Lokesh Kaayarga Column: ಶಿಕ್ಷಣ ಮಕ್ಕಳಿಗಷ್ಟೇ ಅಲ್ಲ, ಸರ್ಕಾರಕ್ಕೂ ಬೇಕಿದೆ !
ಕರ್ನಾಟಕವು ತಾಂತ್ರಿಕ ಶಿಕ್ಷಣ ಮತ್ತು ಐಟಿ-ಬಿಟಿ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿ ಕೊಂಡಿರುವ ರಾಜ್ಯ. ಆದರೆ, ಈ ಹೊಳಪಿನ ಹಿಂದೆ ರಾಜ್ಯದ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ವ್ಯವಸ್ಥೆಯು ಗಂಭೀರವಾದ ಸವಾಲುಗಳನ್ನು ಮತ್ತು ಆಡಳಿತಾತ್ಮಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಈ ಬಿಕ್ಕಟ್ಟಿನ ಮೂಲವನ್ನು ಪತ್ತೆ ಹಚ್ಚಿ, ತಕ್ಕ ಪರಿಹಾರ ಕಂಡುಕೊಳ್ಳಬೇಕಿದ್ದ ನಾಯಕರು, ಇನ್ನೆಲ್ಲೋ ಮುಲಾಮು ಹಚ್ಚಲು ಹೊರಟಿದ್ದಾರೆ.
-
ಲೋಕಮತ
ಶಿಕ್ಷಣದ ವಿಚಾರದಲ್ಲಿ ಇಷ್ಟೊಂದು ತಲೆ ಕೆಡಿಸಿಕೊಂಡ ಬೇರೆ ರಾಜ್ಯ ಇದೆಯೇ, ಇಲ್ಲವೋ ಗೊತ್ತಿಲ್ಲ; ಆದರೆ ಕರ್ನಾಟಕ ಸರಕಾರ ಮತ್ತು ಕನ್ನಡಿಗರ ಪಾಲಿಗೆ ಶಿಕ್ಷಣಕ್ಕಿಂತ ಹೆಚ್ಚು ಚಿಂತೆಯ ವಿಚಾರ ಬೇರೆ ಇಲ್ಲ. ಮೂರ‍್ನಾಲ್ಕು ದಶಕಗಳಿಂದ ಶುರುವಾದ ಈ ಚಿಂತೆ ಈಗ ನಾನಾ ಸ್ವರೂಪಗಳನ್ನು ಪಡೆದಿದೆ. ಎಷ್ಟರ ಮಟ್ಟಿಗೆ ಎಂದರೆ ನಮ್ಮ ಶಿಕ್ಷಣ ದಾಹವನ್ನು ತಣಿಸುವ ಹೆಸರಿನಲ್ಲಿ ನೆರೆಯ ಆಂಧ್ರಪ್ರದೇಶ, ತೆಲಂಗಾಣದ ಶಿಕ್ಷಣ ಕುಳಗಳು ಜೋಳಿಗೆ ತುಂಬಿಸಿಕೊಳ್ಳುತ್ತಿದ್ದಾರೆ.
ಇಷ್ಟೊಂದು ಚಿಂತೆಯ ನಂತರವೂ ರಾಜ್ಯದಲ್ಲಿ ಸಾರ್ವತ್ರಿಕ ಶಿಕ್ಷಣದ ಗುಣಮಟ್ಟ , ಕಲಿಕೆಯ ಮಟ್ಟ ಏರಿಕೆ ಕಂಡಿದೆಯೇ ಎಂದು ಕೇಳಿದರೆ, ಕಳೆದ ಒಂದೂವರೆ ದಶಕಗಳಿಂದ ರಾಜ್ಯದ ಕಲಿಕಾ ಗುಣಮಟ್ಟ ಇಳಿಮುಖವಾಗುತ್ತಲೇ ಸಾಗಿದೆ.
