ಎನ್‌ಡಿಎ ಮೈತ್ರಿಕೂಟ ಮತ್ತು ಇಂಡಿ ಒಕ್ಕೂಟ (ಮಹಾಘಟಬಂಧನ) ನಡುವಿನ ರಣರೋಚಕ ಚುನಾವಣಾ ಕದನಕ್ಕೆ ಸಾಕ್ಷಿಯಾಗುತ್ತಿರುವ ಬಿಹಾರದಲ್ಲಿ ನ.೬ಕ್ಕೆ ಮೊದಲ ಹಂತದ ಮತದಾನ ನಡೆಯಲಿದೆ. ೧೧ರಂದು ೨ನೇ ಹಂತದ ಮತದಾನದ ನಡೆದು, ೧೪ರಂದು ಫಲಿತಾಂಶ ಹೊರ ಬೀಳಲಿದೆ.
ಎರಡೂ ರಾಷ್ಟ್ರೀಯ ಮೈತ್ರಿಕೂಟಗಳ ನಡುವೆ ಜನ ಸುರಾಜ್ ಪಕ್ಷವೂ ತಲೆ ಎತ್ತಿದ್ದು, ಎರಡೂ ಕಡೆಯವರ ವೋಟ್ ಕಟ್ ಮಾಡುವ ೩ನೇ ಆಟಗಾರನಾಗಿದೆ. ಬಿಹಾರದಲ್ಲಿ ಪಿಎಂ ಮೋದಿ, ಸಿಎಂ ನಿತೀಶ್, ಆರ್‌ಜೆಡಿಯ ತೇಜಸ್ವಿ ಯಾದವ್, ಕಾಂಗ್ರೆಸ್‌ನ ರಾಹುಲ್ ಗಾಂಧಿ, ಜನ ಸುರಾಜ್‌ನ ಪ್ರಶಾಂತ್ ಕಿಶೋರ್ ಹವಾ ಎಬ್ಬಿಸಿದ್ದಾರೆ. ಇದರ ಮಧ್ಯೆಯೇ ಮೂವರು ಯುವ ಕನ್ನಡಿಗರು ರಾಜಕೀಯ ಪಕ್ಷಗಳ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಅವರಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ವಿ.ಶ್ರೀನಿವಾಸ ಕಾಂಗ್ರೆಸ್‌ನಲ್ಲಿ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಆರ್‌ಜೆಡಿ ಗೆಲುವಿಗೆ ಶ್ರಮಿಸುತ್ತಿರುವ ಕನ್ನಡತಿ ಯಶಸ್ವಿನಿ ತಲ್ವಾರ್ ಮತ್ತು ಜನಸುರಾಜ್ ಪರ ಕೆಲಸ ಮಾಡುತ್ತಿರುವ ಶರತ್ ಕುಮಾರ್ ದೇವ್ ಚುನಾವಣಾ ಕಣದಲ್ಲಿ ಸದ್ದು ಮಾಡುತ್ತಿದ್ದಾರೆ.
ಬಿಹಾರದಂತಹ ರಾಜ್ಯದಲ್ಲಿ ಅದೂ ಆರಾ, ಬಕ್ಸಾರ್‌ನಂತಹ ನರಸಂಹಾರ ನಡೆದಂತಹ ಕರಾಳ ಇತಿಹಾಸ ಹೊಂದಿರುವ, ಯಾದವ ವರ್ಸಸ್ ರಜಪೂತ್ ನಡುವೆ ರಾಜಕೀಯ ಕಾಳಗ, ರಕ್ತ-ಸಂಘರ್ಷ ನಡೆಯುವ ಪ್ರದೇಶಗಳಲ್ಲಿ ರಾಜಕೀಯ ಪಕ್ಷಗಳ ಕನ್ಸಲ್ಟೆಂಟ್ ಆಗಿ ಅವರ ಪ್ರಚಾರ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳುವುದು ಸುಲಭದ ಕೆಲಸವೇನಲ್ಲ. ಈ ಸವಾಲುಗಳನ್ನು ಮೀರಿ ಕೆಲಸ ಮಾಡುತ್ತಿದ್ದಾರೆ ಹುಬ್ಬಳ್ಳಿ ಮೂಲದ ಈಗ ತುಮಕೂರು ನಿವಾಸಿಯಾಗಿರುವ ಯಶಸ್ವಿನಿ ತಲ್ವಾರ್.
