ಬೆಂಗಳೂರು, ಜ. 4: ಮನೆ ಬಾಡಿಗೆ, ಮಕ್ಕಳ ಶಾಲಾ ಶುಲ್ಕ, ಆಸ್ಪತ್ರೆ ಬಿಲ್ ಸೇರಿದಂತೆ ತಿಂಗಳಿಗೆ (Monthly expenses) ಈಗ ಒಂದು ಲಕ್ಷ ರುಪಾಯಿ ಖರ್ಚು ಮಾಡುತ್ತಿದ್ದರೆ ಮುಂದಿನ 20 ವರ್ಷಗಳ ಬಳಿಕ ಎಷ್ಟು ಹಣ ಬೇಕಾಗುತ್ತೆ? ಇದಕ್ಕಾಗಿ ನಮ್ಮ ಆದಾಯ (Income) ಎಷ್ಟಿರಬೇಕಾಗುತ್ತೆ ಎನ್ನುವ ಯೋಚನೆ ಬಂದಿದೆಯೇ? ಇಲ್ಲವಾದರೆ ಈಗಲೇ ಮಾಡಿಕೊಳ್ಳಿ. ಯಾಕೆಂದರೆ ಹಣದುಬ್ಬರದ (Inflation) ಸ್ಥಿತಿಗತಿಗಳನ್ನು ನೋಡಿದರೆ ಒಂದು ವೇಳೆ ಈಗ ಸರಿಯಾದ ಯೋಜನೆ ಹಾಕಿಲ್ಲವಾದರೆ ಮುಂದಿನ 20 ವರ್ಷಗಳ ಬಳಿಕ ಆರ್ಥಿಕ ತೊಂದರೆಯನ್ನು ಎದುರಿಸಬೇಕಾಗಬಹುದು ಎನ್ನುತ್ತಾರೆ ಹಣಕಾಸು ತಜ್ಞರು. ಈ ಬಗ್ಗೆ 'ವಿಶ್ವವಾಣಿ ಮನಿ' (Vishwavani money) ಯೂಟ್ಯೂಬ್ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ನೀಡಿರುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಈಗ ತಿಂಗಳಿಗೆ 1 ಲಕ್ಷ ರುಪಾಯಿ ಖರ್ಚು ಮಾಡುವಿರಿ ಎಂದಾದರೆ ಮುಂದಿನ 20 ವರ್ಷಗಳ ಬಳಿಕ ತಿಂಗಳ ಖರ್ಚಿಗೆ 3 ಲಕ್ಷ ರುಪಾಯಿಗೂ ಅಧಿಕ ಹಣ ಬೇಕಾಗುತ್ತದೆ. ಇದಕ್ಕಾಗಿ ಏನು ಯೋಜನೆ ಮಾಡಬೇಕು, ಹೇಗೆ ಹಣ ಉಳಿತಾಯ ಮಾಡಬೇಕು ಎನ್ನುವುದನ್ನು ವಿವರಿಸಿದ್ದಾರೆ ಕೇಶವ ಪ್ರಸಾದ್.
ಬೆಂಗಳೂರಿನಂತ ಮೆಟ್ರೋ ನಗರಗಳಲ್ಲಿ ಪ್ರಸ್ತುತ ಕೆಳ ಮಾಧ್ಯಮ ವರ್ಗದ ಕುಟುಂಬದ ತಿಂಗಳ ಖರ್ಚು ಒಂದು ಲಕ್ಷ ರುಪಾಯಿ. ಇದರಲ್ಲಿ ಮನೆ ಬಾಡಿಗೆ, ಕರೆಂಟ್ ಬಿಲ್, ನೀರಿನ ಬಿಲ್, ಶಾಲೆ, ಆಸ್ಪತ್ರೆ ಖರ್ಚು ಸೇರಿವೆ. ಈ ಖರ್ಚು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇರುತ್ತದೆ. ಹೀಗಾಗಿ ಸರಿಯಾದ ರೀತಿಯಲ್ಲಿ ಉಳಿತಾಯ ಯೋಜನೆ ಮಾಡುವುದು ಮುಖ್ಯವಾಗಿದೆ ಎನ್ನುತ್ತಾರೆ ಅವರು.