ಕರ್ನಾಟಕವು ತಾಂತ್ರಿಕ ಶಿಕ್ಷಣ ಮತ್ತು ಐಟಿ-ಬಿಟಿ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ರಾಜ್ಯ. ಆದರೆ, ಈ ಹೊಳಪಿನ ಹಿಂದೆ ರಾಜ್ಯದ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ವ್ಯವಸ್ಥೆಯು ಗಂಭೀರವಾದ ಸವಾಲುಗಳನ್ನು ಮತ್ತು ಆಡಳಿತಾತ್ಮಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಈ ಬಿಕ್ಕಟ್ಟಿನ ಮೂಲವನ್ನು ಪತ್ತೆ ಹಚ್ಚಿ, ತಕ್ಕ ಪರಿಹಾರ ಕಂಡುಕೊಳ್ಳಬೇಕಿದ್ದ ನಾಯಕರು, ಇನ್ನೆಲ್ಲೋ ಮುಲಾಮು ಹಚ್ಚಲು ಹೊರಟಿದ್ದಾರೆ.
ಇದನ್ನೂ ಓದಿ: Lokesh Kaayarga Column: ಕೇರಳದ ಹಿಡಿತದಿಂದ ಮಂಗಳೂರಿಗೆ ʼಮುಕ್ತಿʼ ಎಂದು ?
ಇವೆಲ್ಲದರ ನಡುವೆ ಇಡೀ ಶಿಕ್ಷಣ ವ್ಯವಸ್ಥೆ ಸರಕಾರದ ಕೈ ತಪ್ಪಿ ಖಾಸಗಿಯವರ ಪಾಲಾಗಿದೆ. ಇಷ್ಟಾದರೂ ಸರಕಾರ, ತಾನೇ ನಾಡಿನ ಶಿಕ್ಷಣದ ಅಧ್ವರ್ಯು ಎಂಬ ಭ್ರಾಂತಿಯಲ್ಲಿ ದಿನಕ್ಕೊಂದು ಆದೇಶಗಳನ್ನು ಹೊರಡಿಸುತ್ತಿದೆ. ಫಲಿತಾಂಶದ ಮೇಲೆ ಕಣ್ಣಿಟ್ಟು ನೀತಿ, ನಿಯಮಗಳನ್ನು ಬದಲಿಸುತ್ತಲೇ ಇದೆ.
ರಾಜ್ಯದಲ್ಲಿ ಯಾರ‍್ಯಾರು ಪ್ರಾಥಮಿಕ ಶಿಕ್ಷಣ ಸಚಿವರಾಗಿ ಬರುತ್ತಾರೋ ಅವರವರ ಚಿಂತನೆಗೆ ಅನುಗುಣವಾಗಿ ಶಿಕ್ಷಣ ನೀತಿ ಬದಲಾಗಲೇಬೇಕು. ಈ ಹಿಂದೆ ಬಸವರಾಜ ಬೊಮ್ಮಾಯಿ ಸರಕಾರದ ಅವಧಿಯಲ್ಲಿ ಶಿಕ್ಷಣ ಸಚಿವರಾಗಿದ್ದ ಬಿ.ಸಿ.ನಾಗೇಶ್ ಅವರು ಪಠ್ಯ ಕ್ರಮದ ಬದಲಾವಣೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡರೆ, ಹಾಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕರ್ನಾಟಕ ಪಬ್ಲಿಕ್ ಶಾಲೆಯ ಮಂತ್ರ ಜಪಿಸುತ್ತಿದ್ದಾರೆ.
ಸದ್ಯ ಇಡೀ ಕರ್ನಾಟಕದಲ್ಲಿ ಶಿಕ್ಷಣವೆಂದರೆ ಮಾಲ್‌ಗಳಲ್ಲಿ ದೊರಕುವ ಪ್ರಸಾಧನ ಸಾಮಗ್ರಿಗಳಂತಾಗಿವೆ. ಹತ್ತಾರು ಆಯ್ಕೆಗಳ ಮುಂದೆ ಯಾವುದನ್ನು ಆಯ್ದುಕೊಳ್ಳಬೇಕೆಂಬ ವಿಷಯದಲ್ಲಿಯೇ ಪೋಷಕರು ಎಡವಿ ಬೀಳುತ್ತಿದ್ದಾರೆ.
