Actor Vishnuvardhan: ಡಾ. ವಿಷ್ಣುವರ್ಧನ್‌ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಸಿಎಂಗೆ ಹಿರಿಯ ನಟಿಯರ ಮನವಿ
Sandalwood News: ದಿವಂಗತ ನಟ ಡಾ.ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ಕನ್ನಡ ಚಲನಚಿತ್ರ ರಂಗದ ಹಿರಿಯ ನಟಿಯರಾದ ಜಯಮಾಲ, ಶ್ರತಿ ಮತ್ತು ಮಾಳವಿಕ ಅವಿನಾಶ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.

-

ಬೆಂಗಳೂರು: ದಿವಂಗತ ನಟ ವಿಷ್ಣುವರ್ಧನ್ (Actor Vishnuvardhan) ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ಕನ್ನಡ ಚಲನಚಿತ್ರ ರಂಗದ ಹಿರಿಯ ನಟಿಯರಾದ ಜಯಮಾಲ, ಶ್ರತಿ ಮತ್ತು ಮಾಳವಿಕ ಅವಿನಾಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಂಗಳವಾರ ಭೇಟಿಯಾಗಿ ಮನವಿ ಸಲ್ಲಿಸಿದರು.
ಇದೇ ವೇಳೆ ಇತ್ತೀಚೆಗೆ ನಿಧನರಾದ ಪಂಚಭಾಷಾ ನಟಿ ಬಿ. ಸರೋಜಾದೇವಿ ಅವರ ಹೆಸರನ್ನು ಅವರು ವಾಸವಿದ್ದ ಮಲ್ಲೇಶ್ವರಂನ ರಸ್ತೆಗೆ ನಾಮಕರಣ ಮಾಡುವಂತೆಯೂ ಮನವಿ ಮಾಡಲಾಗಿದೆ.
ಅಭಿಮಾನ್ ಸ್ಟುಡಿಯೋದಲ್ಲಿ 10 ಗುಂಟೆ ಜಾಗಕ್ಕೆ ಮನವಿ
ಸಾಹಸ ಸಿಂಹ ವಿಷ್ಣುವರ್ಧನ್ ಅವರ ಪುಣ್ಯಭೂಮಿಗೆ ಅಭಿಮಾನ್ ಸ್ಟುಡಿಯೋದಲ್ಲಿ 10 ಗುಂಟೆ ಜಾಗವನ್ನು ನೀಡುವಂತೆ ಕೋರಲು ನಟಿ ಭಾರತಿ ವಿಷ್ಣುವರ್ಧನ್ ಹಾಗೂ ಅಳಿಯ ನಟ ಅನಿರುದ್ಧ್ ಜತ್ಕರ್ ಅವರು ನಾಳೆ (ಸೆ.3) ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಆಗುತ್ತಿದ್ದಾರೆ. ನಾಳೆ ಬೆಳಗ್ಗೆ 10.30 ಕ್ಕೆ ಮುಖ್ಯಮಂತ್ರಿಗಳನ್ನ ಭೇಟಿ ಆಗಲಿದ್ದಾರೆ.
ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ಸಮಾಧಿ ಸ್ಥಳ ತೆರವು ವಿಚಾರವಾಗಿ ಕೊನೆಗೂ ಸ್ವತಃ ಭಾರತಿ ವಿಷ್ಣುವರ್ಧನ್ ಅವರೇ ಸಿಎಂ ಸಿದ್ದರಾಮಯ್ಯ ಭೇಟಿಗೆ ಮುಂದಾಗಿದ್ದಾರೆ. ಇತ್ತೀಚೆಗೆ ಬಾಲಣ್ಣ ಕುಟುಂಬಸ್ಥರು ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಸಮಾಧಿ ನೆಲಸಮಗೊಳಿಸಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಸರ್ಕಾರ ಅಭಿಮಾನ್ ಸ್ಟುಡಿಯೋ ಜಾಗವನ್ನು ತನ್ನ ಸುಪರ್ದಿಗೆ ಪಡೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ನೋಟಿಸ್ ನೀಡಿತ್ತು.
ಈ ಸುದ್ದಿಯನ್ನೂ ಓದಿ | Vishnuvardhan Memorial: ವಿಷ್ಣುವರ್ಧನ್ ಹೆಸರಲ್ಲಿ ಕಿಚ್ಚ ನಿರ್ಮಿಸಲಿರುವ ಸ್ಮಾರಕ ಹೇಗಿರಲಿದೆ?
ಇದು ವಿಷ್ಣುವರ್ಧನ್ ಅಭಿಮಾನಿಗಳ ಹೋರಾಟಕ್ಕೆ ಟ್ವಿಸ್ಟ್ ನೀಡಿದಂತಾಗಿತ್ತು. ಇದರ ಬೆನ್ನಲ್ಲೇ ಈಗ ಸ್ವತಃ ಭಾರತಿ ವಿಷ್ಣುವರ್ಧನ್ ಅವರೇ ಸಿಎಂ ಭೇಟಿ ಮಾಡಿ 10 ಗುಂಟೆ ಸ್ಥಳವನ್ನು ಅಭಿಮಾನಿಗಳಿಗೆ ಬಿಟ್ಟುಕೊಡುವಂತೆ ಮನವಿ ಮಾಡಲು ಮುಂದಾಗಿದ್ದಾರೆ.