Kerala Election Campaign: ಕೇರಳಂನಲ್ಲಿ ರಾಜ್ಯ ನಾಯಕರ ಪ್ರಚಾರದ ಅಬ್ಬರ
ಶನಿವಾರ ಮತ್ತು ಭಾನುವಾರ ಡಿಸಿಎಂ ಶಿವಕುಮಾರ್ ಕೇರಳದ ಮಲಬಾರ್‌ನಲ್ಲಿ ಬಿರುಸಿನ ಚುನಾವಣಾ ಪ್ರಚಾರ ಮಾಡಿದ್ದಾರೆ. ಶನಿವಾರ ಅವರು ಅಲ್ಲಿನ ಕಣ್ಣೂರಿನ ಮಟ್ಟಾನ್ನೂರು, ವಡಗರಾದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಮಾಡಿದ್ದರೆ, ಭಾನುವಾರ ಕೋಝಿಕ್ಕೋಡ್ ಜಿಲ್ಲೆಯ ಕುಟ್ಟಾ ಲಿಡ, ಕಾರಪರಂಬು, ಕೋಝಿಕ್ಕೊಡ್ ಬೀಚ್ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರ ಮಾಡಿ, ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಇನ್ನಷ್ಟು ಹುರುಪು ತುಂಬಿದ್ದಾರೆ.
-
ನರೇಂದ್ರ ಪಾರೆಕಟ್
ಕೇರಳಂ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ ಮೂರು ದಿನ ಮಾತ್ರ ಬಾಕಿ ಉಳಿದಿದೆ. ಅಲ್ಲಿನ ಚುನಾವಣಾ ಪ್ರಚಾರದ ಕಾವು ರಂಗೇರಿದ್ದು ನಮ್ಮ ರಾಜ್ಯದ ಘಟಾನುಘಟಿ ರಾಜಕೀಯ ನಾಯಕರು ಕೇರಳಂನಲ್ಲಿ ಸಕ್ರಿಯರಾಗಿ ಪ್ರಚಾರ ಮಾಡಿದ್ದಾರೆ.
ಕೇರಳಂನ 140 ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಇನ್ನು ಬಾಕಿ ಉಳಿದಿರುವುದು ಕೇವಲ ಬೆರಳೆಣಿಕೆಯ ದಿನಗಳು ಮಾತ್ರ. ಆ ಕಾರಣಕ್ಕಾಗಿ ಇದೀಗ ಅಲ್ಲಿನ ಚುನಾವಣಾ ಪ್ರಚಾರ ಕಾವು ರಂಗೇರಿದ್ದು ಘಟಾನುಘಟಿ ರಾಜಕೀಯ ನಾಯಕರು ಅಲ್ಲಿ ಈಗ ಬಿರುಸಿನ ಪ್ರಚಾರ ದಲ್ಲಿದ್ದಾರೆ. ರಾಜ್ಯದ ಪ್ರಮುಖ ನಾಯಕರೂ ಈ ಸಲದ ಕೇರಳಂ ಚುನಾವಣಾ ಪ್ರಚಾರ ದಲ್ಲಿ ಸಕ್ರಿಯರಾಗಿದ್ದರು.
ಸಿದ್ದರಾಮಯ್ಯ ಪ್ರಚಾರ: ಭಾನುವಾರ ಸಿಎಂ ಸಿದ್ಧರಾಮಯ್ಯ ಅವರು ಕೇರಳದ ಚುನಾ ವಣಾ ಪ್ರಚಾರದ ಅಖಾಡಕ್ಕೆ ಧುಮುಕಿ, ಕನ್ನಡಿಗರ ಬಾಹುಳ್ಯವುಳ್ಳ ಎರಡು ಕಡೆ ಚುನಾ ವಣಾ ಪ್ರಚಾರ ಭಾಷಣ ಮಾಡಿದ್ದಾರೆ.