ಇದನ್ನೂ ಓದಿ: Bihar Election Ground Report from Raghava Sharma Nidle: ಜಾರ್ಜ್ ಕರ್ಮಭೂಮಿಯಲ್ಲಿ ಡಾಕ್ಟರ್ Vs ಪೇಶೆಂಟ್..!
ಸದ್ಯ ಮಹಾಘಟಬಂಧನದ ಪ್ರಮುಖ ಪಕ್ಷ ಆರ್‌ಜೆಡಿ ಕ್ಯಾಂಪೇನ್ ಟೀಮ್‌ನ ಸೀನಿಯರ್ ಕ್ಯಾಂಪೇನ್ ಅಸೋಸಿಯೇಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹರ್ಯಾಣ ಚುನಾವಣೆ ವೇಳೆ ಕಾಂಗ್ರೆಸ್ ರಣನೀತಿಕಾರನಾಗಿ ಕೆಲಸ ಮಾಡಿದ್ದ ಸಂಜಯ್ ಯಾದವ್ ಅವರೇ ಬಿಹಾರದಲ್ಲಿ ಈ ತಂಡವನ್ನು ಮುನ್ನಡೆಸುತ್ತಿzರೆ. ಯಶಸ್ವಿನಿ ಅವರು ಆರಾ ಜಿಲ್ಲೆಯ ಜಗದೀಶಪುರ, ಬರಾರಾ, ಶಾಹಪುರ, ಸಂದೇಶ್ ಹಾಗೂ ಬಕ್ಸಾರ್ ಜಿಲ್ಲೆಯ ಬಕ್ಸಾರ್ ವಿಧಾನಸಭೆ ಕ್ಷೇತ್ರಗಳಲ್ಲಿ ಆರ್‌ಜೆಡಿ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.
‘ಬಿಹಾರ ರಾಜಕೀಯವನ್ನು ಇಷ್ಟೊಂದು ಹತ್ತಿರದಿಂದ ನೋಡುವುದು ಜೀವನದ ಹೊಸ ಅನುಭವ’ ಎಂದು ‘ವಿಶ್ವವಾಣಿ’ ಜತೆಗೆ ಅನಿಸಿಕೆ ಹಂಚಿಕೊಂಡ ಯಶಸ್ವಿನಿ, ನಾನಿರುವ ಆರಾ ಮತ್ತು ಬಕ್ಸಾರ್ ನಲ್ಲಿ ಈಗಲೂ ಸಂಜೆ ೫ರ ನಂತರ ಮಹಿಳೆ, ಯುವತಿಯರು ಮನೆ ಸೇರಿ ಬಿಡುತ್ತಾರೆ. ಈಗಲೂ ರಾತ್ರಿ ವೇಳೆ ಓಡಾಡಲು ಭಯವಾಗುತ್ತದೆ ಎನ್ನುತ್ತಾರೆ.
ಪಟ್ಟಣ ಪ್ರದೇಶಗಳಲ್ಲಿ ಪರವಾಗಿಲ್ಲ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಮನೆಯವರು ಹೆಣ್ಣು ಮಕ್ಕಳನ್ನು ಸಂಜೆ ಮನೆಯಿಂದ ಹೊರಗೆ ಬಿಡುವುದಿಲ್ಲ ಎನ್ನುತ್ತಾರೆ. ‘ಪಾಂಚ್ ಬಜೇ ಕೇ ಪೆಹ್ಲೇ ಲೌಟ್ ಜಾಯಿಯೇಗಾ, ಯಹಾ ಆಜ್ ಭೀ ಜಂಗಲ್ ರಾಜ್ ಹೇ’.. ಎಂಬ ಮಾತುಗಳು ಅನೇಕ ಕಡೆ ಕೇಳುತ್ತವೆ. ಆದರೂ, ಹೊರಗಿನಿಂದ ಬಂದವರಿಗೆ ಅತಿಥ್ಯ ನೀಡುವ ಗುಣವಿದ್ದು, ಛತ್ ಪೂಜಾ ಪ್ರಸಾದ್ ಖಾಕೇ ಜಾಯಿಯೇಗಾ ಎಂಬ ಪ್ರೀತಿಯನ್ನೂ ತೋರಿಸುತ್ತಾರೆ. ಇದು ಯಶಸ್ವಿನಿ ಅವರ ವೈಯಕ್ತಿಕ ಅನುಭವ.
