ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

BJP Kerala Campaign: ತ್ರಿಶೂರ್, ಪಾಲಕ್ಕಾಡಿನಲ್ಲಿ ಬಿಜೆಪಿಗೆ ಗೆಲುವಿನ ನಿರೀಕ್ಷೆ

ಮೋದಿಗೆ ಕೇರಳದ ತ್ರಿಶೂರ್ ಅಂದರೆ ಬಹಳ ಅಚ್ಚುಮೆಚ್ಚಿನ ಮತ್ತು ನಿರೀಕ್ಷೆಯ ತಾಣ. ಅದಕ್ಕೆರಡು ಕಾರಣ, ಒಂದು ಕೇರಳದ ಮೊತ್ತ ಬಿಜೆಪಿ ಸಂಸತ್ ಸದಸ್ಯ ಆಯ್ಕೆಯಾಗಿ ಆ ರಾಜ್ಯದಲ್ಲಿ ಪಕ್ಷದ ಪಾಲಿಗೆ ಹೊಸ ಇತಿಹಾಸ ಸೃಷ್ಟಿಸಿರುವುದು ಪ್ರಮುಖ ಕಾರಣವಾದರೆ, ಇನ್ನೊಂದು ಕೇರಳದ ಇತಿಹಾಸ ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನ ಇರುವುದು ಕೂಡಾ ಇದೇ ತ್ರಿಶೂರ್ ಜಿಲ್ಲೆಯಲ್ಲೇ.

ತ್ರಿಶೂರ್, ಪಾಲಕ್ಕಾಡಿನಲ್ಲಿ ಬಿಜೆಪಿಗೆ ಗೆಲುವಿನ ನಿರೀಕ್ಷೆ

-

Profile
Ashok Nayak Apr 1, 2026 8:45 AM

ನರೇಂದ್ರ ಪಾರೆಕಟ್

2024ರ ಲೋಕಸಭಾ ಚುನಾವಣೆಯಲ್ಲಿ ಕೇರಳದ ಆಡಳಿತ ಪಕ್ಷವಾಗಿದ್ದ ಎಲ್‌ಡಿಎಫ್ ಗೆದ್ದಿರುವುದು ಕೇವಲ 1 ಸ್ಥಾನ. ಅದೇ ಚುನಾವಣೆಯಲ್ಲಿ ಬಿಜೆಪಿ ಕೂಡಾ ತ್ರಿಶೂರ್ ಸ್ಥಾನ ಗಳಿಸಿ ಕೇರಳದ 1 ಸಂಸತ್ ಸ್ಥಾನವನ್ನು ತನ್ನ ಬುಟ್ಟಿಗೆ ಹಾಕಿ ಎಲ್ಲರ ಹುಬ್ಬೇರಿಸುವಂತೆ ಮಾಡಿತು. ಆ ಕಾರಣಕ್ಕಾಗಿಯೇ ಕೇರಳದ ತ್ರಿಶೂರ್ ಮತ್ತು ಅದರ ನೆರೆ ಜಿಲ್ಲೆಯಾದ ಪಾಲಕ್ಕಾಡ್ ಈ ಸಲದ ಚುನಾವಣೆಯಲ್ಲಿ ತನ್ನ ಪರವಾಗಬಹುದೆಂಬ ನಿರೀಕ್ಷೆಯನ್ನು ಪ್ರಧಾನಿ ಮೋದಿ‌ ಕೂಡಾ ಇಟ್ಟುಕೊಂಡಿ ದ್ದಾರೆ.

ಕಳೆದ ಮೂರು ದಿನಗಳ ಹಿಂದೆ ಪ್ರಧಾನಿ ಮೋದಿ ಕೇರಳಕ್ಕೆ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಬಂದಿದ್ದರು. ನಿಗಧಿಯಾಗಿದದ್ದು ಕೇವಲ ಎರಡು ಕಾರ್ಯಕ್ರಮ. ಒಂದು ತ್ರಿಶೂರ್‌ನಲ್ಲಿ ರೋಡ್ ಶೋ ಮತ್ತೊಂದು ಪಾಲಕ್ಕಾಡ್‌ನಲ್ಲಿ ಒಂದು ಚುನಾವಣಾ ಪ್ರಚಾರ ಭಾಷಣ.

