ದೇವೇಂದ್ರ ಜಾಡಿ ಕಲಬುರಗಿ
ಹೈಸ್ಪೀಡ್ ರೈಲಿಗೆ ಎರಡು ವರ್ಷ, 5.7 ಲಕ್ಷ ಪ್ರಯಾಣಿಕರ ಪಯಣ, ಕಲಬುರಗಿ ಜನತೆ ಸಂತಸ
ಕಲ್ಯಾಣ ಕರ್ನಾಟಕದ ಶಕ್ತಿ ಕೇಂದ್ರವಾದ ಕಲಬುರಗಿ ಮತ್ತು ರಾಜ್ಯದ ರಾಜಧಾನಿ ಬೆಂಗಳೂರು ನಡುವಿನ ಕೊಂಡಿಯಾಗಿರುವ ‘ಕಲಬುರಗಿ- ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲು ತನ್ನ ಯಶಸ್ವಿ ಸೇವೆಯ ಎರಡು ವರ್ಷಗಳನ್ನು ಪೂರೈಸಿದೆ. ಅತ್ಯಾಧುನಿಕ ತಂತ್ರಜ್ಞಾನ, ವಿಮಾನದಂತಹ ಸೌಲಭ್ಯ ಮತ್ತು ಕರಾರುವಕ್ಕಾದ ಸಮಯ ಪಾಲನೆ ಯಿಂದಾಗಿ ಈ ರೈಲು ಕಲ್ಯಾಣ ಕರ್ನಾಟಕ ಭಾಗದ ಜನರ ನೆಚ್ಚಿನ ಸಾರಿಗೆಯಾಗಿ ಹೊರ ಹೊಮ್ಮಿದೆ.
ಪ್ರಧಾನಿ ನರೇಂದ್ರ ಮೋದಿ 2024ರ ಮಾರ್ಚ್ 12ರಂದು ಈ ರೈಲಿಗೆ ಚಾಲನೆ ನೀಡಿದ್ದರು. ದೇಶದ 42ನೇ ವಂದೇ ಭಾರತ್ ರೈಲು ಎಂಬ ಹೆಗ್ಗಳಿಕೆಯೊಂದಿಗೆ ಆರಂಭವಾದ ಈ ಸೇವೆ, ಇಂದು ಎರಡು ವರ್ಷಗಳ ಸಂಭ್ರಮದಲ್ಲಿದೆ. ಕೇವಲ ಎರಡು ವರ್ಷಗಳ ಅವಧಿಯಲ್ಲಿ ಈ ರೈಲು ಸಾಧಿಸಿರುವ ಅಂಕಿ-ಅಂಶಗಳು ಸಾರಿಗೆ ಲೋಕ ದಲ್ಲಿ ಹೊಸ ದಾಖಲೆ ಬರೆದಿವೆ. ಫೆಬ್ರವರಿ 28, 2026ರ ವರೆಗಿನ ಮಾಹಿತಿ ಪ್ರಕಾರ, ಒಟ್ಟು 5,72,566 ಪ್ರಯಾಣಿಕರು ಈ ರೈಲಿನಲ್ಲಿ ಸಂಚರಿಸಿದ್ದಾರೆ.
ಖಜಾನೆ ತುಂಬಿಸಿದ ‘ಬಿಳಿ ಕುದುರೆ’: ಈ ರೈಲು ಕೇವಲ ಪ್ರಯಾಣಿಕರ ಪ್ರೀತಿಯನ್ನು ಮಾತ್ರವಲ್ಲದೆ, ರೈಲ್ವೆ ಇಲಾಖೆಗೆ ಭರ್ಜರಿ ಆದಾಯವನ್ನೂ ತಂದುಕೊಟ್ಟಿದೆ. ಕಳೆದ ಎರಡು ವರ್ಷಗಳಲ್ಲಿ ಈ ಮಾರ್ಗದಿಂದ ಒಟ್ಟು 67.89 ಕೋಟಿ ರು. ಆದಾಯ ಸಂಗ್ರಹವಾಗಿದೆ. 2026ರ ಸಾಲಿನಲ್ಲಿ ಈ ರೈಲಿನ ಆಸನ ಭರ್ತಿ ಪ್ರಮಾಣ ಶೇ.103.52ರಷ್ಟಿದೆ. ಅಂದರೆ, ಲಭ್ಯ ವಿರುವ ಆಸನಗಳಿಗಿಂತ ಹೆಚ್ಚಿನ ಬೇಡಿಕೆ ಪ್ರತಿ ನಿತ್ಯ ಕಂಡುಬರುತ್ತಿದೆ. ಇದು ಈ ರೈಲಿಗಿರುವ ಬೇಡಿಕೆ ಮತ್ತು ಅನಿವಾರ್ಯತೆಯನ್ನು ಸಾರುತ್ತದೆ.