ತುಮಕೂರಿನ ಸಿಐಟಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಬಿಇ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅವರು, ಏಷ್ಯಾನೆಟ್ ನ್ಯೂಸ್ ನೆಟ್ವರ್ಕ್‌ನಲ್ಲಿ ೧ ವರ್ಷ ಡಿಜಿಟಲ್ ಮಾರ್ಕರ್ ಆಗಿ ಕೆಲಸ ಮಾಡಿದ್ದರು. ನಂತರ ಒನ್ ಇಂಡಿಯಾ ಡಿಜಿಟಲ್‌ನ (ಇಂಗ್ಲಿಷ್ ನ್ಯೂಸ್, ಫಿಲ್ಮ ಬೀಟ್ ಇಂಗ್ಲಿಷ್ ಮತ್ತು ಹಿಂದಿ) ಸೋಷಿಯಲ್ ಮೀಡಿಯಾ ಮ್ಯಾನೇಜರ್ ಆಗಿ ೨ ವರ್ಷ, ವರಾಹಿ ಅನಾಲಿಟಿP ಸಂಸ್ಥೆಯಲ್ಲಿ ಸೀನಿಯರ್ ಪೊಲಿಟಿಕಲ್ ಕನ್ಸಲ್ಟೆಂಟ್ ಆಗಿ (ಕರ್ನಾಟಕ, ಛತ್ತೀಸ್‌ಗಢ, ಒಡಿಶಾ, ಹರ್ಯಾಣ, ಮಹಾರಾಷ್ಟ್ರ) ೩ ವರ್ಷ ಕಾರ್ಯನಿವರ್ಹಿಸಿದ್ದರು.
ಈಗ ಬಿಹಾರ ಚುನಾವಣೆಗಾಗಿ ತೇಜಸ್ವಿ ಯಾದವ್ ಪರ ಕೆಲಸ ಮಾಡುತ್ತಿರುವ ಸಂಸ್ಥೆಯಲ್ಲಿದ್ದಾರೆ. ಯಶಸ್ವಿನಿ ಅವರ ತಾಯಿ ಚಿಕ್ಕನಾಯಕನಹಳ್ಳಿ ಗ್ರಾಮ ಪಂಚಾಯತ್ ಪಿಡಿಒ ಆಗಿದ್ದಾರೆ. ‘ನಾನು ಬಿಹಾರದಂತಹ ರಾಜ್ಯದಲ್ಲಿ ಪೊಲಿಟಿಕಲ್ ಪಾರ್ಟಿಗಳ ಜತೆಗೆ ಕೆಲಸ ಮಾಡುವ ಬಗ್ಗೆ ಅಮ್ಮನಿಗೆ ಭಯ ಇದ್ದದ್ದು ಸಹಜ. ಆದರೂ, ನನ್ನ ಉತ್ಸಾಹ ನೋಡಿ, ಕಳುಹಿಸಿಕೊಟ್ಟಿದ್ದಾರೆ’ ಎನ್ನುತ್ತಾರೆ ಯಶಸ್ವಿನಿ.
