Readers Colony: ದಸರಾ ಲೋಪ ದೋಷ
ರಾಜವಂಶಸ್ಥೆ ಪ್ರಮೋದಾ ದೇವಿಯವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಜಂಬೂ ಸವಾರಿ ಮೆರವಣಿಗೆ ಯಲ್ಲಿ ಉಂಟಾದ ಹಲವಾರು ಲೋಪ-ದೋಷಗಳ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆದಿರುವುದಲ್ಲದೇ ಇನ್ನು ಮುಂದೆ ವಿಜಯದಶಮಿ ಬದಲು ಚಾಮುಂಡೇಶ್ವರಿ ರಥೋತ್ಸವದಂದು ಜಂಬೂ ಸವಾರಿ ನಡೆಸಲು ಸಲಹೆ ನೀಡಿದ್ದಾರೆ.
-
ಓದುಗರ ಓಣಿ
ಈ ವರ್ಷದ ದಸರಾ ಮಹೋತ್ಸವದ ಬಗ್ಗೆ ನಾನಾ ರೀತಿಯ ಟೀಕೆ ಟಿಪ್ಪಣಿ ವ್ಯಕ್ತವಾಗುತ್ತಿವೆ. ದಲಿತ ಸಮುದಾಯಕ್ಕೆ ಸೇರಿದ ಮೂವರು ಸಚಿವರಿಗೆ ವೇದಿಕೆ ಮೇಲೆ ಹೋಗಲು ಪೊಲೀಸ್ ಅಧಿಕಾರಿ ಯೊಬ್ಬರು ಅನುಮತಿ ನಿರಾಕರಿಸಿದ ಬಗ್ಗೆ ಸ್ವತಃ ಆಡಳಿತ ಪಕ್ಷದವರಿಂದಲೇ ಟೀಕೆ ಟಿಪ್ಪಣಿ ವ್ಯಕ್ತವಾಗಿದೆ. ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ ರಾಜವಂಶಸ್ಥೆ ಪ್ರಮೋದಾ ದೇವಿಯವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಜಂಬೂ ಸವಾರಿ ಮೆರವಣಿಗೆಯಲ್ಲಿ ಉಂಟಾದ ಹಲವಾರು ಲೋಪ-ದೋಷಗಳ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆದಿರುವುದಲ್ಲದೇ ಇನ್ನು ಮುಂದೆ ವಿಜಯದಶಮಿ ಬದಲು ಚಾಮುಂಡೇಶ್ವರಿ ರಥೋತ್ಸವದಂದು ಜಂಬೂ ಸವಾರಿ ನಡೆಸಲು ಸಲಹೆ ನೀಡಿದ್ದಾರೆ.
ಇದೇ ಮೊದಲ ಬಾರಿಗೆ ದಸರಾ ಮೇಲ್ವಿಚಾರಣೆಗೆ ಮೂವರು ಸಚಿವರನ್ನು ನೇಮಿಸಿದ್ದರೂ, ಅವರಾರೂ ಜಂಬೂ ಸವಾರಿಯ ದಿನ ಕಾಣಿಸಿಕೊಳ್ಳಲಿಲ್ಲವೆಂದು ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ಕುತೂಹಲಕಾರಿಯಾಗಿದೆ. ಬಹುಶಃ ದಸರಾ ಮಹೋತ್ಸವದ ಬಗ್ಗೆ ಈ ರೀತಿಯ ಕಟು ಟೀಕೆ-ಟಿಪ್ಪಣಿಗಳು ವ್ಯಕ್ತವಾಗುತ್ತಿರುವುದು ಇದೇ ಮೊದಲು ಎನ್ನಬಹುದು. ದಸರಾದಲ್ಲಿ ಸರ್ಕಾರದ ಅಧಿಕಾರಿಗಳ ದರ್ಬಾರ್ ಹೆಚ್ಚಾಗುತ್ತಿದೆ. ಇನ್ನು ಮುಂದೆ ದಸರಾ ಮಹೋತ್ಸವ ನಡೆಸಲು ರಾಜ್ಯ ಸರ್ಕಾರಕ್ಕೆ ಅಗತ್ಯ ಸಲಹೆ ಸೂಚನೆ ನೀಡಲು ತಜ್ಞರ ಸಮಿತಿ ರಚಿಸುವುದು ಒಳ್ಳೆಯದು.
