ರಂಜಿತ್ ಎಚ್.ಅಶ್ವತ್ಥ ಬೆಂಗಳೂರು
ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿ 3 ರಿಂದ 1 ಕಿಮೀ.ಗೆ ಇಳಿಕೆ ವನ್ಯ ಸಂಘರ್ಷದ ಮೂಲ
ಸಫಾರಿಯನ್ನು ನಿರ್ಬಂಧಿಸಿರುವ ಅರಣ್ಯ ಇಲಾಖೆ ಸಚಿವರಿಗೆ, ಅರಣ್ಯವನ್ನು ಕಾಪಾಡಲು ಪರಿಸರ ಸೂಕ್ಷ್ಮ ಪ್ರದೇಶವನ್ನು ತಗ್ಗಿಸಬಾರದು ಎನ್ನುವ ಸಣ್ಣ ಆಲೋಚನೆಯೂ ಬಂದಂತಿಲ್ಲ. 60 ವರ್ಷ ಗಳಿಂದ ಇಲ್ಲಿ ಹುಲಿ ದಾಳಿಯ ಗಲಾಟೆ ಏಕಾಏಕಿ ಶುರುವಾಗಲೂ, ಅರಣ್ಯ ಇಲಾಖೆಯ ಕೆಟ್ಟ ತೀರ್ಮಾನವೇ ಕಾರಣ ಎನ್ನಲಾಗುತ್ತಿದೆ.
ಈ ಹಿಂದೆ ಬಂಡೀಪುರ, ನಾಗರಹೊಳೆ ಭಾಗದಲ್ಲಿ ಅರಣ್ಯದ ಅಂಚಿನಿಂದ ಮೂರು ಕಿಮೀ ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ, ಆ ಪ್ರದೇಶದಲ್ಲಿ ಯಾವುದೇ ಕಟ್ಟಡ ಕಾಮಗಾರಿಗೆ ಅಥವಾ ಕೃಷಿಗೆ ಅವಕಾಶ ನೀಡುತ್ತಿರಲಿಲ್ಲ. ಇದರಿಂದ ಪ್ರಾಣಿಗಳು ಕಾಡಿನಿಂದ ಹೊರ ಬಂದರೂ ಮನುಷ್ಯರ ಸಂಪರ್ಕ ಸಿಗುತ್ತಿರಲಿಲ್ಲ. ಆದರೆ ಸಚಿವ ಸಂಪುಟ ಉಪಸಮಿತಿ ಈ ನಿರ್ಬಂಧವನ್ನು ಮೂರು ಕಿಮೀ ನಿಂದ ಒಂದು ಕಿಲೋ ಮೀಟರ್‌ಗೆ ಇಳಿಸಿದೆ.
ಸಂಪುಟ ಉಪಸಮಿತಿಯ ಈ ತೀರ್ಮಾನದಿಂದ ಕಾಡಿನ ಸಮೀಪ ಕಟ್ಟಡ ಕಾಮಗಾರಿಗಳ ಭಾರಿ ಪ್ರಮಾಣದಲ್ಲಿ ನಡೆಯುತ್ತಿವೆ. ಇದರಿಂದ ನೈಸರ್ಗಿಕ ಅರಣ್ಯ ಹಾಗೂ ವನ್ಯಜೀವಿಗಳಿಗೆ ಸಮಸ್ಯೆ ಯಾಗುತ್ತಿದೆ. ಇಂತಹ ಸೂಕ್ಷ್ಮ ವಿಷಯವನ್ನು ತಜ್ಞರು, ಸ್ಥಳೀಯರೊಂದಿಗೆ ಚರ್ಚಿಸದೇ ಏಕಾಏಕಿ ತೀರ್ಮಾನ ಕೈಗೊಂಡಿರುವ ಅರಣ್ಯ ಇಲಾಖೆ, ಇದೇ ರೀತಿ ಸಫಾರಿ ನಿರ್ಬಂಧಿಸುವ ಬಾಲಿಶ ತೀರ್ಮಾನವನ್ನು ಕೈಗೊಂಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Safari Bandh: ಸುಗ್ಗಿ ಕಾಲದಲ್ಲಿ ಸಫಾರಿ ಬಂದ್; ರೆಸಾರ್ಟ್ʼಗಳೆಲ್ಲ ಖಾಲಿ ಖಾಲಿ
ಕಾಡಂಚಿನಲ್ಲಿ ಶುಂಠಿ ಹಾವಳಿ: ಪರಿಸರ ಸೂಕ್ಷ್ಮ ಪ್ರದೇಶದ ಪ್ರಮಾಣವನ್ನು ತಗ್ಗಿಸಿದ್ದರಿಂದ ಕೇರಳ ಹಾಗೂ ಕರ್ನಾಟಕದವರು ಬಂಡೀಪುರ ಹಾಗೂ ನಾಗರಹೊಳೆ ಅಭಯಾರಣ್ಯಕ್ಕೆ ಹೊಂದಿ ಕೊಂಡಂತೆ ಜಮೀನು ಖರೀದಿಸಿ, ಶುಂಠಿ ಖರೀದಿಸುತ್ತಿದ್ದಾರೆ. ಒಮ್ಮೆ ಶುಂಠಿ ಬೆಳೆದರೆ, ಮತ್ತೊಮ್ಮೆ ಅದೇ ಜಮೀನಿನಲ್ಲಿ ಬೆಳೆಯಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಹೊಸ ಹೊಸ ಜಮೀನುಗಳನ್ನು ಖರೀದಿಸುತ್ತಿದ್ದಾರೆ.