ಇದನ್ನೂ ಓದಿ: Vande Bharat Express: ರಾಜ್ಯದ ವಂದೇ ಭಾರತ್ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ; ಮಾ.15ರಿಂದ ಜಾರಿ
ಸಮಯದ ಉಳಿತಾಯ: ಹಿಂದೆ ಕಲಬುರಗಿಯಿಂದ ಬೆಂಗಳೂರಿಗೆ ತಲುಪಲು ಎಕ್ಸ್ ಪ್ರೆಸ್ ರೈಲುಗಳಲ್ಲಿ 9 ರಿಂದ 10 ಗಂಟೆ ಬೇಕಾಗುತ್ತಿತ್ತು. ವಂದೇ ಭಾರತ್ ರೈಲು ಈ ದೂರವನ್ನು ಕೇವಲ 8 ಗಂಟೆ 45 ನಿಮಿಷಗಳಲ್ಲಿ ಕ್ರಮಿಸುತ್ತಿದೆ. ಬೆಳಗ್ಗೆ ಕಲಬುರಗಿಯಿಂದ ಹೊರಟು ಸಂಜೆ ವೇಳೆಗೆ ಬೆಂಗಳೂರು ತಲುಪಿ, ಅಲ್ಲಿನ ಕೆಲಸ ಮುಗಿಸಿ ವಾಪಸ್ ಬರಲು ಇದು ಸಹಕಾರಿಯಾಗಿದೆ. ಜಿಪಿಎಸ್ ಆಧಾರಿತ ಮಾಹಿತಿ ಸಿಸಿಟಿವಿ ಕ್ಯಾಮೆರಾ ಮತ್ತು ಸ್ವಾದಿಷ್ಟ ಆಹಾರ ಪ್ರಯಾಣಿಕರನ್ನು ಸೆಳೆಯುತ್ತಿದೆ.
ಕಲ್ಯಾಣ ಕರ್ನಾಟಕಕ್ಕೆ ಹೊಸ ಭರವಸೆ: ಈ ರೈಲು ಮಂತ್ರಾಲಯಕ್ಕೆ ಹೋಗುವ ಭಕ್ತರಿಗೆ, ಬೆಂಗಳೂರಿಗೆ ಬರುವ ಐಟಿ ಉದ್ಯೋಗಿಗಳಿಗೆ ಮತ್ತು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ಈ ರೈಲಿಗೆ ಹೆಚ್ಚುವರಿ ಬೋಗಿಗಳ ಸೇರ್ಪಡೆಗೂ ಸಾರ್ವಜನಿಕ ವಲಯದಿಂದ ಬೇಡಿಕೆ ಕೇಳಿ ಬಂದಿದೆ.
