ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Safari Bandh: ಸುಗ್ಗಿ ಕಾಲದಲ್ಲಿ ಸಫಾರಿ ಬಂದ್‌; ರೆಸಾರ್ಟ್‌ʼಗಳೆಲ್ಲ ಖಾಲಿ ಖಾಲಿ

ಬಂಡೀಪುರ-ನಾಗರಹೊಳೆ ಭಾಗದ ರೆಸಾರ್ಟ್ ಮಾಲೀಕರು ಇಡೀ ವರ್ಷದ ಲಾಭದ ಶೇ.50ರಷ್ಟು ಲಾಭ ವನ್ನು ಕೇವಲ ಮೂರು ತಿಂಗಳಲ್ಲಿ ಮಾಡಿಕೊಳ್ಳುತ್ತಿದ್ದರು. ಆದರೆ ಅರಣ್ಯ ಇಲಾಖೆಯ ಅವೈಜ್ಞಾನಿಕ ಸಫಾರಿ ನಿರ್ಬಂಧದ ತೀರ್ಮಾನದಿಂದಾಗಿ, ನಷ್ಟ ಇರಲಿ, ಇಷ್ಟು ವರ್ಷದ ಲಾಭ ವನ್ನೂ ಕಳೆದು ಕೊಳ್ಳುವ ಆತಂಕ ರೆಸಾರ್ಟ್ ಮಾಲೀಕರದ್ದಾಗಿದೆ.

ಸುಗ್ಗಿ ಕಾಲದಲ್ಲಿ ಸಫಾರಿ ಬಂದ್‌; ರೆಸಾರ್ಟ್‌ʼಗಳೆಲ್ಲ ಖಾಲಿ ಖಾಲಿ

-

ರಂಜಿತ್ ಎಚ್. ಅಶ್ವತ್ಥ ಬೆಂಗಳೂರು

ಪ್ರವಾಸಿ ಋತುವಿನಲ್ಲಿಯೇ ಬಂದ್, ಆರೇಳು ತಿಂಗಳ ಬುಕ್ಕಿಂಗ್ ರದ್ದು ಮಾಡುತ್ತಿರುವ ವಿದೇಶಿ ಪ್ರವಾಸಿಗರು

ಬಂಡೀಪುರ-ನಾಗರಹೊಳೆ ಭಾಗದ ರೆಸಾರ್ಟ್ ಮಾಲೀಕರು ಇಡೀ ವರ್ಷದ ಲಾಭದ ಶೇ.50ರಷ್ಟು ಲಾಭವನ್ನು ಕೇವಲ ಮೂರು ತಿಂಗಳಲ್ಲಿ ಮಾಡಿಕೊಳ್ಳುತ್ತಿದ್ದರು. ಆದರೆ ಅರಣ್ಯ ಇಲಾಖೆಯ ಅವೈಜ್ಞಾನಿಕ ಸಫಾರಿ ನಿರ್ಬಂಧದ ತೀರ್ಮಾನದಿಂದಾಗಿ, ನಷ್ಟ ಇರಲಿ, ಇಷ್ಟು ವರ್ಷದ ಲಾಭ ವನ್ನೂ ಕಳೆದುಕೊಳ್ಳುವ ಆತಂಕ ರೆಸಾರ್ಟ್ ಮಾಲೀಕರದ್ದಾಗಿದೆ.