ಸರಕಾರಿ ಕನ್ನಡ ಶಾಲೆಗಳು, ಅನುದಾನಿತ ಆಂಗ್ಲ ಮಾಧ್ಯಮ ಶಾಲೆಗಳು, ಅನುದಾನರಹಿತ ಆಂಗ್ಲ ಮಾಧ್ಯಮ ಶಾಲೆಗಳು, ಕೇಂದ್ರ ಸರಕಾರ ನಡೆಸುವ ವಸತಿಸಹಿತ ನವೋದಯ ಶಾಲೆಗಳು, ರಾಜ್ಯ ಸರಕಾರದ ಮೊರಾರ್ಜಿ, ಏಕಲವ್ಯ, ರಾಣಿ ಚೆನ್ನಮ್ಮ ಇತ್ಯಾದಿ ವಸತಿ ಸಹಿತ ಶಾಲೆಗಳು, ಕೇಂದ್ರೀಯ ವಿದ್ಯಾಲಯಗಳು ಹೀಗೆ ಥರಾವರಿ ಆಯ್ಕೆಗಳು ಒಂದೆಡೆ ಯಾದರೆ, ಶಾಲೆಗಳಲ್ಲೂ ನಾನಾ ವಿಧ.
ಕನ್ನಡ ಮಾಧ್ಯಮವೇ, ಇಂಗ್ಲಿಷ್ ಮಾಧ್ಯಮವೇ ಎನ್ನುವುದು ಪಾಲಕರನ್ನು ಮೊದಲು ಕಾಡುವ ಗೊಂದಲ. ಕಡು ಬಡವರನ್ನು ಹೊರತುಪಡಿಸಿ ಹೊಸ ಜಮಾನಾದ ಬಹುತೇಕರ ಆಯ್ಕೆ ಇಂಗ್ಲಿಷ್ ಮೀಡಿಯಂ. ರಾಜ್ಯಪಠ್ಯವೇ ಅಥವಾ ಕೇಂದ್ರ ಪಠ್ಯವೇ ಎನ್ನುವುದು ನಂತರದ ಚಿಂತೆ.
ನಗರ ಪ್ರದೇಶಗಳಲ್ಲಿ ಬಹುತೇಕರು ತಮ್ಮ ಮಕ್ಕಳನ್ನು ಸಿಬಿಎಸ್‌ಇ, ಐಸಿಎಸ್‌ಇ ಮಾನ್ಯತೆ ಪಡೆದ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿದರೆ, ಇನ್ನುಳಿದವರಿಗೆ ರಾಜ್ಯ ಪಠ್ಯ ಕ್ರಮ ಅನಿವಾರ‍್ಯ ಆಯ್ಕೆ. ಕನ್ನಡ ಮಾಧ್ಯಮ ಶಾಲೆ ಬಹುತೇಕರ ಕೊನೆಯ ಆಯ್ಕೆ.
ಈ ಬಹುಮಾದರಿ ಆಯ್ಕೆಗಳ ನಡುವೆ ಮಧು ಬಂಗಾರಪ್ಪ ಅವರು ಮುಂದಿಟ್ಟಿರುವ ಕೆಪಿಎಸ್ ಶಾಲೆಗಳು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ರಾಜ್ಯದ ಶಿಕ್ಷಣ ವ್ಯವಸ್ಥೆಯ ಚಹರೆಯನ್ನು ಸಂಪೂರ್ಣವಾಗಿ ಬದಲಿಸಲಿವೆ ಎನ್ನುವುದು ದಿಟ. ಇದಕ್ಕೆ ಕಾರಣ ಇವು ಕ್ರಾಂತಿಕಾರಕ ನಿರ್ಧಾರ ಎಂದಲ್ಲ.