20 ವರ್ಷಗಳ ಬಳಿಕ ತಿಂಗಳ ಖರ್ಚಿಗೆ ಎಷ್ಟು ಹಣ ಬೇಕು? ಇಲ್ಲಿದೆ ವಿವರ:
ತಿಂಗಳ ಖರ್ಚು ಅಲ್ಲದೆ ಕೆಲವೊಮ್ಮೆ ಹೆಚ್ಚುವರಿ ಖರ್ಚುಗಳು ಬರುತ್ತವೆ. ಇವುಗಳಲ್ಲಿ ಪ್ರವಾಸ, ರೆಸ್ಟೋರೆಂಟ್, ಪಬ್ ಖರ್ಚುಗಳು, ಅನಿರೀಕ್ಷಿತ ಆಸ್ಪತ್ರೆ ಖರ್ಚುಗಳು ಕೂಡ ಸೇರಿರುತ್ತವೆ. ಹೀಗಾಗಿ ಪ್ರತಿಯೊಬ್ಬರಿಗೂ ಈಗ ದೊಡ್ಡ ಮಟ್ಟದ ಉಳಿತಾಯ ಕಷ್ಟವಾಗುತ್ತಿದೆ. ಆದರೆ ಇದನ್ನು ಮಾಡಲೇಬೇಕು ಮತ್ತು ನಮ್ಮ ಖರ್ಚಿನ ಮೇಲೆ ನಿಯಂತ್ರಣ ಹಾಕಲೇಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
20 ವರ್ಷಗಳ ಬಳಿಕ ಸಂಬಳ ಕೊಂಚ ಹೆಚ್ಚಾಗಬಹುದು. ಆದರೆ ಖರ್ಚು ಮಾತ್ರ ಇದೇ ರೀತಿ ಅಥವಾ ಇದಕ್ಕಿಂತ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಹಣದುಬ್ಬರವು ರಾತ್ರೋ ರಾತ್ರಿ ನಮ್ಮ ಉಳಿತಾಯವನ್ನು ಖಾಲಿ ಮಾಡುತ್ತದೆ. ಇದು ನಮಗೆ ಅರಿವಿಲ್ಲದಂತೆ ಖರ್ಚುಗಳನ್ನು ಹೆಚ್ಚಿಸುತ್ತ ಹೋಗುತ್ತದೆ. ಅಂಕಿ ಅಂಶಗಳನ್ನು ಗಮನಿಸಿದರೆ ಸಾಮಾನ್ಯವಾಗಿ ಹಣದುಬ್ಬರ ಪ್ರಮಾಣ ಶೇ. 6ರಷ್ಟು ಇರುತ್ತದೆ. ಇದನ್ನು ಲೆಕ್ಕಾಚಾರದಲ್ಲಿಟ್ಟುಕೊಂಡು 20 ವರ್ಷಗಳ ಬಳಿಕ ನಮ್ಮ ನಿತ್ಯದ ಖರ್ಚಿಗೆ 3.20 ಲಕ್ಷ ರುಪಾಯಿ ಬೇಕಾಗುತ್ತದೆ. ಇದಕ್ಕಾಗಿ ನಾವು ತಿಂಗಳ ಖರ್ಚಿಗೆ ಹೆಚ್ಚುವರಿ ಆದಾಯದ ಮೂಲವನ್ನು ಕಂಡುಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ಅವರು.
ಹೊಸ ವರ್ಷದಲ್ಲಿ ಹೂಡಿಕೆ ಎಲ್ಲಿ, ಹೇಗೆ ಮಾಡಬೇಕು ?
ತಿಂಗಳಿಗೆ ನಾವು 3.20 ಲಕ್ಷ ರುಪಾಯಿ ಖರ್ಚು ಮಾಡಬೇಕಾದರೆ ವರ್ಷಕ್ಕೆ 38- 40 ಲಕ್ಷ ರುಪಾಯಿ ಆದಾಯವನ್ನು ಗಳಿಸಬೇಕಾಗುತ್ತದೆ. ಇದಕ್ಕಾಗಿ ಒಂದೇ ಆದಾಯವನ್ನು ನಂಬಿಕೊಂಡು ಕೂರುವಂತಿಲ್ಲ. ಬೇರೆಬೇರೆ ಆದಾಯದ ಮೂಲವನ್ನು ಸಿದ್ದ ಪಡಿಸಿಕೊಳ್ಳಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಏನು ಮಾಡಬಹುದು?
