ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Raghav Sharma Nidle Column: ಹಲವರ ಭವಿಷ್ಯ ಬರೆಯಲಿರುವ ಬಿಹಾರ ಕದನ

35 ವರ್ಷಗಳಿಂದ ಬಿಹಾರ ಮತದಾರನ ಅವಗಣನೆಗೆ ಒಳಗಾಗಿರುವ ಕಾಂಗ್ರೆಸ್, ಇಲ್ಲಿ ನಿರೀಕ್ಷೆಗೂ ಮೀರಿದ ಫಲಿತಾಂಶ ಕಂಡುಕೊಂಡರೆ, ರಾಷ್ಟ್ರಮಟ್ಟದಲ್ಲಿ ಇಂಡಿ ಒಕ್ಕೂಟದ ನಾಯಕತ್ವ ವಹಿಸಿ ಕೊಳ್ಳಲು ಪ್ರಾದೇಶಿಕ ಪಕ್ಷಗಳೊಂದಿಗೆ ಚೌಕಾಸಿ ಮಾಡಬಹುದು. ಚುನಾವಣಾ ರಣನೀತಿಕಾರನನ್ನು ರಾಜಕಾರಣಿಯಾಗಿ ಬಿಹಾರದ ಜನ ಸ್ವೀಕರಿಸಿದರೆ, ಹೊಸ ಜನ ಸುರಾಜ್ ಪಕ್ಷದ ನಾಯಕ ಪ್ರಶಾಂತ್ ಕಿಶೋರ್ ತಮ್ಮ ಪಕ್ಷದ ಬಾಹುಗಳನ್ನು ಬೇರೆಡೆಗೆ ವಿಸ್ತರಿಸಲು ಇದು ನಾಂದಿ ಹಾಡಬಹುದು.

ವಿಧಾನಸಭೆ ಚುನಾವಣೆಗೆ ಸಜ್ಜಾಗಿ ನಿಂತಿರುವ ಬಿಹಾರದಲ್ಲಿ ಚುನಾವಣೆ ಯಾತ್ರೆ ಕೈಗೊಂಡು, ವಾಸ್ತವ ಪರಿಸ್ಥಿತಿಗಳ ಮೇಲೆ ಬೆಳಕು ಚೆಲ್ಲುವ ಯತ್ನವನ್ನು ವಿಶ್ವವಾಣಿ ದಿನಪತ್ರಿಕೆ ಮಾಡಲಿದೆ. ಪಕ್ಷಗಳ ಸೆಣಸಾಟ, ಯುವಕರ ಮನದಾಳ, ಬಡತನ, ಮಹಿಳೆಯರ ಸಮಸ್ಯೆ ನಿಜಕ್ಕೂ ಬಿಹಾರ ಬದಲಾಗಿದೆಯೇ, ಇಲ್ಲವೇ ಎಂಬೆ ಹಲವು ವಿಷಯಗಳ ಬಗ್ಗೆ ರಾಘವ ಶರ್ಮ ನಿಡ್ಲೆ ಇಂದಿನಿಂದ ಪ್ರತ್ಯಕ್ಷ ವರದಿ ನೀಡಲಿದ್ದಾರೆ.

ರಾಜಕೀಯ ವರದಿಗಾರಿಕೆ ಮಾಡುವ ಯಾರಿಗೇ ಆಗಲಿ, ಬಿಹಾರ ಚುನಾವಣೆ ಎನ್ನುವುದು ಹಲವು ಕಾರಣಗಳಿಗೆ ಇಷ್ಟವಾಗಿ ಬಿಡುತ್ತದೆ. ರಾಷ್ಟ್ರ ರಾಜಕಾರಣದ ದಿಕ್ಕನ್ನು ಬದಲಿಸಬಲ್ಲ ಶಕ್ತಿ ಬಿಹಾರ ಕ್ಕಿದೆ. ಅಂದಾಜು 13 ಕೋಟಿ ಜನಸಂಖ್ಯೆಯ ಬಿಹಾರದಲ್ಲಿ ಉದ್ಯೋಗಕ್ಕಾಗಿ ಬೇರೆ ರಾಜ್ಯಗಳಿಗೆ ವಲಸೆಹೋಗುವ ದೊಡ್ಡ ಜನವರ್ಗವೇ ಇದೆ.