ಮೋದಿಗೆ ಕೇರಳದ ತ್ರಿಶೂರ್ ಅಂದರೆ ಬಹಳ ಅಚ್ಚುಮೆಚ್ಚಿನ ಮತ್ತು ನಿರೀಕ್ಷೆಯ ತಾಣ. ಅದಕ್ಕೆರಡು ಕಾರಣ, ಒಂದು ಕೇರಳದ ಮೊತ್ತ ಬಿಜೆಪಿ ಸಂಸತ್ ಸದಸ್ಯ ಆಯ್ಕೆಯಾಗಿ ಆ ರಾಜ್ಯದಲ್ಲಿ ಪಕ್ಷದ ಪಾಲಿಗೆ ಹೊಸ ಇತಿಹಾಸ ಸೃಷ್ಟಿಸಿರುವುದು ಪ್ರಮುಖ ಕಾರಣವಾದರೆ, ಇನ್ನೊಂದು ಕೇರಳದ ಇತಿಹಾಸ ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನ ಇರುವುದು ಕೂಡಾ ಇದೇ ತ್ರಿಶೂರ್ ಜಿಲ್ಲೆಯಲ್ಲೇ.

2018ರ ಲೋಕಸಭಾ ಚುನಾವಣೆಯಲ್ಲಿ ತ್ರಿಶೂರ್ ಲೋಕಸಭಾ ಚುನಾವಣೆಯಲ್ಲಿ ಕೇರಳದ ಖ್ಯಾತ ಚಿತ್ರನಟ, ರಾಜ್ಯಸಭಾ ನಾಮನಿರ್ದೇಶಿತ ಸದಸ್ಯರಾಗಿದ್ದ ಸುರೇಶ್ ಗೋಪಿ ಸ್ಪರ್ಧಿಸಿ ದ್ದರು. ಆಗ ಅವರು ಬರೋಬರಿ 3 ಲಕ್ಷದಷ್ಟು ಮತ ಗಳಿಸಿ 3ನೇ ಸ್ಥಾನ ಗಳಿಸಿದ್ದರು. ಆಗ ಆ ಕ್ಷೇತ್ರದಲ್ಲಿ ಗೆದ್ದ ಅಭ್ಯರ್ಥಿಯ ಮತ ಮತ್ತು ಸುರೇಶ್ ಗೋಪಿ ಗಳಿಸಿದ ಮತಗಳ ಅಂತರ 1 ಲಕ್ಷ 20 ಸಾವಿರ.

ಆ ನಂತರವೂ ಪ್ರಧಾನಿ ನರೇಂದ್ರ ಮೋದಿ ಅವರು ಸುರೇಶ್ ಗೋಪಿ ಮತ್ತು ತ್ರಿಶೂರ್ ಲೋಕಸಭಾ ಕ್ಷೇತ್ರದ ಮತದಾರರ ಭಾರೀ ಭರವಸೆಯನ್ನೇ ಇಟ್ಟರು.

2024ರ ಲೋಕಸಭಾ ಚುನಾವಣೆಯಲ್ಲಿ ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಸುರೇಶ್ ಗೋಪಿ ಅವರನ್ನೇ ಬಿಜೆಪಿ ಕಣಕ್ಕಿಳಿಸಿ ಕೇರಳ ರಾಜ್ಯದ ಇತಿಹಾಸದಲ್ಲಿ ತನ್ನ ಮೊತ್ತಮೊದಲ ಲೋಕ ಸಭಾ ಕ್ಷೇತ್ರವನ್ನು ಗೆದ್ದುಕೊಂಡಿತು. ಸುರೇಶ್ ಗೋಪಿ ಚುನಾವಣೆಯಲ್ಲಿ ತನ್ನ ಪ್ರತಿಸ್ಪರ್ಧಿ ಗಿಂತ ಸುಮಾರು 75000 ಮತಗಳ ಅಂತರದಲ್ಲಿ ಗೆದ್ದು ಕೇರಳ ಬಿಜೆಪಿ ಪಾಲಿನ ಹೀರೋ ಆದರಲ್ಲದೆ, ಕೇಂದ್ರ ಸರಕಾರದಲ್ಲಿ ಪೆಟ್ರೋಲಿಯಂ, ಪ್ರವಾಸೋದ್ಯಮ ಖಾತೆಯ ರಾಜ್ಯ ಸಚಿವರೂ ಆದರು.