ಬೇಕಿದೆ ವಂದೇ ಭಾರತ್ ಸ್ಲೀಪರ್ ಕೋಚ್
ಕಲಬುರಗಿ-ಬೆಂಗಳೂರು ನಡುವಿನ ವಂದೇ ಭಾರತ್ ಯಶಸ್ಸಿನ ಬೆನ್ನಲ್ಲೇ, ಈಗ ’ಸ್ಲೀಪರ್ ಕೋಚ್’ ಆರಂಭಿಸಲು ಒತ್ತಾಯ ಕೇಳಿ ಬರುತ್ತಿದೆ. ಪ್ರಸ್ತುತ ಇರುವ ಚೇರ್ ಕಾರ್ ಹಗಲು ಪ್ರಯಾಣಕ್ಕೆ ಸೀಮಿತವಾಗಿದ್ದು, ರಾತ್ರಿ ಸಂಚಾರಕ್ಕೆ ಸ್ಲೀಪರ್ ಆವೃತ್ತಿ ಅತ್ಯಗತ್ಯವಾಗಿದೆ. ಇದು ಜಾರಿಯಾದರೆ ಕಲಬುರಗಿಯಿಂದ ಬೆಂಗಳೂರಿಗೆ ಕೇವಲ 7-8 ಗಂಟೆಗಳಲ್ಲಿ ಅತ್ಯಂತ ಆರಾಮದಾಯಕವಾಗಿ ತಲುಪಬಹುದು. ವಿಮಾನದಂತಹ ಸೌಲಭ್ಯವಿರುವ ಈ ಸ್ಲೀಪರ್ ರೈಲು ಈ ಭಾಗದ ಉದ್ಯೋಗಿಗಳು ಮತ್ತು ರೋಗಿಗಳಿಗೆ ವರದಾನವಾಗಲಿದೆ.
![]()
ಕಲಬುರಗಿ ವಂದೇ ಭಾರತ್ ಎಕ್ಸ್ ಪ್ರೆಸ್ ಎರಡು ವರ್ಷ ಯಶಸ್ವಿಯಾಗಿ ಪೂರೈಸಿರುವುದು ಹೆಮ್ಮೆಯ ವಿಷಯ. ಶೇ.103ರಷ್ಟು ಪ್ರಯಾಣಿಕರ ದಟ್ಟಣೆಯೊಂದಿಗೆ 5.72 ಲಕ್ಷ ಜನರಿಗೆ ಈ ರೈಲು ವೇಗದ ಸೇವೆ ನೀಡಿದೆ. ಪ್ರಧಾನಿ ಮೋದಿಯವರ ಸಂಪರ್ಕ ಕ್ರಾಂತಿಯ ಕನಸು ಈ ಮೂಲಕ ಸಾಕಾರಗೊಂಡಿದ್ದು, ಪ್ರಯಾಣಿಕರು ಈ ಸೇವೆಯನ್ನು ಇನ್ನಷ್ಟು ಸದುಪಯೋಗ ಪಡಿಸಿಕೊಳ್ಳಬೇಕು.
-ಡಾ. ಉಮೇಶ್ ಜಾಧವ್, ಮಾಜಿ ಲೋಕಸಭಾ ಸದಸ್ಯ
![]()
ಕಲಬುರಗಿ- ಬೆಂಗಳೂರು ವಂದೇ ಭಾರತ್ ಎಕ್ಸ್ʼಪ್ರೆಸ್‌ನ ಅಭೂತಪೂರ್ವ ಯಶಸ್ಸಿಗೆ ಪ್ರಯಾಣಿಕರ ಅದ್ಭುತ ಸ್ಪಂದನೆಯೇ ಕಾರಣ. ಈ ಮೊದಲು 10-12 ಗಂಟೆ ಹಿಡಿಯುತ್ತಿದ್ದ ಪ್ರಯಾಣದ ಅವಧಿಯನ್ನು ಈ ರೈಲು ಕೇವಲ 8 ಗಂಟೆಗೆ ಇಳಿಸಿದೆ. ಪ್ರಸ್ತುತ ಎರಡೂ ದಿಕ್ಕು ಗಳಲ್ಲಿ ಶೇ.103ಕ್ಕೂ ಅಧಿಕ ಆಸನ ಭರ್ತಿಯೊಂದಿಗೆ ಸಂಚರಿಸುತ್ತಿರುವುದು ಈ ರೈಲಿನ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಇದು ಪ್ರಯಾಣಿಕರಿಗೆ ಅತ್ಯಂತ ವೇಗದ ಮತ್ತು ವಿಶ್ವದರ್ಜೆ ಯ ಪ್ರಯಾಣದ ಅನುಭವ ನೀಡುತ್ತಿದೆ.
-ವಿಕ್ರಮ್ ಎಸ್. ಸಾರ್ವಜನಿಕ ಸಂಪರ್ಕ ಅಧಿಕಾರಿ, ಸೋಲಾಪುರ ವಿಭಾಗ.