ಇಲ್ಲಿನ ಜನಜೀವನ, ರಾಜಕೀಯ, ಜಾತಿ ಅಂಕಗಣಿತ ಸೇರಿದಂತೆ ಹತ್ತಾರು ವಿಷಯಗಳ ಬಗ್ಗೆ ಆಳ ವಾಗಿ ತಿಳಿದುಕೊಳ್ಳಲು ಚುನಾವಣೆ ಒಂದು ಸದವಕಾಶ ಎಂದೇ ನಾನು ನಂಬಿದ್ದೇನೆ. ಇದೀಗ ಮತ್ತೊಂದು ರಾಜ್ಯ ವಿಧಾನಸಭೆ ಚುನಾವಣೆಗೆ ಸಜ್ಜಾಗಿ ನಿಂತಿರುವ ಬಿಹಾರದಲ್ಲಿ ಮತ್ತೊಮ್ಮೆ ಚುನಾವಣೆ ಯಾತ್ರೆ ಕೈಗೊಂಡು, ವಾಸ್ತವ ಪರಿಸ್ಥಿತಿಗಳ ಮೇಲೆ ಬೆಳಕು ಚೆಲ್ಲುವ ಯತ್ನವನ್ನು ನಾನು ವಿಶ್ವವಾಣಿ ದಿನಪತ್ರಿಕೆಗಾಗಿ ಇಂದಿನಿಂದ ಮಾಡಲಿದ್ದೇನೆ.

ಪಕ್ಷಗಳ ಸೆಣೆಸಾಟ, ಯುವಕರ ಮನದಾಳ, ಬಡತನ, ಮಹಿಳೆಯರ ಸಮಸ್ಯೆ ನಿಜಕ್ಕೂ ಬಿಹಾರ ಬದಲಾಗಿದೆಯೇ, ಇಲ್ಲವೇ ಎಂಬೆ ಹಲವು ವಿಷಯಗಳ ಬಗ್ಗೆ ಪ್ರತ್ಯಕ್ಷ ವರದಿ ನೀಡುವ ಯತ್ನವನ್ನು ಪತ್ರಿಕೆ ಮಾಡಲಿದೆ. 2014ರ ಲೋಕಸಭೆ, 2015ರ ವಿಧಾನಸಭೆ, 2019ರ ಲೋಕಸಭೆ ಚುನಾವಣೆ ಮತ್ತು 2020೦ರ ವಿಧಾನಸಭೆ ಚುನಾವಣೆ ವರದಿ ಮಾಡಿದ್ದ ಸಂದರ್ಭಕ್ಕೂ ಈಗಿನ ಸಂದರ್ಭಕ್ಕೂ ಸಾಕಷ್ಟು ವ್ಯತ್ಯಾಸಗಳಿದ್ದು, ಹಲವು ಕಾರಣಗಳಿಗಾಗಿ ಈ ಸಲದ ಚುನಾವಣೆ ಅತ್ಯಂತ ಮಹತ್ವ ದ್ದೆನಿಸಿಕೊಂಡಿದೆ.

ಇದನ್ನೂ ಓದಿ: Raghav Sharma Nidle Column: ಮಹಾಮೈತ್ರಿಯೊಳಗೆ ಅಪನಂಬಿಕೆಯ ಅಪಸ್ವರ

ರಾಜಕಾರಣ ತಮ್ಮ ರಕ್ತದ ಇದೆ ಎಂಬಂತೆ ದೇಶದ ರಾಜಕೀಯದ ಬಗ್ಗೆ ಅರಳು ಹುರಿದಂತೆ ವಿಶ್ಲೇಷಿಸುವ ಈ ರಾಜ್ಯದ ಜನವರ್ಗದೊಂದಿಗೆ ರಾಜಕೀಯ ಮತ್ತು ಜಾತಿ ಅಂಕಗಣಿತದ ಚರ್ಚೆ ಮಾಡುವುದೇ ಒಂದು ಖುಷಿ. ಬಿಹಾರದ ಯಾವು ದೋ ಒಂದು ಮೂಲೆಯಲ್ಲಿ ಕುಳಿತ ಬಡ ಕೂಲಿ ಕಾರ್ಮಿಕ, ಕೃಷಿಕನೂ ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತಿದ್ದು ದನ್ನು ಕಂಡೇ ನಾನು ಹಲವು ಬಾರಿ ಬೆರಗಾಗಿದ್ದೆ.

