ದೇವೇಂದ್ರ ಜಾಡಿ
ಕಲ್ಯಾಣ ಕರ್ನಾಟಕದಲ್ಲಿ ಅಬ್ಬರಿಸುತ್ತಿರುವ ಮೈಕೊರೆಯುವ ಚಳಿ
ಬೀದರ್ ರಾಜ್ಯದಲ್ಲೇ ಅತ್ಯಂತ 'ಕೋಲ್ಡ್ ಸ್ಪಾಟ್' ಜಿಲ್ಲೆ
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಚಳಿಯ ತೀವ್ರತೆ ಮಿತಿ ಮೀರಿದ್ದು, ಇಡೀ ಪ್ರದೇಶವೇ ಶೀತಗಾಳಿಗೆ ತತ್ತರಿಸಿ ಹೋಗಿದೆ. ಮುಂಜಾನೆ 9 ಗಂಟೆಯಾದರೂ ಸೂರ್ಯನ ದರ್ಶನವಾಗದಷ್ಟು ದಟ್ಟ ಮಂಜು ಕವಿಯುತ್ತಿದ್ದು, ಜನಜೀವನದಲ್ಲಿ ಕೊಂಚ ಅಸ್ತವ್ಯಸ್ತಗೊಂಡಿದೆ. ಕಲಬುರಗಿ ಸೇರಿ ಏಳು ಜಿಲ್ಲೆಗಳಲ್ಲೂ ತೀವ್ರ ಮೈಕೊರೆಯುವ ಚಳಿಗೆ ಜನರು ಅಕ್ಷರಶಃ ನಲುಗಿ ಹೋಗಿದ್ದು, ಕಳೆದ ಕೆಲ ದಿನಗಳಿಂದ ವಿಪರೀತ ಚಳಿ ಹೆಚ್ಚಾಗಿ ಜನ ರಸ್ತೆಗಿಳಿಯಲು ಹಿಂದೇಟು ಹಾಕುತ್ತಿದ್ದಾರೆ. ಹವಾಮಾನ ಇಲಾಖೆ ನೀಡಿರುವ ಅಂಕಿಅಂಶಗಳ ಪ್ರಕಾರ, ಗಡಿ ಜಿಲ್ಲೆ ಬೀದರ್ ಕೇವಲ 5.5°C ಕನಿಷ್ಠ ತಾಪಮಾನದೊಂದಿಗೆ ರಾಜ್ಯದ 'ಕೋಲ್ಡ್ ಸ್ಪಾಟ್' ಆಗಿ ಮಾರ್ಪಟ್ಟಿದೆ.
ಸ್ತಬ್ದಗೊಂಡ ರಸ್ತೆಗಳು, ನಲುಗಿದ ಜನ: ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಬೆಳಗ್ಗೆಯೇ ದಟ್ಟ ಮಂಜು ಕವಿಯುತ್ತಿರುವುದರಿಂದ ವಾಹನ ಸವಾರರು ದಾರಿಯನ್ನೇ ಕಾಣದೆ ಪರದಾಡು ವಂತಾಗಿದೆ. ರಸ್ತೆಗಳಲ್ಲಿ ಸಂಚಾರ ವಿರಳವಾಗಿದ್ದು, ಬೆಳಗ್ಗೆ ಹೊತ್ತು ಜನ ಸಂಚಾರಕ್ಕೆ ಹಿಂದೇಟು ಹಾಕುತ್ತಿದ್ದಾರೆ. ವಿಪರೀತ ಚಳಿಯಿಂದಾಗಿ ಶಾಲಾ ವಿದ್ಯಾರ್ಥಿಗಳು ಮತ್ತು ವೃದ್ಧರ ಸ್ಥಿತಿ ದಯನೀಯ ವಾಗಿದ್ದು, ಶೀತ ಸಂಬಂಧಿತ ಕಾಯಿಲೆಗಳ ಭೀತಿ ಆವರಿಸಿದೆ. ಹವಾಮಾನದ ವೈಪರೀತ್ಯ ಗಮನಿಸಿ ಆರೋಗ್ಯ ಇಲಾಖೆಯು ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಿದ್ದು, ಕಲಬುರಗಿ ಸೇರಿ ಕಲ್ಯಾಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಆರೇಂಜ್ ಅಲರ್ಟ್ ಘೋಷಿಸಿದೆ.
