Zubeen Garg: ಲೈಫ್ ಜಾಕೆಟ್ ಇಲ್ಲ... ಆದ್ರೂ ಸ್ವಿಮ್ಮಿಂಗ್... ದುರಂತ ಅಂತ್ಯ ಕಂಡ ಗಾಯಕ ಜುಬಿನ್ ಕೊನೆಯ ಕ್ಷಣದ ವಿಡಿಯೊ ವೈರಲ್
ಅಸ್ಸಾಂನ ಖ್ಯಾತ ಗಾಯಕ ಜುಬಿನ್ ಗರ್ಗ್ ಸಿಂಗಾಪುರದಲ್ಲಿ ಮೃತಪಟ್ಟಿದ್ದಾರೆ. ನಾರ್ತ್ ಈಸ್ಟ್ ಇಂಡಿಯಾ ಫೆಸ್ಟಿವಲ್‌ನಲ್ಲಿ ಅವರು ಹಾಡುಗಳ ಪ್ರದರ್ಶನವಿದ್ದ ಹಿನ್ನೆಲೆ ಅವರು ಸಿಂಗಾಪುರಕ್ಕೆ ತೆರಳಿದ್ದ ಜುಬಿನ್ ಗರ್ಗ್ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದರು. ಈ ಕುರಿತಂತೆ ಸಿಂಗಾಪುರ್ ಪೊಲೀಸರು ತನಿಖೆ ನಡೆಸುತ್ತಿದ್ದು, ಇದೀಗ ಅವರು ಲೈಫ್ ಜ್ಯಾಕೆಟ್ ಧರಿಸದೆ ಈಜುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಂಧರ್ಬಿಕ ಚಿತ್ರ -

ಸಿಂಗಾಪುರ್: ಪ್ರಖ್ಯಾತ ಅಸ್ಸಾಮೀ ಗಾಯಕ ಜುಬಿನ್ ಗಾರ್ಗ್ (Zubeen Garg) ಅವರು ಸೆಪ್ಟೆಂಬರ್ 19ರಂದು ಸಿಂಗಾಪುರದಲ್ಲಿ (Singapore) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸಿಂಗಾಪುರ್ ಪೊಲೀಸರು ತನಿಖೆ ನಡೆಸುತ್ತಿದ್ದು, ಅವರು ಲೈಫ್ ಜ್ಯಾಕೆಟ್ (Life Jacket) ಧರಿಸದೆ ಈಜುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ಲೈಫ್ ಜ್ಯಾಕೆಟ್ ಇಲ್ಲ
ಆನ್‌ಲೈನ್‌ನಲ್ಲಿ ಹರಡಿರುವ ವಿಡಿಯೋದಲ್ಲಿ ಜುಬಿನ್ ಗಾರ್ಗ್ ನೀರಿನಲ್ಲಿ ಈಜುತ್ತಿರುವುದು ಕಾಣಿಸುತ್ತದೆ, ಆದರೆ ಯಾವುದೇ ಸುರಕ್ಷತಾ ಉಪಕರಣ ಧರಿಸಿಲ್ಲ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು, ಲೈಫ್‌ಗಾರ್ಡ್‌ಗಳು ಗಾರ್ಗ್‌ಗೆ ಲೈಫ್ ಜ್ಯಾಕೆಟ್ ಧರಿಸಲು ಸೂಚಿಸಿದ್ದರು ಎಂದು ತಿಳಿಸಿದ್ದಾರೆ. ಮೊದಲು ಇದನ್ನು ಸ್ಕ್ಯೂಬಾ ಡೈವಿಂಗ್ ಅಪಘಾತ ಎಂದು ಭಾವಿಸಲಾಗಿತ್ತು, ಆದರೆ ಅದನ್ನು ತಳ್ಳಿಹಾಕಿದ ಅಸ್ಸಾಂ ಸಿಎಂ ಈಜುವಾಗ ಲೈಫ್ ಜಾಕೆಟ್ ಧರಿಸದೆ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದರು.