ಪಿಕೆ ಆಪ್ತ ಶಿವಮೊಗ್ಗದ ಶರತ್
ಬಿಹಾರದಲ್ಲಿ ಸಂಚಲನ ಸೃಷ್ಟಿಸಿರುವ ಜನ ಸುರಾಜ್ ಪಕ್ಷದ ನಾಯಕ ಪ್ರಶಾಂತ್ ಕಿಶೋರ್‌ಗೆ ಆಪ್ತರಾಗಿರುವ ಶಿವಮೊಗ್ಗದ ಶಿಕಾರಿಪುರದ ಶರತ್ ಕುಮಾರ್ ದೇವ್, ಹಲವು ದಿನಗಳಿಂದ ಇಲ್ಲಿನ ಗೋಪಾಲ್ ಗಂಜ್ ಜಿಯಲ್ಲಿ ಬೀಡುಬಿಟ್ಟಿದ್ದಾರೆ. ಭೋರೆ ವಿಧಾನಸಭೆ ಕ್ಷೇತ್ರದಲ್ಲಿ ಜನಸುರಾಜ್ ಪಕ್ಷದ ಮಂಗಳಮುಖಿ ಅಭ್ಯರ್ಥಿ ಪ್ರೀತಿ ಕಿನ್ನರ್ ಗೆಲುವಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಪೊಲಿಟಿಕಲ್ ಕನ್ಸಲ್ಟೆಂಟ್ ಆಗಿ ಹಲವೆಡೆ ಕೆಲಸ ಮಾಡಿರುವ ಶರತ್, 7 ವರ್ಷಗಳಿಂದ ಪ್ರಶಾಂತ್ ತಂಡದಲ್ಲಿ ಸೀನಿಯರ್ ಕನ್ಸಲ್ಟೆಂಟ್ ಆಗಿದ್ದಾರೆ.
ವಿಶೇಷ ಎಂದರೆ, ಕಳೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಇವರು ಶಿಕಾರಿಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಂಡದಲ್ಲೂ ಪೊಲಿಟಿಕಲ್ ಕನ್ಸಲ್ಟೆಂಟ್ ಆಗಿ ಗಮನ ಸೆಳೆದಿದ್ದರು. ನೋಕಿಯಾ ಸಿಮಿ ಕಂಪನಿಯಲ್ಲಿ ಎಂಜಿನಿಯರ್ ಆಗಿದ್ದ ಶರತ್, ಪ್ರಶಾಂತ್ ಕಿಶೋರ್ ಸಂಪರ್ಕಕ್ಕೆ ಬಂದಲ್ಲಿಂದ ರಾಜಕಾರಣಿಗಳ ಮಧ್ಯೆಯೇ ಅವರ ತಂತ್ರಗಾರಿಕೆ ರೂಪಿಸುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದಾರೆ.
ಮೂಡಬಿದಿರೆಯ ಜೈನ್ ಕಾಲೇಜಿನಲ್ಲಿ ಪಿಯು, ನಂತರ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಪಡೆದರು. ಸಾಮಾಜಿಕ ಬದಲಾವಣೆ ಮೇಲೆ ಪ್ರಭಾವ ಬೀರಲು ಪ್ರಶಾಂತ್ ಕಿಶೋರ್ ಅವರ ಐ-ಪ್ಯಾಕ್ ತಂಡ ಸೇರಿಕೊಂಡೆ ಎಂದು ವಿಶ್ವವಾಣಿಗೆ ತಿಳಿಸಿದರು. ಜನಸುರಾಜ್ ಪಕ್ಷದ ಮೂಲಕ ಪ್ರಶಾಂತ್ ಬಿಹಾರ ದಲ್ಲಿ 4000 ಕಿಮೀ ಉದ್ದಕ್ಕೂ ನಡೆಸಿದ ಪಾದಯಾತ್ರೆಯಲ್ಲಿ ಪಾಲ್ಗೊಂಡರು ಮತ್ತು ಬಿಹಾರದ ಬದಲಾವಣೆಗಾಗಿ ನಾನೂ ಕೊಡುಗೆ ನೀಡಬೇಕು ಎಂಬ ಹುಮ್ಮಸ್ಸಿನಿಂದಲೇ ಜನುಸುರಾಜ್ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.
