ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

GST 2.0: ನಾಳೆಯಿಂದ ಹೊಸ GST ಸ್ಲ್ಯಾಬ್‌ ಜಾರಿ- ಯಾವೆಲ್ಲಾ ವಸ್ತುಗಳು ಅಗ್ಗ? ಯಾವುದು ದುಬಾರಿ?

ಸರಕು ಮತ್ತು ಸೇವಾ ತೆರಿಗೆ (Goods and Services Tax) 2.0 ನಾಳೆ ಬಿಡುಗಡೆಯಾಗಲಿದ್ದು, ಆರ್ಥಿಕ ವಲಯದಲ್ಲಿ ಹಲವು ಬದಲಾವಣೆಗಳು ಆಗಲಿವೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಜಿಎಸ್ ಟಿ ಸುಧಾರಣೆಗಳು ನಾಳೆಯಿಂದ ಪ್ರಾರಂಭವಾಗಲಿದೆ. ಇದರಿಂದ ಕೆಲವೊಂದು ವಸ್ತುಗಳು ದುಬಾರಿಯಾಗಲಿದ್ದು, ಇನ್ನು ಕೆಲವು ಅಗ್ಗವಾಗಲಿದೆ.

ನಾಳೆಯಿಂದ ಹೊಸ GST ಸ್ಲ್ಯಾಬ್‌ ಜಾರಿ!

-

ಬೆಂಗಳೂರು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance and Minister Nirmala Sitharaman) ನೇತೃತ್ವದಲ್ಲಿ ಸರಕು ಮತ್ತು ಸೇವಾ ತೆರಿಗೆಯಲ್ಲಿ (Goods and Services Tax ) ಹಲವು ಬದಲಾವಣೆಗಳನ್ನು ನಾಳೆಯಿಂದ ಮಾಡಲಾಗುತ್ತದೆ. ಸರಕು ಮತ್ತು ಸೇವಾ ತೆರಿಗೆಯಲ್ಲಿನ ಪರಿಷ್ಕರಣೆಗಳು ಕೆಲವೊಂದು ವಸ್ತುಗಳನ್ನು ದುಬಾರಿಯಾಗಿಸಿದರೆ ಇನ್ನು ಕೆಲವು ವಸ್ತುಗಳನ್ನು ಅಗ್ಗಗೊಳಿಸಲಿದೆ. ಜಿಎಸ್ ಟಿ 2.0 (GST 2.0) ದಲ್ಲಿ ಪರಿಷ್ಕರಣೆಗಳಿಂದಾಗಿ (GST reforms) ಸರಕುಗಳ ಮೇಲಿನ ತೆರಿಗೆಯನ್ನು ಶೇ. 5, 18 ಮತ್ತು 40ಕ್ಕೆ ಪರಿಷ್ಕರಿಸಲಾಗುತ್ತದೆ. ಇದು ದೇಶದ ಆರ್ಥಿಕ ವಲಯದಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ.

ನಿರ್ಮಲಾ ಸೀತಾರಾಮನ್ ನೇತೃತ್ವದ ಜಿಎಸ್ ಟಿ ಮಂಡಳಿಯು ಸೆಪ್ಟೆಂಬರ್ ಆರಂಭದಲ್ಲೇ ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಪ್ರಮುಖ ಪರಿಷ್ಕರಣೆಯನ್ನು ಘೋಷಣೆ ಮಾಡಿತ್ತು. ಇದು ತೆರಿಗೆಗಳ ವಿಧಾನಗಳನ್ನು ಸರಳ ಮಾಡಿ, ವಸ್ತುಗಳ ಬಳಕೆಯನ್ನು ಹೆಚ್ಚಿಸುವ ಮತ್ತು ದರಗಳನ್ನು ನ್ಯಾಯೋಚಿತಗೊಳಿಸುವ ಗುರಿಯನ್ನು ಹೊಂದಿದೆ.

ಪರಿಷ್ಕ್ರತ ತೆರಿಗೆ ಯೋಜನೆಯಡಿಯಲ್ಲಿ ಸರ್ಕಾರವು ನಾಲ್ಕು ಸ್ಲ್ಯಾಬ್‌ಗಳನ್ನು ಎರಡು ಮುಖ್ಯ ವರ್ಗವಾಗಿ ವಿಂಗಡಿಸಲು ಯೋಜನೆ ರೂಪಿಸಿದೆ. ಇದರಡಿಯಲ್ಲಿ ಅಗತ್ಯ ಸರಕುಗಳಿಗೆ ಶೇ. 5, ಇತರ ಸರಕು ಮತ್ತು ಸೇವೆಗಳಿಗೆ ಶೇ. 18, ಐಷಾರಾಮಿ ಸರಕುಗಳಾದ ತಂಬಾಕು, ಮದ್ಯ, ಬೆಟ್ಟಿಂಗ್ ಮತ್ತು ಆನ್‌ಲೈನ್ ಗೇಮಿಂಗ್‌ಗಳಿಗೆ ಶೇ. 40ರ ವರೆಗೆ ತೆರಿಗೆ ನಿಗದಿಪಡಿಸಲಾಗಿದೆ. ಇದು ತೆರಿಗೆ ಪರಿಶೀಲನೆ, ಪಾಲನೆ ಮಾಡುವುದನ್ನು ಸುಲಭಗೊಳಿಸಲಿದೆ. ಇದರಿಂದ ವಿಧಿಸಲಾಗಿರುವ ಶೇ. 12 ಅಥವಾ ಶೇ. 28ರಷ್ಟು ತೆರಿಗೆಗಳಿರುವ ಅನೇಕ ವಸ್ತುಗಳ ಬೆಲೆ ಕಡಿಮೆಯಾಗಲಿದೆ. ಹೀಗಾಗಿ ಅನೇಕ ವಲಯಗಳು ಇದರ ಪ್ರಯೋಜನವನ್ನು ಪಡೆಯಲಿದೆ.

