ವೈಭವ ಚ.ಕೊಳ್ಳಿ ಬೆಂಗಳೂರು
ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಹಾಗೂ ಸರಕು ಸಾಗಣೆಗೆ ಎದುರಾಗುತ್ತಿರುವ ಅಡೆತಡೆಗಳು ಬೆಂಗಳೂರಿನ ವ್ಯಾಪಾರ ವಲಯದಲ್ಲಿ ಅನಿಶ್ಚಿತತೆ ಮೂಡಿಸಿವೆ. ಆಮದು ಸರಕುಗಳ ಸಾಗಣೆ ವೆಚ್ಚ ಹೆಚ್ಚಳ, ವಿತರಣೆಯಲ್ಲಿ ವಿಳಂಬ ಹಾಗೂ ಪೂರೈಕೆ ಸರಪಳಿಯಲ್ಲಿನ ವ್ಯತ್ಯಯದಿಂದ ಖರ್ಜೂರ, ಜಮ್ ಜಮ್ ನೀರು ಸೇರಿದಂತೆ ಹಲವು ಡ್ರೈ ಫ್ರೂಟ್ಸ್ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಸೌದಿ ಅರೇಬಿಯಾದಿಂದ ಆಮದಾಗುವ ಖರ್ಜೂರದ ಬೆಲೆ ಕೆ.ಜಿಗೆ ಸುಮಾರು 100 ರು. ಹೆಚ್ಚಾಗಿದ್ದು, ಮೆಕ್ಕಾದಲ್ಲಿರುವ ಬಾವಿಯೊಳಗಿನ ಪವಿತ್ರ ನೀರಾಗಿರುವ ಜಮ್‌ಜಮ್ ನೀರಿನ ಬೆಲೆಯಲ್ಲಿಯೂ ಭಾರಿ ಏರಿಕೆಯಾಗಿದೆ.
ಈ ಹಿಂದೆ 1500 ರು.ಗೆ ಸಿಗುತ್ತಿದ್ದ ಐದು ಲೀಟರ್ ಕ್ಯಾನ್ ಈಗ 2200 ಕ್ಕೆ ಏರಿಕೆಯಾಗಿದೆ ಎಂದು ವ್ಯಾಪಾರಿ ಗಳು ತಿಳಿಸಿದ್ದಾರೆ. ಸಮುದ್ರ ಮಾರ್ಗಗಳಲ್ಲಿನ ಭದ್ರತಾ ಆತಂಕದಿಂದ ಸರಕು ಸಾಗಣೆ ದರ ಹಾಗೂ ವಿಮಾ ಕಂತು ಹೆಚ್ಚಾಗುವ ಸಾಧ್ಯತೆಯಿದೆ. ಹಡಗುಗಳನ್ನು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವಂತೆ ಮಾಡಿದರೆ ಸರಕು ತಲುಪುವ ಅವಧಿಯೂ ವಿಸ್ತರಣೆಯಾಗಲಿದೆ.
ಇದನ್ನೂ ಓದಿ: Readers Colony: ದಸರಾ ಲೋಪ ದೋಷ
ಒಂದು ಸರಕು ಕಂಟೇನರ್‌ಗೆ ಸಾಗಣೆ ವೆಚ್ಚ 1500ರಿಂದ 4000 ರು.ಹೆಚ್ಚಾಗಿದೆ. ಸಾಗಣೆ ವೆಚ್ಚದಲ್ಲಿನ ಈ ಹೆಚ್ಚಳ ಅಂತಿಮವಾಗಿ ಗ್ರಾಹಕರ ಮೇಲೆಯೇ ಹೊರೆ ಬೀಳುವ ಆತಂಕವಿದೆ ಎನ್ನುತ್ತಾರೆ ವ್ಯಾಪಾರಿಗಳು.
