ನವದೆಹಲಿ: ವ್ಯಾಪಾರ ಒಪ್ಪಂದದ (trade deal) ಮಾತುಕತೆಗಳ ನಡುವೆಯೇ ಭಾರತಕ್ಕೆ ಅಮೆರಿಕ ಹೊಸ ಸುಂಕ ಬೆದರಿಕೆಯನ್ನು (New tariffs) ಹಾಕಿದೆ. ಒತ್ತಾಯಪೂರ್ವಕವಾಗಿ ಕಾರ್ಮಿಕರನ್ನು ಬಳಸಿಕೊಂಡು ರಫ್ತು ಹೆಚ್ಚಿಸುವ ದುರ್ಬಲ ನೀತಿಗಳಿಗೆ ಭಾರತದ ಮೇಲೆ ಹೊಸ ಸುಂಕಗಳನ್ನು ವಿಧಿಸುವುದಾಗಿ ಅಮೆರಿಕ (america) ಹೇಳಿದೆ. ಇಷ್ಟು ಮಾತ್ರವಲ್ಲದೆ ವಿಶ್ವದ ಬೇರೆಡೆ ಬಲವಂತವಾಗಿ ಕಾರ್ಮಿಕರಿಂದ ಮಾಡಿದ ಸರಕುಗಳ ಆಮದನ್ನು ನಿಷೇಧಿಸಲು ಭಾರತವು ಯಾವುದೇ ರೀತಿಯ ಪರಿಣಾಮಕಾರಿ ನಿರ್ಬಂಧವನ್ನು ಹೊಂದಿಲ್ಲ ಎಂದು ಯುನೈಟೆಡ್ ಸ್ಟೇಟ್ಸ್ ಟ್ರೇಡ್ ರೆಪ್ರೆಸೆಂಟೇಟಿವ್ (United States Trade Representative) ಹೇಳಿದೆ.
ನವದೆಹಲಿ ಮತ್ತು ವಾಷಿಂಗ್ಟನ್ ನಡುವೆ ವ್ಯಾಪಾರ ಒಪ್ಪಂದ ಮಾತುಕತೆಗಳು ನಡೆಯುತ್ತಿದ್ದು, ಈ ನಡುವೆ ಇದೀಗ ಯುಎಸ್ ಹೊಸ ಸುಂಕಗಳನ್ನು ಭಾರತ ಎದುರಿಸಬೇಕಾಗಬಹುದು. ಭಾರತದಲ್ಲಿ ರಫ್ತುಗಳನ್ನು ಹೆಚ್ಚಿಸಲು ಸರಕು ಉತ್ಪಾದನೆಗೆ ಬಲವಂತವಾಗಿ ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ ಹಾಗೂ ವಿಶ್ವದ ಇತರೆಡೆ ಬಲವಂತವಾಗಿ ಕಾರ್ಮಿಕರಿಂದ ಮಾಡಿಸಿರುವ ಸರಕುಗಳ ಆಮದನ್ನು ನಿಷೇಧಿಸಲು ಭಾರತವು ಯಾವುದೇ ಕ್ರಮ ಹೊಂದಿಲ್ಲ ಎಂದು ದೂರಿದೆ.
ಅಮೆರಿಕದೊಂದಿಗೆ ಸುಂಕ ವಿವಾದವನ್ನು ಬಗೆ ಹರಿಸಲು ನವದೆಹಲಿಯೂ ಪ್ರಯತ್ನ ನಡೆಸುತ್ತಿರುವ ಮಧ್ಯೆ ಹಾಗೂ ಉಭಯ ದೇಶಗಳು ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮೊದಲ ಹಂತದ ಮಾತುಕತೆ ನಡೆಸುತ್ತಿರುವ ಸಮಯದಲ್ಲಿ ಯುನೈಟೆಡ್ ಸ್ಟೇಟ್ಸ್ ಟ್ರೇಡ್ ರೆಪ್ರೆಸೆಂಟೇಟಿವ್ ಈ ಹೇಳಿಕೆ ನೀಡಿದೆ.
ಮತ್ತೆ ಬೆಲೆ ಏರಿಕೆ; ಜೇಬಿಗೆ ಕತ್ತರಿ ಹಾಕಲಿದೆ ಹೋಟೆಲ್ ಊಟ, ತಿಂಡಿ
ಯುನೈಟೆಡ್ ಸ್ಟೇಟ್ಸ್ ಟ್ರೇಡ್ ರೆಪ್ರೆಸೆಂಟೇಟಿವ್ ನೀಡಿರುವ ಹೇಳಿಕೆ ಪ್ರಕಾರ, ಕಾರ್ಮಿಕರನ್ನು ಬಲವಂತವಾಗಿ ಉತ್ಪಾದನೆಗೆ ಬಳಸುವುದರ ಮೇಲೆ ನಿಷೇಧವನ್ನು ವಿಧಿಸಲು ವಿಫಲವಾದ 54 ರಾಷ್ಟ್ರಗಳಲ್ಲಿ ಭಾರತ, ಚೀನಾ, ಜಪಾನ್, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಸೌದಿ ಅರೇಬಿಯಾ, ಸಿಂಗಾಪುರ, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ಗಳು ಸೇರಿವೆ.
