ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Udaala Movie: ಟೀಸರ್‌ನಲ್ಲೇ ಮೋಡಿ‌ ಮಾಡಿದ ʼಉಡಾಳʼ ಚಿತ್ರ

Sandalwood News: ‘ಪದವಿಪೂರ್ವ’ ಖ್ಯಾತಿಯ ಪೃಥ್ವಿ ಶಾಮನೂರು ನಾಯಕನಾಗಿ ನಟಿಸಿರುವ ʼಉಡಾಳʼ ಚಿತ್ರದ ಟೀಸರ್ ʼಸರಿಗಮʼ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿದೆ. ಉತ್ತರ ಕರ್ನಾಟಕದ ಹಿನ್ನೆಲೆ ಧ್ವನಿಯಲ್ಲಿ ಮೂಡಿಬಂದಿರುವ ʼಉಡಾಳʼ ಚಿತ್ರದ ಟೀಸರ್‌ಗೆ ನೋಡುಗರು ಫಿದಾ ಆಗಿದ್ದಾರೆ.

ಬೆಂಗಳೂರು: ಯೋಗರಾಜ್ ಸಿನಿಮಾಸ್ ಹಾಗೂ ರವಿ ಶಾಮನೂರು ಫಿಲಂಸ್ ಲಾಂಛನದಲ್ಲಿ ದಾವಣಗೆರೆಯ ರವಿ ಶಾಮನೂರು ಹಾಗೂ ಯೋಗರಾಜ್ ಭಟ್ (Yogaraj Bhat) ಅವರು ನಿರ್ಮಿಸಿರುವ, ಅಮೋಲ್ ಪಾಟೀಲ್ ನಿರ್ದೇಶನದಲ್ಲಿ ಪೃಥ್ವಿ ಶಾಮನೂರು (Pruthvi Shamanur) ನಾಯಕನಾಗಿ ನಟಿಸಿರುವ ʼಉಡಾಳʼ ಚಿತ್ರದ (Udaala Movie) ಟೀಸರ್ ʼಸರಿಗಮʼ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿದೆ. ಟೀಸರ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಉತ್ತರ ಕರ್ನಾಟಕದ ಹಿನ್ನೆಲೆ ಧ್ವನಿಯಲ್ಲಿ ಮೂಡಿಬಂದಿರುವ ʼಉಡಾಳʼ ಚಿತ್ರದ ಟೀಸರ್‌ಗೆ ನೋಡುಗರು ಫಿದಾ ಆಗಿದ್ದಾರೆ. ಚಿತ್ರೀಕರಣ ಹಾಗೂ ನಂತರದ ಚಟುವಟಿಕೆಗಳನ್ನು ಪೂರ್ಣಗೊಳಿಸಿರುವ ʼಉಡಾಳʼ ತೆರೆಗೆ ಬರಲು ಸಿದ್ದವಾಗಿದ್ದಾನೆ. ಇದೊಂದು ಉತ್ತರ ಕರ್ನಾಟಕ ಭಾಗದ ಚಿತ್ರವಾಗಿದ್ದು, ಇಡೀ ಚಿತ್ರೀಕರಣ ಬಿಜಾಪುರ (ವಿಜಯಪುರ) ದಲ್ಲೇ ನಡೆದಿದೆ.

ʼಪದವಿಪೂರ್ವʼ ಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿರುವ ಪೃಥ್ವಿ ಶಾಮನೂರು ʼಉಡಾಳʼ ಚಿತ್ರದ ನಾಯಕನಾಗಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಪೃಥ್ವಿ ಗೈಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೃತಿಕ ಶ್ರೀನಿವಾಸ್ ʼಉಡಾಳʼ ಚಿತ್ರದ ನಾಯಕಿ. ಬಲ ರಾಜ್ವಾಡಿ, ಮಾಳು ನಿಪ್ನಾಳ್, ಹರೀಶ್ ಹಿರಿಯೂರು, ಬಿರಾದರ್, ಸುಮಿತ್ ಸಂಕೋಜಿ, ವಾದಿರಾಜ ಬಬ್ಲಾದಿ, ಪ್ರವೀಣ್ ಗಸ್ತಿ, ದಯಾನಂದ ಬೀಳಗಿ, ರೇಣುಕ, ಶ್ರೀಧರ್, ದಾನಪ್ಪ, ಶಿಲ್ಪ ಶಾಂತಕುಮಾರ್, ಸೋನಿಯಾ ಮುಂತಾದವರು ತಾರಾಬಳಗದಲ್ಲಿದ್ದಾರೆ.



