ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕ್ರಿಪ್ಟೋದಲ್ಲಿ ಹೂಡಿಕೆ ಮಾಡುವುದೇ ಬೇಡ ಎನ್ನುತ್ತಾರೆ ತಜ್ಞರು; ಕಾರಣವೇನು?

ಹೂಡಿಕೆ ಮಾಡುವಾಗ ಮೂರು ಮುಖ್ಯ ವಿಷಯಗಳ ಬಗ್ಗೆ ಯೋಚಿಸಬೇಕು. ಅವುಗಳೆಂದರೆ ಇಕ್ವಿಟಿಯಲ್ಲಿ ಹೂಡಿಕೆ ಮಾಡಬೇಕೋ, ಕಮಾಡಿಟಿಯಲ್ಲಿ ಹೂಡಿಕೆ ಮಾಡಬೇಕೋ ಅಥವಾ ಕ್ರಿಪ್ಟೋದಲ್ಲಿ ಹೂಡಿಕೆ ಮಾಡಬೇಕೋ ಎಂಬುದು. ಈ ಬಗ್ಗೆ ಹಣಕಾಸು ತಜ್ಞ, ಸ್ಟಾಕ್ ಟ್ರೇಡರ್ ದಯಾನಂದ ಏನು ಹೇಳುತ್ತಾರೆ? ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಸ್ಟಾಕ್ ಟ್ರೇಡರ್ ದಯಾನಂದ.

ಬೆಂಗಳೂರು, ಜ. 2: ಸಾಮಾನ್ಯವಾಗಿ ಹೂಡಿಕೆ ಮಾಡುವ ಬಗ್ಗೆ ಯೋಚನೆ ಮಾಡುತ್ತಿದ್ದರೆ ಮೊದಲ ಆಯ್ಕೆ ಇಕ್ವಿಟಿ (Equity) ಆಗಿರಲಿ. ಯಾಕೆಂದರೆ ಇದು ಹೆಚ್ಚು ಸುರಕ್ಷಿತವಾಗಿರುತ್ತದೆ. ಇನ್ನು ಕಮಾಡಿಟಿಯಲ್ಲಿ (Commodity) ಹೂಡಿಕೆ ಮಾಡುವುದಾದರೆ ಕೊಂಚ ರಿಸ್ಕ್ ಹೊಂದಲು ಸಿದ್ಧರಿರಬೇಕು. ಅದೇ ರೀತಿ ಕ್ರಿಪ್ಟೋದಲ್ಲಿ (crypto currency) ಸದ್ಯ ಹೂಡಿಕೆ ಮಾಡುವ ಸಾಹಸಕ್ಕೆ ಕೈ ಹಾಕಬೇಡಿ ಎನ್ನುತ್ತಾರೆ ಹಣಕಾಸು ತಜ್ಞ, ಸ್ಟಾಕ್ ಟ್ರೇಡರ್ ದಯಾನಂದ (Stock trader Dayanand). 'ವಿಶ್ವವಾಣಿ ಮನಿ' (Vishwavani money) ಯೂಟ್ಯೂಬ್‌ ಚಾನೆ ಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಅವರು ಈ ವಿಚಾರದ ಬಗ್ಗೆ ಮಾತನಾಡಿದರು.

ವ್ಯಾಪಾರದಲ್ಲಿ ಅನೇಕ ವಿಧಾನಗಳಿವೆ. ಅವುಗಳಲ್ಲಿ ಮುಖ್ಯವಾದದ್ದು ಇಕ್ವಿಟಿ, ಕಮಾಡಿಟಿ ಮತ್ತು ಕ್ರಿಪ್ಟೋ ವ್ಯಾಪಾರ. ಇವುಗಳಲ್ಲಿ ಯಾವುದರಲ್ಲಿ ಹೂಡಿಕೆ ಮಾಡುವ ಚಿಂತೆಯಾದರೆ ಮೊದಲು ಇವುಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು ಎನ್ನುತ್ತಾರೆ ದಯಾನಂದ.