Zubeen Garg Without Life Jacket in Singapore #ZubeenGarg pic.twitter.com/m59k9Bkh73
— Seven Sisters News (@SevenSisNews) September 22, 2025
ಈ ಸುದ್ದಿಯನ್ನು ಓದಿ: Viral News: ಮೂರು H-1B ನಿರಾಕರಣೆಯ ನಂತರ ಈ ವ್ಯಕ್ತಿಗೆ ಸಿಕ್ಕಿತು ಐನ್‌ಸ್ಟೈನ್ ವೀಸಾ; ಇಲ್ಲಿದೆ ವಿವರ
ವಿವಾದ ತಪ್ಪಿಸಲು ಎರಡನೇ ಶವಪರೀಕ್ಷೆ
ಅಸ್ಸಾಂನಲ್ಲಿ ಮಂಗಳವಾರ ಜುಬಿನ್ ಗಾರ್ಗ್‌ಗೆ ಅಂತಿಮ ವಿದಾಯ ಹೇಳಲಾಯಿತು. ಸಿಂಗಾಪುರ್‌ನಲ್ಲಿ ನಡೆದ ಮೊದಲ ಶವಪರೀಕ್ಷೆಯ ನಂತರ, ಕೆಲವು ಗುಂಪುಗಳ ಒತ್ತಡದಿಂದ ಎರಡನೇ ಶವಪರೀಕ್ಷೆ ನಡೆಸಲಾಯಿತು. “ಇದು ಜನರ ಒತ್ತಾಯವಲ್ಲ, ಕೆಲವು ಗುಂಪುಗಳ ಒತ್ತಡ. ಗಾರ್ಗ್ ಅವರ ಪತ್ನಿಯ ಒಪ್ಪಿಗೆಯೊಂದಿಗೆ ಈ ನಿರ್ಧಾರ ತೆಗೆದುಕೊಂಡಿದ್ದೇವೆ” ಎಂದು ಹಿಮಂತ ಬಿಸ್ವ ಶರ್ಮಾ ಹೇಳಿದರು. ಸಿಂಗಾಪುರ್‌ನ ಶವಪರೀಕ್ಷೆ ಸರಿಯಾಗಿತ್ತು, ಆದರೆ ರಾಜಕೀಯ ವಿವಾದ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಮರಣದ ಕಾರಣ ‘ನೀರಿನಲ್ಲಿ ಮುಳುಗುವಿಕೆ’ ಎಂದು ದಾಖಲಾಗಿದೆ.
ಅಸ್ಸಾಂನ ಸಾಂಸ್ಕೃತಿಕ ಐಕಾನ್ ಜುಬಿನ್ ಗಾರ್ಗ್
‘ಯಾ ಅಲಿ’ ಹಾಡಿನಿಂದ ಖ್ಯಾತರಾದ ಜುಬಿನ್ ಗಾರ್ಗ್, ಅಸ್ಸಾಂನ ಸಾಂಸ್ಕೃತಿಕ ಗುರುತಾಗಿದ್ದರು. 1972ರಲ್ಲಿ ಮೇಘಾಲಯದಲ್ಲಿ ಜನಿಸಿದ ಅವರು, ಗಾಯನ, ಸಂಗೀತ ಸಂಯೋಜನೆ, ನಟನೆ ಮತ್ತು ಚಿತ್ರನಿರ್ದೇಶನದಲ್ಲಿ ಮಿಂಚಿದ್ದರು. ಸಿಂಗಾಪುರ್‌ನಲ್ಲಿ ನಡೆಯಬೇಕಿದ್ದ ಈಶಾನ್ಯ ಭಾರತ ಉತ್ಸವಕ್ಕೆ ತೆರಳಿದ್ದ ವೇಳೆ ಈ ದುರಂತ ಸಂಭವಿಸಿತು. ಅವರ ಶವವನ್ನು ಸೆಪ್ಟೆಂಬರ್ 20ರಂದು ಅಸ್ಸಾಂಗೆ ತರಲಾಯಿತು ಮತ್ತು ಕಮಾರ್ಕುಚಿಯಲ್ಲಿ ಅಂತ್ಯಕ್ರಿಯೆ ನಡೆಯಿತು.