ಇವು ಸೃಷ್ಟಿಸುವ ಗೊಂದಲಗಳಿಗೆ ಪರಿಹಾರ ಏನು ಎನ್ನುವುದು ಮುಖ್ಯ ಪ್ರಶ್ನೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ 6000ಕ್ಕೂ ಹೆಚ್ಚು ಕೆಪಿಎಸ್ ಶಾಲೆ ಗಳನ್ನು ತೆರೆಯುವ ಗುರಿಯನ್ನು ಸರಕಾರ ಹೊಂದಿದೆ. ಈಗಾಗಲೇ 300ಕ್ಕೂ ಹೆಚ್ಚು ಕರ್ನಾಟಕ ಪಬ್ಲಿಕ್ ಶಾಲೆಗಳು ಕಾರ‍್ಯಾರಂಭ ಮಾಡಿವೆ. ಹಾಲಿ ಶೈಕ್ಷಣಿಕ ವರ್ಷದಲ್ಲಿ ಸುಮಾರು 900 ಹೊಸ ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ.
ಸರಕಾರ ಸ್ಥಾಪಿಸಲು ಹೊರಟಿರುವ ಎಲ್ಲ ಕೆಪಿಎಸ್ ಶಾಲೆಗಳು ಯಶಸ್ವಿಯಾಯಿ ತೆಂದಿಟ್ಟುಕೊಳ್ಳೋಣ. ಹಳ್ಳಿಗಳಲ್ಲಿರುವ ಎಲ್ಲ ಮಕ್ಕಳು ಈ ಶಾಲೆಗಳಿಗೆ ಸೇರಿದರೆ ಹಾಲಿ ಇರುವ ಸಾವಿರಾರು ಸರಕಾರಿ ಮತ್ತು ಖಾಸಗಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢ ಶಾಲೆಗಳ ಭವಿಷ್ಯ ಏನು ? ಇಲ್ಲಿ ದುಡಿಯುತ್ತಿರುವ ಶಿಕ್ಷಕರ ಪಾಡೇನು? ಈ ಪ್ರಶ್ನೆಗಳಿಗೆ ಮಧು ಬಂಗಾರಪ್ಪ ಅವರ ಬಳಿ ಉತ್ತರವಿಲ್ಲ.
ಒಂದು ವೇಳೆ ಇವು ಯಶಸ್ವಿಯಾಗಲಿಲ್ಲ ಎಂದಾದರೆ ಸಮಸ್ಯೆ ಇನ್ನೂ ದೊಡ್ಡದು. ಆರು ಸಾವಿರ ಕೆಪಿಎಸ್ ಶಾಲೆಗಳನ್ನು ಹೊಸದಾಗಿ ತೆರೆಯುವುದೆಂದರೆ ಸಾವಿರಾರು ಕೋಟಿ ರು. ಬಂಡವಾಳ ಹೂಡಬೇಕು. ಇಷ್ಟೊಂದು ಬಂಡವಾಳ ಹೂಡಿಕೆಯಾದ ಬಳಿಕ ಪಾಳು ಬೀಳುವ ಶಾಲೆಗಳನ್ನು ಏನು ಮಾಡಬೇಕು ? ಇಲ್ಲಿರುವ ಸಿಬ್ಬಂದಿಗಳ ಗತಿ ಏನು ? ಈ ಪ್ರಶ್ನೆಗಳಿಗೂ ಸದ್ಯಕ್ಕೆ ಸ್ಪಷ್ಟನೆ ಸಿಕ್ಕಿಲ್ಲ.
ಎಲ್‌ಕೆಜಿಯಿಂದ 12ನೇ ತರಗತಿಯವರೆಗೆ ಒಂದೇ ಸೂರಿನಡಿ ಶಿಕ್ಷಣ ನೀಡುವುದು, ಪಿಯು ಶಿಕ್ಷಣ ಮುಗಿಯುವವರೆಗೆ ಒಂದೇ ಶಾಲಾ ಆವರಣದಲ್ಲಿ ಗುಣಮಟ್ಟದ ಶಿಕ್ಷಣ ಪಡೆಯು ವಂತೆ ಮಾಡುವುದು ಸರಕಾರದ ಚಿಂತನೆ. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಿ ಕಡಿಮೆ ಖರ್ಚಿನಲ್ಲಿ ಎಲ್ಲರಿಗೂ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಈ ಚಿಂತನೆಯ ಉದ್ದೇಶವೂ ಸರಿ ಇದೆ.
