Fahadh Faasil: ನಿವೃತ್ತಿಯ ಬಳಿಕ ಉಬರ್ ಡ್ರೈವರ್ ಆಗ್ತಾರಂತೆ ಈ ಖ್ಯಾತ ನಟ! ಫ್ಯಾನ್ಸ್ ಫುಲ್ ಶಾಕ್
ವರಥನ್, ಟ್ರಾನ್ಸ್, ವಿಕ್ರಮ್ , ಆವೇಶಂ, ಪುಷ್ಪ ಇತರ ಸಿನಿಮಾ ಖ್ಯಾತಿಯ ನಟ ಫಹಾದ್ ಫಾಸಿಲ್ ಅವರು ಭಾರತೀಯ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟರಾಗಿದ್ದಾರೆ. ಸಿನಿಮಾ ಕೆಲಸದಲ್ಲಿಯೇ ಸದಾ ತಲ್ಲೀನರಾಗಿರುವ ಇವರು ಸಿನಿಮಾ ದಿಂದ ನಿವೃತ್ತರಾದ ಬಳಿಕ ಏನು ಮಾಡುತ್ತಾರೆ ಎಂಬ ವಿಚಾರವನ್ನು ಇತ್ತೀಚಿನ ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ.


ತಿರುವನಂತಪುರಂ: ಮಲಯಾಳಂ ಚಿತ್ರರಂಗದ ಖ್ಯಾತ ನಿರ್ಮಾಪಕ ಹಾಗೂ ನಟರಾದ ಫಹಾದ್ ಫಾಸಿಲ್(Fahadh Faasil) ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಕೆರಲಾ ಕೆಫೆ, ಪ್ರಮಾಣಿ, ಒನ್ ಬೈ ಟು, ಟೆಕ್ ಆಫ್, ಕಾರ್ಬನ್, ವರಥನ್, ಟ್ರಾನ್ಸ್, ವಿಕ್ರಮ್ , ಆವೇಶಂ, ಪುಷ್ಪ ಇತರ ಸಿನಿಮಾ ಖ್ಯಾತಿಯ ನಟ ಫಹಾದ್ ಫಾಸಿಲ್ ಅವರು ಭಾರತೀಯ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟರಾಗಿದ್ದಾರೆ. ಸಿನಿಮಾ ಕೆಲಸದಲ್ಲಿಯೇ ಸದಾ ತಲ್ಲೀನರಾಗಿರುವ ಇವರು ಸಿನಿಮಾದಿಂದ ನಿವೃತ್ತರಾದ ಬಳಿಕ ಏನು ಮಾಡುತ್ತಾರೆ ಎಂಬ ವಿಚಾರವನ್ನು ಇತ್ತೀಚಿನ ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ. ಮಾರೀಸನ್ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಇವರು ತಮ್ಮ ನಿವೃತ್ತಿಯ ಬಳಿಕ ಸ್ಪೇನ್‌ನಲ್ಲಿ ಉಬರ್ ಚಾಲಕನಾಗುವ ಬಗ್ಗೆ ಸಂದರ್ಶನವೊಂದರಲ್ಲಿ ತಿಳಿಸಿದ್ದು ಈ ವಿಚಾರ ತಿಳಿದ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.
ವರ್ಷಕ್ಕೆ ಕೋಟಿ ಕೋಟಿ ಗಳಿಕೆ ಮಾಡಿ ಐಶಾರಾಮಿ ಜೀವನ ನಡೆಸುವ ಹೆಸರಾಂತ ನಟ ಫಹಾದ್ ಫಾಸಿಲ್ ಅವರಿಗೆ ನಿವೃತ್ತಿನಂತರ ಉಬರ್ ಚಾಲಕನಾಗುವ ಆಸೆ ಏಕೆ ಹುಟ್ಟಿ ಕೊಂಡಿತು ಎಂಬ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಅನೇಕ ಚರ್ಚೆ ಕೂಡ ಏರ್ಪಡುತ್ತಿದೆ. ಇದಕ್ಕೆ ಸ್ವತಃ ಫಹಾದ್ ಅವರೆ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಪಾಲ್ಗೊಂಡ ನಟ ಫಹಾದ್ ಫಾಸಿಲ್ ಅವರು ಈ ಬಗ್ಗೆ ಮಾತ ನಾಡಿ, ನಾವು ಕೆಲವು ತಿಂಗಳ ಹಿಂದೆ ಬಾರ್ಸಿಲೋನಾಕ್ಕೆ ತೆರಳಿದ್ದಾಗ ನಾವು ಉಬರ್‌ನಲ್ಲಿ ಪ್ರಯಾಣಿಸಿದ್ದೆವು. ಅಲ್ಲಿ ಉಬರ್ ಚಾಲಕ ನಮ್ಮ ಪ್ರಯಾಣವನ್ನು ಅವಿಸ್ಮರಣೀಯವಾಗಿ ಉಳಿಯುವಂತೆ ಮಾಡಿದ್ದಾರೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕರೆದೊಯ್ಯುವುದು ಕೂಡ ಕಷ್ಟದ ಕೆಲಸವಾಗಿದ್ದು ಅದನ್ನು ಚಾಲಕರು ಬಹಳ ಆರಾಮವಾಗಿ ಮಾಡುತ್ತಾರೆ. ಹೀಗಾಗಿ ನಾನು ಕೂಡ ನಿವೃತ್ತಿಯಾದ ಬಳಿಕ ಉಬರ್ ಚಾಲಕನಾಗಬೇಕೆಂದುಕೊಂಡಿರುವೆ ಎಂದಿದ್ದಾರೆ.
