ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕೌಶಲ್ಯ ಅಭಿವೃದ್ದಿ ನಿಗಮವೇ ನಿರುದ್ಯೋಗಿ

ನಿಗಮದಲ್ಲಿ 375ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿಗಳಿದ್ದು ಇವರೀಗ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವ ಪ್ರಶ್ನೆಯೇ ಉದ್ಭವಿಸಿಲ್ಲ. ಕಾರಣ ನಿಗಮದಲ್ಲಿ ಈಗ ಕೌಶಲ್ಯ ಅಭಿವೃದ್ಧಿಗೆ ಕಾರ್ಯಕ್ರಮಗಳೂ ಇಲ್ಲ. ಕ್ರಿಯಾ ಯೋಜನೆಯೂ ಇಲ್ಲ. ಹೀಗಾಗಿ ಕೌಶಲ್ಯ ಮತ್ತು ತರಬೇತಿ ಕೆಲಸಗಳನ್ನೇ ಮಾಡದ ನೂರಾರು ಅಧಿಕಾರಿಗಳಿಗೆ ನಿಗಮ ಸುಮಾರು 60 ಕೋಟಿ ರೂ.ವರೆಗೂ ವೇತನ ಪಾವತಿ ಮಾಡುತ್ತಾ ಅಧಿಕಾರ ಸಿಬ್ಬಂದಿಗಳ ಯೋಗಕ್ಷೇಮ ನೋಡಿಕೊಳ್ಳುತ್ತಿದೆ !

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ಸಿಎಂ ಕನಸಿನ ಯೋಜನೆಯಲ್ಲಿ ಕೌಶಲ್ಯವಿಲ್ಲ

ಸಚಿವರು, ಅಧ್ಯಕ್ಷರಿಗೆ ಆಸಕ್ತಿ ಇಲ್ಲ

ಬೆಂಗಳೂರು: ಮುಖ್ಯಮಂತ್ರಿಗಳ ಕನಸಿನ ಕೂಸು ಕೌಶಲ್ಯ ಅಭಿವೃದ್ಧಿ ನಿಗಮ ಈಗ ನಿಜಕ್ಕೂ ನಿರುದ್ಯೋಗಿ! ನಿಗಮದಲ್ಲಿ ಕೌಶಲ್ಯ ಅಭಿವೃದ್ಧಿಯು ಇಲ್ಲ. ತರಬೇತಿಯೂ ಇಲ್ಲ. ಉದ್ಯೋಗವಂತೂ ಇಲ್ಲವೇ ಇಲ್ಲ. ಅಂದ ಮೇಲೆ ನಿಗಮದ ಅಧಿಕಾರಿ, ಸಿಬ್ಬಂದಿಗಳಿಗೆ ಮಾಡುವುದಕ್ಕೆ ಕೆಲಸವೂ ಇಲ್ಲ. ಆದರೆ ಕೆಲಸವಿಲ್ಲದೆ ಕುಳಿತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮಾತ್ರ ಕೋಟಿ ಕೋಟಿ ರು. ಸರಾಗವಾಗಿ ಸಂದಾಯವಾಗುತ್ತಿದೆ ಎನ್ನುತ್ತಾರೆ ಹಣಕಾಸು ಇಲಾಖೆ ಅಧಿಕಾರಿಗಳು.

ನಿಗಮದಲ್ಲಿ 375ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿಗಳಿದ್ದು ಇವರೀಗ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವ ಪ್ರಶ್ನೆಯೇ ಉದ್ಭವಿಸಿಲ್ಲ. ಕಾರಣ ನಿಗಮದಲ್ಲಿ ಈಗ ಕೌಶಲ್ಯ ಅಭಿವೃದ್ಧಿಗೆ ಕಾರ್ಯ ಕ್ರಮಗಳೂ ಇಲ್ಲ. ಕ್ರಿಯಾ ಯೋಜನೆಯೂ ಇಲ್ಲ. ಹೀಗಾಗಿ ಕೌಶಲ್ಯ ಮತ್ತು ತರಬೇತಿ ಕೆಲಸಗಳನ್ನೇ ಮಾಡದ ನೂರಾರು ಅಧಿಕಾರಿಗಳಿಗೆ ನಿಗಮ ಸುಮಾರು 60 ಕೋಟಿ ರೂ.ವರೆಗೂ ವೇತನ ಪಾವತಿ ಮಾಡುತ್ತಾ ಅಧಿಕಾರ ಸಿಬ್ಬಂದಿಗಳ ಯೋಗಕ್ಷೇಮ ನೋಡಿಕೊಳ್ಳುತ್ತಿದೆ !