ಖರ್ಜೂರದ ದರದಲ್ಲೂ ಏರಿಕೆ: ಭಾರತದಲ್ಲಿ ಬೇಡಿಕೆಯಿರುವ ಕಿಮಿಯಾ, ಕಲ್ಮಿ ಮತ್ತು ಅಜ್ವಾ ಸೇರಿದಂತೆ ಸೌದಿ ಅರೇಬಿಯಾದ ವಿವಿಧ ತಳಿಯ ಖರ್ಜೂರಗಳ ಬೆಲೆ ಏರಿಕೆಯಾಗಿದೆ. ಪ್ರಸ್ತುತ ಅಜ್ವಾ ಖರ್ಜೂರ ಕೆಜಿಗೆ ಸುಮಾರು 900 ರು. ಹಾಗೂ ಕಲ್ಮಿ ಖರ್ಜೂರ 650 ರು.ನಂತೆ ಮಾರಾಟ ವಾಗುತ್ತಿದೆ. ಹಿಂದಿನ ದರಕ್ಕೆ ಹೋಲಿಸಿದರೆ ಕೆ.ಜಿಗೆ ಸುಮಾರು 100 ರು.ಹೆಚ್ಚಳವಾಗಿದೆ.
ಇರಾನ್ ಮತ್ತು ಅಫ್ಘಾನಿಸ್ತಾನದಿಂದ ಆಮದಾಗುವ ಕೆಲವು ಒಣಹಣ್ಣುಗಳ ಬೆಲೆಯೂ ಹೆಚ್ಚಾಗಿದೆ. ಒಂದು ಕೆಜಿ ಮಾಮ್ರಾ ಬಾದಾಮಿಯ ಬೆಲೆ 2500ರಿಂದ 4000 ರು.ಗೆ ಏರಿಕೆಯಾಗಿದೆ. ಅಂಜೂರದ ಬೆಲೆ ಕೆಜಿಗೆ 1200ರಿಂದ 1400ರಷ್ಟಿದ್ದದ್ದು, ಈಗ 1800 ರು. ತಲುಪಿದೆ. ಆಮದು ವೆಚ್ಚ ಹಾಗೂ ಸಾಗಣೆ ಸಮಸ್ಯೆ ಗಳು ಮುಂದುವರಿದರೆ ಇನ್ನಷ್ಟು ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.
![]()
ಪಶ್ಚಿಮ ಏಷ್ಯಾದ ಉದ್ವಿಗ್ನತೆಯಿಂದ ಸಾಗಣೆ ವೆಚ್ಚ ಹೆಚ್ಚಾಗಿ ಖರ್ಜೂರ, ಜಮ್‌ಜಮ್ ನೀರು ಸೇರಿದಂತೆ ಆಮದು ವಸ್ತುಗಳ ಬೆಲೆ ಏರಿಕೆಯಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ದರ ಮತ್ತಷ್ಟು ಹೆಚ್ಚಾಗುವ ಆತಂಕವಿದೆ, ಇದರಿಂದ ಖರೀದಿದಾರರು ಕಡಿಮೆ ಆಗುತ್ತಾರೆ
-ಶ್ರೀಧರ್, ವ್ಯಾಪಾರಿ
![]()
ಹಬ್ಬ, ಧಾರ್ಮಿಕ ಆಚರಣೆ ಹಾಗೂ ಕುಟುಂಬದ ಬಳಕೆಗೆ ಖರ್ಜೂರ ಮತ್ತು ಒಣಹಣ್ಣು ಖರೀದಿಸು ತ್ತೇವೆ. ಈಗ ಬೆಲೆ ಹೆಚ್ಚಾದರೆ ಅಗತ್ಯವಿರುವಷ್ಟು ಖರೀದಿಸುವುದೂ ಕಷ್ಟವಾಗುತ್ತದೆ. ಸಾಗಣೆ ವೆಚ್ಚ ಹೆಚ್ಚಳದ ಹೆಸರಿನಲ್ಲಿ ದರಗಳು ಎಷ್ಟು ಏರಿಕೆಯಾಗುತ್ತವೆ ಎಂಬುದರ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ನಿಗಾ ವಹಿಸಬೇಕು.
- ಭಾಗ್ಯ, ಗೃಹಿಣಿ