಅಹಂಕಾರ ಮುರಿಯಲು ಬಿಜೆಪಿ ಯನ್ನು ಬೆಂಬಲಿಸುವುದೇ ಪರಿಹಾರ" ಎಂದರು ಅರ್ಘ್ಯಧಾಮ. “ಬಾಂಗ್ಲಾದೇಶದ ಮಂದಿ ಬಂಗಾಳ ದೊಳಗೆ ನುಸುಳುವ ಉದಾಹರಣೆಯನ್ನು ನಮ್ಮ ಮನೆಯ ನೋಡಿದೆವು" ಎಂದ ಅವರು, “ನಮ್ಮ ಮನೆ ಕೆಲಸದಾಕೆ ಬಂಗಾಳದವಳು ಮತ್ತು ಸರಕಾರಿ ದಾಖಲೆಗಳನ್ನು ಹೊಂದಿದ್ದಾಳೆ. ಆದರೆ, ಆಕೆಯ ಪತಿ ಬಾಂಗ್ಲಾದೇಶದವನು. ಆತ ಆಗಾಗ್ಗೆ ಬಾಂಗ್ಲಾಕ್ಕೆ ಗಡಿ ದಾಟಿ ಹೋಗಿ ಬರುತ್ತಿದ್ದನಂತೆ. ಆದರೆ ಉತ್ತರ 24 ಪರಗಣದ ಪೆಟ್ರಾಪೋಲ್ ಇಂಡೋ-ಬಾಂಗ್ಲಾ ಬಾರ್ಡರ್ ಬಳಿ ಬೊಗಾಂವ್‌ನಲ್ಲಿ ಕೊನೆಗೂ ಸಿಕ್ಕಿಬಿದ್ದು, ಈಗ ಕೋಲ್ಕತ್ತಾದ ಜೈಲಿನಲ್ಲಿದ್ದಾನೆ. ಆತನ ಬಳಿ ಭಾರತ ಸರಕಾರದ ಯಾವುದೇ ದಾಖಲೆಗಳಿಲ್ಲ. ಕೋಲ್ಕತ್ತಾದಲ್ಲಿ ನಮ್ಮ ಮನೆ ಕೆಲಸದವಳ ಪರಿಚಯ ಆಗಿ ಮದುವೆ ಆಗಿದ್ದ" ಎಂದು ಮಾಹಿತಿ ನೀಡಿದರು. ಸಾವಿರಾರು ಬಾಂಗ್ಲಾ ನುಸುಳುಕೊರರು ಇದೇ ರೀತಿ ಬಂಗಾಳದ ಗಡಿ ಮೂಲಕ ಭಾರತ ಪ್ರವೇಶಿಸಿ, ಗಡಿ ಹಳ್ಳಿಗಳು, ಕೋಲ್ಕತ್ತಾ ಸೇರಿ ದೇಶದ ವಿವಿಧ ನಗರಗಳಲ್ಲಿ ನೆಲೆಸಿದ್ದಾರೆ. ಅರ್ಘ್ಯಧಾಮ್ ಹೇಳಿದ್ದು ಅವರ ಮನೆ ಘಟನೆ. ಇಂಥಾ ಮತ್ತೆಷ್ಟು ಉದಾಹರಣೆಗಳಿವೆಯೋ?

ಮಹಿಳಾ ಮತಗಳ ಆದ್ಯತೆ

(2016 ಮತ್ತು 2021ರ ವಿಧಾನಸಭೆ ಚುನಾವಣೆ)

ತೃಣಮೂಲ ಕಾಂಗ್ರೆಸ್: ಶೇ. 47 ಮತ್ತು ಶೇ. 49

ಬಿಜೆಪಿ: ಶೇ. 10 ಮತ್ತು ಶೇ. 37

ಎಡಪಕ್ಷಗಳು-ಕಾಂಗ್ರೆಸ್ ಮೈತ್ರಿ: ಶೇ. 35 ಮತ್ತು ಶೇ. 10