ಇಕ್ವಿಟಿ ಎಂಬುದು ಆಸ್ತಿ ಇದ್ದಂತೆ. ಈ ಮೂಲಕ ನಾವು ಕಂಪೆನಿಯ ಷೇರು ಖರೀದಿ ಮಾಡುತ್ತೇವೆ. ಕಂಪೆನಿ ಇರುವ ತನಕ ನಾವು ಅಥವಾ ನಮ್ಮ ನಾಮಿನಿ ಕಂಪೆನಿಯ ಮಾಲೀಕರಲ್ಲಿ ಒಬ್ಬರಾಗಿರುತ್ತೇವೆ. ಕಮಾಡಿಟಿಯಲ್ಲಿ ಹೂಡಿಕೆ ಎಂದರೆ ಚಿನ್ನ, ಬೆಳ್ಳಿ ಅಥವಾ ನ್ಯಾಚುರಲ್ ಗ್ಯಾಸ್ ಅನ್ನು ಸಂಪತ್ತಾಗಿ ಖರೀದಿ ಮಾಡುವುದು. ಇದು ನಮಗೆ ಅದರ ಮೇಲೆ ಮಾಲೀಕತ್ವವನ್ನು ನೀಡುವುದಿಲ್ಲ. ಬದಲಾಗಿ ಕಂಪೆನಿಯೊಂದಿಗೆ ಒಂದು ಒಪ್ಪಂದ ಮಾಡಲು ಅವಕಾಶ ನೀಡುತ್ತದೆ ಎಂದು ಹೇಳಿದ್ದಾರೆ.

ವಿಡಿಯೊ ಇಲ್ಲಿದೆ:



ಕ್ರಿಪ್ಟೋ ಎಂದರೆ ಇದೊಂದು ರೀತಿಯ ಡಿಜಿಟಲ್ ಹಣ. ಇದರಲ್ಲಿ ಬಿಟಿಸಿ, ಸಲೋನ್, ಇಥೆರೀಯಂ ಹೀಗೆ ಹಲವು ವಿಧದ ಕ್ರಿಪ್ಟೋ ಕರೆನ್ಸಿಗಳಿವೆ. ಇದರಲ್ಲಿ ಹೂಡಿಕೆ ಮಾಡುವುದು ತುಂಬಾ ಅಪಾಯಕಾರಿ. ಯಾಕೆಂದರೆ ಇದು ಯಾವುದೇ ಸೆಬಿ ಅಥವಾ ರಿಸರ್ವ್ ಬ್ಯಾಂಕ್ ಅಧಿಕಾರ ವ್ಯಾಪ್ತಿಯಲ್ಲಿ ಬರುವುದಿಲ್ಲ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಕ್ರಿಪ್ಟೋದಲ್ಲಿ ಹೂಡಿಕೆ ಮಾಡದಿರುವುದು ಒಳ್ಳೆಯದು ಎನ್ನುತ್ತಾರೆ ದಯಾನಂದ.

ಹಣದ ಮತ್ತೊಂದು ರೂಪ ಡಿಜಿಟಲ್ ಕರೆನ್ಸಿ ಯಾರೆಲ್ಲ ಬಳಸಬಹುದು?

