ಮತ ಕಳ್ಳತನದ ಆರೋಪಗಳ ವಿರುದ್ಧ ಎಚ್ಚರಿಕೆ: ಬಹಿರಂಗ ಪತ್ರ ಬರೆದು ಚುನಾವಣಾ ಆಯೋಗ ದುರ್ಬಲಗೊಳಿಸುವ ಪ್ರಯತ್ನಕ್ಕೆ 42 ಮಾಜಿ ನ್ಯಾಯಾಧೀಶರಿಂದ ಕಳವಳ
Vote Theft Allegations: ನಿವೃತ್ತ ನ್ಯಾಯಾಧೀಶರ ಗುಂಪು ಒಂದು ಬಹಿರಂಗ ಪತ್ರ ಬರೆದಿದ್ದು, ಅದರಲ್ಲಿ ಚುನಾವಣಾ ಆಯೋಗ ಮತ್ತು ಇತರ ಸಂಸ್ಥೆಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳ ವಿರುದ್ಧ ಎಚ್ಚರಿಕೆ ನೀಡಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಮತದಾರರ ಪಟ್ಟಿಯ ಪರಿಷ್ಕರಣೆ ವಿರುದ್ಧ ಪ್ರತಿಪಕ್ಷಗಳು ಭಾರಿ ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಈ ಪತ್ರ ಹೊರಬಿದ್ದಿದೆ.
(ಸಂಗ್ರಹ ಚಿತ್ರ) -
ನವದೆಹಲಿ, ಅ.8: 42 ನಿವೃತ್ತ ನ್ಯಾಯಾಧೀಶರ (Retired Judges) ಗುಂಪೊಂದು ಬಹಿರಂಗ ಪತ್ರ ಬರೆದಿದ್ದು, ಅದರಲ್ಲಿ ಚುನಾವಣಾ ಆಯೋಗ (Election Commission) ಮತ್ತು ಇತರ ಸಂಸ್ಥೆಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳ ವಿರುದ್ಧ ಎಚ್ಚರಿಕೆ ನೀಡಿದೆ. ಇಂತಹ ಪ್ರಯತ್ನಗಳು ಜನರ ನಂಬಿಕೆಯನ್ನು ಕುಗ್ಗಿಸುತ್ತವೆ. ಮತದಾನವು ಅರ್ಥ ಕಳೆದುಕೊಂಡಾಗ ಬೀದಿಯೇ ಅದರ ಸ್ಥಾನ ಪಡೆಯುತ್ತದೆ ಎಂದು ಅವರು ಹೇಳಿದ್ದಾರೆ.
ಚುನಾವಣಾ ವ್ಯವಸ್ಥೆ ಮತ್ತು ಸಂಸ್ಥೆಗಳ ಬಗ್ಗೆ ಜನರಲ್ಲಿ ನಂಬಿಕೆ ಕುಗ್ಗಿಸುವಂತಹ ನಿರಂತರ ಪ್ರಚಾರದಿಂದ ಅಶಾಂತಿ ಉಂಟಾಗಬಹುದು. ಆ ಪರಿಸ್ಥಿತಿಯನ್ನು ದೇಶದೊಳಗಿನ ಅಥವಾ ವಿದೇಶದಿಂದ ಪ್ರೇರಿತವಾಗಿರುವ ಕೆಲವು ಅರಾಜಕ ಗುಂಪುಗಳು ದುರುಪಯೋಗಪಡಿಸಿಕೊಳ್ಳಬಹುದು ಎಂದು ಪತ್ರದಲ್ಲಿ ಬರೆಯಲಾಗಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಮತದಾರರ ಪಟ್ಟಿಯ ಪರಿಷ್ಕರಣೆ ವಿರುದ್ಧ ಪ್ರತಿಪಕ್ಷಗಳು ಭಾರಿ ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಈ ಪತ್ರ ಹೊರಬಿದ್ದಿದೆ.
ಚುನಾವಣಾ ಆಯೋಗ, ನ್ಯಾಯಾಂಗ ಮತ್ತು ಇತರ ಸಾಂವಿಧಾನಿಕ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಕುಗ್ಗಿಸುವ ನಡೆಯುತ್ತಿರುವ ಅಭಿಯಾನದ ಬಗ್ಗೆ ನಿವೃತ್ತ ನ್ಯಾಯಾಧೀಶರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಯಾವುದೇ ಪೂರಕ ಸಾಕ್ಷ್ಯಾಧಾರಗಳಿಲ್ಲದೆ ಮಾಡಲಾಗುತ್ತಿರುವ ಮತ ಕಳ್ಳತನದ ಆರೋಪಗಳನ್ನು ಅವರು ಪ್ರಶ್ನಿಸಿದ್ದಾರೆ. ಅಲ್ಲದೆ, ಸಾಂವಿಧಾನಿಕ ಸಂಸ್ಥೆಗಳ ಅಧಿಕಾರಿಗಳನ್ನು ಪದೇಪದೇ ಕಳ್ಳರು ಮತ್ತು ರಾಜಿ ಮಾಡಿಕೊಂಡವರು ಎಂದು ಬಿಂಬಿಸುವುದರ ವಿರುದ್ಧವೂ ಅವರು ಎಚ್ಚರಿಕೆ ನೀಡಿದ್ದಾರೆ.