ಯಾವುದು ಅಗ್ಗ?

ಪ್ರಸ್ತುತ ಶೇ. 12ರಷ್ಟು ತೆರಿಗೆ ವಿಧಿಸಿರುವ ಅನೇಕ ಗೃಹೋಪಯೋಗಿ ಉತ್ಪನ್ನಗಳು ಶೇ. 5ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ. ಇದರಲ್ಲಿ ಟೂತ್‌ಪೇಸ್ಟ್, ಸೋಪ್‌, ಶಾಂಪುಗಳು, ಬಿಸ್ಕತ್ತು, ತಿಂಡಿ, ಜ್ಯೂಸ್‌ಗಳು, ತುಪ್ಪ, ಡೈರಿ ಉತ್ಪನ್ನಗಳು, ಬೈಸಿಕಲ್‌ ಮತ್ತು ಸ್ಟೇಷನರಿ, ಉಡುಪು, ಪಾದರಕ್ಷೆಗಳು ಸೇರಿವೆ. ಇದರಿಂದ ಮಧ್ಯಮ ವರ್ಗದ ಕುಟುಂಬಗಳಿಗೆ ಸಾಕಷ್ಟು ಪ್ರಯೋಜನವಾಗಲಿದೆ.

ಗೃಹೋಪಯೋಗಿ ಉಪಕರಣಗಳಾದ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲಿನ ತೆರಿಗೆ ಶೇ. 28ರಿಂದ ಶೇ. 18ಕ್ಕೆ ಇಳಿಯಲಿದೆ. ಇದರ ಪರಿಣಾಮ ಎಲೆಕ್ಟ್ರಾನಿಕ್ ಉತ್ಪನ್ನಗಳು ಶೇ. 7- 8ರಷ್ಟು ಅಗ್ಗವಾಗಲಿದೆ. ಇದರಲ್ಲಿ ಎಸಿ, ರೆಫ್ರಿಜರೇಟರ್‌, ಡಿಶ್‌ವಾಶರ್‌, ಟಿವಿ, ಸಿಮೆಂಟ್ ಇತ್ಯಾದಿಗಳು ಸೇರಿವೆ. ಇವು ಭಾರತದಲ್ಲಿ ಬೆಳೆಯುತ್ತಿರುವ ಮಧ್ಯಮ ವರ್ಗಕ್ಕೆ ಬಹುದೊಡ್ಡ ಪ್ರಯೋಜನವನ್ನು ಒದಗಿಸಲಿದೆ.

ಅಲ್ಲದೇ ಆಟೋಮೊಬೈಲ್ ವಲಯವು ಕೂಡ ಇದರ ವ್ಯಾಪ್ತಿಗೆ ಬರಲಿದೆ. 1,200 ಸಿಸಿಗಿಂತ ಕಡಿಮೆ ಎಂಜಿನ್ ಗಾತ್ರ ಹೊಂದಿರುವ ಸಣ್ಣ ಕಾರುಗಳು, ದ್ವಿಚಕ್ರ ವಾಹನಗಳ ತೆರಿಗೆ ಕೂಡ ಶೇ. 28ರಿಂದ ಶೇ. 18ಕ್ಕೆ ಇಳಿಯಲಿದೆ. ದೊಡ್ಡ ಐಷಾರಾಮಿ ಕಾರುಗಳು ಮತ್ತು ಎಸ್‌ಯುವಿಗಳ ಮೇಲಿನ ತೆರಿಗೆಯಲ್ಲಿ ಇದರಿಂದ ವ್ಯತ್ಯಾಸವಾಗುವುದಿಲ್ಲ. ಕಡಿಮೆ ಬೆಲೆಗೆ ಸಣ್ಣ ವಾಹನಗಳು ಗ್ರಾಹಕರ ಕೈಗೆ ದೊರೆತರೆ ಏರಿಳಿತದ ಮಾರಾಟವನ್ನು ಕಂಡಿರುವ ವಲಯದಲ್ಲಿ ಮತ್ತೆ ಬೇಡಿಕೆ ಹೆಚ್ಚಳವಾಗುವ ಸಾಧ್ಯತೆ ಇದೆ. ಇದರಿಂದ ಮಾರುತಿ ಸುಜುಕಿ, ಹುಂಡೈ, ಟಾಟಾ ಮೋಟಾರ್ಸ್‌ನಂತಹ ಆಟೋ ಕಂಪೆನಿಗಳಿಗೆ ಹೆಚ್ಚಿನ ಪ್ರಯೋಜನ ದೊರೆಯಲಿದೆ.

