ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

57th GST Council Meeting: ಬಂಧನದ ಅಧಿಕಾರ ಕಳೆದುಕೊಂಡ ಜಿಎಸ್‌ಟಿ ಅಧಿಕಾರಿಗಳು; ಸಣ್ಣ ವ್ಯಾಪಾರಿಗಳಿಗೆ ಬಿಗ್ ರಿಲೀಫ್!

Nirmala Sitharaman: 57ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ವ್ಯಾಪಾರಸ್ನೇಹಿ ವಾತಾವರಣ ನಿರ್ಮಿಸಲು ಹಲವು ಮಹತ್ವದ ಸುಧಾರಣೆಗಳ ಪ್ರಸ್ತಾವನೆ ಮಾಡಲಾಗಿದೆ. ಜಿಎಸ್‌ಟಿ ಅಧಿಕಾರಿಗಳ ಬಂಧನಾಧಿಕಾರವನ್ನು ರದ್ದುಪಡಿಸುವುದು, ಕ್ರಿಮಿನಲ್ ಮೊಕದ್ದಮೆ ಹೂಡುವ ಮಿತಿಯನ್ನು ₹5 ಕೋಟಿಗೆ ಹೆಚ್ಚಿಸುವುದು, ಸಣ್ಣ ತೆರಿಗೆ ಬೇಡಿಕೆಗಳಿಗೆ ನೋಟಿಸ್ ತಪ್ಪಿಸುವುದು ಹಾಗೂ ಇ-ಕಾಮರ್ಸ್ ವ್ಯಾಪಾರಿಗಳ ನೋಂದಣಿ ಪ್ರಕ್ರಿಯೆ ಸರಳಗೊಳಿಸುವುದು ಪ್ರಮುಖ ನಿರ್ಧಾರಗಳಾಗಿವೆ.

ಸಾಂದರ್ಭಿಕ ಚಿತ್ರ

ನವದೆಹಲಿ, ಅ. 8: ಜಿಎಸ್‌ಟಿ ಅಧಿಕಾರಿಗಳಿಗಿದ್ದ (GST officers) ಬಂಧನದ ಪರಮಾಧಿಕಾರ ರದ್ದು, ಕ್ರಿಮಿನಲ್ ಮೊಕದ್ದಮೆ ಹೂಡುವ ಮಿತಿಯನ್ನು 5 ಕೋಟಿ ರೂ.ಗೆ ಹೆಚ್ಚಳ ಹಾಗೂ ನೋಂದಣಿ ಪ್ರಕ್ರಿಯೆ ಸರಳೀಕರಣ ಸೇರಿ ವ್ಯಾಪಾರಸ್ನೇಹಿ ವಾತಾವರಣ ನಿರ್ಮಿಸುವ ಹಲವು ಮಹತ್ವದ ಸುಧಾರಣಾ ಪ್ರಸ್ತಾವನೆಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala SItaraman) ಅವರ ಅಧ್ಯಕ್ಷತೆಯಲ್ಲಿ ನಡೆದ 57ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ (GST Council meeting) ಪ್ರಕಟಿಸಲಾಗಿದೆ.

ಜಿಎಸ್‌ಟಿ ಕಾಯ್ದೆಯ ಅಡಿಯಲ್ಲಿ ಬರುವ 9 ಅಪರಾಧಗಳಿಗೆ ಕ್ರಿಮಿನಲ್ ಹೊಣೆಗಾರಿಕೆಯನ್ನು ಸಂಪೂರ್ಣವಾಗಿ ಕೈಬಿಡುವ ಹಾಗೂ ಇತರ 24 ನಿಯಮಗಳನ್ನು ಸಡಿಲಗೊಳಿಸುವ ಮೂಲಕ ವ್ಯಾಪಾರಿಗಳಿಗೆ ಆಡಳಿತಾತ್ಮಕ ನೆಮ್ಮದಿ ನೀಡಲು ಕೌನ್ಸಿಲ್ ಮುಂದಾಗಿದೆ. ಪ್ರಸ್ತುತ 1 ಕೋಟಿ ರೂಪಾಯಿಗಿಂತ ಹೆಚ್ಚಿನ ತೆರಿಗೆ ವಂಚನೆ ಅಥವಾ ನಕಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಪ್ರಕರಣಗಳಲ್ಲಿ ಕಮಿಷನರ್ ಮಟ್ಟದ ಅನುಮತಿಯೊಂದಿಗೆ ಜಿಎಸ್‌ಟಿ ಅಧಿಕಾರಿಗಳು ಬಂಧಿಸುವ ಅಧಿಕಾರ ಹೊಂದಿದ್ದರು.

ಆದರೆ, ಹೊಸ ತಿದ್ದುಪಡಿಯ ಪ್ರಕಾರ ಅಧಿಕಾರಿಗಳ ಈ ಬಂಧನದ ಅಧಿಕಾರವನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. ಇನ್ಮುಂದೆ ಜಿಎಸ್‌ಟಿ ಅಧಿಕಾರಿಗಳು ಕೇವಲ ತೆರಿಗೆ ವಸೂಲಾತಿಗೆ ಮಾತ್ರ ಗಮನಹರಿಸಲಿದ್ದು, ಕ್ರಿಮಿನಲ್ ಕಾನೂನು ಪ್ರಕ್ರಿಯೆಗಳನ್ನು ಕಾನೂನು ಜಾರಿ ಸಂಸ್ಥೆಗಳು ನಿರ್ವಹಿಸಲಿವೆ. ರಿಟರ್ನ್ಸ್ ವಿಳಂಬ ಸಲ್ಲಿಕೆ ಅಥವಾ ವರ್ಗೀಕರಣ ವಿವಾದಗಳಂತಹ ಪ್ರಕರಣಗಳಲ್ಲಿ ತೆರಿಗೆ, ಬಡ್ಡಿ ಮತ್ತು ದಂಡ ಪಾವತಿಸಿ ಬಂಧನದಿಂದ ತಪ್ಪಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ.