ಇಲ್ಲಿನ ಯುವಕರಲ್ಲೂ ರಾಜಕೀಯ ಪ್ರಜ್ಞೆ ಹೆಚ್ಚಿಗೇ ಇದೆ. ಅವರಿಗೆ ಬೋಧಿಸುವ ಶಿಕ್ಷಕ ವರ್ಗ ಕೂಡ ಬಹಿರಂಗವಾಗಿ ಒಂದಿಂದು ಪಕ್ಷದೊಂದಿಗೆ ಜೋಡಿಸಿಕೊಂಡಿರುತ್ತಾರೆ ಈ ಚುನಾವಣೆಯನ್ನು ಐದು ದೃಷ್ಟಿಕೋನಗಳಿಂದ ನೋಡಬಹುದು. ಕೇಂದ್ರದಲ್ಲಿ ನಿಶ್ಚಿಂತೆಯಿಂದ ಅಧಿಕಾರ ನಡೆಸಬೇಕೆಂದರೆ ಮೋದಿ-ಶಾಗೆ ಬಿಹಾರ ಗೆಲ್ಲಲೇಬೇಕು. ಸಿಎಂ ನಿತೀಶ್ ಕುಮಾರ್ ಮತ್ತವರ ಜೆಡಿಯುಗೆ ಈ ಚುನಾವಣೆ ಅಕ್ಷರಶಃ ರಾಜಕೀಯ ಅಸಿತ್ವ ಉಳಿಸಿಕೊಳ್ಳುವ ನಿರ್ಣಾಯಕ ಹೋರಾಟವಾಗಲಿದೆ. ಗೆದ್ದರೆ ನೆಮ್ಮದಿ, ಇಲ್ಲವಾದಲ್ಲಿ ಭವಿಷ್ಯ ಅಯೋಮಯ. ಅದೇ ರೀತಿ, ಅಧಿಕಾರದಿಂದ ದೂರ ಇದ್ದು, ಆಡಳಿತದ ಮೇಲೆ ಹತೋಟಿ ಕಳೆದುಕೊಂಡ ಆರ್‌ಜೆಡಿಗೆ ಬಿಹಾರದಲ್ಲಿ ತೇಜಸ್ವಿ ಯಾದವ್ ನಾಯಕತ್ವಕ್ಕೆ ಬೂ ನೀಡಲು ಮತ್ತು ಲಾಲೂ ಕುಟುಂಬದ ಪ್ರಭಾವ ಉಳಿಸಿಕೊಳ್ಳಲು ಈ ಫಲಿತಾಂಶ ಮದ್ದಾಗಬಲ್ಲದು.

35 ವರ್ಷಗಳಿಂದ ಬಿಹಾರ ಮತದಾರನ ಅವಗಣನೆಗೆ ಒಳಗಾಗಿರುವ ಕಾಂಗ್ರೆಸ್, ಇಲ್ಲಿ ನಿರೀಕ್ಷೆಗೂ ಮೀರಿದ ಫಲಿತಾಂಶ ಕಂಡುಕೊಂಡರೆ, ರಾಷ್ಟ್ರಮಟ್ಟದಲ್ಲಿ ಇಂಡಿ ಒಕ್ಕೂಟದ ನಾಯಕತ್ವ ವಹಿಸಿಕೊಳ್ಳಲು ಪ್ರಾದೇಶಿಕ ಪಕ್ಷಗಳೊಂದಿಗೆ ಚೌಕಾಸಿ ಮಾಡಬಹುದು. ಚುನಾವಣಾ ರಣನೀತಿಕಾರ ನನ್ನು ರಾಜಕಾರಣಿಯಾಗಿ ಬಿಹಾರದ ಜನ ಸ್ವೀಕರಿಸಿದರೆ, ಹೊಸ ಜನ ಸುರಾಜ್ ಪಕ್ಷದ ನಾಯಕ ಪ್ರಶಾಂತ್ ಕಿಶೋರ್ ತಮ್ಮ ಪಕ್ಷದ ಬಾಹುಗಳನ್ನು ಬೇರೆಡೆಗೆ ವಿಸ್ತರಿಸಲು ಇದು ನಾಂದಿ ಹಾಡಬಹುದು.

N K

ಬಿಹಾರ ಜನರೇ ಒಪ್ಪದಿದ್ದರೆ, ಅವರ ಭವಿಷ್ಯ ಕಷ್ಟ ಎನಿಸಲಿದೆ. ಜೆಡಿಯುವನ್ನು ಮಕಾಡೆ ಮಲಗಿಸಿ, ಆ ಸ್ಥಾನವನ್ನು ತಾನು ಅಕ್ರಮಿಸಿಕೊಳ್ಳಬೇಕು ಎಂಬ ಹಪಹಪಿಕೆಯಲ್ಲಿರುವ ಚಿರಾಗ್ ಪಾಸ್ವಾನ್ ಗೂ, ಸಿಎಂ ಕುರ್ಚಿಗೆ ಚೌಕಾಶಿ ಮಾಡಲು ಇದು ಉತ್ತಮ ಅವಕಾಶ ಆಗಬಲ್ಲದು.

