ಕೆ.ಜೆ.ಲೋಕೇಶ್ ಬಾಬು ಮೈಸೂರು
ಒಳಚರಂಡಿಯೊಳಗಿನ ಕೊಳಚೆ ಎತ್ತಿದ್ದ ಕೈಗಳಲ್ಲಿ ಕನ್ನಡದ ಸೇವೆ
ತನ್ನ ಗ್ರಂಥಾಲಯಕ್ಕೆ ನೆರವಿನ ನಿರೀಕ್ಷೆಯಲ್ಲಿರುವ ಕನ್ನಡಾಭಿಮಾನಿ
ಎಡಗೈ ಸ್ವಾಧೀನ ಕಳೆದುಕೊಂಡರೂ, ಸ್ವಾಭಿಮಾನದ ಬಿಡಲೊಲ್ಲದ ಜೀವವೊಂದು ಚಿಂದಿ ಆಯ್ದು ಕನಸಿನ ಕನ್ನಡ ಗ್ರಂಥಾಲವೊಂದನ್ನು ನಡೆಸುತ್ತಿದೆ. ಬಂದವರು-ಹೋದವರು ನೀಡಿದ ಆಶ್ವಾಸನೆ, ಕೇವಲ ಆಶ್ವಾಸನೆಯಾಗಿ ಉಳಿದಿವೆಯೇ ಹೊರತು ಅನುಷ್ಠಾನಕ್ಕೆ ಬಾರಲಿಲ್ಲ, ಆದರೂ ಮಾನಸಿಕ ವಾಗಿ, ನೈತಿಕವಾಗಿ ಕುಗ್ಗದ ವ್ಯಕ್ತಿ, ಚಿಂದಿ ಆಯ್ದು ಅದನ್ನು ಮಾರಾಟ ಮಾಡಿ ಬಂದ ಬಿಡಿಕಾಸಿ ನಲ್ಲೇ ಈ ನೆಲದ ಅಸ್ಮಿತೆ ಉಳಿಸುವ ಕೆಲಸ ಮಾಡುತ್ತಿದ್ದಾರೆ.
ಅವರ ಹೆಸರು ಸೈಯ್ಯದ್ ಇಸಾಕ್. ಮೈಸೂರಿನ ಮುಸ್ಲಿಂ ಬಾಹುಳ್ಯವುಳ್ಳ ನರಸಿಂಹರಾಜ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ರಾಜೀವ್ ನಗರ ಬಡಾವಣೆಯಲ್ಲಿ ಕನ್ನಡ ಗ್ರಂಥಾಲಯ ತೆರೆದು ಇದೀಗ ನಿತ್ಯ ಕಣ್ಣೀರಿನ ಬದುಕು ಸಾಗಿಸುತ್ತಿದ್ದಾರೆ.
ಒಂದೆಡೆ ಬದುಕಿನ ಹೊರೆಯಾದರೆ, ಮತ್ತೊಂದೆಡೆ ಗ್ರಂಥಾಲಯದ ನಿರ್ವಹಣೆಯ ಭಾರ ಇಸಾಕ್ ಹೆಗಲೇರಿದೆ. ಒಂದು ಹೊತ್ತು ತಿಂದು ಬೇಕಾದರೆ ಜೀವಿಸಬಲ್ಲೆ, ನಾನು ಸೊರಗುವುದಿಲ್ಲ. ಆದರೆ ನನ್ನ ಕನಸಿನ ಈ ಕನ್ನಡ ಗ್ರಂಥಾಲಯ ಸೊರಗಬಾರದು ಎಂಬುದು ಇಸಾಕ್ ಅವರ ಮನದಾಳದ ಮಾತು. ಹೀಗೆ ಹೇಳುವಾಗ ಅವರಲ್ಲಿ ದುಃಖ ಉಮ್ಮಳಿಸಿ ಬರುತ್ತದೆ. ತಾನು ಕಲಿತದ್ದು ಕಡಿಮೆ ಯಾದರೂ, ಈ ನೆಲದ ಭವಿಷ್ಯದ ಪೀಳಿಗೆಗಳಿಗೆ ಆ ಕೊರತೆ ಎದುರಾಗಿ ಕಾಡದಿರಲೆಂಬ ದೃಢ ಸಂಕಲ್ಪದೊಂದಿಗೆ ಸದ್ದಿಲ್ಲದೆ ಕನ್ನಡದ ಪರಿಚಾರಿಕೆಯಲ್ಲಿ ತೊಡಗಿದ್ದಾರೆ ಸೈಯದ್ ಇಸಾಕ್.