ಸಾಮಾನ್ಯವಾಗಿ ನವೆಂಬರ್‌ನಿಂದ ಫೆಬ್ರವರಿ ಮೊದಲ ವಾರದವರೆಗೆ ಬಂಡೀಪುರ, ನಾಗರಹೊಳೆ ಭಾಗಕ್ಕೆ ಪ್ರವಾಸಕ್ಕೆಂದು ಪ್ರವಾಸಿಗರು ಆಗಮಿಸುತ್ತಾರೆ. ಇಡೀ ವರ್ಷ ಮಾಡಿಕೊಳ್ಳುವ ಲಾಭದ ಶೇ.50ರಷ್ಟು ಲಾಭ ಈ ಮೂರ್ನಾಲ್ಕು ತಿಂಗಳಲ್ಲಿ ರೆಸಾರ್ಟ್ ಮಾಡಿಕೊಳ್ಳುತ್ತಾರೆ. ಅದರರ್ಥ, ಈ ಮೂರ‍್ನಾಲ್ಕು ತಿಂಗಳು ವೈಲ್ಡ್ ಲೈಫ್ ಪ್ರವಾಸೋದ್ಯಮದ ‘ಸುಗ್ಗಿ’ ಕಾಲ. ಆದರೆ ಹೆಡಿಯಾಳದಲ್ಲಿ ನಡೆದ ಹುಲಿ ದಾಳಿಗೆ ಕಾರಣ ತಿಳಿದುಕೊಳ್ಳುವ ಗೋಜಿಗೆ ಹೋಗದೆ, ಸಫಾರಿಯನ್ನು ಏಕಾಏಕಿ ನಿಲ್ಲಿಸಿದ್ದರಿಂದ ಲಾಭದ ನಿರೀಕ್ಷೆಯಲ್ಲಿದ್ದ ರೆಸಾರ್ಟ್ ಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಾಮಾನ್ಯವಾಗಿ ಕಬಿನಿ, ಬಂಡೀಪುರ ಸುತ್ತಮುತ್ತಲಿನ ಐಷಾರಾಮಿ ರೆಸಾರ್ಟ್‌ಗಳು ಸೇರಿದಂತೆ ಎಲ್ಲ ರೆಸಾರ್ಟ್‌ಗಳು ವಾರಾಂತ್ಯದಲ್ಲಿ ಶೇ.85ರಿಂದ 80ರಷ್ಟು ಭರ್ತಿಯಾಗಿರುತ್ತಿತ್ತು.

ಇದನ್ನೂ ಓದಿ: Tigers in Safari: ಅಮಾಯಕ ಹುಲಿಗಳು ಮಾಡಿದ ತಪ್ಪಾದರೂ ಏನು ?

ಇನ್ನುಳಿದ ದಿನದಲ್ಲಿ ಶೇ.60ರಷ್ಟು ಭರ್ತಿಯಾಗಿರುತ್ತಿತ್ತು. ಆದರೀಗ ವಾರಾಂತ್ಯದಲ್ಲಿಯೇ ರೆಸಾರ್ಟ್‌ʼ ಗಳು ಶೇ.40ರಷ್ಟು ಭರ್ತಿಯಾದರೆ ಹೆಚ್ಚು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೆಲ ರೆಸಾರ್ಟ್‌ಗಳಲ್ಲಿ ಪ್ರವಾಸಿಗರ ಸಂಖ್ಯೆ ‘ಶೂನ್ಯ’ಕ್ಕೆ ಇಳಿದಿದೆ. ಆದರೆ ಒಂದೊಂದು ರೆಸಾರ್ಟ್‌ನಲ್ಲಿ 30 ರಿಂದ 40 ಸಿಬ್ಬಂದಿಯಿರುವುದರಿಂದ, ಅವರನ್ನು ಕೆಲಸದಿಂದ ತೆಗೆಯಲು ಆಗದೇ, ವೇತನ ಕೊಟ್ಟು ಉಳಿಸಿಕೊಳ್ಳಲು ಆಗದಂತಹ ಸ್ಥಿತಿಗೆ ಮಾಲೀಕರು ಬಂದಿದ್ದಾರೆ.