ತೇಜಸ್ವಿ ಯಾದವ್ ಇಂಡಿ ಒಕ್ಕೂಟದ ಸಿಎಂ ಅಭ್ಯರ್ಥಿ. ವಿಕಾಸ್‌ಶೀಲ್ ಇನ್ಸಾನ್ ಪಾರ್ಟಿಯ ಮುಖೇಶ್ ಸಹಾನಿ ಅವರನ್ನೂ ಡಿಸಿಎಂ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಎನ್‌ಡಿಎ ಮೈತ್ರಿಕೂಟ ನಿತೀಶ್ ಕುಮಾರ್ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದರೂ, ಅವರು ಮುಂದಿನ ಸಿಎಂ ಆಗಲಿದ್ದಾರೆ ಎಂದು ಬಿಜೆಪಿ ತಪ್ಪಿಯೂ ಹೇಳುತ್ತಿಲ್ಲ.

ಹೀಗಾಗಿ, ಬಿಜೆಪಿ ಮತ್ತು ಚಿರಾಗ್ ಪಾಸ್ವಾನ್‌ರ ಎಲ್‌ಜೆಪಿಯ ಒಳ ಲೆಕ್ಕಾಚಾರವೇನು ಎಂಬುದು ಬಹುಚರ್ಚಿತ ವಿಷಯ. ಸದ್ಯ ಬಿಜೆಪಿಗಂತೂ ಮೋದಿಯೇ ಆಧಾರ. ಹಾಗೇ ಡಬಲ್ ಎಂಜಿನ್ ಸರಕಾರದ ಲಾಭ ಗಳನ್ನು ಮುಂದಿಟ್ಟುಕೊಂಡು ಜನರಲ್ಲಿ ಮತ ಕೇಳಲಾಗುತ್ತಿದೆ.

ಪಿಕೆ ಪ್ರಭಾವಳಿ: 1995ರ ನಂತರದ ಚುನಾವಣೆಗಳಲ್ಲಿ ಆರ್.ಜೆ.ಡಿ.,ಜೆಡಿಯು, ಬಿಜೆಪಿ ಮತ್ತು ಪಾಸ್ವಾನ್ ಕುಟುಂಬದ ಎಲ.ಜೆ.ಪಿ. ಪಕ್ಷಗಳು ಹೆಚ್ಚು ಸದ್ದು ಮಾಡುತ್ತಿದ್ದವು. ಜೀತನ್ ರಾಮ್ ಮಾಂಜಿಯ ಹಿಂದೂಸ್ತಾನಿ ಅವಾಮಿ ಮೋರ್ಚಾ ಮತ್ತು ಉಪೇಂದ್ರ ಖುಶ್ವಾಹರ ಆರ್.ಎಲ್. ಎಸ್.ಪಿ. ಪಕ್ಷಗಳು ಬೆರಳೆಣಿಕೆ ಸೀಟುಗಳಿಗಷ್ಟೇ ಸೀಮಿತವಾಗಿ ಹೋರಾಟ‌ ಮಾಡುತ್ತಿದ್ದವು. ಆದರೆ, ಈ ಬಾರಿ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು 2015ರಲ್ಲಿ ನಿತೀಶ್ ಕುಮಾರ್ ಅವರ ಚುನಾ ವಣಾ ರಣನೀತಿಕಾರನಾಗಿ ಕೆಲಸ ಮಾಡಿದ್ದ ಪ್ರಶಾಂತ್ ಕಿಶೋರ್ (ಪಿಕೆ) ಜನ ಸುರಾಜ್ ಪಕ್ಷದ ಮೂಲಕ ಎಂಟ್ರಿ ಕೊಟ್ಟಿದ್ದು, ರಾಜ್ಯಾದ್ಯಂತ ಸಂಚಲನ ಎಬ್ಬಿಸಿದ್ದಾರೆ.

ಹೇಳಿ ಕೇಳಿ ಇದು ಡಿಜಿಟಲ್ ಮೀಡಿಯಾ ಯುಗ. ನಗರ, ಪಟ್ಟಣ, ಗ್ರಾಮ ಗ್ರಾಮಗಳಿಗೆ ಭೇಟಿ ನೀಡುವುದಲ್ಲದೆ, ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಹರಿತದ ಮಾತುಗಳಿಂದ ಪ್ರಶಾಂತ್ ಕಿಶೋರ್ ಜನರ ಗಮನ ಸೆಳೆಯುತ್ತಿದ್ದಾರೆ.