ಇದನ್ನೂ ಓದಿ: Lokesh Kaayarga Column: ಶಿಕ್ಷಣ ಮಕ್ಕಳಿಗಷ್ಟೇ ಅಲ್ಲ, ಸರ್ಕಾರಕ್ಕೂ ಬೇಕಿದೆ !
ಮೈಸೂರಿನ ರಾಜೀವ್ ನಗರ ಬಡಾವಣೆ ನಿವಾಸಿಯಾಗಿರುವ ಇವರು ಓದಿದ್ದು ಕೇವಲ ಒಂದನೇ ತರಗತಿ, ಆದರೆ ನೋಡಿ ಕಲಿತದ್ದು ಅಪಾರ. ಬಡತನದ ಬೇಗೆಯಲ್ಲಿ ನಲುಗಿದ ಕುಟುಂಬದಲ್ಲಿ ಹುಟ್ಟಿದ ಇಸಾಕ್ ಅವರಿಗೆ ಓದು ಹತ್ತಲಿಲ್ಲ ಎಂದಲ್ಲ, ತುಂಬಿದ ಕುಟುಂಬದ ಹೊಟ್ಟೆ ತುಂಬಿಸ ಬೇಕಾದ ಅನಿವಾರ್ಯತೆ. ಅದರ ಪರಿಣಾಮವಾಗಿ ಎಳೆಯ ವಯಸ್ಸಿಗೇ ಬಾಲ ಕಾರ್ಮಿಕ, ಜೀತದಾಳು.
ಅಂತಹ ಇಸಾಕ್ ಇಂದು ಈ ನೆಲದ ಆದರ್ಶಪ್ರಾಯ ಜೀವ, ವಯಸ್ಸು 66. ಅವರ ವಯಸ್ಸಿನ ಏರಿಕೆಯಂತೆ ಕನ್ನಡದ ಬಗೆಗಿನ ತುಡಿತವೂ ಅವರಲ್ಲಿ ಏರತೊಡಗಿದೆ. ಅದರ ಫಲವೇ ಇಸಾಕ್ ಅವರ ಕನಸಿನ ಕನ್ನಡ ಸಾರ್ವಜನಿಕ ಗ್ರಂಥಾಲಯ.
ಕನ್ನಡ ಭಾಷೆಯ ಮೇಲಿನ ಅಭಿಮಾನ ಕಡಿಮೆ ಇರುವ ಜಾಗದಲ್ಲಿ ಕನ್ನಡ ಸಾರ್ವಜನಿಕ ಗ್ರಂಥಾಲ ಯವೊಂದನ್ನು ತೆರೆದು ಆ ಮೂಲಕ ಕನ್ನಡ ಸೇವೆ ಮಾಡುತ್ತಿರುವ ಇಸಾಕ್ ಅವರಿಗೆ ಇಂದು ನೆರವಿನ ಅಗತ್ಯತೆ ಇದೆ, ಆ ನಿರೀಕ್ಷೆಯಲ್ಲಿ ಅವರಿದ್ದಾರೆ. ಆದರೆ ಸ್ಪಂದಿಸುವ ಮನಸ್ಸುಗಳು ಬೇಕಷ್ಟೇ.
ಕೂಲಿ ಕೆಲಸ ಮಾಡಿಕೊಂಡು, ತಮ್ಮ ಹಾಗೂ ದಾನಿಗಳ ನೆರವಿನಿಂದ ಗ್ರಂಥಾಲಯ ಸ್ಥಾಪಿಸಿ, ಜನರ ಮನ ಗೆದ್ದ ಸಯ್ಯದ್ ಇಸಾಕ್ ಅವರಿಗೆ ಈಗ ಗ್ರಂಥಾಲಯ ನಡೆಸಲು ಹಣಕಾಸಿನ ಸಮಸ್ಯೆ ಎದುರಾಗಿದೆ. ಸತತ 16 ವರ್ಷಗಳ ಕಾಲ ಗ್ರಂಥಾಲಯವನ್ನು ಮುನ್ನಡೆಸಿದ ಸಯ್ಯದ್ ಇಸಾಕ್ ಅವರಿಗೆ ಹಣಕಾಸಿನ ತೊಂದರೆಯ ಜೊತೆಗೆ ಅನಾರೋಗ್ಯದ ಸಮಸ್ಯೆಯೂ ಎದುರಾಗಿದೆ. ಹಾಗಾಗಿ ತಾವು ನಡೆಸುತ್ತಿರುವ ಗ್ರಂಥಾಲಯಕ್ಕೆ ಯಾರಾದರೂ ಸಹಾಯಹಸ್ತದ ನಿರೀಕ್ಷೆಯಲ್ಲಿದ್ದಾರೆ.
