H-1B Visa: ಎಚ್-1ಬಿ ವೀಸಾ ಶುಲ್ಕ ಏರಿಕೆ; ಭಾರತೀಯರಿಗೆ ಸಂಕಷ್ಟ? ಯಾರಿಗೆ ಅನ್ವಯಿಸುತ್ತೆ ಈ ನೀತಿ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್-1ಬಿ ವೀಸಾ ಶುಲ್ಕವನ್ನು 1 ಲಕ್ಷ ಡಾಲರ್‌ಗೆ, ಅಂದರೆ 88 ಲಕ್ಷ ರುಪಾಯಿಗೆ ದಿಢೀರ್ ಏರಿಸಿದ ಬಳಿಕ ಭಾರತದ ಐಟಿ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಯಾಗಿದೆ. ಲಕ್ಷಾಂತರ ಪೋಷಕರಿಗೆ ಅಮೆರಿಕದಲ್ಲಿರುವ ತಮ್ಮ ಮಕ್ಕಳು, ಸಂಬಂಧಿಕರಿಗೆ ಏನಾಗಬಹುದೋ ಎಂಬ ಆತಂಕ ಸಹಜವಾಗಿ ಉಂಟಾಗಿದೆ.

-

ಕೇಶವಪ್ರಸಾದ. ಬಿ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಎಚ್-1ಬಿ ವೀಸಾ (H-1B Visa) ಶುಲ್ಕವನ್ನು 1 ಲಕ್ಷ ಡಾಲರ್‌ಗೆ, ಅಂದರೆ 88 ಲಕ್ಷ ರುಪಾಯಿಗೆ ದಿಢೀರ್ ಏರಿಸಿದ ಬಳಿಕ ಭಾರತದ ಐಟಿ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಯಾಗಿದೆ. ಲಕ್ಷಾಂತರ ಪೋಷಕರಿಗೆ ಅಮೆರಿಕದಲ್ಲಿರುವ ತಮ್ಮ ಮಕ್ಕಳು, ಸಂಬಂಧಿಕರಿಗೆ ಏನಾಗಬಹುದೋ ಎಂಬ ಆತಂಕ ಸಹಜವಾಗಿ ಉಂಟಾಗಿದೆ. ಈ ನಡುವೆ ಅಮೆರಿಕ ಹೊಸ ಸ್ಪಷ್ಟನೆಗಳನ್ನೂ ನೀಡಿದ್ದು, ಇದು ಆತಂಕವನ್ನು ತಕ್ಕಮಟ್ಟಿಗೆ ಕಡಿಮೆ ಮಾಡುವಂಥದ್ದು.
ಹಾಗಾದರೆ ಏನದು ಸ್ಪಷ್ಟೀಕರಣ?
- ಹೊಸ ಅರ್ಜಿಗಳಿಗೆ ಮಾತ್ರ ಅನ್ವಯ: ಟ್ರಂಪ್ ಘೋಷಿಸಿರುವ 1 ಲಕ್ಷ ಡಾಲರ್ ಶುಲ್ಕವು, 2025ರ ಸೆಪ್ಟೆಂಬರ್ 21ರಿಂದ ಎಚ್-1ಬಿ ವೀಸಾಕ್ಕೆ ಅರ್ಜಿ ಸಲ್ಲಿಸುವವರಿಗೆ ಮಾತ್ರ ಅನ್ವಯ. ಈಗಾಗಲೇ ಎಚ್-1ಬಿ ವೀಸಾ ಅಡಿಯಲ್ಲಿ ಅಮೆರಿಕದಲ್ಲಿ ಇರುವವರಿಗೆ ಅನ್ವಯವಾಗುವುದಿಲ್ಲ. ಆದರೆ ಹೊಸ ಅರ್ಜಿಗಳು ಈ ಶುಲ್ಕ ಕೊಡದಿದ್ದರೆ ಮುಂದೆ ಹೋಗದು. ಇದು ಪ್ರತಿವರ್ಷ ಕೊಡಬೇಕಾದ ಶುಲ್ಕ ಅಲ್ಲ. ಒಂದು ಸಲ ಕೊಡಬೇಕಾದ ಶುಲ್ಕ.
- ಈಗಾಗಲೇ ಹಳೆ ಪದ್ಧತಿಯಲ್ಲಿ ಅರ್ಜಿ ಸಲ್ಲಿಸಿ, ಅಮೆರಿಕದಲ್ಲಿ ಉದ್ಯೋಗದಲ್ಲಿರುವವರು, ಯಾವುದೇ ಅಡಚಣೆ ಇಲ್ಲದೆ, ವೀಸಾ ಅವಧಿ ಮುಗಿಯುವ ತನಕ ಅಲ್ಲಿಇರಬಹುದು.
- ಈಗಾಗಲೇ ಎಚ್-1 ಬಿ ವೀಸಾ ಹೊಂದಿರುವವರಿಗೆ ಅರ್ಜಿಯ ನವೀಕರಣಕ್ಕೂ ಅಡಚಣೆ ಇರುವುದಿಲ್ಲ.
