ಬೆಂಗಳೂರು: ವೃಕ್ಷಗಳನ್ನೇ ಮಕ್ಕಳಾನ್ನಾಗಿ ಕಂಡು ಲೆಕ್ಕವಿಲ್ಲದಷ್ಟು ಮರಗಳನ್ನು ಬೆಳೆಸಿ, ಪೋಷಿಸಿ ಇಡೀ ಜಗತ್ತಿಗೆ ಮಾದರಿಯಾಗಿರುವ ವೃಕ್ಷಮಾತೆ, ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರ ಜೀವನ ಚರಿತ್ರೆ ಈಗ ಸಿನಿಮಾ ರೂಪದಲ್ಲಿ (Kannada New Movie) ಬರಲಿದೆ. ಶ್ರೀಲಕ್ಷ್ಮಿ ವೆಂಕಟೇಶ್ವರ ಪಿಚ್ಚರ್ಸ್ ಬ್ಯಾನರ್ ಅಡಿಯಲ್ಲಿ ದಿಲೀಪ್ ಕುಮಾರ್ ಎಚ್.ಆರ್., ಸೌಜನ್ಯ ಡಿ.ವಿ., ಎ. ಸಂತೋಷ್ ಮುರಳಿ ಹಾಗೂ ಒರಟ ಶ್ರೀ ನಿರ್ಮಾಣದ ಈ ಚಿತ್ರ ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಅವರ ʼವೃಕ್ಷಮಾತೆ ಸಾಲುಮರದ ತಿಮ್ಮಕ್ಕʼ ಕೃತಿ ಆಧಾರಿತವಾಗಿದೆ.
ʼಒರಟ ಐ ಲವ್ ಯುʼ ಖ್ಯಾತಿಯ ನಿರ್ದೇಶಕ ಒರಟ ಶ್ರೀ ಮೊದಲ ಬಾರಿಗೆ ಕಲಾತ್ಮಕ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ನಟಿ ಸೌಜನ್ಯ ತಿಮ್ಮಕ್ಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನೀನಾಸಂ ಅಶ್ವಥ್ ತಿಮ್ಮಕ್ಕನ ಪತಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಎಂ.ಕೆ ಮಠ, ಗಣೇಶ್ ಕೆ ಸರ್ಕಾರ್, ದೀಪ ಡಿ.ಕೆ ಅಂಜನಮ್ಮ, ಭೂಮಿಕಾ, ಪ್ರಕಾಶ್ ಶೆಟ್ಟಿ, ಮನು ಮುಂತಾದವರು ತಾರಾಬಳಗದಲ್ಲಿದ್ದಾರೆ.
ಇತ್ತೀಚೆಗೆ ಚಿತ್ರೀಕರಣ ಪ್ರಾರಂಭವಾಗಿದ್ದು, ತುಮಕೂರು ಜಿಲ್ಲೆಯ ಹುಲಿಕಲ್ ಹಾಗೂ ಮಧುಗಿರಿಯ ಸುತ್ತಮುತ್ತ ಚಿತ್ರೀಕರಣವಾಗಿದೆ. ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ಮುಂದಿನ ವಾರದಲ್ಲಿ ಎರಡನೇ ಶೆಡ್ಯೂಲ್ ಆರಂಭವಾಗಲಿದೆ.
ಈ ಸುದ್ದಿಯನ್ನೂ ಓದಿ | Makeup kit Ideas: ಲಾಂಗ್ ಲಾಸ್ಟಿಂಗ್ ಮೇಕಪ್ ಕಿಟ್‌ಗೆ ಇಲ್ಲಿದೆ 5 ಐಡಿಯಾ
ನಾಗರಾಜ್ ಛಾಯಾಗ್ರಹಣ, ಕೆ. ಗಿರೀಶ್ ಕುಮಾರ್ ಸಂಕಲನ, ಶ್ಯಾಮ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಸಂಭಾಷಣೆ ಹಾಗೂ ಸಾಹಿತ್ಯವನ್ನು ನೆಲ್ಲಿಕಟ್ಟೆ ಸಿದ್ದೇಶ್ ಹಾಗೂ ಒರಟ ಶ್ರೀ ಬರೆದಿದ್ದಾರೆ. ಇತ್ತೀಚೆಗೆ ಚಿತ್ರದ ಶೀರ್ಷಿಕೆಯನ್ನು ಹಿರಿಯ ಬರಹಗಾರ್ತಿ, ಪತ್ರಕರ್ತೆ ಹಾಗೂ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಅವರು ಅನಾವರಣಗೊಳಿಸಿದ್ದಾರೆ.