ಅವರ ಟಿವಿ ಮತ್ತು ಯುಟ್ಯೂಬ್ ಸಂದರ್ಶನಗಳೇ ಹೆಚ್ಚೆಚ್ಚು ಟ್ರೆಂಡ್ ಆಗುತ್ತಿವೆ. ಆದರೆ ಇವೆಲ್ಲ ವೋಟುಗಳಾಗಿ ಪರಿವರ್ತನೆಯಾದರಷ್ಟೇ ಲಾಭ. ಜನ್ ಸುರಾಜ್ ಹೊಸ ಪಕ್ಷವಾಗಿರುವುದರಿಂದ ಮತ್ತು ಅವರ ವಿರುದ್ಧ ಭ್ರಷ್ಟಾಚಾರ ಅಥವಾ ದುರಾಡಳಿತದ ಆರೋಪ ಮಾಡಲು ವಿಷಯಗಳು ಸಿಗದಿರುವುದೂ ಆರ್. ಜೆ.ಡಿ., ಬಿಜೆಪಿ ಮತ್ತು ಜೆಡಿಯು ತಲೆನೋವನ್ನು ಹೆಚ್ಚಿಸಿದೆ. ಹಾಗಂತ ಈ ಮೂರು ಪಕ್ಷಗಳ ಸಂಘಟನೆಯ ವ್ಯಾಪ್ತಿ ದೊಡ್ಡದಿರುವುದರಿಂದ ಜನ ಸುರಾಜ್ ಗೆ ಇವುಗಳ ಸಂಘಟನಾ ಶಕ್ತಿ ಬಲಹೀನಗೊಳಿಸಿ ಮುನ್ನುಗ್ಗುವುದು ಸುಲಭ ಸಾಧ್ಯವಲ್ಲ.

ಆದರೆ ಯುವಕರು ಪ್ರಶಾಂತ್ ಕಿಶೋರ್‌ರನ್ನು ಭರವಸೆಯ ಕಂಗಳಿಂದ ನೋಡುತ್ತಿರುವುದು ಸಹಜವಾಗಿಯೇ ಎದುರಾಳಿಗಳನ್ನು ಚಿಂತೆಗೆ ತಳ್ಳಿದೆ. ಸ್ವಚ್ಛ ರಾಜಕಾರಣ, ಬಿಹಾರಿ ಅಸ್ಮಿತೆ, ವಲಸೆ ನಿವಾರಣೆ, ಉದ್ಯೋಗ ಸೃಷ್ಟಿ ಹಾಗೂ ಅಭಿವೃದ್ಧಿ ಬಗ್ಗೆ ವಿಸ್ತೃತವಾಗಿ ಮಾತನಾಡುತ್ತಿರುವ ಪಿಕೆ ಯಾರ ಮತಗಳನ್ನು ಕಟ್ ಮಾಡುತ್ತಾರೆ ಎನ್ನುವುದು ಕುತೂಹಲಕರ.

ಲಾಲೂ-ಆಲೂ: ಲಾಲೂ ಪ್ರಸಾದ್ ಯಾದವ್‌ಗೆ ಈಗಲೂ ಯಾದವ-ಮುಸ್ಲಿಂ ಮತಗಳ ಶಕ್ತಿ ಬೆನ್ನಿಗಿದೆ. ಮೇವು ಹಗರಣದಲ್ಲಿ ಅಪರಾಧಿಯಾಗಿ ಜೈಲು ಸೇರಿ ಹೈರಾಣಾದರೂ, ಲಾಲೂ ಇಲ್ಲದ ಬಿಹಾರ ರಾಜಕೀಯ ಇಲ್ಲ. ‘ಜಬ್ ತಕ್ ಸಮೋಸೆ ಮೇ ರಹೇಗಾ ಆಲೂ, ತಬ್ ತಕ್ ರಹೇಗಾ ಬಿಹಾರ್ ಮೇ ಲಾಲೂ’ ಎನ್ನುವುದು ಬಿಹಾರದಲ್ಲಿ ಮನೆ ಮಾತು. ತನಗೆ ಸ್ಪರ್ಧಿಸುವ ಅವಕಾಶ ಇಲ್ಲದಿದ್ದರೂ ಪುತ್ರ ತೇಜಸ್ವಿ ಯಾದವ್ ರನ್ನು ಮುಂದಿಟ್ಟು ಆಡಳಿತದ ಮೇಲೆ ಕಂಟ್ರೋಲ್ ಇಟ್ಟುಕೊಳ್ಳುವ ಯತ್ನ ಮಾಡುತ್ತಲೇ ಇರುತ್ತಾರೆ. ಆದರೆ, ಆಡಳಿತದಲ್ಲಿ ಲಾಲೂ ವಿಪರೀತ ಹಸ್ತಕ್ಷೇಪದಿಂದಲೇ ನಿತೀಶ್‌ಗೆ ಕಿರಿಕಿರಿಯಾಗಿ, ಲಾಲೂವಿಗಿಂತ ಬಿಜೆಪಿಯೇ ವಾಸಿ ಎಂದು ಎರಡೆರಡು ಬಾರಿ ಬಿಜೆಪಿ ಯನ್ನು ಮರು-ಮದುವೆಯಾದರು.