ವಿದೇಶಿ ಪ್ರವಾಸಿಗರು ಆರೇಳು ತಿಂಗಳ ಮೊದಲೇ ತಮ್ಮ ಬುಕ್ಕಿಂಗ್ ಮಾಡಿಕೊಂಡಿರುತ್ತಾರೆ. ಆದರೆ ಕಳೆದ ನಾಲ್ಕು ತಿಂಗಳಿನಿಂದ ಸಫಾರಿ ನಿರ್ಬಂಧ ಹೇರಿರುವುದರಿಂದಾಗಿ ಮುಂದಿನ ಆರು ತಿಂಗಳು ಅಂದರೆ, ಜುಲೈ, ಆಗಸ್ಟ್ ಸಮಯಕ್ಕೆ ಮಾಡಿಕೊಂಡಿರುವ ಬುಕ್ಕಿಂಗ್ ಕ್ಯಾನ್ಸಲ್ ಮಾಡಿಕೊಳ್ಳು ತ್ತಿದ್ದಾರೆ.

ರೆಸಾರ್ಟ್‌ಗಳಿಗೆ ಬೀಗಮುದ್ರೆ?: ಕಬಿನಿ ಸುತ್ತಮುತ್ತಲ ಐಷಾರಾಮಿ ರೆಸಾರ್ಟ್‌ಗಳ ಮಾಲೀಕರು ಸಫಾರಿ ಪುನಾರಂಭವಾಗುವ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದಿರುವುದರಿಂದ ನೂರಾರು ಕಾರ್ಮಿಕ ರಿಗೆ ಸಂಬಳ ಕೊಡುವುದು ಹೇಗೆ ಎನ್ನುವ ಆತಂಕದಲ್ಲಿದ್ದಾರೆ. ಕೆಲ ರೆಸಾರ್ಟ್ ಮಾಲೀಕರು, ಇನ್ನೊಂದು ತಿಂಗಳಲ್ಲಿ ಸಫಾರಿ ಪುನಾರಂಭವಾಗದಿದ್ದರೆ ರೆಸಾರ್ಟ್‌ಗಳನ್ನು ಮುಚ್ಚಿಕೊಂಡು ಹೋಗುತ್ತೇವೆ. ಖಾಲಿ ಕೋಣೆಗಳ ನಿರ್ವಹಣೆ, ವೇತನ ನೀಡುವುದಕ್ಕಿಂತ ರೆಸಾರ್ಟ್‌ಗಳನ್ನೇ ಮುಚ್ಚು ವುದು ಸೂಕ್ತ ಎನ್ನುವ ಮಾತುಗಳನ್ನು ಆಡುತ್ತಿದ್ದಾರೆ.

ಸಫಾರಿ ಚಾಲಕರು ಬೀದಿಗೆ

ಈ ಹಿಂದೆ ಸಫಾರಿ ವಾಹನಗಳನ್ನು ಚಲಾಯಿಸುತ್ತಿದ್ದ ಚಾಲಕರನ್ನು ಅರಣ್ಯ ಇಲಾಖೆ, ಜಂಗಲ್ ಲಾಡ್ಜ್ ನಿಗಮದವರು ಗುತ್ತಿಗೆಯ ಮೇಲೆ ತೆಗೆದುಕೊಂಡಿದ್ದರು. ಆದರೆ ಸಫಾರಿಯನ್ನು ನಾಲ್ಕು ತಿಂಗಳಿನಿಂದ ನಡೆಸದೇ ಇರುವುದರಿಂದ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಈ ರೀತಿ ಕೆಲಸ ಕಳೆದುಕೊಂಡಿರುವ ಬಹುಪಾಲು ಚಾಲಕರಿಗೆ, ಸಫಾರಿಯಲ್ಲಿ ವಾಹನ ಚಲಾಯಿ ಸುವುದರ ಹೊರತು ಬೇರೇನೂ ಕೆಲಸ ಗೊತ್ತಿಲ್ಲ. ಇದೀಗ ಈ ಚಾಲಕರು ಸಫಾರಿಯ ಹೊರತಾಗಿ ಮುಂದೇನು ಮಾಡ ಬೇಕು ಎನ್ನುವುದು ತಿಳಿಯದೆ, ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎನ್ನುವ ಮಾತುಗಳನ್ನು ಕೆಲ ರೆಸಾರ್ಟ್ ಮಾಲೀಕರು ಹೇಳುತ್ತಾರೆ.