ಬಿಹಾರದ ಹಳ್ಳಿಗಳ ದಯನೀಯ ಸ್ಥಿತಿ ನೋಡಿದಾಗ ನಮ್ಮ ಉತ್ತರ ಕರ್ನಾಟಕ ನೆನಪಾಗುತ್ತದೆ. ಉತ್ತರ ಕರ್ನಾಟಕ ಇಷ್ಟೊಂದು ಕೆಟ್ಟದಾಗಿರದಿದ್ದರೂ, ಉ.ಕ.ದಲ್ಲಿಯೂ ಅಭಿವೃದ್ಧಿ ಆಗುವುದು ಸಾಕಷ್ಟಿದೆ. ಹಾಗೆಯೇ ಬಿಹಾರ ಕೂಡ. ಶಿಕ್ಷಣ, ಆರೋಗ್ಯ, ವಲಸೆ, ಜೀವಿಸಲು ಸರಿಯಾಗಿ ಮನೆ ಇಲ್ಲದಿರುವುದು..
ಹೀಗೆ ಸಮಸ್ಯೆಗಳ ಪಟ್ಟಿ ದೊಡ್ಡದೇ ಇದೆ. ಜನ ಸುರಾಜ್ ಇದಕ್ಕೆ ಪರಿಹಾರ ರೋಡ್ ಮ್ಯಾಪ್ ಮಾಡಿಕೊಂಡು ಜನರಲ್ಲಿ ಮತ ಕೇಳುತ್ತಿದೆ. ಅಧಿಕಾರಕ್ಕಾಗಿ ಪ್ರಶಾಂತ್ ರಾಜಕಾರಣಕ್ಕೆ ಬಂದದ್ದಲ್ಲ. ಇಲ್ಲಿನ ಜನರು, ಅವರ ಸಮಸ್ಯೆಗಳ ಬಗ್ಗೆ ಅವರಿಗೆ ನೈಜ, ಪ್ರಾಮಾಣಿಕ ಕಾಳಜಿ ಇದೆ ಎಂದು ಶರತ್ ಸಮರ್ಥಿಸಿಕೊಳ್ಳುತ್ತಾರೆ.
ಭೋರೆ ವಿಧಾನಸಭೆಯಲ್ಲಿ ದಿನವೆ ಪ್ರೀತಿ ಕಿನ್ನರ್ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿ, ನಂತರ ತಡರಾತ್ರಿಯಿಂದ ಬೆಳಗ್ಗೆ ೩ ಗಂಟೆ ತನಕ ಆಂತರಿಕ ಸಭೆ ನಡೆಸುತ್ತೇವೆ. ಬೆಳಗ್ಗೆ ೮ಕ್ಕೆ ಮತ್ತೆ ಪ್ರಚಾರದ ಹಾದಿ ಹಿಡಿಯುತ್ತೇವೆ ಎಂದು ಶರತ್ ಮಾಹಿತಿ ನೀಡಿದರು.
ಶರತ್ ಈ ಹಿಂದೆ ಆಂಧ್ರಪ್ರದೇಶದಲ್ಲಿ ಮಾಜಿ ಸಿಎಂ ವೈಎಸ್‌ಆರ್ ಸಿಪಿ ಜಗನ್ ಮೋಹನ್ ರೆಡ್ಡಿ ಕೈಗೊಂಡಿದ್ದ 3600 ಕಿಮೀ ಉದ್ದದ ಪ್ರಜಾ ಸಂಕಲ್ಪ ಯಾತ್ರೆಯಲ್ಲೂ ಪಾಲ್ಗೊಂಡು, ಯಶಸ್ಸಿಗಾಗಿ ದುಡಿದಿದ್ದರು. ನಂತರ ವೈಎಸ್‌ಆರ್‌ಸಿಪಿ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿದ್ದು ಈಗ ಇತಿಹಾಸ. ಜನ ಸುರಾಜ್‌ನ ಕರ್ನಾಟಕ ತಂಡ ಮುನ್ನಡೆಸುತ್ತಿರುವ ಶರತ್, ಇಲ್ಲಿನ ಬಿಹಾರಿ ಯುವಕರು ಹಾಗೂ ಸಮುದಾಯವನ್ನೂ ತಲುಪಿದ್ದಾರೆ. ರಾಜ್ಯದಲ್ಲಿ ತಮ್ಮದೇ ಆದ ಪೊಲಿಟಿಕಲ್ ಕನ್ಸಲ್ಟೆನ್ಸಿ ಸ್ಥಾಪನೆ ಮಾಡಬೇಕು ಎನ್ನುವುದು ಅವರ ಕನಸು.