ಬೆಂಕಿ ಕಾಯಿಸಿಕೊಳ್ಳುವುದೇ ದಾರಿ: ಹಳ್ಳಿ ಹಾಗೂ ಪಟ್ಟಣಗಳಲ್ಲಿ ಜನರು ಬೆಳಿಗ್ಗೆ ಮತ್ತು ರಾತ್ರಿ ಹೊತ್ತು ಚಳಿಯಿಂದ ರಕ್ಷಿಸಿಕೊಳ್ಳಲು ಕಟ್ಟಿಗೆಗಳನ್ನು ಹಾಕಿ ಬೆಂಕಿ ಕಾಯಿಸಿಕೊಳ್ಳುವ ದೃಶ್ಯಗಳು ಎಲ್ಲೆಡೆ ಸಾಮಾನ್ಯವಾಗಿದೆ. ಬಸ್ ನಿಲ್ದಾಣ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬೆಳಿಗ್ಗೆ ಹೊತ್ತು ಜನಜಂಗುಳಿ ಇಲ್ಲದೆ ಮೌನ ಆವರಿಸಿದೆ.
ಉಣ್ಣೆ ಬಟ್ಟೆಗಳಿಗೆ ಫುಲ್ ಡಿಮ್ಯಾಂಡ್: ಮಾರುಕಟ್ಟೆಯಲ್ಲಿ ಸ್ವೆಟರ್, ಮಫ್ಲರ್, ಜೆರ್ಕಿನ್ ಹಾಗೂ ಕಂಬಳಿಗಳ ವ್ಯಾಪಾರ ಅಭೂತಪೂರ್ವ ಏರಿಕೆ ಕಂಡಿದೆ. ಜನರು ಚಳಿಯಿಂದ ಪಾರಾಗಲು ಬೆಚ್ಚಗಿನ ಬಟ್ಟೆಗಳ ಮೊರೆ ಹೋಗುತ್ತಿದ್ದಾರೆ. ಹವಾಮಾನ ತಜ್ಞರ ಪ್ರಕಾರ, ಮುಂದಿನ ಕೆಲ ದಿನಗಳ ಕಾಲ ಇದೇ ರೀತಿಯ ಚಳಿಯ ಅಲೆ ಮುಂದುವರಿಯುವ ಸಾಧ್ಯತೆಯಿದೆ.
ಒಟ್ಟಾರೆಯಾಗಿ, ಕಲ್ಯಾಣ ಕರ್ನಾಟಕದ ಈ ಬಾರಿಯ ಚಳಿ ದಶಕದ ದಾಖಲೆಗಳನ್ನು ಮುರಿಯುವ ಲಕ್ಷಣ ತೋರಿಸುತ್ತಿದೆ. ರೈತರು ಕೂಡ ಚಳಿಯ ನಡುವೆಯೇ ಹೊಲ ಗದ್ದೆಗಳ ಕೆಲಸ ಮಾಡಲು ಹರಸಾಹಸ ಪಡುತ್ತಿದ್ದಾರೆ.