ಬೆಂಗಳೂರಿನಿಂದ ನೇರವಾಗಿ ಮಂಗಳೂರಿಗೆ ವಿಮಾನ ಮಾರ್ಗದ ಮೂಲಕ ತೆರಳಿ, ಅಲ್ಲಿಗೆ ಸಮೀಪವಿರುವ ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೊಳಪಡುವ ಕನ್ನಡಿಗರೇ ಹೆಚ್ಚು ನೆಲೆಸಿರುವ ವರ್ಕಾಡಿ ಪಂಚಾಯತ್‌ನ ಮಜೀರ್‌ಪಳ್ಳದಲ್ಲಿ ಸಾರ್ವಜನಿಕ ಸಭೆಯನ್ನು ದ್ದೇಶಿಸಿ ಸಿದ್ದರಾಮಯ್ಯ ಅವರು ಮಾತನಾಡಿದ್ದು, ಅಲ್ಲಿನ ಯುಡಿಎಫ್‌ನ ಕನ್ನಡಿಗ ಅಭ್ಯರ್ಥಿ ಎ.ಕೆ.ಎಂ. ಅಶ್ರಫ್ ಪರ ಮತ ಯಾಚಿಸಿದ್ದಾರೆ.
ಆ ಸಭೆಯ ಬಳಿಕ ಅಲ್ಲಿಂದ ಅದೇ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ, ಮತ್ತೊಂದು ಕನ್ನಡಿಗರ ಬಾಹುಳ್ಯವುಳ್ಳ ಮುಳ್ಳೇರಿಯಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿಯೂ ಸಿಎಂ ಮಾತನಾಡಿದ್ದು, ಅಲ್ಲಿನ ಯುಡಿಎಫ್ ಕಾರ್ಯಕರ್ತರಲ್ಲಿ ಹುರುಪು ತುಂಬಿದ್ದಾರೆ.
ಇದನ್ನೂ ಓದಿ: BJP Kerala Campaign: ತ್ರಿಶೂರ್, ಪಾಲಕ್ಕಾಡಿನಲ್ಲಿ ಬಿಜೆಪಿಗೆ ಗೆಲುವಿನ ನಿರೀಕ್ಷೆ
ಡಿಕೆಶಿ ಪ್ರಚಾರಕ್ಕೆ ಮಲಯಾಳಿಗಳು ಫಿದಾ: ಶನಿವಾರ ಮತ್ತು ಭಾನುವಾರ ಡಿಸಿಎಂ ಶಿವಕುಮಾರ್ ಕೇರಳದ ಮಲಬಾರ್‌ನಲ್ಲಿ ಬಿರುಸಿನ ಚುನಾವಣಾ ಪ್ರಚಾರ ಮಾಡಿದ್ದಾರೆ. ಶನಿವಾರ ಅವರು ಅಲ್ಲಿನ ಕಣ್ಣೂರಿನ ಮಟ್ಟಾನ್ನೂರು, ವಡಗರಾದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಮಾಡಿದ್ದರೆ, ಭಾನುವಾರ ಕೋಝಿಕ್ಕೋಡ್ ಜಿಲ್ಲೆಯ ಕುಟ್ಟಾ ಲಿಡ, ಕಾರಪರಂಬು, ಕೋಝಿಕ್ಕೊಡ್ ಬೀಚ್ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರ ಮಾಡಿ, ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಇನ್ನಷ್ಟು ಹುರುಪು ತುಂಬಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳಿಂದಾಗಿ ಕನ್ನಡಿಗರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದ್ದು, ಕೇರಳಂನಲ್ಲಿ ಹತ್ತು ವರ್ಷಗಳಿಂದ ಆಳ್ವಿಕೆ ನಡೆಸುತ್ತಿರುವ ಎಲ್‌ಡಿಎಫ್ ಸರಕಾರವನ್ನು ಕಿತ್ತೊಗೆದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರಕಾರ ಕೇರಳದಲ್ಲಿ ಈ ಬಾರಿ ಅಧಿಕಾರಕ್ಕೆ ಬರಲಿದ್ದು, ಈಗಾಗಲೇ ಪಕ್ಷ ಘೋಷಿಸಿರುವ ಗ್ಯಾರಂಟಿ ಯೋಜನೆ ಕೇರಳದಲ್ಲೂ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.
