ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Namo Kuteera: ವೃದ್ದೆಯ ಕತ್ತಲ ಬದುಕಿಗೆ 'ನಮೋ ಕುಟೀರ'ದ ಬೆಳಕು

ಗ್ರಾಮ ಪಂಚಾಯಿತಿ ನೀಡಿದ್ದ ಪುಟ್ಟ ಗೂಡಂಗಡಿಯೇ ಅವರಿಗೆ ಮನೆ. 76ರ ಇಳಿವಯಸ್ಸಿನ ವೃದ್ಧ ತಾಯಿ, ಜತೆಗೆ ವಿಶೇಷಚೇತನ ಮಗ. ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ನವಗ್ರಾಮದಲ್ಲಿ ಬದುಕಿನ ಬಂಡಿ ಎಳೆಯುವುದೇ ದುಸ್ತರವಾಗಿದ್ದ ಈ ಅಸಹಾಯಕ ಕುಟುಂಬದ ಕಣ್ಣೀರ ಕಥೆಗೆ ಈಗ ಹೊಸ ಆಶಾಕಿರಣ ಮೂಡಿದೆ.

ಜಿತೇಂದ್ರ ಕುಂದೇಶ್ವರ, ಮಂಗಳೂರು

ಗ್ರಾಮ ಪಂಚಾಯಿತಿ ನೀಡಿದ್ದ ಪುಟ್ಟ ಗೂಡಂಗಡಿಯೇ ಅವರಿಗೆ ಮನೆ. 76ರ ಇಳಿವಯಸ್ಸಿನ ವೃದ್ಧ ತಾಯಿ, ಜತೆಗೆ ವಿಶೇಷಚೇತನ ಮಗ. ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ನವಗ್ರಾಮದಲ್ಲಿ ಬದುಕಿನ ಬಂಡಿ ಎಳೆಯುವುದೇ ದುಸ್ತರವಾಗಿದ್ದ ಈ ಅಸಹಾಯಕ ಕುಟುಂಬದ ಕಣ್ಣೀರ ಕಥೆಗೆ ಈಗ ಹೊಸ ಆಶಾಕಿರಣ ಮೂಡಿದೆ. ತಾವೇ ಸ್ವತಃ ಕರುಳಿನ ಕ್ಯಾನ್ಸರ್ ನಂತಹ ಮಾರಕ ರೋಗದೊಂದಿಗೆ ಸೆಣಸಾಡುತ್ತಿದ್ದರೂ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಷ್ಟಕ್ಕೆ ಮಿಡಿಯುವ ಗುಣ ಹೊಂದಿರುವ ಮೈಸೂರು ಎಲೆಕ್ಟ್ರಿಕಲ್ಸ್ ಇಂಡಸ್ಟ್ರೀಸ್‌ನ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರು ಈ ತಾಯಿ-ಮಗನ ಬಾಳಿಗೆ ನೆರಳಾಗಲು ಮುಂದಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಗೌರವಾರ್ಥ ತಾವು ನಿರ್ಮಿಸುತ್ತಿರುವ ಸೇವಾ ಸರಣಿಯ 9ನೇ ನಮೋ ಕುಟೀರ(Namo Kuteera)ವನ್ನು ಈ ಕುಟುಂಬಕ್ಕೆ ನಿರ್ಮಿಸಿಕೊಡುವುದಾಗಿ ಅವರು ಘೋಷಿಸಿದ್ದಾರೆ.

