ಚಿಕ್ಕಬಳ್ಳಾಪುರ: ನಮ್ಮ ನಡುವಿರುವ ವೈವಿದ್ಯಮಯ ಪ್ರಾಕೃತಿಕ ಸಂಪನ್ಮೂಲಗಳು ಮನುಷ್ಯರ ಅಸೆಗಳನ್ನು ಈಡೇರಿಸಬಲ್ಲವೇ ವಿನಃ ದುರಾಸೆಗಳನ್ನಲ್ಲ ಎಂಬ ಗಾಂಧೀಜಿಯ ಮಾತನ್ನು ಅರಿಯುವ ಕೆಲಸ ಯುವ ಪೀಳಿಗೆ ಮಾಡಬೇಕಿದೆ ಎಂದು ಬಹುಭಾಷಾನಟ ಕಿಶೋರ್‌ಕುಮಾರ್(Actor Kishore Kumar)ಕರೆ ನೀಡಿದರು.
ನಗರದ ಕನ್ನಡ ಭವನದಲ್ಲಿ ಉಸಿರಿಗಾಗಿ ಹಸಿರು ಸಂಘಟನೆ ಶುಕ್ರವಾರ ಏರ್ಪಡಿಸಿದ್ದ ದಶಮಾನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುಂದುವರೆದ ರಾಷ್ಟ್ರಗಳು ಪ್ರಕೃತಿಯ ಸಂಪನ್ಮೂಲಗಳನ್ನು ತಮಗೆ ಬೇಕಾದಂತೆ ಬಳಸು ವಂತೆ, ಭಾರತದಲ್ಲಿಯೂ ಕೂಡ ಹುಸಿಯಾದ ಅಭಿವೃದ್ದಿಯ ಕನಸುಗಳನ್ನು ಬಡವರ ಎದೆಗಳಿಗೆ ಬಿತ್ತಲಾಗುತ್ತಿದೆ. ಶಾಲಾ ಕಾಲೇಜು ಮಕ್ಕಳೇ ಮೊದಲಾಗಿ ಬಡವರು ಶ್ರಮಿಕರು ನಾವು ನೀವು ಎಚ್ಚರಗೊಳ್ಳಲಿಲ್ಲ ಎಂದರೆ ಶುದ್ಧವಾದ ಗಾಳಿ, ನೀರು, ಆಹಾರವನ್ನು ಹಣ ಕೊಟ್ಟು ಕೊಳ್ಳಬೇಕಾಗುವ ದಿನಗಳು ದೂರವಿಲ್ಲ ಎಂದರು.
ಇದನ್ನೂ ಓದಿ: IND vs NZ 2nd T20I: ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಭಾರತ ತಂಡ!
ಪ್ರಾಕೃತಿಕ ಸಂಪನ್ಮೂಲಗಳು ಎಲ್ಲರಿಗೂ ಸಮಾನವಾಗಿ ದೊರೆಯುವಂತಾಗಬೇಕಾದರೆ ನೀವೆಲ್ಲಾ ಪ್ರಶ್ನಿಸುವುದನ್ನು ಕಲಿಯಬೇಕು. ಅನ್ಯಾಯದ ವಿರುದ್ಧ ಶೋಷಣೆಯ ವಿರುದ್ಧ, ಅಸಮಾನತೆಯ ವಿರುದ್ಧ, ನಮ್ಮ ಹಕ್ಕುಗಳನ್ನು ನ್ಯಾಯವಾಗಿ ಪಡೆಯಬೇಕಾದರೆ ಅಂಬೇ ಡ್ಕರ್ ಹೇಳಿದಂತೆ ಗುಣಮಟ್ಟದ ಶಿಕ್ಷಣ ಪಡೆಯಬೇಕು. ಸರ್ವರ ಒಳಿತಿಗಾಗಿ ಸಂಘಟಿತ ರಾಗಬೇಕು. ಅನ್ಯಾಯದ ವಿರುದ್ಧ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಮರಗಿಡವನ್ನು ಮಕ್ಕಳು, ಹಳ್ಳಿಯ ಜನ ಪರೋಪಕಾರದ ಉದ್ದೇಶದಿಂದ ಬೆಳೆಸಬಹುದು. ಬೆಳೆದು ದೊಡ್ಡವಾದ ಮೇಲೆ ಅರಣ್ಯದ ಮೇಲೆ ಬಲಾಡ್ಯರು ಬಹುರಾಷ್ಟ್ರೀಯ ಕಂಪನಿಗಳು ಅಭಿವೃದ್ಧಿಯ ಹೆಸರಿನಲ್ಲಿ ದಾಳಿ ಮಾಡಿ ನಾಶಮಾಡುತ್ತವೆ. ಇದಾಗಬೇಕು ಎಂದರೆ ಈ ಭೂಮಿ ನಮ್ಮದು, ಜಲ ನೆಲ ಆಹಾರ ಉಳಿಸಿಕೊಳ್ಳಲು ನೀವೆಲ್ಲಾ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಮನುಷ್ಯ ತನ್ನ ಅಗತ್ಯವನ್ನು ಅರಿತು ಬದುಕು ಕಟ್ಟಿಕೊಳ್ಳಬೇಕು. ಅನಗತ್ಯವಾಗಿ ಯಾವು ದನ್ನು ಬಳಸಬಾರದು. ಹೀಗಾದಲ್ಲಿ, ಇನ್ಯಾರಿಗೋ ದೊರೆಯಬೇಕಾದ ಅವಕಾಶವನ್ನು ನಾವು ಕಸಿದುಕೊಂಡಂತೆ ಆಗಲಿದೆ. ಹೀಗಾಗಿ ಬಟ್ಟೆ, ನೀರು,ಅನ್ನಾಹಾರವನ್ನು ಎಷ್ಟು ಬೇಕೋ ಅಷ್ಟನ್ನು ಬಳಸುವುದನ್ನು ಕಲಿಯಬೇಕು.ಹೀಗಾದಲ್ಲಿ ಪ್ರಕೃತಿಕ ಸಮತೋಲನ ಸಾಧ್ಯವಾಗಲಿದೆ ಎಂದರು.
ಡಾ.ಮನಮೋಹನ್ ಸಿಂಗ್ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ರಮೇಶ್ ಮಾತನಾಡಿ, ನಮ್ಮ ಆಸೆಗಾಗಿ ನೈಸರ್ಗಿಕ ಸಂಪನ್ಮೂಲ ಯಥೇಚ್ಛವಾಗಿ ಬಳಕೆ ಮಾಡುತ್ತಿದ್ದೇವೆ. ಆ ಮೂಲಕ ಪರಿಸರದ ಮೇಲೆ ದಾಳಿ ಮಾಡುತ್ತಿದ್ದೇವೆ. ಇದರ ಬದಲಿಗೆ ಜಾಗೃತಿ ಜವಾಬ್ದಾರಿ ಹೊರಬೇಕು. ಸಂಘಟಿತ ಹೋರಾಟದಿಂದ ಮಾತ್ರ ಪರಿಸರದ ಉಳಿವು ಸಾಧ್ಯ. ಹೀಗಾಗಿ ಉಸಿರುಗಾಗಿ ಹಸಿರು ತಂಡವು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸ ಲಾಗಿದೆ ಎಂದರು.