ಈ ಹಿಂದೆ ಈ ನಿಗಮ ಸ್ಥಾಪಿಸಿದ್ದ ಸಿದ್ದರಾಮಯ್ಯ ಅವರೇ ಈಗಲೂ ಮುಖ್ಯಮಂತ್ರಿ ಆಗಿದ್ದರೂ ಏಕೆ ಹೀಗಾಗುತ್ತದೆ ಎಂಬ ಪ್ರಶ್ನೆ ಉದ್ಭವಿಸಿದೆ. ಸಚಿವರು, ನಿಗಮದ ಅಧ್ಯಕ್ಷರ ನಿರಾಸಕ್ತಿ, ಅಲಕ್ಷ್ಯ ಇದಕ್ಕೆ ಮುಖ್ಯ ಕಾರಣ ಎಂಬ ದೂರುಗಳು ಕೇಳಿ ಬರುತ್ತಿವೆ. ನಿಗಮದಲ್ಲಿ ಇರುವ ಬಹುತೇಕ ಅಧಿಕಾರಿ, ಸಿಬ್ಬಂದಿಗೆ ಕೌಶಲ್ಯವಾಗಲಿ, ತರಬೇತಿ ನೀಡಿದ ಅನುಭವವಾಗಲಿ ಇಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ: Gururaj Gantihole Column: ಚುನಾವಣೆ: ಮತಗಟ್ಟೆ ವಶದಿಂದ ಎಸ್‌ʼಐಆರ್‌ʼವರೆಗೆ !

ಸಿಎಂ ಆಶಯ ನುಚ್ಚುನೂರು

ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆಗೆ ಪರಿಹಾರವಾಗಿ ಯುವ ಜನತೆಗೆ ಉದ್ಯೋಗ ಕಲ್ಪಿಸುವ ಉದ್ದೇಶ ದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 9 ವರ್ಷಗಳ ಹಿಂದೆ (24.09.2016ರ ಸರ್ಕಾರಿ ಆದೇಶ) ಕೌಶಲ್ಯ ಅಭಿವೃದ್ಧಿ ಇಲಾಖೆ ಸ್ಥಾಪಿಸಿದ್ದರು. ಇದನ್ನು ಮುನ್ನಡೆಸಲು ಕೌಶಲ್ಯಾಭಿವೃದ್ಧಿ ನಿಗಮ ಸ್ಥಾಪಿಸಿ ಅದರ ಮೂಲಕ ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶಗಳ ಎಲ್ಲೆಡೆ ಕೌಶಲ್ಯ ತರಬೇತಿ ನಡೆಯುವಂತೆ ಮಾಡಿದ್ದರು.

ಇದಕ್ಕೆ ಕೋಟ್ಯಂತರ ರು. ಅನುದಾನವನ್ನೂ ನೀಡಿದ್ದರು. ನಿಗಮವು ನಾಲ್ಕೈದು ವರ್ಷ ಉತ್ತಮ ರೀತಿಯಲ್ಲಿ ಕೆಲಸ ಮಾಡಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ತನ್ನ ಇರುವನ್ನೇ ಮರೆತಿದೆ ಎಂಬ ಮಾತುಗಳು ಕೇಳಿ ಬಂದಿವೆ. ಇದಕ್ಕೆ ಮುಖ್ಯ ಕಾರಣ 9 ವರ್ಷಗಳಿಂದ ಇದಕ್ಕೆ ಮತ್ತು ಅಧಿಕಾರಿ ಮತ್ತು ಸಿಬ್ಬಂದಿಯನ್ನೇ ನೇಮಕ ಮಾಡದಿರುವುದು.

