ನರೇಂದ್ರ ಪಾರೆಕಟ್
ಗುರುವಾರ ನಡೆಯಲಿರುವ ಕೇರಳಂ ವಿಧಾನಸಭಾ ಚುನಾವಣೆಯಲ್ಲಿ ರಾಜಧಾನಿ ತಿರುವ ನಂತಪುರಂ ತ್ರಿಕೋನ ಸ್ಪರ್ಧೆಗೆ ಸಿದ್ಧವಾಗಿದೆ. ರಾಜ್ಯದ ಹೆಚ್ಚಿನ ಹೆಚ್ಚಿನ ಕ್ಷೇತ್ರಗಳಲ್ಲಿ ಎಲ್‌ಡಿಎಫ್-ಯುಡಿಎಫ್ ಮಧ್ಯೆಯೇ ನೇರ ಸ್ಪರ್ಧೆ ಇದ್ದರೆ ರಾಜಧಾನಿಯಲ್ಲಿ ಹಲವಾರು ಕಡೆ ಈ ಸಲ ಕಾಣಸಿಗುತ್ತಿರುವುದು ಮೂರು ಒಕ್ಕೂಟಗಳ ಮಧ್ಯೆ ಪೈಪೋಟಿಯ ಸ್ಪರ್ಧೆ.
ತಿರುವನಂತಪುರಂ ಜಿಲ್ಲೆಯಲ್ಲಿ ಇರುವ ಹದಿನಾಲ್ಕು ವಿಧಾನಸಭಾ ಕ್ಷೇತ್ರಗಳೆಂದರೆ ಅರಿವಿಕ್ಕೆರ, ಆಟ್ಟಿಂಗಲ್, ಚಿರಯಂಗೀಲ್, ಕಟ್ಟಾಕಡ, ಕಝಕ್ಕೂಟ್ಟಂ, ಕೋವಳಂ, ನೆಡುಮಂಞಂಡ್, ನೇಮಮ್, ನೆಯ್ಯಾಟಿಂಗರ, ಪಾರಶ್ಶಾಲ, ತಿರುವನಂತಪುರಂ, ವಾಮನಪುರಂ, ವರ್ಕಲ ಮತ್ತು ವಟ್ಟಿಯೂರ್‌ಕಾವ್.
ಕಝಕ್ಕೂಟಂ ವಿಧಾನಸಭಾ ಕ್ಷೇತ್ರದಲ್ಲಿ ಕೇರಳ ಎಲ್‌ಡಿಎಫ್ ಸರಕಾರದಲ್ಲಿ ಸಚಿವರಾಗಿದ್ದ ಕಡನಂಪಳ್ಳಿ ಸುರೇಂದ್ರನ್ ಸ್ಪರ್ಧಿಸುತ್ತಿದ್ದಾರೆ. 2021ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಈ ಕ್ಷೇತ್ರದಲ್ಲಿ 2ನೇ ಸ್ಥಾನ ಪಡೆದಿದ್ದು, ಈ ಬಾರಿ ಕಡನಂಪಳ್ಳಿ ವಿರುದ್ಧ ಬಿಜೆಪಿಯಿಂದ ಮಾಜಿ ಕೇಂದ್ರ ಸಚಿವ ವಿ.ಮುರಳೀಧರನ್ ಕಣದಲ್ಲಿದ್ದಾರೆ. ಶರತ್‌ಚಂದ್ರ ಪ್ರಸಾದ್ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ.
2021ರಲ್ಲಿ ಬಿಜೆಪಿ ಕೇರಳದಲ್ಲಿ ಗೆದ್ದಿದ್ದ ಏಕೈಕ ನೇಮಮ್ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಪಕ್ಷದ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಸ್ಪರ್ಧೆ ಮಾಡುತ್ತಿದ್ದಾರೆ. ಎಡರಂಗದ ಅಭ್ಯರ್ಥಿಯಾಗಿ ಸಚಿವ ಶಿವನ್ ಕುಟ್ಟಿ ಇದೇ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುತ್ತಿದ್ದು, ಯುಡಿಎಫ್‌ನಿಂದ ಕೆ.ಎಸ್ ಶಬರಿನಾಥನ್ ಇಲ್ಲಿ ಸ್ಪರ್ಧೆಗಿಳಿದು ಚುನಾವಣಾ ಕಣಕ್ಕಿಳಿದು ರಂಗೇರಿಸಿದ್ದಾರೆ.