ʼಉಡಾಳʼ ಉತ್ತರ ಕರ್ನಾಟಕದ ಭಾಗದ ದೊಡ್ಡ ಮಟ್ಟದ ಪಕ್ಕಾ ಕಮರ್ಷಿಯಲ್ ಜಾನರ್ ಚಿತ್ರವಾಗಿದೆ. ಲವ್, ಕಾಮಿಡಿ ಸೇರಿದಂತೆ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ‌. ಯೋಗರಾಜ್ ಭಟ್ ಅವರ ಜತೆಗೆ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಮೋಲ್ ಪಾಟೀಲ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಅವರು ಬಿಜಾಪುರ ಮೂಲದವರು.

ಈ ಸುದ್ದಿಯನ್ನೂ ಓದಿ | Deepavali Decoration 2025: ಬೆಳಕಿನ ಹಬ್ಬದ ಅಲಂಕಾರಕ್ಕೆ ಲಗ್ಗೆ ಇಟ್ಟ ಆಕಾಶ ದೀಪಗಳು

ಈ ಹಿಂದೆ ʼಪದವಿ ಪೂರ್ವʼ ಚಿತ್ರ ನಿರ್ಮಾಣ ಮಾಡಿದ್ದ ದಾವಣಗೆರೆಯ ರವಿ ಶಾಮನೂರು ಹಾಗೂ ಯೋಗರಾಜ್ ಭಟ್ ಮತ್ತೆ ಈ ಚಿತ್ರಕ್ಕಾಗಿ ಮತ್ತೆ ಒಂದಾಗಿದ್ದಾರೆ. ಯೋಗರಾಜ್ ಭಟ್ ಅವರು ಬರೆದಿರುವ ಐದು ಹಾಡುಗಳು ಈ ಚಿತ್ರದಲ್ಲಿದ್ದು, ಚೇತನ್ ಡ್ಯಾವಿ ಸಂಗೀತ ನೀಡಿದ್ದಾರೆ. ಕೃಷ್ಣಂ ಪ್ರಣಯ ಸಖಿ ಚಿತ್ರದ ʼದ್ವಾಪರʼ ಹಾಡಿನ ಖ್ಯಾತಿಯ ಜಸ್ಕರಣ್‌ ಸಿಂಗ್, ಉತ್ತರ ಕರ್ನಾಟಕದ ಖ್ಯಾತಿಯ ಮಾಳು ನಿಫ್ನಾಳ್, ಬಾಳು ಬೆಳಗುಂದಿ, ಕರಿಬಸವ, ಸೃಷ್ಟಿ ಶಾಮನೂರ್ ಮತ್ತು ಚೇತನ್ ಸೋಸ್ಕ ಅವರು ಹಾಡಿದ್ದು, ಶಿವಶಂಕರ್ ನೂರಂಬಡ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ, ಕಾಂತಾರ ಖ್ಯಾತಿಯ ಅರ್ಜುನ್ ರಾಜ್, ವಿನೋದ್ ಸಾಹಸ ನಿರ್ದೇಶನ ಹಾಗೂ ಭಜರಂಗಿ ಮೋಹನ್, ರಘು ಅವರ ನೃತ್ಯ ನಿರ್ದೇಶನ ಹಾಗೂ ವೀರೇಶ್ ಪಿ‌.ಎಂ. ಅವರ ಸಹ ನಿರ್ದೇಶನ ʼಉಡಾಳʼ ಚಿತ್ರಕ್ಕಿದೆ.