2015ರಲ್ಲಿ ಲಾಲು-ನಿತೀಶ್ ಒಗ್ಗೂಡಿ, ಬಿಜೆಪಿ ಸೋಲಿಸಲು ಮೈತ್ರಿ ಮಾಡಿಕೊಂಡಿದ್ದರು. 1995ರಿಂದ ಲಾಲು ವಿರುದ್ಧ ಕತ್ತಿ ಮಸೆದು, ನಂತರ ೨೦೦೫ರಲ್ಲಿ ಅಧಿಕಾರದ ಕುರ್ಚಿ ಏರಿದ ನಿತೀಶ್, ಕೊನೆಗೆ ಅದೇ ಲಾಲೂವನ್ನು ಅಪ್ಪಿಕೊಂಡು ಮುzಡಿದ ಅಸಾಮಾನ್ಯ ಬೆಳವಣಿಗೆಗೆ ಬಿಹಾರ ಸಾಕ್ಷಿಯಾಗಿತ್ತು. ಮೋದಿ ಮೇಲಿನ ಮುನಿಸು ನಿತೀಶ್ ರನ್ನು ಲಾಲೂ ಸಖ್ಯದ ಕಡೆ ವಾಲಿಸಿತ್ತು.

2014ರ ಲೋಕಸಭೆ ಫಲಿತಾಂಶದ ಮೂಲಕ ಮೋದಿ ಎಬ್ಬಿಸಿದ್ದ ಬಿರುಗಾಳಿಗೆ ಈ ಲಾಲೂ-ನಿತೀಶ್ ಮೈತ್ರಿ ಕೊಚ್ಚಿ ಹೋಗಲಿದೆ ಎಂದು ಸಮೀಕ್ಷೆಗಳೆಲ್ಲವೂ ಊಹಿಸಿದ್ದವು. ಆದರೆ, ಚುನಾವಣೆ ಪ್ರಚಾರ ನಡೆಯುತ್ತಿದ್ದ ವೇಳೆ ಆರ್.ಎಸ್.ಎಸ್ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಅವರು ಮೀಸಲಾತಿ ನೀತಿಯ ಮರು ವಿಮರ್ಶೆ ಅಗತ್ಯ ಎಂಬ ಹೇಳಿಕೆ ನೀಡಿದ್ದನ್ನೇ ಬ್ರಹ್ಮಾಸ್ತ್ರವನ್ನಾಗಿ ಬಳಸಿಕೊಂಡ ಲಾಲೂ-ನಿತೀಶ್, ತಮ್ಮ ಪ್ರಚಾರಗಳ ಉದ್ದಕ್ಕೂ ಬಿಜೆಪಿಯನ್ನು ಈ ವಿಷಯದ ಮೂಲೆಗುಂಪು ಮಾಡಿದರು.

ಬಿಜೆಪಿ-ಆರ್‌ಎಸ್‌ಎಸ್ ಎಂದಿಗೂ ಮೀಸಲಾತಿ ವಿರೋಧಿ, ಅವರಿಗೆ ಹಿಂದುಳಿದ ವರ್ಗಗಳ ಏಳಿಗೆ ಬೇಕಾಗಿಲ್ಲ. ಇದು ಬ್ರಾಹ್ಮಣ ಮತ್ತು ಪುರೋಹಿತಶಾಹಿ ಮನಸ್ಥಿತಿ ಎಂದು ಲಾಲು ಕಂಡ-ಕಂಡ ಕಿಡಿಕಾರಿದರು. ನಿತೀಶ್ ಕೂಡ ದನಿಗೂಡಿಸಿ ಹಿಂದುಳಿದವರು, ದಲಿತರು, ಮುಸ್ಲಿಂಮರು ಒಗ್ಗೂಡಿ ಬಿಜೆಪಿ ಸೋಲಿಸಬೇಕು ಎಂದು ಕರೆಕೊಟ್ಟರು.

ಭಾಗವತರ ಹೇಳಿಕೆ ಅಂದು ಬಿಜೆಪಿಗೆ ನುಂಗಲಾರದ ತುತ್ತಾಗಿತ್ತು. ನಂತರದಲ್ಲಿ, ಸಂಘ ಅಥವಾ ಬಿಜೆಪಿ ಎಷ್ಟೇ ಸ್ಪಷ್ಟೀಕರಣ ನೀಡಿದರೂ, ಪ್ರಯೋಜನಕ್ಕೆ ಬಂದಿರಲಿಲ್ಲ. ಜಾತಿ ರಾಜಕೀಯವೇ ಜೀವಾಳ ಎನಿಸಿರುವ ರಾಜ್ಯವೊಂದರ ಚುನಾವಣೆ ಸಂದರ್ಭದಲ್ಲಿ ಮೀಸಲಾತಿ ಎಂಬ ಜೇನು ಗೂಡಿಗೆ ಕೈ ಹಾಕಿದರೆ ಏನಾಗುತ್ತದೆ ಎಂಬ ಅರಿವು ಬಿಜೆಪಿ ಮತ್ತು ಸಂಘದ ಇಬ್ಬರಿಗೂ ಬಂದಿತ್ತು.