ಈ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್‌ಗಳು, ಸುಸಜ್ಜಿತ ಗ್ರಂಥಾಲಯ, ಪ್ರಯೋಗಾಲಯ ಮತ್ತು ಕ್ರೀಡಾ ಸೌಲಭ್ಯಗಳ ಸಹಿತ ಆಧುನಿಕ ಮೂಲಸೌಕರ್ಯ ಕಲ್ಪಿಸಲಾಗುತ್ತದೆ ಎಂದು ಸರಕಾರ ಹೇಳಿಕೊಂಡಿದೆ. ಇವೆಲ್ಲವೂ ಸರಿ. ಆದರೆ ಈ ಶಾಲೆಗಳ ಬೋಧನಾ ಮಾಧ್ಯಮ ಇಂಗ್ಲಿಷ್.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕನ್ನಡ ಮಾಧ್ಯಮದ ವಿಭಾಗಗಳೂ ಲಭ್ಯವಿರುತ್ತವೆ ಎಂದು ಸರಕಾರ ಹೇಳಿಕೊಂಡಿದೆಯಾದರೂ ಪೋಷಕರು ಮತ್ತು ವಿದ್ಯಾರ್ಥಿಗಳು ಈ ಬೇಡಿಕೆ ಮುಂದಿಡುವುದಿಲ್ಲವೆಂಬ ‘ಭರವಸೆ’ ಸರಕಾರಕ್ಕಿದೆ. ಅಲ್ಲಿಗೆ ಕರ್ನಾಟಕದಲ್ಲಿ ಕನ್ನಡ ಮಾಧ್ಯಮ ಇನ್ನು ಮುಂದೆ ‘ವಸ್ತುಸಂಗ್ರಹಾಲಯ’ದಲ್ಲಿಡಬೇಕಾದ ವಿಚಾರವಾಗಲಿದೆ.
ಕನ್ನಡ ಮಾಧ್ಯಮದ ಶಾಲೆಗಳಲ್ಲಿಯೇ ಇಂಗ್ಲಿಷ್ ವಿಷಯವನ್ನು ಒಂದು ಭಾಷೆಯಾಗಿ ಚೆನ್ನಾಗಿ ಬೋಧಿಸಲು ಸರಕಾರ ಕ್ರಮ ಕೈಗೊಂಡಿದ್ದರೆ ಆಕ್ಷೇಪಕ್ಕೆ ಅವಕಾಶವಿರಲಿಲ್ಲ. ಆದರೆ ಸರಕಾರ ಖಾಸಗಿಯವರಂತೆ ಪಾಲಕರ ಇಂಗ್ಲಿಷ್ ಭ್ರಾಂತಿ ಮತ್ತು ಒಣ ಪ್ರತಿಷ್ಠೆ ಯನ್ನೇ ಮುಂದಿಟ್ಟುಕೊಂಡು ಅವರಿಗಾಗಿ ಕೆಪಿಎಸ್ ಶಾಲೆಗಳನ್ನು ತೆರೆಯಲು ಮುಂದಾಗಿ ರುವುದು ನಾಡಿನ ಬಹುದೊಡ್ಡ ದುರಂತ.
ಕೆಪಿಎಸ್ ಶಾಲೆಗಳಿಗೆ ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ ಅಥವಾ ಶಾಲಾ ಶಿಕ್ಷಣ ಇಲಾಖೆಯ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ ಖಾಯಂ ಶಿಕ್ಷಕರನ್ನು ನೇಮಿಸಿ ಕೊಳ್ಳಲಾಗುತ್ತದೆ ಎಂದು ಸರಕಾರ ಹೇಳಿಕೊಂಡಿದೆ. ಆದರೆ ಈ ಮಾತು ಯಾವಾಗ ಈಡೇರುತ್ತದೆ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ.