ಮಾರುಕಟ್ಟೆ ಅವಧಿಯನ್ನು ಗಮನಿಸಿದರೆ ಇಕ್ವಿಟಿ ಮಾರುಕಟ್ಟೆಯು ದಿನದಲ್ಲಿ ಆರು ತಾಸು ಹದಿನೈದು ನಿಮಿಷ ಕಾಲ ನಡೆಯುತ್ತದೆ. ಇಲ್ಲಿ ಒತ್ತಡ ಕಡಿಮೆ ಇರುತ್ತದೆ. ಅದೇ ಕಮಾಡಿಟಿ ಮಾರುಕಟ್ಟೆಯು ದಿನದಲ್ಲಿ 18 ತಾಸು ನಡೆಯುತ್ತದೆ. ಇಲ್ಲಿ ಒತ್ತಡ ಕೊಂಚ ಹೆಚ್ಚಾಗಿರುತ್ತದೆ. ಕ್ರಿಪ್ಟೋ ಕರೆನ್ಸಿಯಲ್ಲಿ ದಿನದ 24 ತಾಸು ಮಾರುಕಟ್ಟೆ ವಹಿವಾಟು ನಡೆಯುತ್ತಿರುತ್ತದೆ. ಇಲ್ಲಿ ದಿನದ 24 ಗಂಟೆಯೂ ನಾವು ಒತ್ತಡದಲ್ಲೇ ಇರಬೇಕು ಎಂದು ತಿಳಿಸಿದ್ದಾರೆ.

ಮಾರುಕಟ್ಟೆ ಏರಿಳಿತಗಳನ್ನು ಗಮನಿಸುವುದಾದರೆ ನಿಫ್ಟಿ ಸೂಚ್ಯಂಕಗಳು ವರ್ಷದಲ್ಲಿ ಶೇ. 10ರಷ್ಟು ಏರಿಳಿತವನ್ನು ತೋರಿಸುತ್ತದೆ, ಸೆನ್ಸೆಕ್ಸ್ ಗಳು ಸಾಮಾನ್ಯವಾಗಿ ಶೇ. 9-10ರಷ್ಟು ಏರಿಳಿತವನ್ನು ತೋರಿಸಿವೆ. ಅದೇ ಕ್ರಿಪ್ಟೋ ಕರೆನ್ಸಿಗಳಲ್ಲಿ ಅರ್ಧ ಗಂಟೆಯಲ್ಲಿ ಶೇ. 10-15ರಷ್ಟು ಏರಿಳಿತವಾಗುವುದನ್ನು ನೋಡಿದ್ದೇವೆ ಎಂದು ಅವರು ವಿವರಿಸಿದ್ದಾರೆ.

ಹೂಡಿಕೆ ಮಾಡುವುದಾದರೆ ಇಕ್ವಿಟಿ ಹೆಚ್ಚು ಸುರಕ್ಷಿತವಾಗಿದೆ. ಬಳಿಕ ಕಮಾಡಿಟಿ. ಇಲ್ಲಿ ಕೇವಲ ಚಿನ್ನ, ಬೆಳ್ಳಿ, ನ್ಯಾಚುರಲ್ ಗ್ಯಾಸ್ ಮಾತ್ರವಲ್ಲ ಹತ್ತಿ, ಏಲಕ್ಕಿ ಸೇರಿದಂತೆ ಕೃಷಿ ಬೆಳೆಗಳ ಮೇಲೂ ಹೂಡಿಕೆ ಮಾಡಬಹುದಾಗಿದೆ. ಕಮಾಡಿಟಿ ಮಾರುಕಟ್ಟೆಯಲ್ಲಿ ಹೆಚ್ಚು ಏರಿಳಿತಗಳಿರುತ್ತವೆ. ಹೀಗಾಗಿ ಇಲ್ಲಿ ಕೊಂಚ ರಿಸ್ಕ್ ಪಡೆಯಲು ಸಿದ್ಧರಾಗಿರಬೇಕು. ಇನ್ನು ಸುರಕ್ಷಿತವೇ ಅಲ್ಲದ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆಯನ್ನು ಸದ್ಯಕ್ಕೆ ಮಾಡದೇ ಇರುವುದೇ ಒಳ್ಳೆಯದು ಎನ್ನುತ್ತಾರೆ ದಯಾನಂದ.