ಜಾತಿ-ಧರ್ಮ ಸಮರ ಲೆಕ್ಕಾಚಾರ

ತಾನು ಹಿಂದುಳಿದವ, ಬ್ರಾಹ್ಮಣವಾದಿಗಳು ನನ್ನನ್ನು ತುಳಿಯುತ್ತಿದ್ದಾರೆ ಎಂದು ಮೇವು ಹಗರಣ ದಲ್ಲಿ ಸಿಲುಕಿದ್ದಾಗಲೂ ಲಾಲೂ ಯಾದವ್, ಇದು ಮೇಲ್ಜಾತಿಯವರ ಪಿತೂರಿ ಎಂಬ ನರೇಟಿವ್ ರೂಪಿಸಲು ಯತ್ನಿಸಿದ್ದರು. 1997ರಲ್ಲಿ ಮೇವು ಹಗರಣದ ತನಿಖೆಯ ಅಧಿಕೃತ ಆರಂಭಕ್ಕೆ ಕೊಲ್ಕತ್ತಾ ಮೂಲದ ಯು.ಎನ್. ಬಿಸ್ವಾಸ್ ಎಂಬ ಸಿಬಿಐ ನಿರ್ದೇಶಕರು ಬಂದಿದ್ದರು. ಸಿಬಿಐ ತನಿಖೆಗೆ ಕೋರ್ಟ್ ಆದೇಶ ನೀಡಿದ್ದಕ್ಕೆ ಅದಾಗಲೇ ಲಾಲೂ ಕೆಂಡಾಮಂಡಲಗೊಂಡಿದ್ದರು. ತನಿಖೆಯ ಒಂದು ಸಂದರ್ಭದಲ್ಲಿ ಬಿಸ್ವಾಸ್ ಜತೆ ಮಾತಾಡಿದ ಲಾಲೂ, “ನೋಡಿ ಬಿಸ್ವಾಸ್ ನೀವು ಬಂಗಾಳದ ಹಿಂದುಳಿದ ಜಾತಿಗೆ ಸೇರಿದವರು.

ನಾನು ಬಿಹಾರದಲ್ಲಿ ಹಿಂದುಳಿದ ಜಾತಿಯವನು. ಈ ಮೇಲ್ಜಾತಿಯವರ ಪಿತೂರಿಯವರ ಪಿತೂರಿ ಯನ್ನೂ ನಾವಿಬ್ಬರೂ ಒಟ್ಟಾಗಿ ಸೇರಿ ಏಕೆ ಬಯಲು ಮಾಡಬಾರದು? ಸಣ್ಣ ಪುಟ್ಟ ಲೂಟಿ ನಡೆದಿದೆ. ಆದರೆ, ಇದು ನನ್ನ ಗಮನಕ್ಕೆ ಬಾರದೆ ನಡೆದಿದೆ. ಇದನ್ನು ನಾವು ಬಯಲು ಮಾಡೋಣ, ಮೇಲ್ಜಾತಿಯವರ ಕುತಂತ್ರವನ್ನು ಜನರ ಮುಂದಿಡೋಣ" ಎಂದು ತಿಳಿಸಿದ್ದರು. ಆದರೆ, ಇದಕ್ಕೆ ಕಿವಿಗೊಡದ ಖಡಕ್ ಅಧಿಕಾರಿ ಬಿಸ್ವಾಸ್, ತನಿಖೆ ಮುಂದುವರಿಸಿದ್ದರು.

ತನ್ನ ಮೇಲಿನ ಆರೋಪಗಳನ್ನು ಸುಳ್ಳಾಗಿಸಲು ಲಾಲೂ ಯಾವ ಹಂತಕ್ಕೆ ಹೋಗಲೂ ಅಂದು ಸಿದ್ಧರಿದ್ದರು. ಆದರೆ, ಪರಿಸ್ಥಿತಿಗಳು ಅವರ ಪರ ಇರಲಿಲ್ಲ. ತನ್ನನ್ನು ಹಿಂದುಳಿದ ವರ್ಗಗಳ ಚಾಂಪಿ ಯನ್ ಎಂದು ಬಿಂಬಿಸಿಕೊಂಡರೂ ಲಾಲೂ ಪಾಳೆಗಾರಿಕೆ ಮನಸ್ಥಿತಿ ಈಗಲೂ ಬದಲಾಗಿಲ್ಲ. ಅಧಿಕಾರಕ್ಕೆ ಬರಲು ಹಿಂದುಳಿದ ಮಂದಿ ಬೇಕು.

