ಬೆಂಗಳೂರು, ಡಿ. 6: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು 2025ರ ಡಿಸೆಂಬರ್ 5ರಂದು ರೆಪೊ ದರದಲ್ಲಿ (Repo Rate) 0.25% ಕಡಿತ ಮಾಡುವ ಮೂಲಕ ಗುಡ್‌ನ್ಯೂಸ್ ನೀಡಿದೆ. ಈ ಹಿನ್ನೆಲೆಯಲ್ಲಿ ರೆಪೊ ದರವು 5.25%ಕ್ಕೆ ಇಳಿಕೆಯಾಗಿದೆ. 2025ರ ಫೆಬ್ರವರಿ 7ರಂದು ರೆಪೊ ದರ 6.25%ರ ಮಟ್ಟದಲ್ಲಿ ಇತ್ತು. ಈ ವರ್ಷ ಇದುವರೆಗೆ ಒಟ್ಟಾರೆಯಾಗಿ ರೆಪೊ ದರದಲ್ಲಿ 1.25% ಇಳಿಕೆಯಾಗಿದೆ. ಹಣದುಬ್ಬರ ಇಳಿಕೆಯಾಗಿರುವುದರಿಂದ ಬಡ್ಡಿ ದರ ಇಳಿಕೆಗೆ ಹಾದಿ ಸುಗಮವಾಗಿದೆ. ಇದು ಯಾವ ರೀತಿ ನಿಮ್ಮ ಹೋಮ್ ಲೋನ್ ಇಎಂಐಯನ್ನು ತಗ್ಗಿಸಲಿದೆ? ಎಷ್ಟು ಉಳಿತಾಯವಾಗಲಿದೆ ಎಂಬುದನ್ನು ನೋಡೋಣ.
ಹಣದುಬ್ಬರ ಇಳಿಕೆಗೆ ಕಾರಣವೇನು?
ಉತ್ತಮ ಮುಂಗಾರಿನ ಪರಿಣಾಮ ದೇಶದಲ್ಲಿ ಆಹಾರೋತ್ಪಾದನೆ ದಾಖಲೆಯ ಮಟ್ಟದಲ್ಲಿ ನಡೆದಿದೆ. ಇದು ಹಣದುಬ್ಬರ ಇಳಿಕೆಗೂ ಕಾರಣವಾಗಿದೆ. ಈ ವರ್ಷ ಹಣದುಬ್ಬರದ ಮುನ್ನೋಟವನ್ನೂ ಆರ್‌ಬಿಐ 2.6%ರಿಂದ 2%ಕ್ಕೆ ಇಳಿಸಿದೆ. ಹೀಗಾಗಿ ವಾರ್ಷಿಕ ಜಿಡಿಪಿಯ ಮುನ್ನೋಟವನ್ನು ಆರ್‌ಬಿಐ 6.8%ರಿಂದ 7.3%ಕ್ಕೆ ಏರಿಸಿದೆ.
ಹೀಗೆ ಆರ್‌ಬಿಐ ತನ್ನ ರೆಪೊ ದರವನ್ನು 5.25%ಕ್ಕೆ ಇಳಿಸಿರುವುದರಿಂದ ಗೃಹ ಸಾಲ ಮತ್ತು ವಾಹನ ಸಾಲಗಳ ಬಡ್ಡಿ ದರಗಳು ಇಳಿಕೆಯಾಗಲಿದೆ. ರೆಪೊ ದರ ಎಂದರೆ, ಆರ್‌ಬಿಐ ಇತರ ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರ. ಇದು ಇಳಿಕೆಯಾದಾಗ ಬ್ಯಾಂಕ್‌ಗಳಿಗೆ ಸಾಲಕ್ಕೆ ತಗಲುವ ಖರ್ಚು ಕೂಡ ಇಳಿಕೆಯಾಗುತ್ತದೆ. ಅದನ್ನು ಬಡ್ಡಿ ದರ ಇಳಿಕೆಯ ಮೂಲಕ ಗ್ರಾಹಕರಿಗೆ ವರ್ಗಾಯಿಸುತ್ತವೆ. ಆಗ ಗೃಹ ಸಾಲ, ಕಾರು ಸಾಲಗಳ ಬಡ್ಡಿ ದರಗಳಿಗೆ ಇಳಿಯುತ್ತವೆ.