ಶೋಭಾ ಕೇರಳಂನಲ್ಲೇ ಠಿಕಾಣಿ:
ರಾಜ್ಯ ಬಿಜೆಪಿ ನಾಯಕಿಯೂ, ಕೇಂದ್ರ ಸಚಿವೆ ಆಗಿರುವ ಶೋಭಾ ಕರಂದ್ಲಾಜೆ ಅವರು ಕಳೆದ ಇಪ್ಪತ್ತು ದಿನಗಳಿಂದ ಕೇರಳದಲ್ಲೇ ಠಿಕಾಣಿ ಹೂಡಿ ರಾಜ್ಯದ ಕನಿಷ್ಟ ಮರ‍್ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಕಮಲ ಅರಳಿಸುವ ಪ್ರಯತ್ನದಲ್ಲಿದ್ದಾರೆ. ಕೇರಳಂ ವಿಧಾನ ಸಭಾ ಚುನಾವಣೆಯ ಬಿಜೆಪಿ ಸಹ ಉಸ್ತುವಾರಿಯಾಗಿರುವ ಶೋಭಾ, ಮಂಜೇಶ್ವರದಿಂದ ತಿರುವನಂತಪುರದ ವರೆಗಿನ ಎಲ್ಲಾ ಜಿಲ್ಲೆಗಳನ್ನೂ ಈಗಾಗಲೇ ಸುತ್ತಿ ಪಕ್ಷದ ಜಿಲ್ಲಾ, ತಾಲೂಕು ಕಚೇರಿಗಳಲ್ಲಿ ಹಲವಾರು ಸುತ್ತಿನ ಸಭೆ ನಡೆಸಿದ್ದಾರೆ.
ಅದೇ ರೀತಿ ದಕ್ಷಿಣ ಕೇರಳದ ಹಲವಾರು ವಿಧಾನಸಭಾ ಕ್ಷೇತ್ರಗಳಲ್ಲಿ ಅವರು ಚುನಾವಣಾ ಪ್ರಚಾರ ಭಾಷಣ ಮಾಡಿದ್ದು, ಮೋದಿ ನಾಯಕತ್ವದ ಕೇಂದ್ರ ಸರಕಾರವು ಕಳೆದ ಹನ್ನೊಂದು ವರ್ಷಗಳಿಂದ ಕೇರಳದಲ್ಲಿ ಮಾಡಿರುವ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಪಕ್ಷದ ಸಭೆಗಳಲ್ಲಿ ವಿವರಿಸಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದಾರೆ.
ಕೇರಳದಲ್ಲಿ ಜಮೀರ್ ಸ್ಟಾರ್: ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭಾ ಉಪ ಚುನಾವಣಾ ಪ್ರಚಾರದಿಂದ ಮೊನ್ನೆ ಶನಿವಾರದ ವರೆಗೂ ದೂರ ಉಳಿದಿದ್ದ ಸಚಿವ ಜಮೀರ್ ಅಹಮ್ಮದ್ ಕೇರಳದ ವಿಧಾನಸಭಾ ಚುನಾವಣೆಯ ಸ್ಟಾರ್ ಪ್ರಚಾರಕರು. ಮಾರ್ಚ್ 27ರಿಂದ ಅವರು ಅಲ್ಲಿನ ಮುಸ್ಲಿಂ ಮತದಾರರು ಹೆಚ್ಚಿರುವ ಮಲಬಾರ್ ಪ್ರದೇಶದಲ್ಲಿ ಕಳೆದ ಹತ್ತು ದಿನಗಳಿಂದ ಸಕ್ರಿಯ ಚುನಾವಣಾ ಪ್ರಚಾರ ಮಾಡಿದ್ದಾರೆ.