ಚಂಪಾರಣ್‌ನಲ್ಲಿ ಕಾಂಗ್ರೆಸ್‌ನ ಶ್ರೀನಿವಾಸ್
ಕಾಂಗ್ರೆಸ್ ನಾಯಕ, ಭದ್ರಾವತಿ ಮೂಲದ ಬಿ.ವಿ.ಶ್ರೀನಿವಾಸ್ ಕೂಡ ಬಿಹಾರ ಚುನಾವಣಾ ರಣಾಂಗಣದಲ್ಲಿದ್ದು, ಪಶ್ಚಿಮ ಚಂಪಾರಣ್ ಜಿಲ್ಲೆಯ ೬ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದಾರೆ. ಉತ್ತರ ಭಾರತದ ಹೆಚ್ಚು ರಾಜಕೀಯ ಜವಾಬ್ದಾರಿಗಳನ್ನು ವಹಿಸಿ ಕೊಂಡಿರುವ ಶ್ರೀನಿವಾಸ್‌ಗೆ ಬಿಹಾರ ಹೊಸದೇನಲ್ಲ.
ಕಳೆದ ಚುನಾವಣೆಯಲ್ಲಿ ಕೂಡ ಅವರು ಇಲ್ಲಿ ಕೆಲಸ ಮಾಡಿದ್ದರು. ಈ ಬಾರಿ ಪ.ಚಂಪಾರಣ್ ಜಿಯ ಬಗಾಹ, ಬೆಟಿಯಾ, ಚನ್ ಪಟಿಯಾ, ನರಕಟಿಯಾಗಂಜ, ನೌತನ್ ಮತ್ತು ವಾಲ್ಮೀಕಿ ನಗರ ಕ್ಷೇತ್ರಗಳ ಉಸ್ತುವಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಬಿಹಾರ ಚುನಾವಣೆಗೆ ಎಐಸಿಸಿ ವೀಕ್ಷಕ ಜವಾಬ್ದಾರಿಯೂ ಅವರ ಹೆಗಲೇರಿದೆ. ಪ.ಚಂಪಾರಣ್ ೯ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರ ಸಂಖ್ಯೆ ಹೆಚ್ಚಿದ್ದು, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸೀಟು ಕೂಡ ಇಲ್ಲಿ ಗೆಲ್ಲಲಿಲ್ಲ. ಈ ಬಾರಿ ಕನಿಷ್ಠ ೩ ಸೀಟು ಗೆಲ್ಲುತ್ತೇವೆ ಎನ್ನುವುದು ಶ್ರೀನಿವಾಸ್ ವಿಶ್ವಾಸದ ಮಾತು.
ಸೆಪ್ಟೆಂಬರ್‌ನಿಂದ ಬಿಹಾರ ಪ್ರವಾಸದಲ್ಲಿರುವ ಶ್ರೀನಿವಾಸ್, ಅಕ್ಟೋಬರ್‌ನಿಂದ ಪ.ಚಂಪಾರಣ್‌ನ ಬೀಡುಬಿಟ್ಟಿದ್ದಾರೆ. ಎನ್‌ಎಸ್‌ಯುಐ ಅಧ್ಯಕ್ಷರಾಗಿ ಕಾಂಗ್ರೆಸ್ ಜತೆ ಜೋಡಿಸಿಕೊಂಡ ಶ್ರೀನಿವಾಸ್, 2006ರಲ್ಲಿ ಯೂತ್ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾಗಿದ್ದರು. ನಂತರ, ಜಿಲ್ಲೆ ಮತ್ತು ರಾಜ್ಯ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿ ಮೂರನೇ ಸ್ಥಾನಿಯಾಗಿ ಹೊರಹೊಮ್ಮಿದ್ದರು. ಇದರಿಂದ ಅವರನ್ನು ಯೂತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಡಲಾಯಿತು. ನಂತರದಲ್ಲಿ ಅಖಿಲ ಭಾರತ ಯೂತ್ ಕಾಂಗ್ರೆಸ್ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷ, ಕಾರ್ಯಾಧ್ಯಕ್ಷರಾಗಿಯೂ ದುಡಿದರು.