ಉಬರ್ ಚಾಲನೆ ಮಾಡುತ್ತಲೇ ಗ್ರಾಹಕರೊಂದಿಗೆ ಬೆರೆಯುತ್ತೇವೆ. ಅವರ ಹಿನ್ನೆಲೆ ನೋವು ನಲಿವಿನಲ್ಲಿ ನಾವು ಪಾಲುದಾರ ರಾಗುತ್ತೇವೆ. ನನಗೆ ಅವಕಾಶ ಸಿಕ್ಕಾಗಲೆಲ್ಲಾ ನಾನು ಈ ಕೆಲಸ ಮಾಡಲು ಇಚ್ಛಿಸುತ್ತೇನೆ. ಕೇವಲ ಚಾಲನೆ ಮಾಡುವುದು ಮಾತ್ರವಲ್ಲದೆ ನಾವು ಇಷ್ಟಪಡುವ ಕೆಲಸಗಳನ್ನು ಕೂಡ ನಾವು ತೊಡಗಿಸಿಕೊಳ್ಳಲು ಸಹಕಾರಿ ಆಗಲಿದೆ. ಸಾಮಾನ್ಯ ವ್ಯಕ್ತಿಗಳಂತೆ ಕ್ರೀಡೆಯಲ್ಲಿ ತೊಡಗುವುದು, ಟಿವಿ ನೋಡುವುದು,ಟ್ರಾವೆಲ್ ಮಾಡುವುದು ಇಂತಹ ಸಣ್ಣ ಪುಟ್ಟ ವಿಚಾರಗಳು ನಮ್ಮ ಜೀವನದಲ್ಲಿ ವಿಶೇಷ ಮೌಲ್ಯ ಸಿಗಲಿದೆ. ಇದನ್ನು ನಾನು ನನ್ನ ಹೆಂಡತಿಗೆ (ನಜ್ರಿಯಾ ನಜೀಮ್) ಕೂಡ ಹೇಳಿದ್ದು ಅವಳು ಕೂಡ ಇದನ್ನು ಇಷ್ಟಪಟ್ಟಿದ್ದಾಳೆ ಎಂದಿದ್ದಾರೆ.
ಇತ್ತೀಚೆಗಷ್ಟೆ ನಟ ಫಹಾದ್ ಅವರು ಪುಷ್ಪ 2 ಸಿನಿಮಾದಲ್ಲಿ ಎಸ್‌ಪಿ ಭನ್ವರ್ ಸಿಂಗ್ ಶೇಖಾವತ್ ಐಪಿಎಸ್ ಆಗಿ ಕಾಣಿಸಿಕೊಂಡು ಜನಮನ ಗೆದ್ದಿದ್ದರು. ಮಾರೀಸನ್ ಸಿನಿಮಾ ಕೂಡ ರಿಲೀಸ್ ಆಗಿದ್ದು ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಕೂಡ ಪಡೆಯುತ್ತಿದೆ. ಡೋಂಟ್ ಟ್ರಬಲ್ ದ ಟ್ರಬಲ್, ಆಕ್ಸಿಜನ್, ಕರಾಟೆ ಚಂದ್ರನ್ , ಸಫಾರಿ ಇತರ ಚಿತ್ರಗಳನ್ನು ಕೂಡ ಇವರು ಅಭಿನಯಿಸಲಿದ್ದು ಶೀಘ್ರವೇ ಇವರ ನಟನೆಯ ಸಾಲು ಸಾಲು ಸಿನಿಮಾ ತೆರೆ ಮೇಲೆ ಬರುವ ನಿರೀಕ್ಷೆ ಇದೆ.