ಕರುಣಾಜನಕ ಬದುಕು: ಮೂಲತಃ ಶಿರಸಿಯವರಾದ ಮಂಜುನಾಥ್ ಭಟ್ ವಿಶೇಷಚೇತನ ರಾಗಿದ್ದು, ತಮ್ಮ 76 ವರ್ಷದ ವೃದ್ಧ ತಾಯಿಯೊಂದಿಗೆ ನವಗ್ರಾಮದಲ್ಲಿ ನೆಲೆಸಿದ್ದಾರೆ. ಇರಲು ಸ್ವಂತ ಸೂರಿಲ್ಲದೆ, ಪಂಚಾಯತ್ ನೀಡಿದ ಚಿಕ್ಕ ಗೂಡಂಗಡಿಯಲ್ಲೇ ಅತ್ಯಂತ ಸಂಕಷ್ಟದ ದಿನಗಳನ್ನು ದೂಡುತ್ತಿದ್ದರು. ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಈ ಕುಟುಂಬದ ದಯನೀಯ ಸ್ಥಿತಿಯನ್ನು ಸಂತೋಷ್ ರೈ ಅವರ ಗಮನಕ್ಕೆ ತಂದಿದ್ದರು. ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಸಂತೋಷ್ ರೈ, ತಾಯಿ-ಮಗನ ಕಣ್ಣೀರ ಕಥೆಯನ್ನು ಕೇಳಿ ಭಾವುಕರಾದರು. ಇವರಿಗೆ ತಕ್ಷಣವೇ ಸುಸಜ್ಜಿತ ಮನೆಯಾಗಬೇಕು ಎಂದು ನಿರ್ಧರಿಸಿದ ಅವರು, ಸ್ಥಳದಲ್ಲೇ 9ನೇ ನಮೋ ಕುಟೀರ ನಿರ್ಮಾಣದ ಸಂಕಲ್ಪ ತೊಟ್ಟರು. ಅಷ್ಟೇ ಅಲ್ಲ, ನಾಳೆಯಿಂದಲೇ ಮನೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸುವಂತೆ ಸೂಚನೆ ನೀಡಿ, ಅತಿ ಶೀಘ್ರದಲ್ಲಿ ನೂತನ ಮನೆಯ ಕೀಲಿ ಕೈ ಹಸ್ತಾಂತರಿಸುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: Shashil G. Namoshi in lead: ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ: ಮೊದಲ ಸುತ್ತಿನಲ್ಲಿ ಬಿಜೆಪಿಯ ನಮೋಶಿಗೆ 1,536 ಮತಗಳ ಮುನ್ನಡೆ

ಜಾತಿ-ಧರ್ಮದ ಎಲ್ಲೆ ಮೀರಿ ಸಹಾಯಹಸ್ತ: ಇದೀಗ ಜಾತಿ ಧರ್ಮದ ಎಲ್ಲೆ ಮೀರಿ, ಗೂಡಂಗಡಿಯಲ್ಲಿ ನರಳುತ್ತಿದ್ದ ಶಿರಸಿ ಮೂಲದ ಬ್ರಾಹ್ಮಣ ಕುಟುಂಬದ ವೃದ್ಧ ತಾಯಿ ಮತ್ತು ವಿಶೇಷ ಚೇತನ ಮಗನಿಗೆ 9ನೇ ನಮೋ ಕುಟೀರದ ಮೂಲಕ ಹೊಸ ಬದುಕು ಕಟ್ಟಿಕೊಡಲು ಮುಂದಾಗಿರುವ ಸಂತೋಷ್ ರೈ ಅವರ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಕ್ಯಾನ್ಸರ್‌ ಮೀರಿದ ಸೇವಾಯಜ್ಞ

ಇತ್ತೀಚೆಗಷ್ಟೇ ಸುದೀರ್ಘ ಶಸ್ತ್ರಚಿಕಿತ್ಸೆ, ಕೀಮೋಥೆರಪಿ ಹಾಗೂ ರೇಡಿಯೇಷನ್ ಚಿಕಿತ್ಸೆಯ ನೋವು ಅನುಭವಿಸಿ ಚೇತರಿಸಿಕೊಳ್ಳುತ್ತಿರುವ ಸಂತೋಷ್ ರೈ ಅವರ ಜೀವನೋತ್ಸಾಹವೇ ಬೇರೆಯವರಿಗೆ ನೆರವಾಗುವುದರಲ್ಲಿ ಅಡಗಿದೆ. ಈ ಹಿಂದೆ ಜಿಪಂ ಸದಸ್ಯರಾಗಿದ್ದಾಗ ತಮ್ಮ ಸಂಪೂರ್ಣ ಗೌರವಧ ನವನ್ನು 162 ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಮೀಸಲಿಟ್ಟಿದ್ದ ಅವರು, ಈಗ ತಮ್ಮ ಸ್ವಂತ ಸಂಪಾ ದನೆಯಲ್ಲಿ ಬಡವರಿಗೆ 100 ಮನೆಗಳನ್ನು ಕಟ್ಟಿಕೊಡುವ ಮಹಾದಾಸೆ ಹೊಂದಿದ್ದಾರೆ. ಈಗಾಗಲೇ 8 ನಮೋ ಕುಟೀರಗಳನ್ನು ಪೂರ್ಣಗೊಳಿಸಿ ಅರ್ಹ ಬಡ ಕುಟುಂಬಗಳಿಗೆ ಹಸ್ತಾಂತರಿಸಿರುವ 9ನೇ ಯೋಜನೆ ಕೈಗೆತ್ತಿಕೊಂಡಿದ್ದಾರೆ.