- ಕೆ.ವಿ.ವಾಸು, ಮೈಸೂರು
ಲಘುವಾಗಿ ಪರಿಗಣಿಸಬೇಡಿ
ನಾಡಹಬ್ಬ ದಸರಾವನ್ನು ಗೌರವ ಮತ್ತು ವೈಭವಕ್ಕೆ ತಕ್ಕಂತೆ ಆಚರಿಸಲು ಪ್ರತಿ ವರ್ಷವೂ ಎಲ್ಲರಿಗೂ ಅನುಕೂಲವಾಗುವ ರೀತಿ ಸಹಕಾರ ನೀಡಲು ಪ್ರಯತ್ನಿಸುತ್ತಿದ್ದರೂ ರಾಜಮನೆತನದ ಸಹಕಾರವನ್ನು ಲಘುವಾಗಿ ಪರಿಗಣಿಸಲಾಗುತ್ತಿದೆ ಎಂಬ ಭಾವನೆ ಮೂಡುತ್ತಿದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಹೇಳಿರುವುದು ಸ್ವಾಗತಾರ್ಹ. ಈ ಬಾರಿ ದಸರಾ ಮಹೋತ್ಸವ ನಡೆಸುವಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ನಡುವೆ ಸಮನ್ವಯ ಕೊರತೆ ಯಿಂದ ವಜ್ರಮುಷ್ಠಿ ಕಾಳಗ ನಡೆದಿಲ್ಲ ಹಾಗೂ ಚಿನ್ನದ ಅಂಬಾರಿ ಬಳಿ ಭದ್ರತಾ ನಿಯಮ ಉಲ್ಲಂಘಿಸಿ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದ ಸದಸ್ಯರು ಸೆಲಿ ಮತ್ತು ಛಾಯಾಚಿತ್ರ ತೆಗೆದು ಕೊಳ್ಳಲು ಮುಗಿಬೀಳುವುದು ಆಘಾತಕಾರಿ ಸಂಗತಿ. ಇದು ಶಿಸ್ತಿನ ಕೊರತೆ ಮತ್ತು ಕರ್ತವ್ಯಲೋಪಕ್ಕೆ ಎಡೆಮಾಡಿಕೊಡುತ್ತದೆ. ಮುಂದಾದರೂ ದಸರಾ ಹಬ್ಬದ ಬಗ್ಗೆ ಅರಿತಿರುವ ಅಧಿಕಾರಿಗಳನ್ನು ನಿಯೋಜಿಸಿ ಸ್ಥಳೀಯರ ಅಭಿಪ್ರಾಯ ಪಡೆದು ದಸರಾವನ್ನು ನಾಡದೇವತೆಯ ಗೌರವ, ಘನತೆ, ವೈಭವ, ಸಂಸ್ಕೃತಿಗೆ ಕಿಂಚಿತ್ತೂ ತೊಂದರೆ ಆಗದ ರೀತಿಯಲ್ಲಿ ಆಚರಿಸಲು ನೆರವಾಗುವುದು ಒಳಿತು.
- ಬೆಸಗರಹಳ್ಳಿ ರವಿಪ್ರಸಾದ್, ಮೈಸೂರು
ಇದನ್ನೂ ಓದಿ: Readers Colony: ರದ್ದು ಮಾಡುವುದೇ ಸೂಕ್ತ
ಮತ್ತೆ ಕಾವೇರಿ ಅನ್ಯಾಯ
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಪ್ರತಿ ದಿನ ಮೂರು ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಲು ಕರ್ನಾಟಕ ಸರ್ಕಾರಕ್ಕೆ ಮತ್ತೆ ಆದೇಶ ನೀಡಿದೆ. ರಾಜ್ಯದಲ್ಲಿ ಈ ವರ್ಷ ಭೀಕರ ಬರದಿಂದ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳು ಪೂರ್ಣವಾಗಿ ಭರ್ತಿ ಆಗದೇ, ಬೆಳೆ ಬೆಳೆಯುವುದು ಇರಲಿ, ರಾಜ್ಯದ ಜನತೆ ಕುಡಿಯುವ ನೀರಿಗೂ ಹಾಹಾಕಾರ ಪಡುವ ಪರಿಸ್ಥಿತಿ ಇದೆ, ಇದು ಕಾವೇರಿ ನ್ಯಾಯಮಂಡಳಿಗೂ ತಿಳಿದಿದೆ, ಆದರೂ ಇಂತಹ ಆದೇಶ ಹೊರಡಿಸಲು ಕಾರಣವಾದರೂ ಏನು? ಪ್ರತಿ ದಿನ ಮೂರು ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ತಲುಪ ಬೇಕಾದರೆ, ಕರ್ನಾಟಕದಿಂದ ಪ್ರತಿನಿತ್ಯ ಕನಿಷ್ಠ ಆರು ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಬೇಕಾಗುತ್ತದೆ.