ಇದನ್ನೂ ಓದಿ: Kerala Assembly Election 2026: ದೇವರ ನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಿಂಚಿನ ಪ್ರಚಾರ; ಎಲ್‌ಡಿಎಫ್‌-ಯುಡಿಎಫ್‌ ವಿರುದ್ಧ ಗುಡುಗು

ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ 17 ವಿಧಾನಸಭಾ ಕ್ಷೇತ್ರಗಳಿವೆ. ಅವುಗಳೆಂದರೆ ಚಾಲಕ್ಕುಡಿ, ಚೇಲಕ್ಕೆರ, ಗುರುವಾಯೂರ್, ಇರಿಞಾಲಕ್ಕುಡ, ಕೈಪಮಂಗಲಂ, ಕೊಡುಂಙಲ್ಲೂರ್, ಕುನ್ನಮಂಗಲಂ, ಮಾನಲ್ಲೂರ್, ನಾಟ್ಟಿಕ, ಒಲ್ಲೂರ್, ಪುತುಕ್ಕಾಡ್, ತ್ರಿಶೂರ್ ಮತ್ತು ವಡಕ್ಕಾಂಚ್ಚೇರಿ ವಿಧಾನಸಭಾ ಕ್ಷೇತ್ರಗಳಾಗಿವೆ.

ಈ ಪೈಕಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗಮನಸೆಳೆಯುತ್ತಿರುವ ಪ್ರಮುಖ ಕ್ಷೇತ್ರಗಳಲ್ಲಿ ಒಂದಾದ ತ್ರಿಶೂರ್ ವಿಧಾನಸಭಾ ಕ್ಷೇತ್ರವು ತ್ರಿಶೂರ್ ನಗರಪಾಲಿಕೆಯ ಹದಿನಾಲ್ಕು ವಾರ್ಡ್ʼಗಳನ್ನು ಹೊಂದಿದೆ. ಇಲ್ಲಿಂದ ಇದುವರೆಗೂ ಎಲ್‌ಡಿಎಫ್ ಇಲ್ಲವೇ ಯುಡಿಎಫ್‌ನ ಅಭ್ಯರ್ಥಿಗಳೇ ಇಲ್ಲಿ ಗೆದ್ದಿರುವವವರು. 2021ರಲ್ಲಿ ನಡೆದ ಚುನಾವಣೆಯಲ್ಲಿ ನಟ ಸುರೇಶ್ ಗೋಪಿಯನ್ನು ಬಿಜೆಪಿ ಇಲ್ಲಿ ಕಣಕ್ಕಿಳಿಸಿ 3ನೇ ಸ್ಥಾನ ಗಳಿಸಿತಾದರೂ 31% ಮತಗಳನ್ನು ಪಡೆದಿತ್ತು.

ಮಾಜಿ ಸಿಎಂ ಕರುಣಾಕರನ್ ಮಗಳು ಬಿಜೆಪಿ ಅಭ್ಯರ್ಥಿ: 2021ರ ಚುನಾವಣೆಯಲ್ಲಿ ತ್ರಿಶೂರ್‌ನಲ್ಲಿ 946 ಮತಗಳಿಂದ ಸೋತಿದ್ದ ಯುಡಿಎಫ್ ಒಕ್ಕೂಟದ ಪದ್ಮಜಾ ಈ ಸಲ ತ್ರಿಶೂರ್‌ನಲ್ಲಿ ಬಿಜೆಪಿ ಅಭ್ಯರ್ಥಿ. ಅದೇ ಊರಿನವರಾದ ಅವರ ಹೆಸರು ರಾಜ್ಯದಲ್ಲೇ ಸುಪರಿಚಿತ, ಕಾಂಗ್ರೆಸ್ ಪಕ್ಷದ ಹಿರಿಯ ನೇತಾರಾಗಿ ಮತ್ತು ಕೇರಳದಲ್ಲಿ ಮೂರನೇ ಬಾರಿ ಸಿ.ಎಂ ಆಗಿದ್ದ ಕೆ.ಕರುಣಾಕರನ್ ಅವರ ಮಗಳು. ಕೇರಳದ ಕಾಂಗ್ರೆಸ್ ಪಕ್ಷದಲ್ಲಿ (ಕೆಪಿಸಿಸಿ) ಮೂವತ್ತು ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಇದ್ದವರು, 2004ರಲ್ಲಿ ಕಾಂಗ್ರೆಸ್‌ನಿಂದ ಸಂಸತ್ ಸದಸ್ಯೆ ಕೂಡ ಆಗಿದ್ದರು. ಕಳೆದ ವರ್ಷ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ಗೊಂಡರು.