2019ರಲ್ಲಿ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ಏರಿದರು. ಆ ಯೂತ್ ಕಾಂಗ್ರೆಸ್ ಬಹುತೇಕ ಎಲ್ಲಾ ಹುದ್ದೆಗಳನ್ನು ನಿಭಾಯಿಸಿದ ವ್ಯಕ್ತಿ ಎಂದು ಗುರುತಿಸಿಕೊಂಡರು. ಹಾಗೇ, ರಾಹುಲ್ ಗಾಂಧಿ ಆಪ್ತಕೂಟದಲ್ಲೂ ಕಾಣಿಸಿಕೊಂಡಿದ್ದಾರೆ. ಕರೋನಾ ಪಿಡುಗಿನ ವೇಳೆ ದೆಹಲಿ ಯಲ್ಲಿ ಜನಸೇವೆ, ಊಟ, ಆಕ್ಸಿಜನ್ ವಿತರಣೆ ಮೂಲಕ ಮೆಚ್ಚುಗೆಗೆ ಪಾತ್ರರಾದರು. ಅನೇಕರ ಜೀವ ಉಳಿಸಿದರು. ಕೃಷಿ ಕಾಯ್ದೆ ವಿರೋಧಿಸಿ ಪಂಜಾಬ್ ಗಡಿಯಲ್ಲಿ ಹೋರಾಟ ನಡೆದಾಗ ಯೂತ್ ಕಾಂಗ್ರೆಸ್ ಹೆಸರಲ್ಲಿ ೧ ವರ್ಷ ನಿರಂತರ ಊಟದ ವ್ಯವಸ್ಥೆ ಮಾಡಿದ್ದರು.
ರೈತರ ಹೋರಾಟ ವೇಳೆ ಇಂಡಿಯಾ ಗೇಟ್ ಬಳಿ ಅವರ ನೇತೃತ್ವದಲ್ಲಿ ಟ್ರಾರ್ಕ್ಯ ಸುಟ್ಟು ಹಾಕಿದ ಘಟನೆ ದಿಲ್ಲಿ ಪೊಲೀಸ್ ಆಯುಕ್ತರನ್ನೇ ಬದಲಾಯಿಸುವಂತೆ ಮಾಡಿತು. ಭಾರತ್ ಜೋಡೋ ಯಾತ್ರೆ ವೇಳೆ ಇವರೂ ಕನ್ಯಾ ಕುಮಾರಿಯಿಂದ ಕಾಶ್ಮೀರಕ್ಕೆ ಪಾದಯಾತ್ರೆ ಮಾಡಿದ್ದರು. ಪ್ರತಿಭಟನೆ, ಹೋರಾಟಗಳನ್ನು ಮಾಡುವುದಕ್ಕೇ ದೆಹಲಿಯಲ್ಲಿ ಪ್ರಸಿದ್ಧಿಯಾಗಿದ್ದ ಶ್ರೀನಿವಾಸ್ ಮೇಲೆ 100 ಕ್ಕಿಂತಲೂ ಹೆಚ್ಚು ಕೇಸ್ ದಾಖಲಾಗಿದೆ. ಡಿಸಿಎಂ ಡಿಕೆ ಶಿವಕುಮಾರ್, ಸೋದರ ಡಿಕೆ ಸುರೇಶ್ ಗೆ ಆಪ್ತರಾಗಿರುವ ಶ್ರೀನಿವಾಸ್ ಗೆ ವಿಧಾನ ಪರಿಷತ್ ಸದಸ್ಯತ್ವದ ಆಫರ್ ಇತ್ತು. ಆದರೆ, ಚುನಾವಣೆ ಸ್ಪರ್ಧಿಸಿ ಗೆದ್ದು ವಿಧಾನ ಸಭೆ ಪ್ರವೇಶಿಸಬೇಕು ಎನ್ನುವುದು ಅವರ ಲೆಕ್ಕಾಚಾರ.