ಅಧಿಕಾರಕ್ಕೆ ಬಂದ ನಂತರ ಯಾದವರ ಉದ್ಧಾರ ಅಷ್ಟೇ ಎಂದು ಬಿಹಾರದ ಯಾದವೇತರರು ದೂರಿದ್ದಕ್ಕೆ ನಾನು ಹಲವು ಬಾರಿ ಕಿವಿಯಾಗಿದ್ದುಂಟು. ಕಾರ್ಯಕರ್ತರು, ಮುಖಂಡರೊಂದಿಗೆ ಅವರ ಮತ್ತು ಕುಟುಂಬದ ವರ್ತನೆಗಳು ಕೂಡ ಇದನ್ನು ಎತ್ತಿ ತೋರಿಸುತ್ತವೆ. ಹಾಗಂತ ಲಾಲೂ ಮತ್ತು ಕುಟುಂಬವನ್ನು ಬಿಹಾರ ರಾಜಕಾರಣದಿಂದ ದೂರ ಇಡಲು ಸಾಧ್ಯವೇ ಇಲ್ಲ. ಹೇಗೆ ಕಾಂಗ್ರೆಸ್‌ಗೆ ಗಾಂಧಿ ಕುಟುಂಬ ಅನಿವಾರ್ಯವೋ, ಹಾಗೆ ಆರ್.ಜೆ.ಡಿ.ಗೆ ಲಾಲೂ ಅಸ್ತಿತ್ವವೇ ಆಧಾರ. 2015ರಲ್ಲಿ ಲಾಲು ನೀಡಿದ್ದ ಒಂದು ಹೇಳಿಕೆ ಪ್ರಚಾರ ಕಣದಲ್ಲಿ ಗದ್ದಲ ಎಬ್ಬಿಸಿತ್ತು.

ಹಿಂದೂಗಳೇನು ದನದ ಮಾಂಸ ತಿನ್ನಲ್ವೇ?

ಬಡವರು ಅನಿವಾರ್ಯವಾಗಿ ಗೋಮಾಂಸ ತಿನ್ನಬೇಕು/ತಿನ್ನುತ್ತಾರೆ. ದೇಶದ ಹೊರಗೆಯೂ ಗೋಮಾಂಸ ತಿನ್ನಲಾಗುತ್ತದೆ ಎಂದು ಲಾಲು ನೀಡಿದ್ದ ಹೇಳಿಕೆಯನ್ನೇ ಬಿಜೆಪಿ ಅಸ್ತ್ರ ಮಾಡಿ ಕೊಂಡಿತ್ತು. ಮೀಸಲಾತಿ ವಿರೋಧಿ ಎಂಬ ಹಣೆಪಟ್ಟಿ ಕಡಿಮೆ ಮಾಡಲು ಬಿಜೆಪಿಯವರು, ‘ಹಿಂದೂ ಗಾಯ್ ಖಾತಾ ಹೇ ಕ್ಯಾ’ ಎಂಬ ರಾಜಕೀಯ ನಿರೂಪಣೆಯನ್ನು ಜನರ ಮುಂದೆ ತೇಲಿ ಬಿಟ್ಟಿದ್ದರು.

ಆರ್.ಜೆ.ಡಿ.ಯ ಮುಸ್ಲಿಂ ಮತಗಳ ಕ್ರೋಢೀಕರಣಕ್ಕೆ ಪ್ರತಿಯಾಗಿ ಹಿಂದುಗಳ ಒಗ್ಗಟ್ಟಿಗೆ ಕೂಡ ಬಿಜೆಪಿ ಈ ತಂತ್ರ ಅನುಸರಿಸಿತ್ತು. 2015ರ ನವೆಂಬರ್ ಚುನಾವಣೆಯ ೫ನೇ ಚರಣದ ಮತದಾನದ ಹಿಂದಿನ ದಿನ ಪತ್ರಿಕೆಯೊಂದರ ಮುಖಪುಟದಲ್ಲಿ ಮಹಿಳೆಯೊಬ್ಬರು ಕರುವೊಂದನ್ನು ಅಪ್ಪಿಕೊಂಡು, ಗೋಭಕ್ಷಣೆ ಕುರಿತ ಮಿತ್ರ ಲಾಲೂ ಹೇಳಿಕೆ ನೀವು ಒಪ್ಪುತ್ತೀರಾ ಎಂದು ಸಿಟ್ಟಿನಿಂದ ಸಿಎಂ ನಿತೀಶ್ ಕುಮಾರ್‌ಗೆ ಬೈಯುತ್ತಿದ್ದ ಚಿತ್ರವೊಂದು ಬಿಜೆಪಿ ಹೆಸರಲ್ಲಿ ಪ್ರಕಟವಾಗಿ, ಭಾರಿ ಕೋಲಾಹಲ ಸೃಷ್ಟಿಯಾಗಿತ್ತು.