ದಿನೇ ದಿನೆ ನಮ್ಮ ಅಗತ್ಯಗಳು, ಖರ್ಚುಗಳು ಹೆಚ್ಚಾಗುತ್ತಲೇ ಇರುತ್ತವೆ. ಇದಕ್ಕಾಗಿ ಆರೋಗ್ಯ ವಿಮೆ, ಮಕ್ಕಳ ವಿದ್ಯಾಭ್ಯಾಸ, ವಿವಾಹ ಮೊದಲಾದ ಖರ್ಚುಗಳಿಗೆ ನಾವು ಹಣ ಕೂಡಿಡುವುದು ಮುಖ್ಯ. ಇದು ತಿಂಗಳ ಬಜೆಟ್ ಮೇಲೆ ಒತ್ತಡ ಉಂಟು ಮಾಡಬಹುದು. ಆದರೆ ಮುಂದೆ ಎದುರಾಗಬಹುದಾದ ಆರ್ಥಿಕ ಸಂಕಷ್ಟದಿಂದ ತಪ್ಪಿಸುತ್ತದೆ ಎನ್ನುವ ಕಟು ವಾಸ್ತವವನ್ನು ನಾವು ಒಪ್ಪಿಕೊಳ್ಳಲೇಬೇಕು ಎನ್ನುತ್ತಾರೆ ಕೇಶವ್ ಪ್ರಸಾದ್.
ಕ್ರಿಪ್ಟೋದಲ್ಲಿ ಹೂಡಿಕೆ ಮಾಡುವುದೇ ಬೇಡ ಎನ್ನುತ್ತಾರೆ ತಜ್ಞರು; ಕಾರಣವೇನು?
ಒಂದು ವೇಳೆ ಈಗ ನಾವು ಹಣದುಬ್ಬರವನ್ನು ಪರಿಗಣಿಸದೇ ಇದ್ದರೆ, ನಿವೃತ್ತಿ ಯೋಜನೆ ಮಾಡದೇ ಇದ್ದರೆ ಮುಂದೆ ಸಂಕಷ್ಟ ಎದುರಾಗುವುದು ಖಂಡಿತ. ನಾವು ನಮ್ಮ ನಿವೃತ್ತಿಗಾಗಿ ಒಂದು ಕೋಟಿ ರುಪಾಯಿಯ ಉಳಿತಾಯವನ್ನು ಸಿದ್ದಪಡಿಸಿ ಇಟ್ಟುಕೊಳ್ಳಬೇಕಾಗುತ್ತದೆ. ಇದಕ್ಕಾಗಿ ನಿವೃತ್ತಿಯ ಅನಂತರಕ್ಕಾಗಿ ಈಗಲೇ ಹಣ ಕೂಡಿಡಬೇಕಾಗುತ್ತದೆ. ಇದಕ್ಕಾಗಿ ಮೊದಲೇ ನಾವು ಉಳಿತಾಯಕ್ಕೆ ಆದ್ಯತೆ ನೀಡಬೇಕು. ನಿವೃತ್ತಿಗೆ ಯೋಜನೆ ಹಾಕುವುದನ್ನು ಮರೆಯಬಾರದು ಎನ್ನುತ್ತಾರೆ ಅವರು.
ಸಾಮಾನ್ಯವಾಗಿ 40 ವರ್ಷಗಳ ಬಳಿಕ ಸಂಬಳ ಹೆಚ್ಚಾಗುವ ಸಾಧ್ಯತೆ ಹಾಗೂ ಉದ್ಯೋಗ ಅವಕಾಶಗಳು ಕಡಿಮೆ ಆಗುತ್ತದೆ. ಆದರೆ ಹಣದುಬ್ಬರ ಮಾತ್ರ ಏರುತ್ತಲೇ ಇರುತ್ತದೆ. ಅದಕ್ಕಾಗಿ ಆದಷ್ಟು ಬೇಗ ಹೂಡಿಕೆಯನ್ನು ಪ್ರಾರಂಭಿಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ ಕೇಶವ ಪ್ರಸಾದ್.