ಕೇರಳ, ತ.ನಾಡಿಗೆ ಆದಾಯ

ಕೆಲ ರೆಸಾರ್ಟ್ ಮಾಲೀಕರು ಪ್ರವಾಸಿಗರನ್ನು ಉಳಿಸಿಕೊಳ್ಳಲು ಪ್ರವಾಸಿಗರನ್ನು ನೆರೆ ರಾಜ್ಯದ ವಯನಾಡು, ಮದುಮಲೈನಲ್ಲಿರುವ ಸಫಾರಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಈ ರೆಸಾರ್ಟ್‌ ಗಳಿಂದ ನೆರೆ ರಾಜ್ಯದ ಸಫಾರಿಗಳು 15ರಿಂದ 20 ಕಿ.ಮೀ. ದೂರವಿದ್ದರೂ ಪ್ರವಾಸಿಗರನ್ನು ಸೆಳೆಯಲು ಈ ರೀತಿ ಮಾಡುತ್ತಿದ್ದಾರೆ. ಕರ್ನಾಟಕದ ರೆಸಾರ್ಟ್‌ನವರೂ ಅಲ್ಲಿನ ಸಫಾರಿಗೆ ಕರೆದುಕೊಂಡು ಹೋಗುತ್ತಿರುವುದರಿಂದ ಸಹಜವಾಗಿಯೇ ಅಲ್ಲಿ ಸಫಾರಿ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಕಾಯುವಿಕೆಯ ಸಮಯ ಹಾಗೂ ಸಫಾರಿಗೆ ಕರೆದುಕೊಂಡು ಹೋಗುವ ಸಮಯದಲ್ಲಿಯೂ ತೀವ್ರ ಸಮಸ್ಯೆಯಾಗುತ್ತಿದೆ.

*

ಕೈಗಾರಿಕೆಗಳಿಗೆ ನೀಡುವಂತೆ ರೆಸಾರ್ಟ್ ಗಳ ಆರಂಭಕ್ಕೆ ಸರಕಾರ ವಿಶೇಷ ರಿಯಾಯಿತಿ ಅಥವಾ ಜಾಗವನ್ನು ನೀಡುವುದಿಲ್ಲ. ಸಾಲದಲ್ಲಿಯೇ ರೆಸಾರ್ಟ್‌ಗಳನ್ನು ಕಟ್ಟಿರುತ್ತೇವೆ. ಆದರೆ ಯಾವುದೇ ಸಕಾರಣವಿಲ್ಲದೇ ಸಫಾರಿಯನ್ನು ನಿರ್ಬಂಧಿಸುವ ಮೂಲಕ ಪ್ರವಾಸೋದ್ಯಮಕ್ಕೆ ಬಹುದೊಡ್ಡ ಹೊಡೆತವನ್ನು ಸರಕಾರ ನೀಡಿದೆ. ಅರಣ್ಯ ಸಚಿವರ ಈ ಅವೈಜ್ಞಾನಿಕ ತೀರ್ಮಾನದಿಂದ ರೆಸಾರ್ಟ್‌ ನಲ್ಲಿ ಕೆಲಸ ಮಾಡುವ ಕಾರ್ಮಿಕರು ಮಾತ್ರವಲ್ಲದೇ, ಮಾಲೀಕರು ಬೀದಿಗೆ ಬರುವ ಸ್ಥಿತಿಗೆ ಬಂದಿದ್ದೇವೆ.

-ಹೆಸರು ಹೇಳಲು ಇಚ್ಛಿಸದ ರೆಸಾರ್ಟ್ ಮಾಲೀಕ