ಇತ್ತೀಚಿನ ಮಾಹಿತಿಯಂತೆ ಸುಮಾರು 18000 ಶಿಕ್ಷಕರ ತಾತ್ಕಾಲಿಕ ನೇಮಕಾತಿಗೆ ಸರಕಾರ ಚಾಲನೆ ನೀಡಿದೆ. ನಮ್ಮ ವಿಶ್ವವಿದ್ಯಾಲಯಗಳಲ್ಲಿ ಎರಡು ದಶಕಗಳ ಹಿಂದೆ ತಾತ್ಕಾಲಿಕ ನೆಲೆಯಲ್ಲಿ ನೇಮಕಗೊಂಡು ಇದೇ ನೆಲೆಯಲ್ಲಿ ನಿವೃತ್ತಿಯಾದ ಉಪನ್ಯಾಸಕರಿದ್ದಾರೆ. ಮುಂದೊಂದು ದಿನ ಕೆಪಿಎಸ್ ಶಾಲೆಗಳ ನೇಮಕವೂ ಇದೇ ದಾರಿ ಹಿಡಿದರೆ ಅಚ್ಚರಿ ಇಲ್ಲ.
ರಾಜ್ಯ ಸರಕಾರ ಪ್ರತಿ ಕೆಪಿಎಸ್ ಶಾಲೆಯನ್ನು ಅಭಿವೃದ್ಧಿಪಡಿಸಲು ಸುಮಾರು ರೂ.4 ಕೋಟಿ ವೆಚ್ಚದ ಯೋಜನೆಯನ್ನು ರೂಪಿಸಿದೆ. ಆದರೆ ಹೊಸದಾಗಿ ಶಾಲೆ ತೆರೆಯುವುದಾದರೆ ಈ ಮೊತ್ತ ನಾಲ್ಕೈದು ಎಕರೆ ಜಾಗದ ಖರೀದಿಗೇ ಬೇಕಾಗಬಹುದು.
ಒಂದು ವೇಳೆ ಪ್ರತಿ ಗ್ರಾಪಂನಲ್ಲೂ ಉಚಿತವಾಗಿ ನಿವೇಶನ ಸಿಕ್ಕಿದರೂ, ಕ್ರೀಡಾಂಗಣಕ್ಕೆ ಬೇಕಾದ ಜಾಗವೂ ಸೇರಿ ಕನಿಷ್ಠ ಐದಾರು ಎಕರೆ ಜಾಗ ಸಿಗುವುದು ಕಷ್ಟ. ಎಲ್‌ಕೆಜಿಯಿಂದ ಪಿಯುವರೆಗೆ ಬೇಕಾದ ಶಿಕ್ಷಣ ಎಂದರೆ ಕನಿಷ್ಠ ಪಕ್ಷ ಸಾವಿರ ಮಕ್ಕಳ ಶಿಕ್ಷಣಕ್ಕೆ ಬೇಕಾದ ಮೂಲಸೌಕರ‍್ಯಗಳನ್ನು ಒದಗಿಸಬೇಕು.
ಇದು ಸಾಧ್ಯವೇ ಎನ್ನುವುದು ಪ್ರಶ್ನಾರ್ಹವಾಗಿಯೇ ಉಳಿಯುತ್ತದೆ. ಕೆಪಿಎಸ್ ಶಾಲೆಗಳಿಗೆ ಎಡಿಬಿಯಂತಹ ಬ್ಯಾಂಕಿಂಗ್ ಸಂಸ್ಥೆಗಳಿಂದ ಸಾಲ ಪಡೆದು ಸುಸಜ್ಜಿತ ಕಟ್ಟಡ, ಪ್ರಯೋಗಾ ಲಯ ಮತ್ತು ಕ್ರೀಡಾಂಗಣಗಳನ್ನು ನಿರ್ಮಿಸಲಾಗುತ್ತದೆ ಎಂದು ಸರಕಾರ ತಿಳಿಸಿದೆ. ಈ ಸಾಲವನ್ನು ತುಂಬಬೇಕಿದ್ದರೆ ಸರಕಾರ, ವಿದ್ಯಾರ್ಥಿಗಳಿಂದ ಶುಲ್ಕ ಸಂಗ್ರಹಿಸಲೇಬೇಕು. ಬಡವರಿಗಾಗಿ ಸದಾ ತೆರೆದಿರುತ್ತಿದ್ದ ಕನ್ನಡ ಶಾಲೆಗಳು ಮುಚ್ಚಿ ಕೆಪಿಎಸ್ ಶಾಲೆಗಳಷ್ಟೇ ಉಳಿದುಕೊಂಡರೆ ಇವರ ಶಿಕ್ಷಣದ ಪಾಡೇನು ? ಈ ಪ್ರಶ್ನೆಗೂ ಭವಿಷ್ಯವೇ ಉತ್ತರ ಹೇಳಬೇಕು.
