ನರೇಂದ್ರ ಪಾರೆಕಟ್
ಕೇರಳಂನದ ಪ್ರಮುಖ ದೇಗುಲವಾಗಿರುವ ಶಬರಿಮಲೆ ಕಳೆದೊಂದು ವರ್ಷದಿಂದ ಹೆಚ್ಚು ಸುದ್ದಿಯಲ್ಲಿದೆ. ಅಲ್ಲಿನ ಬಂಗಾರ ಕಳ್ಳತನ ಪ್ರಕರಣದ ಹಿಂದಿನ ಕಾಣದ ಕೈಗಳ ಬಗ್ಗೆ ಆಡಳಿತ-ವಿಪಕ್ಷಗಳ ನಡುವೆ ಆಗಿರುವ ಪರಸ್ಪದ ವಾಗ್ವಾದಗಳು ಇದೀಗ ಚುನಾವಣಾ ಪ್ರಚಾರದಲ್ಲೂ ಮುನ್ನೆಲೆಗೆ ಬಂದಿದ್ದು, ಶಬರಿಮಲೆ ಇರುವ ಪತ್ತನಂತಿಟ್ಟ ಜಿಲ್ಲೆಯಲ್ಲಿ ಅದು ಕೂಡಾ ಒಂದು ಪ್ರಮುಖ ವಿಷಯ.
ಕೇರಳಂನ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯ ಇರುವ ಜಿಲ್ಲೆಯೇ ಪತ್ತನಂತಿಟ್ಟ. ದಕ್ಷಿಣ ಕೇರಳದ ಈ ಜಿಲ್ಲೆಯಲ್ಲಿ ಒಟ್ಟು ಹದಿಮೂರು ಲಕ್ಷ ಮಂದಿ ಮತದಾರರಿದ್ದು, ಒಟ್ಟು ಐದು ವಿಧಾನಸಭಾ ಕ್ಷೇತ್ರಗಳು ಇಲ್ಲಿವೆ, ತಿರುವಲ್ಲ, ಆರನ್ಮುಳ, ಅಡೂರ್, ರಾನ್ನಿ ಮತ್ತು ಕೋನ್ನಿ.
ರಾನ್ನಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಬರಿಮಲೆ ಇರುವುದಾದರೂ ಜಿಲ್ಲೆಯಲ್ಲಿರುವ ಎಲ್ಲಾ ವಿಧಾನಸಭಾ ಕ್ಷೇತ್ರದ ಪ್ರಚಾರದಲ್ಲಿ ಶಬರಿಮಲೆ ಸುದ್ದಿಯಲ್ಲಿದೆ. ದೇವಾಲಯದ ದ್ವಾರಪಾಲಕ ವಿಗ್ರಹಗಳ ಚಿನ್ನ ಲೇಪನಕ್ಕೆ ಕೊಂಡೊಯ್ಯುವ ವೇಳೆ ಸುಮಾರು ಐದು ಕೆ.ಜಿ ಬಂಗಾರವನ್ನು ಕಳವು ಮಾಡಲಾಯಿತು. ಆ ಪ್ರಕರಣದ ಆರೋಪಿಗಳು ಆಡಳಿತ ಪಕ್ಷವಾದ ಎಲ್‌ಡಿಎಫ್ ನಂಟು ಹೊಂದಿದ್ದಾರೆ ಎಂದು ವಿರೋಧಪಕ್ಷ ಆರೋಪಿಸಿದರೆ, ವಿರೋಧ ಪಕ್ಷದ ದೆಹಲಿ ನಾಯಕರಿಗೆ ಆರೋಪಿಗಳ ನಂಟಿದೆ ಎಂದು ಪರಸ್ಪರ ವಾಗ್ದಾಳಿ ಮತ್ತು ಪತ್ರಿಕಾ ಹೇಳಿಕೆಗಳು ಕಳೆದ ಒಂದು ವರ್ಷದಿಂದ ಸುದ್ದಿಯಲ್ಲಿದೆ. ಹಾಗಾಗಿ ಎಸ್‌ಐಟಿ ತನಿಖೆಯಲ್ಲಿರುವ ಈ ವಿವಾದದಿಂದಾಗಿ ಇದೀಗ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರ ಗಳಲ್ಲೂ ಚುನಾವಣಾ ಕಣ ರಂಗೇರಿದೆ.