ಮುಸ್ಲಿಂ ಬಾಹುಳ್ಯವುಳ್ಳ ರಾಜೀವ್‌ನಗರದಲ್ಲಿ ಕನ್ನಡ ಪುಸ್ತಕಪ್ರೇಮಿಯಾಗಿರುವ ಸಯ್ಯದ್ ಇಸಾಕ್ ಸ್ಥಾಪಿಸಿದ ಗ್ರಂಥಾಲಯಕ್ಕೆ ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಪುಸ್ತಕಗಳು ಹಾಗೂ ಪತ್ರಿಕೆ ಗಳನ್ನು ಓದಲು ಪ್ರತಿನಿತ್ಯ ನೂರಾರು ಮಂದಿ ಬರುತ್ತಾರೆ. ಇಲ್ಲಿನ ಗ್ರಂಥಾಲಯದಿಂದ ಅಕ್ಕಪಕ್ಕದ ನಿವಾಸಿಗಳಿಗೂ ಹಾಗೂ ವಿದ್ಯಾರ್ಥಿಗಳಿಗೂ ತುಂಬ ಅನುಕೂಲವಾಗಿದೆ.
2021ರ ಏಪ್ರಿಲ್ 9ರಂದು ಕಿಡಿಗೇಡಿಗಳು ಹೊತ್ತಿಸಿದ ಬೆಂಕಿಗೆ ಗ್ರಂಥಾಲಯ ಸಂಪೂರ್ಣ ಸುಟ್ಟು ಕರಲಾಗಿತ್ತು. ದಾನಿಗಳ ನೆರವಿನಿಂದ ಬಂದ ಮೂರೂ ಮುಕ್ಕಾಲು ಲಕ್ಷ ರು., ಇತರೆ ಮೂಲಗಳಿಂದ ಬಂದ ಒಂದು ಲಕ್ಷ ರು. ನಿಂದ ಮತ್ತೆ ಗ್ರಂಥಾಲಯವನ್ನು ಮರುಸ್ಥಾಪನೆ ಮಾಡಲಾಗಿತ್ತು.
ಆದರೆ, ಇತ್ತೀಚೆಗೆ ಸಯ್ಯದ್ ಇಸಾಕ್ ಅನಾರೋಗ್ಯಕ್ಕಿಡಾಗಿದ್ದಾರೆ, ಅಲ್ಲದೇ ಐದಾರು ತಿಂಗಳಿನಿಂದ ಗ್ರಂಥಾಲಯದ ವಿದ್ಯುತ್ ಬಿಲ್ ಕಟ್ಟಲಾಗದೇ, ಹಣಕಾಸಿನ ತೊಂದರೆ ಎದುರಿಸುತ್ತಿದ್ದಾರೆ. ಗ್ರಂಥಾ ಲಯಕ್ಕೆ ಮೊದಲು ಪ್ರತಿನಿತ್ಯ 19 ಪತ್ರಿಕೆಗಳನ್ನು ತರಿಸುತ್ತಿದ್ದರು. ಇದೀಗ ಆ ಸಂಖ್ಯೆ 4 ಪತ್ರಿಕೆಗಳಿಗೆ ಇಳಿದಿದೆ. ಪ್ರತೀ ತಿಂಗಳು ಪತ್ರಿಕೆ ಬಿಲ್ 2700 ರು. ಆಗುತ್ತಿತ್ತು, ಆದರೆ ಅದನ್ನು ಭರಿಸುವ ಶಕ್ತಿ ಇಸಾಕ್ ಅವರಿಗೆ ಇಲ್ಲವಾಗಿದೆ. ಗ್ರಂಥಾಲಯಕ್ಕೆ ನೆರವು ನೀಡುವುದಾಗಿ ಹೇಳಿದ ಕೆಲವರ ಆಶ್ವಾಸನೆಗಳು ಆಶ್ವಾಸನೆಗಳಾಗಿಯೇ ಉಳಿದಿವೆ.
ಸಾರ್ವಜನಿಕರ ಅನುಕೂಲಕ್ಕಾಗಿ ಸ್ಥಾಪಿಸಿದ ಗ್ರಂಥಾಲಯವನ್ನು ಮುನ್ನೆಡಸಲು ಈಗ ನನ್ನಲ್ಲಿ ಶಕ್ತಿ ಇಲ್ಲ ಎನ್ನುತ್ತಾ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ ಸಯ್ಯದ್ ಇಸಾಕ್.