ಮುಂದಿನ ಹದಿನೈದು ದಿನ ಮೂರು ಸಾವಿರ ಕ್ಯೂಸೆಕ್ ಬಿಟ್ಟರೆ, ಕೆಲವೇ ದಿನಗಳಲ್ಲಿ ರಾಜ್ಯದ ಜನತೆಗೆ ಕುಡಿ ಯುವ ನೀರಿಗೆ ಹಾಹಾಕಾರ ಉಂಟಾಗುತ್ತದೆ. ಈಗ ತಮಿಳುನಾಡಿನಲ್ಲಿ ಕಳೆದ ನಾಲ್ಕು ದಿನಗಳಿಂದ ಸಾಕಷ್ಟು ಮಳೆ ಸುರಿದಿದೆ, ಮುಂದಿನ ದಿನಗಳಲ್ಲಿ ಬರಲಿದೆ. ಇದನ್ನು ನ್ಯಾಯ ಮಂಡಳಿ ಪರಿಶೀಲಿಸಬೇಕು. ರಾಜ್ಯವೂ ಇದನ್ನು ನ್ಯಾಯಮಂಡಳಿಯ ಗಮನಕ್ಕೆ ತಂದು, ರಾಜ್ಯಕ್ಕೆ ನ್ಯಾಯ ಸಿಗುವಂತೆ ನೋಡಿಕೊಳ್ಳಬೇಕು.
- ಬೂಕನಕೆರೆ ವಿಜೇಂದ್ರ, ಮೈಸೂರು
ಬದಲಿ ಪುರಾಣ!
ಶ್ರೀವತ್ಸ ಜೋಶಿಯವರು ಅ.25ರ ‘ತಿಳಿರು ತೋರಣ’ ಅಂಕಣದಲ್ಲಿ, ಅಕ್ಷತೆಕಾಳಿನಿಂದ ಆರಂಭಿಸಿ ಪುರಾಣ ಕಥೆಗಳವರೆಗೆ, ಬದಲಿ ಬಳಕೆಯ ಬಡಿವಾರಗಳನ್ನು ಬಲು ಭೇಷಾಗಿ ಬಣ್ಣಿಸಿದ್ದಾರೆ. ಬೇಕಾಗುವ ವಸ್ತು ಲಭ್ಯವಿಲ್ಲದಿದ್ದಾಗ ವಿದೇಶಿ ನೆಲದಲ್ಲಿ ನಮ್ಮವರು ಬುರುಡೆ ಓಡಿಸಿ ಬಳಸಿದ ಬದಲಿ ವಸ್ತುಗಳ ಪುರಾಣಗಳಂತೂ ಬೊಂಬಾಟಾಗಿವೆ. ಸಣ್ಣಪುಟ್ಟ ವಸ್ತುಗಳು ಒತ್ತಟ್ಟಿಗಿರಲಿ, ವಿದೇಶದಲ್ಲಿ ಮದುಮಗ, ಭಾರತದಲ್ಲಿ ಮದುಮಗಳು ಇದ್ದಾಗ, ಇವರಿಬ್ಬರ ಬದಲಿಗೆ ಇವರ ಫೋಟೋಗಳನ್ನು ಬಳಸಿ ಮದುವೆಯನ್ನೇ ನೆರವೇರಿಸಿದ ‘ಬದಲಿ ಬಹದ್ದೂರ ಸಂಸಾರ’ಗಳೂ ನಮ್ಮಲ್ಲಿವೆ!