ಬಹಿರಂಗ ಪತ್ರ ಬರೆದು ಚುನಾವಣಾ ಆಯೋಗ ದುರ್ಬಲಗೊಳಿಸುವ ಪ್ರಯತ್ನಕ್ಕೆ 42 ಮಾಜಿ ನ್ಯಾಯಾಧೀಶರಿಂದ ಕಳವಳ

ಸಣ್ಣ ವ್ಯಾಪಾರಿಗಳ ಮೇಲಿನ ಹೊರೆಯನ್ನು ತಗ್ಗಿಸಲು ₹10,000ಕ್ಕಿಂತ ಕಡಿಮೆ ಇರುವ ತೆರಿಗೆ ಬೇಡಿಕೆಗಳಿಗೆ ಜಿಎಸ್‌ಟಿ ನೋಟಿಸ್ ಜಾರಿ ಮಾಡದಿರಲು ಚರ್ಚಿಸಲಾಗಿದೆ. ಇಂತಹ ಪ್ರಕರಣಗಳು ಸಂಖ್ಯೆಯಲ್ಲಿ ಶೇ. 20ರಷ್ಟಿದ್ದರೂ ತೆರಿಗೆ ಮೊತ್ತ ಅತ್ಯಲ್ಪವಾಗಿದೆ. ಅಲ್ಲದೆ, ನಕಲಿ ಐಟಿಸಿ ಹಾವಳಿಗೆ ಕಡಿವಾಣ ಹಾಕಲು ಮಾಸಿಕ ರಿಟರ್ನ್ಸ್‌ಗಳಲ್ಲಿ ಇನ್‌ವಾಯ್ಸ್ ಹೊಂದಾಣಿಕೆ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು.

ಇ-ಕಾಮರ್ಸ್ ಮೂಲಕ ವ್ಯಾಪಾರ ಮಾಡುವ ಸಣ್ಣ ಮಾರಾಟಗಾರರಿಗೆ ನೋಂದಣಿ ಪ್ರಕ್ರಿಯೆಯನ್ನು ಗಣನೀಯವಾಗಿ ಸರಳಗೊಳಿಸಲಾಗಿದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಗೋದಾಮುಗಳನ್ನೇ ತಮ್ಮ ನೋಂದಾಯಿತ ವ್ಯವಹಾರದ ಸ್ಥಳವೆಂದು ತೋರಿಸಲು ಅವಕಾಶ ನೀಡುವ ಪ್ರಸ್ತಾವವಿದೆ. ಇದರಿಂದ ದೇಶದ ಸುಮಾರು 9.5 ಲಕ್ಷ ಸಣ್ಣ ವ್ಯಾಪಾರಿಗಳು ವಿವಿಧ ರಾಜ್ಯಗಳಲ್ಲಿ ಪ್ರತ್ಯೇಕ ಕಚೇರಿ ತೆರೆಯುವ ತೊಂದರೆಯಿಲ್ಲದೆ ರಾಷ್ಟ್ರೀಯ ಮಾರುಕಟ್ಟೆಗೆ ಪ್ರವೇಶ ಪಡೆಯಲಿದ್ದಾರೆ. ಒಂದು ರಾಜ್ಯದಲ್ಲಿ ಭೌತಿಕ ಪರಿಶೀಲನೆ ಹಾಗೂ ಬಯೋಮೆಟ್ರಿಕ್ ದೃಢೀಕರಣ ಪೂರ್ಣಗೊಂಡರೆ ಸಾಕು.

ವ್ಯಾಪಾರದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ವರ್ಷಕ್ಕೊಮ್ಮೆ ಮಾತ್ರ ಜಿಎಸ್‌ಟಿ ದರ ಪರಿಷ್ಕರಣೆ, ಸರಕು ಸಾಗಣೆ ವಾಹನಗಳನ್ನು ರಸ್ತೆಯಲ್ಲಿ ಅಡೆತಡೆಯಿಲ್ಲದೆ ಸಂಚರಿಸಲು ಅನುವು ಮಾಡುವ ಗುಪ್ತಚರ ಆಧಾರಿತ ಸಾರಿಗೆ ತಪಾಸಣೆ ವ್ಯವಸ್ಥೆ, ಉದ್ಯೋಗಿಗಳಿಗೆ ಕಂಪನಿಗಳು ನೀಡುವ ಜೀವ ಹಾಗೂ ಆರೋಗ್ಯ ವಿಮಾ ಪ್ರೀಮಿಯಂ ಮೇಲಿನ ಶೇ. 18 ಜಿಎಸ್‌ಟಿಗೆ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಸೌಲಭ್ಯ ಸೇರಿದಂತೆ ಹಲವು ಸುಧಾರಣೆಗಳನ್ನು ಹಂತ ಹಂತವಾಗಿ ಮುಂದಿನ ವರ್ಷದ ಆರಂಭದಿಂದ ಜಾರಿಗೆ ತರಲು ತೀರ್ಮಾನಿಸಲಾಗಿದೆ.