ಸಸಿ ನೆಡುವುದು ನೈತಿಕವಾದ ಮತ್ತು ಸಾಮಾಜಿಕ ಜವಾಬ್ದಾರಿಯಾಗಬೇಕು. ಭಾಷಣದಿಂದ ಮಾತ್ರ ಕ್ರಾಂತಿ ಆಗುವುದಿಲ್ಲ. ಸಸಿ ನೆಟ್ಟು ಮರೆಯದೆ ಪೋಷಿಸಬೇಕು. ಪರಿಸರ ಮತ್ತು ಮನುಷ್ಯನ ನಡುವೆ ಸಮನ್ವಯತೆ ಸಾಧಿಸಬೇಕು. ಪ್ರಾಕೃತಿಕ ವೈಪರೀತ್ಯಕ್ಕೆ ಬಲಿಪಶುಗಳು ಜನ ಸಾಮಾನ್ಯರೇ ಆಗಿದ್ದಾರೆ. ಸುಸ್ಥಿರ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ಇದನ್ನು ನೆರವೇರಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಒತ್ತಡ ಗುಂಪುಗಳಾಗಿ ಸಂಘಟನೆಗಳು ಕೆಲಸ ಮಾಡಬೇಕು. ಚಿಪ್ಕೋ ಚಳುವಳಿಯಂತಹ ಹೋರಾಟಗಳು ಮತ್ತೆ ಶುರುವಾಗಬೇಕು.ಇದಕ್ಕೆ ಎಲ್ಲರೂ ಕೈಜೋಡಿಸಬೇಕು. ಇಂತಹ ಪ್ರೇರಣೆಯನ್ನು ಹಸಿರು ಉಸಿರು ಸಂಸ್ಥೆ ನೀಡಿದೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಸಚಿವ ಲೋಕನಾಥ್ ಮಾತನಾಡಿ ಜಾಗತಿಕ ತಾಪಮಾನದ ಪರಿಣಾಮಗಳನ್ನು ಅರಿಯಬೇಕು. ಮನೆಯ ಹಿಂದೆ ಮುಂದೆ ಗಿಡಮರ ಬೆಳೆಸಿ, ಕೈತೋಟ ಮಾಡಿಕೊಳ್ಳಿ, ಪ್ಲಾಸ್ಟಿಕ್ ಬಿಸಾಡದೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ, ಆಗದಿದ್ದಲ್ಲಿ ಸಸಿ ಬೆಳೆಸಿ,ನೀವೂ ಬಳಸಿ ಇತರರಿಗೂ ನೀಡಿ ಎಂದು ಹೇಳಿದರು.
ಪ್ರತಿಯೊಬ್ಬರೂ ತಮ್ಮ ತಮಗೆ ಹತ್ತಿ÷ರದವರ ಹುಟ್ಟಿದ ದಿನದ ನೆನಪು ಹಸುರಾಗಿ ಉಳಿಯಲು ಸಸಿ ನೆಡುವ ಸಂಪ್ರದಾಯ ಬೆಳೆಸಿಕೊಳ್ಳಬೇಕು. ಸೈಕಲ್ ಬಳಸುವ ಮೂಲಕ ಡೀಸೆಲ್ ಪೆಟ್ರೋಲ್ ವಾಹನಗಳ ಬಳಕೆ ಕಡಿಮೆ ಮಾಡಿ. ತೈಲೋತ್ಪನ್ನಗಳ ಅವಲಂಬನೆ ಕಡಿಮೆ ಮಾಡಬಹುದು. ಸೂರ್ಯೋದಯಕ್ಕೆ ಮೊದಲು ಹೊರಗೆ ಬನ್ನಿ. ಆರೋಗ್ಯ ವೃದ್ಧಿಯಾಗುತ್ತದೆ. ಪರಿಸರ ಕಲುಷಿತ ಮಾಡದಿರುವ ಉತ್ತಮ ಅಭ್ಯಾಸ ಬೆಳೆಸಿಕೊಳ್ಳಿ ಎಂದು ಹೇಳಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ಮಾತನಾಡಿ, ಪ್ರಪಂಚದಲ್ಲಿ ಒಬ್ಬ ವ್ಯಕ್ತಿಗೆ ಎಷ್ಟು ಮರಗಳ ಆಶ್ರಯ ದೊರೆಯುತ್ತದೆ ಎಂಬುದನ್ನು