1996ರ ನಂತರ ನಡೆದ 6 ವಿಧಾನಸಭಾ ಚುನಾವಣೆಗಳಲ್ಲೂ ಇಲ್ಲಿ ಎಡರಂಗದ ಅಭ್ಯರ್ಥಿ ಗಳೇ ಗೆಲ್ಲುತ್ತಾ ಬಂದಿದ್ದರೂ, ಕಾಂಗ್ರೆಸ್ ಮತ್ತು ಬಿಜೆಪಿಯ ಅಭ್ಯರ್ಥಿಗಳು ತೀವ್ರ ಪೈಪೋಟಿ ನೀಡುವಲ್ಲಿ ಸಫಲರಾಗುತ್ತಿದ್ದಾರೆ.
ಈ ಚುನಾವಣೆಯಲ್ಲಿ ಎಡರಂಗದಿಂದ ಪ್ರಮೋದ್ ನಾರಾಯಣ್, ಕಾಂಗ್ರೆಸ್‌ನಿಂದ ಪಾಝಾ ಕುಳ ಮಧು ಸ್ಪರ್ಧಿಸಿದರೆ, ಬಿಜೆಪಿಯು ಈ ಕ್ಷೇತ್ರದಲ್ಲಿ ಈ ಬಾರಿ ಸ್ಪರ್ಧಿಸದೆ ಎನ್‌ಡಿಎ ಮಿತ್ರಪಕ್ಷವಾದ ಟ್ವೆಂಟಿ-ಟ್ವೆಂಟಿಯ ಥಾಮಸ್ ಸಾಮ್ಯುವೆಲ್ ಅವರನ್ನು ಕಣಕ್ಕಿಳಿಸಿದೆ.
ಆ ಜಿಲ್ಲೆಯಲ್ಲಿರುವ ಕೋನ್ನಿ ವಿಧಾನಸಭಾ ಕ್ಷೇತ್ರವು ಹಿಂದೊಮ್ಮೆ ಯುಡಿಎಫ್‌ನ ಭದ್ರಕೋಟೆಯಾಗಿದ್ದರೂ, ಕಳೆದೆರಡು ವಿಧಾನಸಭಾ ಚುನಾವಣೆಯಲ್ಲೂ ಎಡರಂಗದ ಅಭ್ಯರ್ಥಿಗಳು ಗೆದ್ದಿದ್ದಾರೆ.
ಇದನ್ನೂ ಓದಿ: BJP Kerala Campaign: ತ್ರಿಶೂರ್, ಪಾಲಕ್ಕಾಡಿನಲ್ಲಿ ಬಿಜೆಪಿಗೆ ಗೆಲುವಿನ ನಿರೀಕ್ಷೆ
ಅದೇ ರೀತಿ ಜಿಲ್ಲೆಯ ಮತ್ತೊಂದು ವಿಧಾನಸಭಾ ಕ್ಷೇತ್ರವಾದ ಅಡೂರ್‌ನಲ್ಲೂ ಕಳೆದ ಮೂರು ಚುನಾವಣೆಗಳಲ್ಲೂ ಎಡರಂಗದ ಸಿ.ಪಿಐ ಅಭ್ಯರ್ಥಿ ಚಟ್ಟಯಂ ಗೋಪಕುಮಾರ್ ಅವರೇ ಗೆದ್ದಿದ್ದು, ಈ ಸಲ ಪಿ. ಕಣ್ಣನ್ ಆ ಪಕ್ಷದ ಪರವಾಗಿ ಚುನಾವಣಾ ಕಣದಲ್ಲಿದ್ದರೆ, ಶಾಂತಕುಮಾರ್ ಕಾಂಗ್ರೆಸ್ ಪಕ್ಷದಿಂದ ಮತ್ತು ಪಂದಳಂ ಪ್ರತಾಪನ್ ಬಿಜೆಪಿಯಿಂದಲೂ ಕಣದಲ್ಲಿದ್ದಾರೆ.