ಕೋಝಿಕ್ಕೋಡ್ ಜಿಲ್ಲೆಯಿಂದ ತನ್ನ ಚುನಾವಣಾ ಪ್ರಚಾರ ಆರಂಭಿಸಿದ್ದ ಜಮೀರ್, ಅಲ್ಲಿನ ಬಹುತೇಕ ಚುನಾವಣಾ ಕ್ಷೇತ್ರದಲ್ಲಿ ಪ್ರಚಾರ ಭಾಷಣ ಮಾಡಿದ್ದಾರೆ. ಕಣ್ಣೂರ್ ಜಿಲ್ಲೆಯ ಆಝಿಕ್ಕೋಡ್
ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಪಕ್ಷದ ಅಭ್ಯರ್ಥಿ ಅಶ್ರಫ್, ಕಾಸರಗೋಡಿನಲ್ಲಿ ಕಲ್ಲಟ್ರ ಹಾಜಿ ಅವರ ಪರ ಮುಸ್ಲಿಂಮರು ಹೆಚ್ಚಿರುವ ಪ್ರದೇಶಗಳಲ್ಲಿ ಅಬ್ಬರದ ಪ್ರಚಾರ ಮಾಡಿದ್ದಾರೆ. ಸಿದ್ಧರಾಮಯ್ಯ ನಾಯಕತ್ವದ ಕಾಂಗ್ರೆಸ್ ಸರಕಾರ ಕರ್ನಾಟಕದಲ್ಲಿ ಜನಮನ ಗೆದ್ದಿದ್ದು, ಕೇರಳದಲ್ಲಿ ಮುಸ್ಲಿಂಲೀಗ್ ಒಳಗೊಂಡಿರುವ ಯುಡಿಎಫ್ ಸರಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದೂ ಭವಿಷ್ಯ ನುಡಿದಿದ್ದಾರೆ.
ತೇಜಸ್ವಿ ಸೂರ್ಯ ಬಿರುಸಿನ ಪ್ರಚಾರ: ಬೆಂಗಳೂರು ದಕ್ಷಿಣ ಸಂಸತ್ ಕ್ಷೇತ್ರದ ಸಂಸದ ರಾದ ತೇಜಸ್ವಿ ಸೂರ್ಯ ಕೇರಳದಲ್ಲಿ ನಾಲ್ಕೈದು ದಿನ ಚುನಾವಣಾ ಪ್ರಚಾರದಲ್ಲಿ ಈ ಸಲ ತೊಡಗಿಸಿಕೊಂಡವರು. ತನ್ನ ಪ್ರಖರ ವಾಕ್ ಚಾತುರ್ಯದಿಂದ ಮತದಾರರ ಮನಸ್ಸನ್ನು ಗೆಲ್ಲಲು ಶತಪ್ರಯತ್ನ ಮಾಡಿದ್ದಾರೆ. ಮಂಜೇಶ್ವರದಲ್ಲಿ ಪಕ್ಷದ ಅಭ್ಯರ್ಥಿ ಕೆ.ಸುರೇಂದ್ರನ್, ಕಾಸರಗೋಡಿನಲ್ಲಿ ಅಶ್ವಿನಿ ಪರ ಕನ್ನಡಿಗರ ಹೆಚ್ಚಾಗಿರುವ ಪ್ರದೇಶದಲ್ಲಿ ಕನ್ನಡದಲ್ಲೇ ಪ್ರಖರ ಭಾಷಣಗಳನ್ನು ಮಾಡಿ, ಮೋದಿ ಸರಕಾರದ ಸಾಧನೆ ಬಗ್ಗೆ ಮಾತನಾಡಿ ಬಿಜೆಪಿಯ ಯುವ ಕಾರ್ಯಕರ್ತರಲ್ಲಿ ಇನ್ನಷ್ಟು ಹುರುಪು ತುಂಬಿದ್ದಾರೆ.