ನೋಡುವ ಮೂಲಕ ಭಾರತದಲ್ಲಿ ಅರಣ್ಯ ಸಂಪನ್ಮೂಲ ನಾಶವಾಗುತ್ತಿರುವ ಮಾಹಿತಿ ಅರಿಯೋಣ ಎಂದು ಮಾತು ಮುಂದುವರೆಸಿದ ಅವರು ಆಸ್ಟ್ರೇಲಿಯಾದಲ್ಲಿ 3266 ಮರಗಳಿದ್ದರೆ, ಗ್ರೀನ್ ಲ್ಯಾಂಡ್ ದೇಶದಲ್ಲಿ 4966, ಕೆನಡಾ-10163, ಯುಕೆ-699,ಪ್ರಾನ್ 203, ಇಥಿಯೋಪಿಯಾ-143, ಚೈನಾ-130, ಭಾರತಕ್ಕೆ ಬಂದರೆ 28 ಮರಗಳು ಇವೆ. ಇದನ್ನು ನೋಡಿದರೆ ಸಾಕು ನಾವು ಎಲ್ಲಿದ್ದೇವೆ ಎಂದು ಅರಿವಿಗೆ ಬರಲಿದೆ ಎಂದು ಅಂಕಿ ಅಂಶಗಳ ಸಹಿತ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಿದರು.
ಕಿಶೋರ್ ಸಾವಯವ ಕೃಷಿಕರಾಗಿರುವ ಕಾರಣ ಬರಪೀಡಿತ ಜಿಲ್ಲೆಗಳ ಬವಣೆ ಅರಿಯಬೇಕು. ಕೋಲಾರ ಚಿಕ್ಕಬಳ್ಳಾಪುರ ಜನತೆ ಅಪಾಯದಲ್ಲಿ ಇದ್ದೇವೆ. ಹೆಚ್.ಎನ್.ವ್ಯಾಲಿ ನೀರು ಅಪಾಯ ತಂದಿದೊಡ್ಡಿದೆ. ನಾವು ಬಳಸುವ ಅಂತರ್ಜಲದಲ್ಲಿ ಅಪಾಯಕಾರಿ ಯುರೇನಿಯಂ ಇದೇ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಆದರೂ ನಾವು ಎಚ್ಚೆತ್ತಿಲ್ಲ ಎಂದು ಎಂಪ್ರಿ ಸಂಸ್ಥೆ ಹೇಳುತ್ತದೆ. ಭಾರೀ ಲೋಹದ ಅಂಶಗಳು ಇರುವ ತರಕಾರಿ ಬೆಂಗಳೂರು ಜನ ತಿನ್ನುತ್ತಿದ್ದಾರೆ. ಶಾಶ್ವತ ನೀರಾವರಿ ಬೇಕು ಎಂದು ೩ದಶಕಗಳಿಗೂ ಹೆಚ್ಚು ಕಾಲದಿಂದ ಹೋರಾಟ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆದಿರುವ ಮರಳು ಗಣಿಗಾರಿಕೆಗೆ ನಿಲ್ಲಿಸಿ, ಜಿಲ್ಲೆಯ ಭವಿಷ್ಯ ಕಾಪಾಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಉಸಿರಿಗಾಗಿ ಹಸಿರು ಸಂಸ್ಥೆಯ ಡಾ.ಗಂಗಾಧರರೆಡ್ಡಿ, ಶ್ವೇತ.ಜಿ, ಸಾವಯವ ಕೃಷಿಕ ಕಿಶೋರ್, ಆರ್.ಆಂಜನೇಯರೆಡ್ಡಿ, ಕಾರ್ಯದರ್ಶಿ ವೆಂಕಟರೆಡ್ಡಿ ಸಿ.ಆರ್.,ಕುಲಸಚಿವ ಲೋಕನಾಥ್ ಮತ್ತಿತರರು ಇದ್ದರು.
ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿದರು. ವೇದಿಕೆಯಲ್ಲಿ ದಶಮಾನೋತ್ಸವದ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.