ಈ ರೀತಿ ಹೊಸದಾಗಿ ಖರೀದಿಸುವವರು, ಹೆಡಿಯಾಳ, ಸರಗೂರು ಸುತ್ತಮುತ್ತ ಪರಿಸರ ಸೂಕ್ಷ್ಮ ಪ್ರದೇಶದ ಮೇಲೆ ಕಣ್ಣಿಟ್ಟು ಜಮೀನು ಮಾಡುತ್ತಿದ್ದಾರೆ. ಇದು ಮಾನವ-ವನ್ಯಜೀವಿಗಳ ಸಂಘರ್ಷಕ್ಕೆ ಪ್ರಮುಖ ಕಾರಣವಾಗಿದೆ.
ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ, ರೆಸಾರ್ಟ್, ಹೋಮ್ ಸ್ಟೇ ಮಾಲೀಕರಿಗೆ, ಸ್ಥಳೀಯ ಜನರಿಗೆ ಈ ವಿಷಯ ಗೊತ್ತಿದ್ದರೂ ಅರಣ್ಯ ಇಲಾಖೆಯ ಮೇಲಾಧಿಕಾರಿಗಳು, ಸಚಿವರು ಇದನ್ನು ಗಂಭೀರವಾಗಿ ಪರಿಗಣಿ ಸುತ್ತಿಲ್ಲ. ಭೌಗೋಳಿಕವಾಗಿ ಎದುರಾಗುತ್ತಿರುವ, ಪ್ರಾಟಿಕಲ್ ಸಮಸ್ಯೆಯನ್ನು ಗಮನಿಸದೇ, ದಾಳಿ ನಡೆಯುತ್ತಿರುವ ಸ್ಥಳದಿಂದ 60 ಕಿಮೀ ದೂರದಲ್ಲಿರುವ ಸಫಾರಿಗೆ ನಿರ್ಬಂಧಿಸುವ ಕೆಟ್ಟ ತೀರ್ಮಾನ ಕೈಗೊಳ್ಳುವುದಷ್ಟೇ, ತಮ್ಮ ತೀರ್ಮಾನವೇ ಸರಿ ಎನ್ನುವ ಭಂಡತನ ಪ್ರದರ್ಶನ ಮಾಡು ತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಅರಣ್ಯದೊಳಗೆ ಜೆಸಿಬಿಗೇನು ಕೆಲಸ?
ಮಾನವ-ವನ್ಯಜೀವಿಗಳ ಸಂಘರ್ಷ ತಡೆಗೆ ಎನ್ನುವ ‘ಬಾಲಿಶ’ ಕಾರಣ ನೀಡಿ ಸಫಾರಿಯನ್ನು ಸ್ಥಗಿತ ಗೊಳಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳೇ ಅಭಯಾರಣ್ಯ, ದಟ್ಟ ಕಾನನದೊಳಗೆ ಜೆಸಿಬಿಗಳನ್ನು ಬಿಟ್ಟು ಕೆಲಸ ಮಾಡಿಸುತ್ತಿದ್ದಾರೆ. ಹಾಗೇ ನೋಡಿದರೆ, ನೈಸರ್ಗಿಕವಾಗಿ ಅರಣ್ಯವಿರುವಂತೆ ನೋಡಿ ಕೊಳ್ಳುವುದಷ್ಟೇ ಸಿಬ್ಬಂದಿಯ ಕೆಲಸ. ಅರಣ್ಯದೊಳಗೆ ಬೀಳುವ ಮರಗಳನ್ನು ತೆರವು ಗೊಳಿಸುವ ಅಥವಾ ಸಾಯುವ ಪ್ರಾಣಿಗಳನ್ನಾಗಿ ಎತ್ತುವ ‘ಅಧಿಕಾರ’ವೂ ಅರಣ್ಯ ಇಲಾಖೆಯ ಸಿಬ್ಬಂದಿಗಳಿಲ್ಲ. ಹೀಗಿರುವಾಗ, ಅರಣ್ಯದೊಳಗೆ ‘ಜೆಸಿಬಿ’ಗಳನ್ನು ಬಿಟ್ಟು ಕೆಲಸ ಮಾಡಲು ಅಧಿಕಾರ ನೀಡಿದ್ಯಾರು? ಈ ರೀತಿ ಜೆಬಿಸಿಗಳನ್ನು ಬಳಸಿಕೊಂಡು ಮಾಡಿರುವ ಕೆಲಸಗಳಿಂದಲೇ ವನ್ಯಜೀವಿಗಳಿಗೆ ಬೇಕಿರುವಂತಹ ಸ್ಥಳ ಇಲ್ಲವಾಗಿದೆ ಎನ್ನುವ ಆರೋಪವಿದೆ.