ಹಾಗಾಗಿ, ಈ ಸಲ ಅವರದ್ದೇ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪದ್ಮಜಾ ಸ್ಪರ್ಧಿಸುತ್ತಿದ್ದು, ಕೇಂದ್ರ ಸಚಿವ ಸುರೇಶ್ ಗೋಪಿ ಮತ್ತು ಪ್ರಧಾನಿ ಮೋದಿ ವರ್ಚಸ್ಸು ಇಲ್ಲಿ ಗಾಢ ಪ್ರಭಾವ ಬೀರಿರುವ ಕಾರಣಕ್ಕಾಗಿ ತಾನು ಕೇರಳದಲ್ಲಿ ಈ ಸಲ ಗೆಲ್ಲುವ ನಿರೀಕ್ಷೆಯಲ್ಲಿರುವ ಸುಮಾರು ಎಂಟು-ಹತ್ತು ಕ್ಷೇತ್ರಗಳ ಪೈಕಿ ತ್ರಿಶೂರ್ ಕೂಡಾ ಒಂದೆಂಬ ನಿರೀಕ್ಷೆ ಬಿಜೆಪಿಯಲ್ಲಿದೆ.

Screenshot_9 R

ಈ ಕ್ಷೇತ್ರದಲ್ಲಿ ಎಡಪಕ್ಷಗಳ ಒಕ್ಕೂಟದಿಂದ ಆಲಂಕೋಡ್ ಲೀಲಾಕೃಷ್ಣನ್ ಮತ್ತು ಯುಡಿಎಫ್‌ನಿಂದ ರಾಜನ್ ಪಲ್ಲನ್ ಅವರು ಪದ್ಮಜಾ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.

ತ್ರಿಶೂರ್‌ನಲ್ಲಿ ಹಿಂದುಗಳೂ ಹಾಗೂ ಕ್ರಿಶ್ಚಿಯನ್ ಧರ್ಮೀಯರೂ ಇದ್ದಾರೆ. ಕಾಂಗ್ರೆಸ್‌ಗೆ ಕ್ರಿಶ್ಚನ್ ಧರ್ಮೀಯರದ್ದೇ ಇಲ್ಲಿನ ದೊಡ್ಡ ವೋಟ್ ಬ್ಯಾಂಕ್.

ತ್ರಿಶೂರ್ ವಿಧಾನಸಭಾ ಕ್ಷೇತ್ರವನ್ನು ಹೊರತುಪಡಿಸಿದರೆ ಗುರುವಾಯೂರು ಸೇರಿದಂತೆ ಉಳಿದ ವಿಧಾನಸಭಾ ಕ್ಷೇತ್ರಗಳಲ್ಲಿ ಐಕ್ಯರಂಗ ಮತ್ತು ಎಡರಂಗಗಳ ಮಧ್ಯೆಯೇ ತುರುಸಿನ ಸ್ಪರ್ಧೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ನೇತೃತ್ವದ ಎನ್‌ಡಿಎ ಸ್ಪರ್ಧಿಸುತ್ತಿದ್ದು 15ರಿಂದ 20 ಶೇಕಡಾ ಮತಗಳಿಕೆಯನ್ನು ಪಡೆಯಬಹುದೆಂಬ ನಿರೀಕ್ಷೆ ಯಲ್ಲಿದೆ.

