Vande Bharat Express: ರಾಜ್ಯದ ವಂದೇ ಭಾರತ್ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ; ಮಾ.15ರಿಂದ ಜಾರಿ
Indian Railways: ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್, ಬೆಂಗಳೂರು-ಧಾರವಾಡ, ಬೆಳಗಾವಿ-ಬೆಂಗಳೂರು ಸೇರಿ ವಿವಿಧ ಮಾರ್ಗಗಳಲ್ಲಿ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ನೈರುತ್ಯ ರೈಲ್ವೆಯು ಪ್ರಕಟಿಸಿರುವ ಹೊಸ ವೇಳಾಪಟ್ಟಿಯ ಮಾಹಿತಿ ಇಲ್ಲಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ (ಸಂಗ್ರಹ) -
ಬೆಂಗಳೂರು: ನೈರುತ್ಯ ರೈಲ್ವೆಯು ವಂದೇ ಭಾರತ್ ರೈಲುಗಳ (Vande Bharat Express) ವೇಳಾಪಟ್ಟಿಯನ್ನು ನಿಗದಿತ ನಿಲ್ದಾಣಗಳಲ್ಲಿ ಪರಿಷ್ಕರಿಸಿದೆ. ಈ ಹೊಸ ವೇಳಾಪಟ್ಟಿಯು ಮಾ.15ರಿಂದ ಜಾರಿಗೆ ಬರಲಿದೆ. ಯಾವೆಲ್ಲಾ ಮಾರ್ಗಗಳ ನಡುವೆ ಸಂಚರಿಸುವ ರೈಲುಗಳ ವೇಳಾಪಟ್ಟಿ ಬದಲಾಗಿದೆ ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ.
1.ರೈಲು ಸಂಖ್ಯೆ 20669: ಹುಬ್ಬಳ್ಳಿ-ಪುಣೆ
ಎಸ್‌ಎಸ್‌ಎಸ್ ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಳಗಾವಿಯಲ್ಲಿ ಬೆಳಗ್ಗೆ 7:05ರಿಂದ 07:10 ಗಂಟೆ ಮತ್ತು ಘಟಪ್ರಭಾದಲ್ಲಿ ಬೆಳಗ್ಗೆ 07:48ರಿಂದ 07:50ರವರೆಗೆ ನಿಲುಗಡೆಯಾಗಲಿದೆ.
2.ರೈಲು ಸಂಖ್ಯೆ 20661: ಬೆಂಗಳೂರು-ಧಾರವಾಡ
ಕೆಎಸ್‌ಆರ್ ಬೆಂಗಳೂರು-ಧಾರವಾಡ ದೇ ಭಾರತ್ ಎಕ್ಸ್‌ಪ್ರೆಸ್ ರೈಲು ದಾವಣಗೆರೆಯಲ್ಲಿ ಬೆಳಿಗ್ಗೆ 09:30ರಿಂದ 09:32ರವರೆಗೆ ಹಾಗೂ ಹಾವೇರಿಯಲ್ಲಿ ಬೆಳಗ್ಗೆ 10:20ರಿಂದ 10:22ರವರೆಗೆ ಮತ್ತು ಎಸ್‌ಎಸ್‌ಎಸ್ ಹುಬ್ಬಳ್ಳಿ ಬೆಳಗ್ಗೆ 11:15ರಿಂದ 11:20ರವರೆಗೆ ನಿಲುಗಡೆಯಾಗಲಿದೆ.
3.ರೈಲು ಸಂಖ್ಯೆ 20662: ಧಾರವಾಡ- ಬೆಂಗಳೂರು
ಧಾರವಾಡ-ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹಾವೇರಿಯಲ್ಲಿ 14:48ರಿಂದ 14:50ರವರೆಗೆ ಮತ್ತು ದಾವಣಗೆರೆಯಲ್ಲಿ 15:33ರಿಂದ 15:35ರವರೆಗೆ ನಿಲುಗಡೆಯಾಗಲಿದೆ. ತುಮಕೂರು ನಿಲ್ದಾಣದ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಹಾಗೂ ಯಶವಂತಪುರ ನಿಲ್ದಾಣಕ್ಕೆ 19:21ರಿಂದ 19:23ರವರೆಗೆ ತಲುಪಿ, ನಿರ್ಗಮಿಸಲಿದೆ.
4. ರೈಲು ಸಂಖ್ಯೆ 26751: ಬೆಳಗಾವಿ-ಬೆಂಗಳೂರು
ಬೆಳಗಾವಿ-ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹಾವೇರಿಯಲ್ಲಿ ಬೆಳಗ್ಗೆ 08:42ತಿಂದ 08:44 ಗಂಟೆಗೆ, ದಾವಣಗೆರೆಯಲ್ಲಿ ಬೆಳಗ್ಗೆ 09:28ರಿಂದ 09:30ವರೆಗೆ, ತುಮಕೂರಿನಲ್ಲಿ 12:15ರಿಂದ 12:17ವರೆಗೆ ಮತ್ತು ಯಶವಂತಪುರದಲ್ಲಿ 13:23ರಿಂದ 13:25ರವರೆಗೆ ನಿಲುಗಡೆಯಾಗಲಿದೆ.
5. ರೈಲು ಸಂಖ್ಯೆ 20704: ಯಶವಂತಪುರ-ಕಾಚಿಗೂಡ
ಯಶವಂತಪುರ-ಕಾಚಿಗೂಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹಿಂದೂಪುರ ನಿಲ್ದಾಣದಲ್ಲಿ 15:55ರಿಂದ 15:57ರವರೆಗೆ ನಿಲುಗಡೆಗೊಳ್ಳಲಿದೆ. ಅದೇ ರೀತಿ ರೈಲು ಸಂಖ್ಯೆ 20703 ಕಾಚಿಗುಡ-ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ಹಿಂದೂಪುರದಲ್ಲಿ 12:17ರಿಂದ 12:19ವರೆಗೆ ನಿಲುಗಡೆಯಾಗಲಿದೆ.
6. ರೈಲು ಸಂಖ್ಯೆ 22231: ಕಲಬುರಗಿ-ಬೆಂಗಳೂರು
ಕಲಬುರಗಿ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ಬೆಳಗ್ಗೆ 11:13ರಿಂದ 11:15ರವರೆಗೆ ಮತ್ತು ಯಲಹಂಕದಲ್ಲಿ 12:58ರಿಂದ 13:00ರವರೆಗೆ ನಿಲುಗಡೆಯಾಗಲಿದೆ. ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 22232 ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ಯಲಹಂಕದಲ್ಲಿ 15:09ರಿಂದ 15:11ರವರೆಗೆ ಮತ್ತು ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ 16:45ರಿಂದ 16:47ರವರೆಗೆ ನಿಲುಗಡೆಯಾಗಲಿದೆ.
7.ರೈಲು ಸಂಖ್ಯೆ 20642: ಕೊಯಮತ್ತೂರು-ಬೆಂಗಳೂರು
ಕೊಯಮತ್ತೂರು-ಬೆಂಗಳೂರು ಕಂಟೋನ್ಮೆಂಟ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹೊಸೂರು ನಿಲ್ದಾಣದಲ್ಲಿ 12:13ರಿಂದ 12:15 ರವರೆಗೆ ನಿಲುಗಡೆಯಾಗಲಿದೆ.