MSTC ಇ-ಕಾಮರ್ಸ್ ಪೋರ್ಟಲ್‌ನಲ್ಲಿ ಎಲೆಕ್ಟ್ರಾನಿಕ್ಸ್ ವಸ್ತುಗಳ ಹರಾಜು

ಕಮಾಡಿಟಿಯಲ್ಲಿ ಹೂಡಿಕೆ ಮಾಡುವುದಾದರೆ ಚಿನ್ನ, ಬೆಳ್ಳಿ ಹೆಚ್ಚು ಸುರಕ್ಷಿತ. ಯಾಕೆಂದರೆ ಇದನ್ನು ನಾವು ಖರೀದಿ ಮಾಡಿ ಇಟ್ಟು ಕೊಳ್ಳಬಹುದು. ಉಳಿದ ವಸ್ತುಗಳಲ್ಲಿ ಹೂಡಿಕೆ ಮಾಡಿದರೆ ಅದನ್ನು ದೀರ್ಘಾವಧಿಯವರೆಗೆ ಖರೀದಿ ಮಾಡಿ ಇಟ್ಟುಕೊಳ್ಳಲು ಆಗುವುದಿಲ್ಲ. ಚಿನ್ನ, ಬೆಳ್ಳಿಯಲ್ಲಿ ಹೂಡಿಕೆ ಮಾಡುವಾಗ ಚಿನ್ನ, ಬೆಳ್ಳಿಯ ಇಟಿಎಫ್ ಖರೀದಿ ಮಾಡಬಹುದು. ಇದರಿಂದ ಹಲವು ಲಾಭಗಳಿವೆ. ಮುಖ್ಯವಾಗಿ ಕಡಿಮೆ ಬಂಡವಾಳದಲ್ಲಿ ಚಿನ್ನ, ಬೆಳ್ಳಿಯನ್ನು ಖರೀದಿ ಮಾಡಬಹುದು. ಮೇಕಿಂಗ್ ಚಾರ್ಜ್, ವೇಸ್ಟೇಜ್ ಇರುವುದಿಲ್ಲ, ಜಿಎಸ್ ಟಿ ಇರುವುದಿಲ್ಲ, ಕಳ್ಳತನದ ಭಯ ಇರುವುದಿಲ್ಲ, ಸುರಕ್ಷಿತವಾಗಿರಿಸಲು ಲಾಕರ್ ಬಾಡಿಗೆ ಕೊಡಬೇಕಿಲ್ಲ ಎಂದ ಅವರು, ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಬೆಳ್ಳಿ ಹೆಚ್ಚು ಬಳಕೆಯಾಗುವುದರಿಂದ ಮುಂದೊಂದು ದಿನ ಬೆಳ್ಳಿ ದರ ಚಿನ್ನಕ್ಕಿಂತ ಹೆಚ್ಚಾದರೂ ಅಚ್ಚರಿ ಇಲ್ಲ ಎಂದು ಅವರು ಹೇಳಿದ್ದಾರೆ.

gold BeES ಎಂದರೆ ಎಕ್ಸ್‌ಚೇಂಜ್‌ ಟ್ರೇಡೆಡ್ ಫಂಡ್ (ETF). ಇದು ಚಿನ್ನದ ಬೆಲೆ ಆಧಾರದಲ್ಲಿ ಚಿನ್ನವನ್ನು ಖರೀದಿಸದೆ ಅಥವಾ ಸಂಗ್ರಹಿಸದೆ ಚಿನ್ನದಲ್ಲಿ ಹೂಡಿಕೆ ಮಾಡಲು ಅವಕಾಶ ಮಾಡಿಕೊಡುತ್ತದೆ. ಚಿನ್ನ, ಬೆಳ್ಳಿಯ ಬಿಇಎಸ್‌ಗಳನ್ನು ಖರೀದಿ ಮಾಡುವುದಾದರೆ ಬೆಳಗ್ಗೆ 9.15ರಿಂದ 3.30ರವರೆಗೆ ಮಾತ್ರ ಬೀಸ್ ಖರೀದಿ ಮಾಡಬಹುದು ಎನ್ನುತ್ತಾರೆ ದಯಾನಂದ.

ವಿದ್ಯಾ ಇರ್ವತ್ತೂರು

View all posts by this author