ಆರ್‌ಬಿಐ ರೆಪೋ ದರ ಕಡಿತ: ಗೃಹ ಸಾಲಗಾರರಿಗೆ EMIನಲ್ಲಿ ಉಳಿತಾಯ ಎಷ್ಟು?
50 ಲಕ್ಷ ರುಪಾಯಿಗಿಂತ ಹೆಚ್ಚಿನ ಗೃಹ ಸಾಲದ ಬಡ್ಡಿ ದರ
ಬ್ಯಾಂಕ್ ಆಫ್ ಬರೋಡಾ: 7.45%
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: 7.50%
ಐಸಿಐಸಿಐ ಬ್ಯಾಂಕ್: 7.65%
ಎಚ್‌ಡಿಎಫ್‌ಸಿ ಬ್ಯಾಂಕ್: 7.90%
ಎಕ್ಸಿಸ್ ಬ್ಯಾಂಕ್: 8.35%
ಆರ್‌ಬಿಐ ಡಿಸೆಂಬರ್ 5ರಂದು ರೆಪೊ ದರದಲ್ಲಿ 0.25%ನಷ್ಟು ದರ ಕಡಿತ ಮಾಡಿರುವುದರಿಂದ ಗೃಹ ಸಾಲಗಾರರ ಇಎಂಐ ಹೇಗೆ ಕಡಿಮೆಯಾಗುತ್ತದೆ ಎಂಬುದನ್ನು ನೋಡೋಣ. ಈಗ ಹೊಸ ಸಾಲಗಾರರು 50 ಲಕ್ಷ ರುಪಾಯಿ ಹೋಮ್ ಲೋನ್ ಅನ್ನು 8% ಬಡ್ಡಿ ದರದಲ್ಲಿ 20 ವರ್ಷಗಳಿಗೆ ತೆಗೆದುಕೊಂಡಿದ್ದರೆ, ಇಎಂಐ 41,047 ರುಪಾಯಿಗೆ ಇಳಿಯಲಿದೆ. ಈ ಹಿಂದೆ 41,822 ರುಪಾಯಿ ಇತ್ತು. ಅಂದರೆ 775 ರುಪಾಯಿ ಉಳಿತಾಯವಾಗುತ್ತದೆ. ಇದೇ ಸಾಲವನ್ನು 15 ವರ್ಷಗಳ ಅವಧಿಗೆ ತೆಗೆದುಕೊಂಡಿದ್ದರೆ, ಮಾಸಿಕ ಇಎಂಐ 47,783 ರುಪಾಯಿಗಳಿಂದ 47,064 ರುಪಾಯಿಗೆ ಇಳಿಯಲಿದೆ.
ಸಾಲಗಾರರು ಈಗ ಏನು ಮಾಡಬೇಕು?
ನಿಮ್ಮ ಸಾಲದ ಬಡ್ಡಿ ದರವನ್ನು ಪರಿಶೀಲಿಸಿ. ಗೃಹ ಸಾಲ ದರ 7.50%ರಿಂದ 8 ಪರ್ಸೆಂಟ್ ಒಳಗಿದ್ದರೆ ಸರಿ, ಹೆಚ್ಚಿದ್ದರೆ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ. ಬ್ಯಾಂಕ್‌ನಲ್ಲಿ ವಿಚಾರಿಸಿ. ಕಡಿಮೆ ಬಡ್ಡಿ ದರಕ್ಕೆ ಹೋಮ್ ಲೋನ್ ನಿಗದಿಪಡಿಸುವಂತೆ ಮನವಿ ಮಾಡಿ. ಕೊನೆಯದಾಗಿ ಸಿಬಿಲ್ ಸ್ಕೋರ್ ಕೂಡ ಗೃಹ ಸಾಲದ ಬಡ್ಡಿ ದರದ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಅದನ್ನೂ ಪರಿಶೀಲಿಸಿ. ಒಂದು ವೇಳೆ ಅಪ್‌ಡೇಟ್ ಆಗಿರದಿರುವುದರಿಂದ ಸಮಸ್ಯೆಯಾಗುತ್ತಿದ್ದರೆ, ಅದನ್ನು ಪರಿಷ್ಕರಿಸಲು ಮರೆಯದಿರಿ.