ಇದನ್ನೂ ಓದಿ: Karnataka Weather: ರಾಜ್ಯದಲ್ಲಿ ಶೀತಗಾಳಿ, ವಿಜಯಪುರದಲ್ಲಿ 6.90 ಡಿಗ್ರಿಗಿಳಿದ ತಾಪಮಾನ
ಕಲ್ಯಾಣ ಭಾಗದಲ್ಲಿ ತೀವ್ರ ಶೀತ ಜತೆಗೆ ಗಾಳಿ ಜೋರಾಗಿದ್ದು, ಮುಂದಿನ ಎರ್ಡಮೂರು ದಿನಗಳ ಕಾಲವೂ ಉತ್ತರ ಒಳನಾಡಿನ ಬೀದರ್, ಬೆಳಗಾವಿ, ಬಾಗಲಕೋಟೆ, ಕಲಬುರಗಿ, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ತೀವ್ರ ಶೀತ ಗಾಳಿ ಬೀಸುವ ಸಾಧ್ಯತೆಗಳಿವೆ. ಇನ್ನೂ ಡಿ.೨೩ರವರೆಗೆ ರಾಜ್ಯದ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ೪°C ನಿಂದ ೬°C ಗಿಂತ ಕಡಿಮೆ ಇರುವ ಸಾಧ್ಯತೆಯಿದೆ.ಡಿ.೨೧,೨೨ ರಂದು ಉತ್ತರ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ತೀವ್ರ ಶೀತಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
*
ಪ್ರತಿ ವರ್ಷಕ್ಕಿಂತ ಈ ವರ್ಷ ಜಿಲ್ಲೆಯಲ್ಲಿ ಚಳಿಯ ಅಬ್ಬರ ಕೊಂಚ ಜಾಸ್ತಿಯೇ ಆಗಿದೆ. ಬೆಳಗ್ಗೆ ಹಾಗೂ ಸಾಯಂಕಾಲ ಚಳಿಗೆ ನಡುಕ ಹೆಚ್ಚಾಗುತ್ತಿದೆ. ಮನೆಯಿಂದ ಹೊರಬರಲು ಕಷ್ಟಸಾಧ್ಯ ವಾಗುತ್ತಿದೆ. ಮಕ್ಕಳು ಹಾಗೂ ವೃದ್ಧರನ್ನು ಜೋಪಾನವಾಗಿ ನೋಡಿಕೊಳ್ಳುವ ಜವಾಬ್ದಾರಿ ಅಧಿವಾಗಿದೆ.
- ಸುರೇಶ್ ದೇಶಮುಖ, ಕಲಬುರಗಿ ನಿವಾಸಿ
ಜಿಲ್ಲಾವಾರು ತಾಪಮಾನದ ವಾಸ್ತವ:
* ಬೀದರ್: 5.5°C ದಾಖಲಾಗುವ ಮೂಲಕ ತೀವ್ರ ಶೀತಗಾಳಿಗೆ ಜಿಲ್ಲೆ ನಡುಗುತ್ತಿದೆ.
* ಕಲಬುರಗಿ: ಜಿಲ್ಲೆಯಲ್ಲಿ 8.1°C ತಾಪಮಾನವಿದ್ದು, ಕನಿಷ್ಠ ತಾಪಮಾನದ ಸರಪಳಿಯಲ್ಲಿ ಕಲಬುರಗಿ ಕೂಡ ಮುಂಚೂಣಿಯಲ್ಲಿದೆ.
* ವಿಜಯನಗರ: 9.2°C ತಾಪಮಾನದೊಂದಿಗೆ ಚಳಿಯ ಪ್ರಭಾವ ಜೋರಾಗಿದೆ.
* ಕೊಪ್ಪಳ: ಜಿಲ್ಲೆಯಲ್ಲಿ 9.8°C ಕನಿಷ್ಠ ತಾಪಮಾನ ದಾಖಲಾಗಿದೆ.
* ರಾಯಚೂರು: 9.9°C ತಾಪಮಾನವಿದ್ದು, ಚಳಿಯ ಅಲೆ ಸಾರ್ವಜನಿಕರನ್ನು ಕಂಗೆಡಿಸಿದೆ.
* ಯಾದಗಿರಿ: ಇಲ್ಲಿನ ತಾಪಮಾನ 10°C ಗೆ ಕುಸಿಯುವ ಮೂಲಕ ಹತ್ತರ ಗಡಿ ಮುಟ್ಟಿದೆ.
* ಬಳ್ಳಾರಿ: 11.7°C ತಾಪಮಾನದೊಂದಿಗೆ ಚಳಿಯ ವಾತಾವರಣ ಮುಂದುವರಿದಿದೆ.