ಭಾರತೀಯ ಐಟಿ ಕಂಪನಿಗಳ ಮೇಲೆ ಪರಿಣಾಮವೇನು?
ಟಿಸಿಎಸ್, ಇನ್ಫೋಸಿಸ್, ವಿಪ್ರೊ ಮೊದಲಾದ ಭಾರತೀಯ ಐಟಿ ಕಂಪನಿಗಳು ಎಚ್-1 ಬಿ ವೀಸಾ ಅಡಿಯಲ್ಲಿ ಹೆಚ್ಚಿನ ಉದ್ಯೋಗಿಗಳನ್ನು ಅಮೆರಿಕಕ್ಕೆ ಕಳಿಸುತ್ತವೆ. ಎಚ್ -1 ಬಿ ವೀಸಾ ಅವಧಿ ಮೂರು ವರ್ಷ ಇರುತ್ತದೆ. ಮತ್ತು 6 ವರ್ಷದ ತನಕ ನವೀಕರಣ ಮಾಡಬಹುದು. ಅಮೆರಿಕದ ಕಾಯಂ ನಿವಾಸಿಯಾಗಲು ಅನೇಕ ಭಾರತೀಯರು ದಶಕಗಟ್ಟಲೆ ಕಾಲದಿಂದ ಕಾಯುತ್ತಿದ್ದಾರೆ. ಅವರಿಗೆ ಈ ಶುಲ್ಕಗಳ ಭಾರಿ ಏರಿಕೆಯಿಂದ ಹೊರೆಯಾಗಲಿದೆ.
ಹೀಗಿದ್ದರೂ, ಎಚ್ 1 ಬಿ ವೀಸಾ ಮೇಲಿನ ನಿಯಂತ್ರಣ ಹೆಚ್ಚಬಹುದು ಎಂಬ ನಿರೀಕ್ಷೆ ಕೆಲವು ವರ್ಷಗಳಿಂದ ಐಟಿ ಕಂಪನಿಗಳಿಗೆ ತಿಳಿಯದಿರುವ ವಿಚಾರವೇನಲ್ಲ. ಹೀಗಾಗಿ ಕ್ರಮೇಣ ಎಚ್ 1 ಬಿ ವೀಸಾ ಮೇಲಿನ ಅವಲಂಬನೆಯನ್ನು ಐಟಿ ಕಂಪನಿಗಳು ಕಡಿಮೆ ಮಾಡುತ್ತಿವೆ. ಇದು ಹೇಗೆ? ಅಮೆರಿಕನ್ನರಿಗೇ ಹೆಚ್ಚು ಉದ್ಯೋಗ ನೀಡುವುದು. ಸ್ಥಳೀಯರನ್ನೇ ನೇಮಿಸುವುದು. ಹಾಗಂತ ಭಾರತದಲ್ಲಿದ್ದುಕೊಂಡೇ ಮಾಡುವ ಐಟಿ ಹೊರಗುತ್ತಿಗೆ ಸೇವೆಗೆ ಟ್ರಂಪ್ ಸುಂಕ ವಿಧಿಸಿಲ್ಲ.
ಇನ್ನು ಕೆಲವು ವರದಿಗಳ ಪ್ರಕಾರ ಅಮೆರಿಕ ಮೂಲದ ಮಲ್ಟಿ ನ್ಯಾಶನಲ್ ಕಂಪನಿಗಳು ಎಚ್ 1 ಬಿ ವೀಸಾ ಮೇಲಿನ ಅವಲಂಬನೆಯನ್ನು ತಗ್ಗಿಸುವುದರ ಜತೆಗೆ, ಭಾರತದಲ್ಲಿಯೇ ಥರ್ಡ್ ಪಾರ್ಟಿ ಸರ್ವೀಸ್ ಪ್ರೊವೈಡರ್ ಕಂಪನಿಗಳ ಮೂಲಕ ಐಟಿ ಹೊರಗುತ್ತಿಗೆ ಸೇವೆಯನ್ನು ಪಡೆಯುವ ಸಾಧ್ಯತೆ ಇದೆ. ಥರ್ಡ್ ಪಾರ್ಟಿಗಳು ಎಂದರೆ ಭಾರತದ್ದೇ ಐಟಿ ಕಂಪನಿಗಳು ಅಥವಾ ಅಮೆರಿಕನ್ ಕಂಪನಿಗಳದ್ದೇ ಗ್ಲೋಬಲ್ ಕೆಪಾಸಿಟಿ ಸೆಂಟರ್‌ಗಳು. ಆಗ ಭಾರತದಲ್ಲೇ ಐಟಿ ಉದ್ಯೋಗಗಳು ಮತ್ತಷ್ಟು ಸೃಷ್ಟಿಯಾಗಲಿದೆ. ಆದ್ದರಿಂದ ತಾತ್ಕಾಲಿಕವಾಗಿ ಮಾತ್ರ ನೆಗೆಟಿವ್ ಪರಿಣಾಮ ಆಗಬಹುದು ಎನ್ನುತ್ತಾರೆ ತಜ್ಞರು.ಏನೇ ಇರಲಿ, ಭಾರತ ಸರಕಾರ ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.