ಯಾವುದೇ ಕಾರಣಕ್ಕೂ ಕನ್ನಡ ಶಾಲೆಗಳನ್ನು ಮುಚ್ಚುವುದಿಲ್ಲ ಎನ್ನುವುದು ಮಧು ಬಂಗಾರಪ್ಪ ಅವರ ಮತ್ತೊಂದು ಜನಪ್ರಿಯ ಘೋಷಣೆ. ಆದರೆ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಉತ್ತಮ ಗುಣಮಟ್ಟದ ಕೆಪಿಎಸ್ ಶಾಲೆ ದೊರೆತರೆ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದ ಸರಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳುವ ಪ್ರಮೇಯ ಇರುವುದೇ ಇಲ್ಲ. ಅಲ್ಲಿಗೆ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂಬ ಸರಕಾರದ ಹೇಳಿಕೆಯೂ ಕ್ಲೀಷೆಯಾಗಲಿದೆ.
ಸರಕಾರದ ಈ ಮಹತ್ವಾಕಾಂಕ್ಷೆಯ ಯೋಜನೆಯ ನಡುವೆ ನಿಂತು ಯೋಚಿಸಿದರೆ, ಸದ್ಯ ನಮ್ಮ ಸರಕಾರಿ ಶಾಲೆಗಳಲ್ಲಿ ಸುಮಾರು 40000 ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಸಾವಿರಾರು ಶಾಲೆಗಳು ಕೇವಲ ಒಬ್ಬರೇ ಶಿಕ್ಷಕರಿಂದ ನಡೆಯುತ್ತಿವೆ. ನೂರಾರು ಶಾಲೆಗಳಲ್ಲಿ ಇಂದಿಗೂ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶೌಚಾಲಯದ ಕೊರತೆಯಿದೆ.
8000ಕ್ಕೂ ಹೆಚ್ಚು ಶಾಲಾ ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿವೆ. ಕಲಿಕಾ ಸಮೀಕ್ಷೆ ಯ ಪ್ರಕಾರ 5ನೇ ತರಗತಿಯ ಅನೇಕ ವಿದ್ಯಾರ್ಥಿಗಳಿಗೆ 2ನೇ ತರಗತಿಯ ಪಠ್ಯವನ್ನು ಸರಿಯಾಗಿ ಓದಲು ಬರುವುದಿಲ್ಲ. ಗಣಿತದ ಸರಳ ಲೆಕ್ಕಗಳನ್ನು ಬಿಡಿಸಲು ಶೇ.50ರಷ್ಟು ಮಕ್ಕಳು ವಿಫಲರಾಗುತ್ತಿದ್ದಾರೆ.
ಈ ಎಲ್ಲ ವೈಫಲ್ಯಗಳ ನಡುವೆಯೇ ಮಧು ಬಂಗಾರಪ್ಪ ಅವರು ಆದರ್ಶಮಯ ಶಿಕ್ಷಣ ವ್ಯವಸ್ಥೆಯೊಂದನ್ನು ಜಾರಿಗೆ ತರಲು ಹೊರಟಿದ್ದಾರೆ. ಇದು ಆದರ್ಶವಾಗುವುದೋ, ಅವ್ಯವಸ್ಥೆಯ ಆಗರವಾಗುವುದೋ ಎಂದು ಕಾಲವೇ ಹೇಳಬೇಕು. ಆದರೆ ಶಿಕ್ಷಣ ಮಕ್ಕಳಿಗಷ್ಟೇ ಅಲ್ಲ, ಸರಕಾರಕ್ಕೂ ಬೇಕಿದೆ ಎನ್ನುವುದು ದಿಟ.