ಪಾಲಕ್ಕಾಡ್‌ನಲ್ಲಿ ರೋಚಕ ಹಣಾಹಣಿ: ಕೇರಳದಲ್ಲಿ ಈ ಸಲ ಬಿಜೆಪಿ ಕಣ್ಣಿಟ್ಟಿರುವ ಕೆಲವೇ ಕೆಲವು ಕ್ಷೇತ್ರಗಳ ಪೈಕಿ ಪಾಲಕ್ಕಾಡ್ ಕೂಡ ಒಂದಾಗಿದೆ. ಕಳೆದ ಹಲವಾರು ವರ್ಷ ಗಳಿಂದ ಅಲ್ಲಿನ ಕೆಲವು ಪಂಚಾಯತ್‌ಗಳಲ್ಲಿ ಬಿಜೆಪಿ ಆಡಳಿತ ಇತ್ತು. ಹಾಗೆಯೇ ಪಾಲಕ್ಕಾಡ್ ನಗರಸಭೆಯನ್ನು ಕೂಡ ತನ್ನ ತೆಕ್ಕೆಗೆ ಪಡೆದದ್ದಿದೆ. ಪಾಲಕ್ಕಾಡ್ ಜಿಲ್ಲೆಯಲ್ಲಿ ಒಟ್ಟು 12 ವಿಧಾನಸಭಾ ಕ್ಷೇತ್ರಗಳಿವೆ, ಅವುಗಳು ಯಾವುವೆಂದರೆ ಆಲತ್ತೂರ್, ಚಿಟ್ಟೂರ್, ಕೊಂಗಾಡ್, ಮಲಂಪುಝ, ಮಣ್ಣಾರ್‌ಕಾಡ್, ನೇನ್ಮರ, ಒತ್ತಪಾಲಂ, ಪಾಲಕ್ಕಾಡ್, ಪಟ್ಟಾಂಬಿ, ಶೊರ್ನೂರ್, ಥಾರೂರ್ ಮತ್ತು ತೀರ್ಥಲ.

ಒಂದು ಕಡೆ ತ್ರಿಶೂರ್ ಜಿಲ್ಲೆಗೆ, ಮತ್ತೊಂದು ಕಡೆ ತಮಿಳುನಾಡಿನ ಕೊಯಂಬತ್ತೂರಿಗೆ ಚಾಚಿರುವ ಪಾಲಕ್ಕಾಡ್ ಗಡಿ ಜಿಲ್ಲೆಯಾಗಿದೆ. ಜಿಲ್ಲೆಯ ತಮಿಳುನಾಡು ಗಡಿಪ್ರದೇಶದಲ್ಲಿ ವಾಸಿಸುವವರ ಮಾತೃಭಾಷೆ ತಮಿಳು. ಹಾಗಾಗಿ ಆ ಪ್ರದೇಶಗಳಲ್ಲಿ ತಮಿಳು ಬ್ರಾಹ್ಮಣರ ಸಂಖ್ಯೆ ಬಹಳ ಹೆಚ್ಚು. ಅದೇ ಕಾರಣಕ್ಕಾಗಿ ತಮಿಳು ಅಗ್ರಹಾರದ (ಸಾಲು ಮನೆ) ವಿಹಂಗಮನ ನೋಟವೂ ಈ ಜಿಲ್ಲೆಯಲ್ಲಿ ಲಭ್ಯ. ಪಾಲಕ್ಕಾಡ್‌ನ ಕಲ್ಪಾತಿ ರಥೋತ್ಸವ ಬಹಳ ಜನಪ್ರಿಯ ಜಾತ್ರೆಯಾಗಿದೆ.

ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರವನ್ನು ಹೊರತುಪಡಿಸಿದರೆ ಜಿಲ್ಲೆಯಲ್ಲಿಡೀ ಯುಡಿಎಫ್-ಎಲ್‌ಡಿಎಫ್ ಮಧ್ಯೆ ಸಮಬಲದ ಹೋರಾಟ. ಆದರೆ ಪಾಲಕ್ಕಾಡ್ ನಗರದಲ್ಲಿ ಬಿಜೆಪಿ ಬಹಳ ಪ್ರಬಲವಾಗಿರುವುದರಿಂದ ಕಳೆದ ಒಂದೆರಡು ಚುನಾವಣೆಗಳಲ್ಲಿ ಚಿಕ್ಕ ಅಂತರದಲ್ಲಿ ಬಿಜೆಪಿ ಸೋತ ಉದಾಹರಣೆಗಳಿವೆ. 2021ರ ವಿಧಾನಸಭಾ ಚುನಾವಣೆ ಕೂಡ ಇಲ್ಲಿ ಬಹಳ ಪ್ರಚಾರ ಗಿಟ್ಟಿಸಿತ್ತು. ದೇಶದ ಪ್ರಥಮ ಮೆಟ್ರೋ ರೈಲು ರೂವಾರಿ ‘ಮೆಟ್ರೋ ಮ್ಯಾನ್’ ಎಂದೇ ಖ್ಯಾತರಾಗಿದ್ದ ಇ. ಶ್ರೀಧರನ್ ಅವರು ಬಿಜೆಪಿಯಿಂದ ಕಣಕ್ಕಿಳಿದಿದ್ದರು. ತನ್ನ ಪ್ರತಿಸ್ಪರ್ಧಿಗೆ ಭಾರೀ ಪೈಪೋಟಿ ನೀಡಿ ಕೇವಲ ಮರ‍್ನಾಲ್ಕು ಸಾವಿರ ಮತಗಳ ಅಂತರದಿಂದ ಅವರು ಅಲ್ಲಿ ಪರಾಜಿತರಾಗಿದ್ದರು.

ಶೋಭಾ ಸುರೇಂದ್ರನ್ ಬಿಜೆಪಿ ಅಭ್ಯರ್ಥಿ: ಈ ಸಲ ಬಿಜೆಪಿಯು ಕೇರಳದ ಹಿರಿಯ ಬಿಜೆಪಿ ನಾಯಕಿ ಮತ್ತು ಪಕ್ಷದ ಜನಪ್ರಿಯ ಅಭ್ಯರ್ಥಿ ಶೋಭಾ ಸುರೇಂದ್ರನ್ ಅವರನ್ನು ಪಾಲ ಕ್ಕಾಡ್‌ನಿಂದ ಕಣಕ್ಕಿಳಿಸಿದೆ. ಈಗಾಗಲೇ ಪ್ರಧಾನಿ ಮೋದಿ ಪಾಲಕ್ಕಾಡ್‌ಗೆ ಬಂದು ಚುನಾವಣಾ ಪ್ರಚಾರ ಭಾಷಣ ಮಾಡಿರುವ ನಂತರ ಬಿಜೆಪಿ ಪಾಳಯದಲ್ಲಿ ಗೆಲುವಿನ ಕನಸು ಚಿಗುರಿದೆ.

ಈ ಸಲ ಕಾಂಗ್ರೆಸ್ ಒಕ್ಕೂಟದ ಯುಡಿಎಫ್ ಪಾಳಯದಿಂದ ಪಾಲಕ್ಕಾಡಿನಲ್ಲಿ ಈ ಸಲ ಮಲಯಾಳಂ ಚಿತ್ರನಟ ರಮೇಶ್ ಪಿಶಾರಡಿ ಸ್ಪರ್ಧಿಸುತ್ತಿದ್ದು ರಾಜ್ಯ ಕಾಂಗ್ರೆಸ್‌ನ ಹಿರಿಯ ನಾಯಕರು ತಮ್ಮ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿದ್ದಾರೆ. ಎಲ್‌ಡಿಎಫ್ ಒಕ್ಕೂಟದಿಂದ ಎಂ.ಆರ್. ರಝಾಕ್ ಸ್ಪರ್ಧಿಸುತ್ತಿದ್ದು ಸಿಎಂ ಪಿಣರಾಯಿ ವಿಜಯನ್ ತಮ್ಮ ಅಭ್ಯರ್ಥಿ ಪರ ಮುಂದಿನ ವಾರ ಚುನಾವಣಾ ಭಾಷಣ ಮಾಡಲಿದ್ದಾರೆ. ಈ ಎಲ್ಲಾ ಕಾರಣ ಗಳಿಂದಾಗಿ ಪಾಲಕ್ಕಾಡ್‌ನ ರೋಚಕ ಮತಬೇಟೆ ರಂಗೇರಿದೆ.