ತಿರುವನಂತಪುರಂ ಜಿಲ್ಲೆಯ ಮತ್ತೊಂದು ಜಿದ್ದಾಜಿದ್ದಿನ ಕ್ಷೇತ್ರ ವಟ್ಟಿಯೂರ್‌ಕಾವ್. ಇಲ್ಲಿ ಕಳೆದ ಸಲ ಬಿಜೆಪಿ ಎರಡನೇ ಸ್ಥಾನ ಪಡೆದಿದ್ದು, ಈ ಸಲ ಆ ಪಕ್ಷದಿಂದ ರಾಜ್ಯದ ಮಾಜಿ ಡಿ.ಜಿ.ಪಿ ಆರ್. ಶ್ರೀಲೇಖಾ ಕಣದಲ್ಲಿದ್ದರೆ, ಯುಡಿಎಫ್‌ನಿಂದ ಮಾಜಿ ಮುಖ್ಯಮಂತ್ರಿ ಕೆ. ಕರುಣಾಕರನ್ ಅವರ ಮಗ, ಹಿರಿಯ ಕಾಂಗ್ರೆಸ್ ನಾಯಕ ಕೆ. ಮುರಳೀಧರನ್ ಕಣದಲ್ಲಿದ್ದಾರೆ. ಎಡರಂಗವು ವಿ.ಕೆ.ಪ್ರಶಾಂತ್ ಅವರನ್ನು ಈ ಕ್ಷೇತ್ರದಲ್ಲಿ ಕಣಕ್ಕಿಳಿಸಿದೆ.
ಅದೇ ರೀತಿ ತಿರುವನಂತಪುರಂ ವಿಧಾಸಭಾ ಕ್ಷೇತ್ರದಲ್ಲೂ ಈ ಬಾರಿ ಜಿದ್ದಾಜಿದ್ದಿನ ಸ್ಪರ್ಧೆ ಇದೆ. ಕಳೆದ ಆರು ತಿಂಗಳ ಹಿಂದೆಯಷ್ಟೇ ತಿರುವನಂತಪುರಂ ಮಹಾನಗರಪಾಲಿಕೆಯನ್ನು ಪ್ರಪ್ರಥಮ ಬಾರಿಗೆ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದ ಬಿಜೆಪಿ ಈ ಬಾರಿ ಇಲ್ಲೂ ಕೈಬಿಡದೆ ತನ್ನ ಪ್ರಯತ್ನ ಮುಂದು ವರಿಸುತ್ತಿದೆ. ಇಲ್ಲಿ ಸಿ.ಪಿ.ಜಾನ್ ಯುಡಿಎಫ್ ಅಭ್ಯರ್ಥಿಯಾಗಿದ್ದು, ಸುಧೀರ್ ಕರಮನ ಎಲ್‌ಡಿಎಫ್ ಒಕ್ಕೂಟದಿಂದಲೂ, ಕರಮನ ಜಯನ್ ಬಿಜೆಪಿಯಿಂದಲೂ ಕಣಕ್ಕಿಳಿದಿದ್ದಾರೆ.
ಇದನ್ನೂ ಓದಿ: Kerala Election Campaign: ಕೇರಳಂನಲ್ಲಿ ರಾಜ್ಯ ನಾಯಕರ ಪ್ರಚಾರದ ಅಬ್ಬರ
ಸುಮಾರು ಮೂವತ್ತು ಲಕ್ಷ ಮತದಾರರನ್ನು ಹೊಂದಿರುವ ತಿರುವನಂತಪುರಂ ಜಿಲ್ಲೆಯ ಬಹುತೇಕ ವಿಧಾನಸಭಾ ಕ್ಷೇತ್ರಗಳೂ ಉತ್ತಮ ಅಭಿವೃದ್ಧಿ ಕಂಡಿವೆ. ರಾಜ್ಯದ ಸೆಕ್ರೆಟೇರಿಯೇಟ್ (ವಿಧಾನಸೌದ) ಇಲ್ಲಿರುವುದರಿಂದ ಬಹುತೇಕ ಎಲ್ಲಾ ಸೌಲಭ್ಯಗಳನ್ನೂ ಜಿಲ್ಲೆ ಹೊಂದಿದೆ. ವಿಶ್ವ ವಿಖ್ಯಾತ ಪದ್ಮನಾಭ ದೇಗುಲ, ಐ.ಟಿ ಪಾರ್ಕ್ ಮುಂತಾದೆಡೆಗೆ ಸಾಗಲು ಉತ್ತಮ ಸಾರಿಗೆ ವ್ಯವಸ್ಥೆಯೂ ಇದೆ.