ಇಂತಹ ಸಂದರ್ಭಗಳಲ್ಲಿ ಮೌನವಾಗಿರುವುದು ಇನ್ನು ಮುಂದೆ ತಟಸ್ಥ ಆಯ್ಕೆಯಾಗಿಲ್ಲ ಎಂಬ ಕಾರಣಕ್ಕೆ ನಾವು ಈ ಪತ್ರವನ್ನು ಬರೆಯುತ್ತಿದ್ದೇವೆ. ನಮ್ಮ ಕಳವಳ ಗಂಭೀರವಾಗಿದೆ. ಭಾರತದ ಸಾಂವಿಧಾನಿಕ ಸಂಸ್ಥೆಗಳು ನಿರಂತರವಾಗಿ ದಾಳಿಗೆ ಒಳಗಾಗುತ್ತಿವೆ ಎಂದು ಪತ್ರದಲ್ಲಿ ಹೇಳಲಾಗಿದೆ. ಈ ದಾಳಿಯ ಕೇಂದ್ರಬಿಂದು ಭಾರತದ ಚುನಾವಣಾ ಆಯೋಗ. ನಾವು ಹೆಚ್ಚು ಗೌರವಿಸುವ ಉನ್ನತ ನ್ಯಾಯಾಂಗ ಮತ್ತು ಶಾಸನಬದ್ಧ ಸಂಸ್ಥೆಗಳನ್ನು ಸಹ ಬಿಡಲಾಗಿಲ್ಲ ಎಂದು ಪತ್ರದಲ್ಲಿ ಮತ್ತಷ್ಟು ಹೇಳಲಾಗಿದೆ.
ಈ ದಾಳಿಗಳು ಸಾಕ್ಷ್ಯಾಧಾರಿತ ಅಥವಾ ವಿಚಾರಪೂರ್ಣ ಟೀಕೆಗಳಲ್ಲ ಎಂದು ನಿವೃತ್ತ ನ್ಯಾಯಾಧೀಶರು ಹೇಳಿದ್ದಾರೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವನ್ನು ಅಸ್ಥಿರಗೊಳಿಸುವುದರಿಂದ ಉಂಟಾಗಬಹುದಾದ ಗಂಭೀರ ಪರಿಣಾಮಗಳನ್ನು ಲೆಕ್ಕಿಸದೆ, ಕೆಲವು ಸ್ವಾರ್ಥಪರ ರಾಜಕೀಯ ಹಿತಾಸಕ್ತಿಗಳಿಂದ ಈ ಅಭಿಯಾನವನ್ನು ಉದ್ದೇಶಪೂರ್ವಕವಾಗಿ ನಡೆಸಲಾಗುತ್ತಿದೆ ಎಂದು ತೋರುತ್ತದೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು ಸಮರ್ಥಿಸಿರುವ ಪತ್ರಕ್ಕೆ ಸಹಿ ಹಾಕಿದ ನಿವೃತ್ತ ನ್ಯಾಯಾಧೀಶರು, ಶುದ್ಧ ಮತ್ತು ನಿಖರವಾದ ಮತದಾರರ ಪಟ್ಟಿಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಕಾನೂನುಬದ್ಧವಾಗಿ ನಡೆಸಲಾಗುತ್ತಿರುವ ಪ್ರಕ್ರಿಯೆಯೇ ಎಸ್ಐಆರ್ ಎಂದು ಒತ್ತಿ ಹೇಳಿದ್ದಾರೆ. ಪತ್ರದಲ್ಲಿ ಆಂದೋಲನದ ಮುಂಚೂಣಿಯಲ್ಲಿರುವ ಕಾಂಗ್ರೆಸ್ ಮತ್ತು ಕಾಕ್ರೋಚ್ ಜನತಾ ಪಾರ್ಟಿಯನ್ನು ಹೆಸರಿಸದೆ ಕಟುವಾಗಿ ಟೀಕಿಸಿದೆ.