ಆರನ್ಮುಳ ವಿಧಾನಸಭಾ ಕ್ಷೇತ್ರ ಕೂಡಾ ಕಳೆದೆರಡು ಚುನಾವಣೆಯಲ್ಲಿ ಎಡರಂಗದ ಕೈ ಹಿಡಿದಿದ್ದು ಹಿರಿಯ ಪತ್ರಕರ್ತೆ ವೀಣಾ ಜಾರ್ಜ್ ಆ ಕ್ಷೇತ್ರದಿಂದ ಗೆದ್ದು ಎರಡು ಅವಧಿಯ ಸರಕಾರದಲ್ಲೂ ಸಚಿವೆಯಾದವರು. ಈ ಬಾರಿ ಕೂಡಾ ಅವರು ಆರನ್ಮುಳದಿಂದ ಸ್ಪರ್ಧಿಸು ತ್ತಿದ್ದು, ಕಾಂಗ್ರೆಸ್ ಪಕ್ಷದಿಂದ ಅಭಿನ್ ವರ್ಕಿ ಕಣದಲ್ಲಿದ್ದರೆ ಬಿಜೆಪಿಯು ರಾಜ್ಯದ ಹಿರಿಯ ನೇತಾರ ಮತ್ತು ಮಿಜೋರಾಮ್ ಮಾಜಿ ರಾಜ್ಯಪಾಲರಾಗಿದ್ದ ಕುಮ್ಮನಂ ರಾಜಶೇಖರನ್ ಅವರನ್ನು ಆರನ್ಮುಳದಿಂದ ಕಣಕ್ಕಿಳಿಸಿ ರೋಚಕ ಪೈಪೋಟಿಗೆ ನಾಂದಿ ಹಾಡಿದೆ.
ಜಿಲ್ಲೆಯ ಮತ್ತೊಂದು ವಿಧಾನಸಭಾ ಕ್ಷೇತ್ರವಾದ ತಿರುವಲ್ಲದಲ್ಲಿ ಜೆಡಿಎಸ್‌ನ ಮ್ಯಾಥ್ಯು ಥಾಮಸ್ ಕಳೆದ ನಾಲ್ಕು ಅವಧಿಯಲ್ಲಿ ಶಾಸಕರಾಗಿದ್ದು, ಈ ಬಾರಿಯೂ ಅವರು ಅಲ್ಲೇ ಸ್ಪರ್ಧಿಸುತ್ತಿದ್ದಾರೆ. ಕರ್ನಾಟಕ ಜೆಡಿಎಸ್‌ನಿಂದ ಬೇರ್ಪಟ್ಟಿರುವ ಕೇರಳ ಜೆಡಿಎಸ್ ಇದೀಗ ಅಲ್ಲಿ ಎಡರಂಗ ಸರಕಾರದ ಮೈತ್ರಿಪಕ್ಷವಾಗಿದೆ.
ವಿವಾದಕ್ಕೆ ಕಾರಣವಾಗಿದ್ದ ಅಯ್ಯಪ್ಪ ಸಂಗಮಂ
ಕಳೆದ ಸೆಪ್ಟೆಂಬರ್‌ನಲ್ಲಿ ಕೇರಳ ಸರಕಾರ ಶಬರಿಮಲೆಯ ಪಂಪಾ ನದಿ ತೀರದಲ್ಲಿ ಅಯ್ಯಪ್ಪ ಸಂಗಮಂ ಎಂಬೊಂದು ಕಾರ್ಯಕ್ರಮ ಮಾಡಿ ಆ ಮೂಲಕ ಸರಕಾರವು ಭಕ್ತರ ಪರವಾ ಗಿದೆ ಎಂಬ ಪ್ರಯತ್ನ ಮಾಡಿ ವಿವಾದಕ್ಕೆ ಸಿಲುಕಿತು. ಕೇರಳದಲ್ಲಿ ಇದುವರೆಗೂ ಆಡಳಿತ ದಲ್ಲಿದ್ದ ಎರಡೂ ಸರಕಾರಗಳು ಶಬರಿಮಲೆಯಲ್ಲಿ ಭಕ್ತರಿಗೆ ಬೇಕಿರುವ ಸೌಲಭ್ಯಗಳನ್ನೆಲ್ಲಾ ದೊರಕಿಸಿಕೊಟಿಲ್ಲ. ಕರ್ನಾಟಕ ಸರಕಾರವು ಶಬರಿಮಲೆಯಲ್ಲಿ ಇಲ್ಲಿಂದ ಹೋಗುವ ಯಾತ್ರಾರ್ಥಿಗಳ ಸೌಲಭ್ಯಕ್ಕಾಗಿ ವಸತಿಗೃಹ ಕಟ್ಟಿಕೊಡಲು ಸಿದ್ಧವಿದ್ದರೂ ಕೇರಳ ಸರಕಾರ ಗಳ ಅಸಹಕಾರದಿಂದ ಅದಿನ್ನೂ ಕಾರ್ಯಗತವಾಗಿಲ್ಲ.