ತಿರುವನಂತಪುರಂನಲ್ಲಿರುವ ಕೋವಳಂ ಒಂದು ಉತ್ತಮ ಪ್ರವಾಸೋದ್ಯಮ ಕೇಂದ್ರ. ಅಲ್ಲಿನ ಸಮುದ್ರ ಕಿನಾರೆ ಕೇರಳದಲ್ಲೇ ಅತ್ಯಂತ ಪ್ರಖ್ಯಾತಿ. ಹಾಗಾಗಿ ದಕ್ಷಿಣ ಕೇರಳಕ್ಕೆ ಯಾರೇ ಪ್ರವಾಸ ಹೋಗಲಿ, ಕೋವಳಂ ನೋಡಿ ಬರದವರು ಯಾರೂ ಇಲ್ಲ. ಜಿಲ್ಲೆಯ ಉತ್ತಮ ಒಂದು ಆದಾಯದ ಮೂಲವೂ ಅದಾಗಿದೆ. ರಾಜ್ಯ ಸರಕಾರವು ಕೋವಳಂ ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತಮ ಕೊಡುಗೆ ನೀಡಿವೆ. ಕೋವಳಂನಲ್ಲಿ ಈ ಸಲ ಕಾಂಗ್ರೆಸ್‌ನ ವಿನ್ಸೆಂಟ್ ಮತ್ತು ಎಡರಂಗದ ಭಗತ್ ರಫುಸ್ ಮಧ್ಯೆ ನೇರ ಸ್ಪರ್ಧೆ ಇದೆ.
ಆಟ್ಟಿಂಗಲ್ ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್-ಎಲ್‌ಡಿಎಫ್ ಮತ್ತು ಬಿಜೆಪಿಯ ಮಧ್ಯೆ ತುರುಸಿನ ಸ್ಪರ್ಧೆ ಇದೆ. ಸಂತೋಷ್ ಭದ್ರನ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಲ್ಲಿ ಸ್ಪರ್ಧಾ ಕಣ ದಲ್ಲಿದ್ದರೆ, ಎಲ್‌ಡಿಎಫ್ ಒ.ಎಸ್. ಅಂಬಿಕಾ ಅವರನ್ನು ಮತ್ತು ಬಿಜೆಪಿಯು ಪಿ. ಸುಧೀರ್ ಅವರನ್ನು ಕಣಕ್ಕಿಳಿಸಿದೆ.
ಕೇರಳದ ದಕ್ಷಿಣ ತುತ್ತತುದಿಯ ನೆಯ್ಯಾಟಿಂಞರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಸನಲ್ ಅವರು ಯುಡಿಎಫ್ ಅಭ್ಯರ್ಥಿಯಾಗಿದ್ದು, ಸಿ.ಕೆ ಹರಿದಾಸನ್ ಎಡರಂಗದಿಂದ ಮತ್ತು ಗಿರೀಶ್ ನೆಯ್ಯರ್ ಬಿಜೆಪಿಯಿಂದಲೂ ಸ್ಪರ್ಧಿಸುತ್ತಿದ್ದಾರೆ.
ಮೂರೂ ಪಕ್ಷಗಳಿಗೂ ರಾಜಧಾನಿ ಪ್ರತಿಷ್ಠೆಯ ಕಣ
ಪ್ರತಿಸಲದಂತೆ ಕೇರಳಂನ ಮೂರೂ ಪಕ್ಷಗಳೂ ಈ ಸಲವೂ ರಾಜ್ಯ ರಾಜಧಾನಿ ತಿರುವನಂತಪುರ ಜಿಲ್ಲೆಯಲ್ಲಿರುವ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ಪ್ರತಿಷ್ಠೆಯ ಕಣಗಳೆಂದೇ ತಿಳಿದಿವೆ. ಒಟ್ಟು ಇರುವ ಹದಿನಾಲ್ಕು ಕ್ಷೇತ್ರಗಳ ಪೈಕಿ ಆಡಳಿತರೂಢ ಎಲ್‌ಡಿಎಫ್-7, ಯುಡಿಎಫ್-5 ಮತ್ತು ಬಿಜೆಪಿ -2 ಸ್ಥಾನಗಳನ್ನು ಗೆಲ್ಲಲಿವೆ ಎಂದು ಹೆಚ್ಚಿನ ಸಮೀಕ್ಷೆಗಳು ಬಹಿರಂಗಪಡಿಸಿವೆ.