ವೃಂದ ನೇಮಕ ನಿಯಮಗಳನ್ನೂ ರೂಪಿಸಿಲ್ಲ. ನೇಮಕಾತಿ ಬೈಲಾಗಳೇ ಸಿದ್ಧವಾಗಿಲ್ಲ. ಹೀಗಾಗಿ ನಿಗಮದಲ್ಲಿ ಕೌಶಲ್ಯಕ್ಕೆ ಸಂಬಂಧಿಸದ, ಕೌಶಲ್ಯ ತರಬೇತಿ ಕುರಿತ ಸೇವಾನುಭವಗಳೇ ಇಲ್ಲದ ವಿವಿಧ ಇಲಾಖೆಗಳ ನೂರಾರು ಅಧಿಕಾರಿ, ಸಿಬ್ಬಂದಿಗಳು ಎರವಲು ಸೇವೆಯ ಮೇಲೆ ಬಂದು ಗೂಡು ಕಟ್ಟಿಕೊಂಡಿದ್ದಾರೆ. ಇವರು ಸರಕಾರದ ಐಟಿಐ ಹಾಗೂ ಜಿಟಿಟಿಸಿ ಮತ್ತು ಸಡಕ್ ಸೇರಿದಂತೆ ವಿವಿಧ ಸರಕಾರಿ ಸಂಸ್ಥೆಗಳ ಮೇಲ್ವಿಚಾರಣೆ ನೋಡಿಕೊಂಡು ಕಾಲ ಕಳೆಯುವಂತಾಗಿದೆ.

ಡಿಎಸ್‌ಡಿಓ ಗಳಿಗೆ ಬಿಟ್ಟಿ ಸಂಬಳ !

ನಿಗಮದಲ್ಲಿ 300ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿಗಳಿದ್ದು ಅವರಲ್ಲಿ ಜಿಲ್ಲೆಗೆ ಒಬ್ಬರಂತೆ 31 ಜಿಲ್ಲೆ ಗಳಿಗೂ ಡಿಎಸ್‌ಡಿಓ (ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ) ಗಳಿದ್ದಾರೆ. ಇವರ ಅಧೀನದಲ್ಲಿ ಆಡಳಿತ ಅಧಿಕಾರಿ ಸಹಾಯಕರು ಗುಮಾಸ್ತರು ಸೇರಿದಂತೆ 8 ರಿಂದ 10 ಸಿಬ್ಬಂದಿ ಇರುತ್ತಾರೆ. ಕೌಶಲ್ಯ ತರಬೇತಿಯ ಇಲ್ಲದ ಕಾರಣ ಇವರಿಗೆ ಕೆಲಸವೂ ಇಲ್ಲದೆ ಕಚೇರಿಯಲ್ಲಿ ಕುಳಿತಿರುತ್ತಾರೆ. ಇವರಿಗೆ ಸರಕಾರ ಕಾರು, ವಸತಿಗೃಹ, ಸಿಬ್ಬಂದಿ ಜತೆಗೆ 1.25 ಲಕ್ಷ ರೂ.ಗಳಿಗೂ ಹೆಚ್ಚಿನ ವೇತನ ನೀಡುತ್ತಿದೆ.

ವರಲ್ಲಿ ಚಾಮರಾಜನಗರ, ಮಂಡ್ಯ, ಹಾಸನ ಸೇರಿದಂತೆ ಕೆಲವು ಡಿಎಸ್‌ಡಿಓ ಗಳು ಕಳೆದ ಏಳು ವರ್ಷಗಳಿಂದ ಒಂದೇ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಇಲಾಖೆಯ ಕೆಲಸವಿಲ್ಲದ ಕೆಲವರು ರಿಯಲ್ ಎಸ್ಟೇಟ್ ಕಡೆಗೂ ಮುಖ ಮಾಡಿದ್ದಾರೆ ಎನ್ನುವ ಆರೋಪಗಳಿವೆ.

*

ನಿಗಮದಲ್ಲಿ 375ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿಗಳಿದ್ದರೂ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುತ್ತಿಲ್ಲ

ನೂರಾರು ಅಧಿಕಾರಿಗಳಿಗೆ ನಿಗಮದಿಂದ ಸುಮಾರು 60 ಕೋಟಿ ರುಪಾಯಿವರೆಗೂ ವೇತನ ಪಾವತಿ

ಕಳೆದ ಒಂಬತ್ತು ವರ್ಷಗಳಿಂದ ನಿಗಮಕ್ಕೆ ಅಧಿಕಾರಿ ಮತ್ತು ಸಿಬ್ಬಂದಿಯ ನೇಮಕವನ್ನೇ ಮಾಡಿಲ್ಲ.