ಕೇರಳ ರಾಜ್ಯ ರಾಜಧಾನಿಯಾದ ತಿರುವನಂತಪುರಂ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳಾದ ಶ್ರೀಲೇಖಾ, ಕರಮನಂ ಜಯನ್ ಪರ ಮತ್ತು ಕೋಝಿಕ್ಕೋಡ್‌ನ ಏಲತ್ತೂರ್, ಕುನ್ನಮಂಗಲಂ ಮುಂತಾದೆಡೆ ಚುನಾವಣಾ ಪ್ರಚಾರ ಭಾಷಣಗಳ ಮೂಲಕ ಯುವ ಮತದಾರರನ್ನು ಪಕ್ಷದತ್ತ ಸೆಳೆದಿದ್ದಾರೆ.
ಅದೇ ರೀತಿ ಮಂಗಳೂರಿನ ಸಂಸದ ಬ್ರಿಜೇಶ್ ಚೌಟ, ಶಾಸಕರಾಗಿರುವ ಡಾ. ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್, ಪುತ್ತೂರು ಶಾಸಕ ಅಶೋಕ್ ಕುಮಾರ್ ಸೇರಿದಂತೆ ರಾಜ್ಯದ ಇತರ ಹಲವಾರು ರಾಜಕೀಯ ಧುರೀಣರು ಈ ಬಾರಿಯ ಕೇರಳ ಚುನಾವಣಾ ಪ್ರಚಾರ ಕಣಕ್ಕೆ ಸಕ್ರಿಯರಾಗಿ ಧುಮುಕಿರುವುದು ನಿಜಕ್ಕೂ ವಿಶೇಷವಾಗಿದೆ.
ಕೇರಳದಲ್ಲಿ ಯುಡಿಎಫ್ ಸರಕಾರದ ನಿರೀಕ್ಷೆಯಲ್ಲಿ ಕರ್ನಾಟಕ ಕಾಂಗ್ರೆಸ್
ಕಳೆದ ಹತ್ತು ವರ್ಷಗಳಿಂದ ಕೇರಳದಲ್ಲಿ ಎಲ್‌ಡಿಎಫ್ ನೇತೃತ್ವದ ಸರಕಾರವಿದ್ದು, ಕಾಂಗ್ರೆಸ್ ವಿರೋಧ ಪಕ್ಷದಲ್ಲಿದೆ. ಪೈಪೋಟಿಯ ಚುನಾವಣೆಯಾದರೂ, ಈ ಬಾರಿ ಅಲ್ಲಿ ಆಡಳಿತ ವಿರೋಧಿ ಅಲೆ ಸ್ವಲ್ಪ ಮಟ್ಟಿಗೆ ಇರುವುದರಿಂದ ಜನರು ಬದಲಾವಣೆ ಬಯಸಿ ದ್ದಾರೆ. ಕಾಂಗ್ರೆಸ್ ನಾಯಕತ್ವದ ಯುಡಿಎಫ್ ಸರಕಾರ ಈ ಸಲ ಅಲ್ಲಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಹೆಚ್ಚಿನ ಸಮೀಕ್ಷೆಗಳು ಹೇಳಿವೆ. ಹಾಗಾಗಿ ಕರ್ನಾಟಕದಲ್ಲೂ ಕಾಂಗ್ರೆಸ್ ಸರಕಾರ ಇರುವುದರಿಂದ ತಮ್ಮ ಪಕ್ಷದ ಸರಕಾರ ಅಲ್ಲಿ ಅಧಿಕಾರಕ್ಕೇರಿದರೆ ಕೇರಳದೊಂದಿಗೆ ಇನ್ನಷ್ಟು ಉತ್ತಮ ಭಾಂದವ್ಯ ಕಾಪಾಡುವ ತವಕ ರಾಜ್ಯ ಸರಕಾರ ಮತ್ತು ಕರ್ನಾಟಕ ಕಾಂಗ್ರೆಸ್ ನಾಯಕರಲ್ಲಿದೆ.