ಇನ್ನು ವಿಮೆ ಮತ್ತು ಹಣಕಾಸು ಸೇವೆಗಳು ಕೂಡ ಶೇ. 18ರಷ್ಟು ಜಿಎಸ್ ಟಿ ಅನ್ನು ಒಳಗೊಳ್ಳಲಿದೆ. ಇದರಿಂದ ಪ್ರೀಮಿಯಂ ಮೊತ್ತಗಳ ಮೇಲೆ ಪರಿಣಾಮ ಬೀರುವುದು. ಕಡಿಮೆ ದರಕ್ಕೆ ವಿಮೆ ಸೌಲಭ್ಯ ದೊರೆತರೆ ಮಧ್ಯಮ ವರ್ಗಕ್ಕೆ ಇದರಲ್ಲಿ ಹೂಡಿಕೆ ಮಾಡುವುದು ಸುಲಭವಾಗುತ್ತದೆ. ಅವರ ಆರ್ಥಿಕ ಭದ್ರತೆಯನ್ನು ಹೆಚ್ಚಿಸುತ್ತದೆ.

ಏನು ದುಬಾರಿ ?

ಜಿಎಸ್ ಟಿ 2.0 ಅಡಿಯಲ್ಲಿ ಎಲ್ಲವೂ ಅಗ್ಗವಾಗುವುದಿಲ್ಲ. ಕೆಲವು ಸರಕುಗಳು ಶೇ. 40ರಷ್ಟು ತೆರಿಗೆಯನ್ನು ಎದುರಿಸಲಿದೆ. ಇದರಲ್ಲಿ ತಂಬಾಕು ಉತ್ಪನ್ನಗಳು, ಮದ್ಯ, ಪಾನ್ ಮಸಾಲಾ, ಆನ್‌ಲೈನ್ ಬೆಟ್ಟಿಂಗ್, ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು ಸೇರಿವೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ ಟಿ ಯಿಂದ ಹೊರಗೆ ಇರಿಸಲಾಗುವುದು. ಹೀಗಾಗಿ ಇಂಧನ ಬೆಲೆಗಳಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ವಜ್ರ, ಅಮೂಲ್ಯ ಕಲ್ಲುಗಳಂತಹ ಐಷಾರಾಮಿ ವಸ್ತುಗಳ ಮೇಲೂ ಹೆಚ್ಚಿನ ತೆರಿಗೆ ವಿಧಿಸುವ ಸಾಧ್ಯತೆಗಳಿವೆ.

ಇದನ್ನೂ ಓದಿ: Gold Reserves: ಹೆಚ್ಚು ಚಿನ್ನ ಹೊಂದಿರುವ ದೇಶಗಳಲ್ಲಿ ಭಾರತದ ಸ್ಥಾನ ಯಾವುದು?

ಯಾಕೆ ಈ ಪರಿಷ್ಕರಣೆ?

ಅಗತ್ಯ ವಸ್ತುಗಳು, ಉಪಕರಣಗಳು ಮತ್ತು ವಾಹನಗಳ ಬೆಲೆ ಕಡಿಮೆಯಾದ್ದರೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸಬಹುದು. ಹಬ್ಬದ ಋತುವಿಗೆ ಸ್ವಲ್ಪ ಮೊದಲು ಇದು ಆರ್ಥಿಕ ವಲಯದ ಚೇತರಿಕೆಗೆ ಸಹಾಯ ಮಾಡುವುದು. ತೆರಿಗೆ ಪರಿಷ್ಕರಣೆಗೆ ಈಗಾಗಲೇ ಷೇರು ಮಾರುಕಟ್ಟೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದೆ. ಈ ಕುರಿತು ಪ್ರಕಟಣೆ ಹೊರಬಿದ್ದ ಬಳಿಕ ನಿಫ್ಟಿ ದರ ಶೇ. 1 ಕ್ಕಿಂತ ಹೆಚ್ಚು ಏರಿಕೆ ಕಂಡಿತು. ಆಟೋ ಮತ್ತು ಗ್ರಾಹಕ ಸರಕುಗಳ ಷೇರುಗಳು ಹೆಚ್ಚಿನ ಲಾಭ ಗಳಿಸಿತು. ಹೊಸ ಜಿಎಸ್‌ಟಿ ರಚನೆಯಿಂದ ಭಾರತದ ಜಿಡಿಪಿಯಲ್ಲಿ ಬೆಳವಣಿಗೆಗಳಾಗುವ ಸಾಧ್ಯತೆ ಎನ್ನುತ್ತಾರೆ ಆರ್ಥಿಕ ತಜ್ಞರು.