ಉತ್ಪಾದನೆಯನ್ನು ಹೆಚ್ಚಿಸಲು ಬಲವಂತವಾಗಿ ಕಾರ್ಮಿಕರನ್ನು ಬಳಸುವುದು ಮಾರುಕಟ್ಟೆಯಲ್ಲಿ ಅನ್ಯಾಯದ ಸ್ಪರ್ಧೆಯನ್ನು ಉತ್ತೇಜಿಸುತ್ತದೆ. ಇದು ಕಾರ್ಮಿಕ ಮಾನದಂಡಗಳನ್ನು ಅನುಸರಿಸುವ ಕಂಪೆನಿಗಳಿಗೆ ಒತ್ತಡವನ್ನು ಉಂಟು ಮಾಡುತ್ತದೆ. ಈ ಕುರಿತು ಮಾರ್ಚ್ 12ರಿಂದ ತನಿಖೆ ನಡೆಸುತ್ತಿರುವುದಾಗಿ ಅದು ಹೇಳಿದೆ.
ತನಿಖೆಯಲ್ಲಿ ಅದು ನೀಡಿರುವ ಮಾಹಿತಿ ಪ್ರಕಾರ ಭಾರತೀಯ ರಫ್ತುಗಳನ್ನು ಬಲವಂತದ ಕಾರ್ಮಿಕರನ್ನು ಬಳಸಿ ಉತ್ಪಾದಿಸಲಾಗುತ್ತದೆ ಎಂದು ಆರೋಪಿಸಿಲ್ಲ. ಇದು ಭಾರತದ ಆಮದು ನಿಯಂತ್ರಣ ಚೌಕಟ್ಟಿಗೆ ಸಂಬಂಧಿಸಿದೆ. ಬೇರೆ ದೇಶಗಳಲ್ಲಿ ಬಲವಂತವಾಗಿ ಕಾರ್ಮಿಕರನ್ನು ಬಳಸಿಕೊಂಡು ಉತ್ಪಾದಿಸುವ ಸರಕುಗಳನ್ನು ಭಾರತವು ತನ್ನ ಮಾರುಕಟ್ಟೆಗೆ ಪ್ರವೇಶಿಸುವುದನ್ನು ಪರಿಣಾಮಕಾರಿಯಾಗಿ ತಡೆಯುವಲ್ಲಿ ವಿಫಲವಾಗಿರುವುದಾಗಿ ಅದು ತಿಳಿಸಿದೆ.
ಯುನೈಟೆಡ್ ಸ್ಟೇಟ್ಸ್ ಟ್ರೇಡ್ ರೆಪ್ರೆಸೆಂಟೇಟಿವ್ ತನಿಖೆಯಲ್ಲಿ ಅನ್ಯಾಯದ ಸ್ಪರ್ಧಯನ್ನು ಉತ್ತೇಜಿಸುವ ರಾಷ್ಟ್ರಗಳ ಮೇಲೆ ಹೆಚ್ಚುವರಿಯಾಗಿ ಶೇ. 12.5ರಷ್ಟು ಸುಂಕಗಳನ್ನು ವಿಧಿಸಲು ಪ್ರಸ್ತಾಪಿಸಿದೆ. ಈ ಹೊಸ ಸುಂಕ ಭಾರತದ ಮೇಲೂ ಅನ್ವಯವಾಗುವ ಸಾಧ್ಯತೆಯಿದೆ.ಇದರೊಂದಿಗೆ ಯುನೈಟೆಡ್ ಸ್ಟೇಟ್ಸ್ ಟ್ರೇಡ್ ರೆಪ್ರೆಸೆಂಟೇಟಿವ್ ಪ್ರತ್ಯೇಕ ಜವಳಿ ಕಾರ್ಯವಿಧಾನವನ್ನು ಪ್ರಸ್ತಾಪಿಸಿದ್ದು, ಇದರಡಿಯಲ್ಲಿ ನಿರ್ದಿಷ್ಟ ಪ್ರಮಾಣದ ಉಡುಪು ಮತ್ತು ಜವಳಿ ಉತ್ಪನ್ನಗಳು ಕಡಿಮೆ ಸುಂಕ ದರದಲ್ಲಿ ಯುನೈಟೆಡ್ ಸ್ಟೇಟ್ಸ್ ಮಾರುಕಟ್ಟೆಯನ್ನು ಪ್ರವೇಶಿಸಬಹುದು ಎಂದು ಹೇಳಿದೆ.
ಹೊರ್ಮುಜ್ ಬಿಕ್ಕಟ್ಟಿನ ನಡುವೆ ರಸಗೊಬ್ಬರ ಪೂರೈಕೆಗೆ ಭಾರತದ ಹೊಸ ಸಮುದ್ರ ಮಾರ್ಗ ಯೋಜನೆ; ಏನಿದು ಕೇಂದ್ರದ ಕಾರ್ಯತಂತ್ರ?
ಇದು ಇನ್ನೂ ಮಾತುಕತೆಯ ಹಂತದಲ್ಲಿದೆ. ಇದಕ್ಕೆ ಸಂಬಂಧಿಸಿ ವಿನಂತಿಗಳನ್ನು ಜೂನ್ 22 ರೊಳಗೆ ಸಲ್ಲಿಸಬೇಕು. ಲಿಖಿತ ದೂರುಗಳನ್ನು ಜುಲೈ 6 ರೊಳಗೆ ಸಲ್ಲಿಸಬೇಕು ಮತ್ತು ಸಾರ್ವಜನಿಕ ವಿಚಾರಣೆಗಳನ್ನು ಜುಲೈ 7 ರಂದು ನಿಗದಿಪಡಿಸಲಾಗಿದೆ ಎಂದು ಹೇಳಿದೆ.