ಇಂಥದೊಂದು ನಿರ್ದಿಷ್ಟ ಸಂದರ್ಭದಲ್ಲಿ, ‘ಸರ್ವೋಪಚಾರ ಪೂಜಾರ್ಥೇ ಅಕ್ಷತಾನ್ ಸಮರ್ಪ ಯಾಮಿ’ ಎಂದು ಜೋಶಿಯವರು ಉಲ್ಲೇಖಿಸಿರುವ ಮಂತ್ರಭಾಗದ ಬದಲಿ ರೂಪವು ವಿಶೇಷಾರ್ಥ ಪಡೆದುಕೊಳ್ಳುತ್ತದೆ. ವಿದೇಶದಲ್ಲಿರುವ ವರನ ಫೋಟೋ ಎದುರಿಗಿಟ್ಟುಕೊಂಡು ಕನ್ಯಾದಾನ ಮಾಡುವಾಗ, ಭಾರತದಲ್ಲಿರುವ ‘ಅಕ್ಷತಾ’ ಎಂಬ ಹೆಸರಿನ ವಧುವಿನ ತಂದೆಯು, ‘ಇತೋಪ್ಯತಿಶಯ ಸುಖಾರ್ಥೇ ಅಕ್ಷತಾಂ ಸಮರ್ಪಯಾಮಿ’ ಎಂದು ಹೇಳಿ ಅಕ್ಷತೆಕಾಳು ಸಮರ್ಪಿಸುವ ಮೂಲಕ ಕನ್ಯಾದಾನ ಪೂರೈಸಿದರೆ ಆಗ ಅದೆಷ್ಟು ಅರ್ಥಪೂರ್ಣ! ಅಲ್ಲವೇ?
ಅಂದಹಾಗೆ, ವಿದೇಶವಾಸಿ ಕನ್ನಡಿಗರು, ಬೇಕಾದ ವಸ್ತು ಲಭ್ಯವಿಲ್ಲದಿzಗ, ಬದಲಿ ವಸ್ತು ಬಳಸಿ ಸಂಪ್ರದಾಯಾದಿ ಕಾರ್ಯಗಳನ್ನು ನೆರವೇರಿಸಿದ ಹಲವು ಉದಾ ಹರಣೆಗಳನ್ನು ಜೋಶಿಯವರು ನೀಡಿದ್ದಾರಷ್ಟೆ. ಈ ಪೈಕಿ ಒಂದಷ್ಟು ಜನರಾದರೂ, ತಮ್ಮ ಬದಲಿ ಬಳಕೆಯ ಬುದ್ಧಿವಂತಿಕೆಯನ್ನು ಪೇಟೆಂಟ್ ಮಾಡಿಸಿಕೊಳ್ಳಬಹುದಲ್ಲವೆ? ‘ರಾಜ್ ಕುಮಾರ್’ ಹಿಂದಿ ಚಲನಚಿತ್ರ ದಲ್ಲಿ ಶಮ್ಮಿ ಕಪೂರ್ ಹಾಡಿರುವಂತೆ, ‘ಇಸ್ ರಂಗ್ ಬದಲ್ತಿ ದುನಿಯಾ ಮೇ’, ಎಲ್ಲವಕ್ಕೂ ಸಬ್ಸ್ಟಿಟ್ಯೂಟ್ಸ್ ಲಭ್ಯ, ಶ್ರೀವತ್ಸ ಜೋಶಿಯವರ ಅಂಕಣವೊಂದನ್ನು ಬಿಟ್ಟು, ಸದ್ಯಕ್ಕಂತೂ.
- ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು
ಕನ್ನಡಿಗರಿಗೆ ಉದ್ಯೋಗ ವಂಚನೆ
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನೆಲೆಯೂರಿರುವ ಕೆಲವು ಐಟಿ ಕಂಪನಿಗಳು ರೆಸ್ಯೂಮೆಯಲ್ಲಿ ಕನ್ನಡ ಮಾತೃಭಾಷೆ ಎಂದಿರುವುದನ್ನು ಕಂಡು ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ನೀಡಲು ನಿರಾಕರಿಸುತ್ತಿರುವುದು ಅತ್ಯಂತ ಕಳವಳಕಾರಿ ಹಾಗೂ ಖಂಡನೀಯ. ನಮ್ಮ ನೆಲ ಜಲ ಮತ್ತು ವಾತಾವರಣ ಬಳಸಿಕೊಳ್ಳುವ ಈ ಸಂಸ್ಥೆಗಳಿಗೆ ಕನ್ನಡಿಗರೇ ಬೇಡವಾಗಿರುವುದು ಅಮಾನವೀಯತೆಯ ಪರಕಾಷ್ಠೆಯಾ ಗಿದೆ. ಕನ್ನಡಿಗರನ್ನು ಉದ್ಯೋಗದಿಂದ ಹೊರಗಿಡುವ ಇಂತಹ ಧೋರಣೆ ಮುಂದುವರಿದರೆ ಮುಂದೊಂದು ದಿನ ಕನ್ನಡಿಗರು ತಮ್ಮದೇ ನೆಲದಲ್ಲಿ ಅತಿಥಿಗಳಾಗ ಬೇಕಾದೀತು. ಸರ್ಕಾರ ಹೇಳಿಕೆಗಳಿಗೆ ಸೀಮಿತಗೊಳ್ಳದೆ ತಕ್ಷಣವೇ ಇಂತಹ ಕಂಪನಿಗಳಿಗೆ ಸವಲತ್ತು ಕಡಿತಗೊಳಿಸಬೇಕು. ಕನ್ನಡಿಗರನ್ನು ಕಡೆಗಣಿಸುವ ಕಂಪನಿಗಳಿಗೆ ಕರ್ನಾಟಕದಲ್ಲಿ ಅವಕಾಶವಿಲ್ಲ ಎಂಬ ಕಠಿಣ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.
- ಡಾ.ವಿಜಯಕುಮಾರ್ ಎಚ್. ಕೆ, ರಾಯಚೂರು
ಕನ್ನಡ ಮರೆತ ದಸರಾ
ಬರದ ನಡುವೆಯೂ ವೈಭವದ ದಸರಾ. ಮನಸ್ಸಿದ್ದರೆ ಏನೂ ಸಾಧಿಸಬಹುದು ಎನ್ನುವುದಕ್ಕೆ ಮೈಸೂರಿನ ದಸರವೇ ಜ್ವಲಂತ ಉದಾಹರಣೆ. ಆದರೆ ಕನ್ನಡವೇ ನನ್ನ ಉಸಿರು ಎನ್ನುವ ಸಿಎಂ ಕನ್ನಡವನ್ನು ಏಕೆ ಮರೆತರು? ಪುಸ್ತಕಗಳ ಗ್ರಂಥಾಲಯ ಖರೀದಿ ನಡೆಯುತ್ತಿಲ್ಲ. 2021, 2022ರ ಪ್ರಕಟಣೆಗಳು ಆಯ್ಕೆಗೊಂಡಿ ದ್ದರೂ ಏಕಗವಾಕ್ಷಿ ಅನುದಾನ ಇಲ್ಲದ್ದರಿಂದ ಗ್ರಂಥಾಲಯ ಇಲಾಖೆ ಖರೀದಿಸದೆ ಪುಸ್ತಕಗಳು ಲೇಖಕ/ಪ್ರಕಾಶಕರ ಮನೆ/ಗೋಡೌನ್ಗಳಲ್ಲಿ ಸೆರೆಯಾಗಿವೆ. 2023ರ ಕೃತಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಈಗ ಪ್ರಕಟಗೊಂಡಿದೆ. 2024, 2025ರ ಆಯ್ಕೆ ಪ್ರಕ್ರಿಯೆ ಯಾವಾಗಲೋ? ಹಣವಿಲ್ಲ ಎಂಬುದು ಕಾರಣವಲ್ಲ. ಇಚ್ಛೆ ಇಲ್ಲದಿರುವುದೇ ಕಾರಣ. ಸಿಎಂ ಮನಸ್ಸು ಮಾಡಿದರೆ ಗ್ರಂಥಗಳ ಜಂಬೂಸವಾರಿ ಆಗಬಲ್ಲದು.
- ಸತ್ಯಬೋಧ, ಹೊಸಕೆರೆಹಳ್ಳಿ