ತ್ರಿಶೂರ್ ಪೂರಂ: ಸಾಮರಸ್ಯದ ಸಂಕೇತ

‘ತ್ರಿಶೂರ್ ಪೂರಂ’ ಪ್ರತೀವರ್ಷ ಏಪ್ರಿಲ್-ಮೇ ತಿಂಗಳಿನಲ್ಲಿ ನಡೆಯುವ ಕೇರಳ ರಾಜ್ಯದ ಅತ್ಯಂತ ದೊಡ್ಡ ಜಾತ್ರೆ. ಅಲ್ಲಿನ ವಡಕ್ಕುನಾಥನ್ (ಶಿವ) ಕ್ಷೇತ್ರದಲ್ಲಿ ನೂರಾರು ಅಲಂಕೃತ ಆನೆಗಳನ್ನು ಈ ಅವಿಸ್ಮರಣೀಯ ಕ್ಷಣಗಳಲ್ಲಿ ಕಣ್ತುಂಬಿಕೊಳ್ಳುವುದು ನಿಜಕ್ಕೂ ಭಕ್ತರ ಪಾಲಿನ ವಿಶೇಷ ಗಳಿಗೆಯಾಗಿದೆ.

ಈಗಲೂ ಪಾಲಕ್ಕಾಡಿನಲ್ಲಿವೆ ನೂರಾರು ಅಗ್ರಹಾರಗಳು

ನೂರಾರು ವರ್ಷಗಳ ಹಿಂದೆ ತಮಿಳುನಾಡಿನಿಂದ ಸಾವಿರಾರು ಬ್ರಾಹ್ಮಣ ಕುಟುಂಬಗಳು ಪಾಲಕ್ಕಾಡ್‌ಗೆ ವಲಸೆ ಬಂದ ಕುರುಹುಗಳೇ ಈಗಲೂ ಕಾಣಿಸುತ್ತಿರುವ ಅಲ್ಲಿನ ಅಗ್ರಹಾರ ಗಳು. ಮಾತೃಭಾಷೆ ತಮಿಳು ಆದರೂ ಕೂಡಾ ಮಲಯಾಳಂ ಸಂಸ್ಕೃತಿಯನ್ನು ತಮ್ಮ ಜೀವನದ ಜೊತೆ ಬೆಸೆದುಕೊಂಡಿರುವ ದೈನಂದಿನ ಜೀವನ ಅವರದ್ದಾಗಿದೆ.

ತ್ರಿಶೂರ್: ಜುವೆಲ್ಲರಿಗಳ ಸ್ವರ್ಗ

ಕೇರಳಕ್ಕೂ ಚಿನ್ನಕ್ಕೂ ಅಗಾಧ ನಂಟು. ಕೇರಳದ ಹೆಚ್ಚಿನ ಜುವೆಲ್ಲರಿಗಳ ಕೇಂದ್ರ ಕಚೇರಿ ಇರುವ ಪ್ರದೇಶವೇ ತ್ರಿಶೂರ್ ಜಿಲ್ಲೆ. ಹಾಗಾಗಿ ಇಲ್ಲಿನ ಸಾವಿರಾರು ಮಂದಿ ಜುವೆಲ್ಲರಿಗಳಿಗೆ ಸಂಬಂಧಪಟ್ಟ ವೃತ್ತಿಗಳಲ್ಲಿ ಸದಾ ನಿರತರು. ಕೇರಳ ಮೂಲದ ಹಲವಾರು ಪ್ರಮುಖ ಜುವೆಲ್ಲರಿಗಳು ಪಾಲಕ್ಕಾಡ್ ಜಿಲ್ಲೆಯನ್ನು ದಾಟಿ ತಮಿಳುನಾಡು ಮತ್ತು ಕರ್ನಾಟಕದ ಹಲವೆಡೆ ತಮ್ಮ ಶಾಖೆಗಳನ್ನು ತೆರೆದು ಉತ್ತಮ ವ್ಯವಹಾರವನ್ನು ಪಡೆದುಕೊಂಡಿವೆ.