ಹೊಸ ವರ್ಷದಲ್ಲಿ ಹೂಡಿಕೆ ಎಲ್ಲಿ, ಹೇಗೆ ಮಾಡಬೇಕು ?
New Year Investment: ಹೊಸ ವರ್ಷ ಬಂದಾಗ ಹಣ ಖರ್ಚು ಮಾಡಲು ಸಾಕಷ್ಟು ದಾರಿಗಳನ್ನು ಹುಡುಕುತ್ತೇವೆ. ಅದಕ್ಕಿಂತ ಮುಖ್ಯವಾಗಿ ನಾವು ಹೂಡಿಕೆ ಮಾಡಲು ಯೋಜನೆಗಳನ್ನು ಮಾಡಬೇಕು. ಇದು ದೀರ್ಘಾವಧಿಯ ಯೋಜನೆಯಾಗಿರುವುದರಿಂದ ಇದರಲ್ಲಿ ಕಾಯುವ ತಾಳ್ಮೆ ಬಹಳ ಮುಖ್ಯ ಎನ್ನುತ್ತಾರೆ ಹಣಕಾಸು ತಜ್ಞರಾದ ಕೌಟಿಲ್ಯ ಕ್ಯಾಪಿಟಲ್ ಸ್ಥಾಪಕರಾದ ಅಶೋಕ್ ದೇವಾನಾಂಪ್ರಿಯ. ಹೊಸ ವರ್ಷದಲ್ಲಿ ಹೂಡಿಕೆ ಎಲ್ಲಿ, ಹೇಗೆ ಮಾಡಬೇಕು ಎನ್ನುವ ಕುರಿತು ಅವರು ನೀಡಿರುವ ಸಲಹೆಗಳು ಇಂತಿವೆ.
ಅಶೋಕ್ ದೇವಾನಾಂಪ್ರಿಯ -
ಬೆಂಗಳೂರು: ಜಿಮ್, ವಾಕಿಂಗ್, ಆರೋಗ್ಯ, ಪ್ರವಾಸ.. ಹೀಗೆ ಹೊಸ ವರ್ಷದಲ್ಲಿ ಮಾಡಬೇಕಾದ ಸಾಕಷ್ಟು ಯೋಜನೆಗಳನ್ನು ಮಾಡಿಕೊಳ್ಳುತ್ತೇವೆ. ಅದೇ ರೀತಿ ಹೂಡಿಕೆ ಯೋಜನೆಗಳನ್ನು (Investment plan) ಕೂಡ ಮಾಡಬೇಕು ಎನ್ನುತ್ತಾರೆ ಕೌಟಿಲ್ಯ ಕ್ಯಾಪಿಟಲ್ ಸ್ಥಾಪಕರಾದ (Cautilya Capital founder) ಅಶೋಕ್ ದೇವಾನಾಂಪ್ರಿಯ (Ashok Devanampriya). 'ವಿಶ್ವವಾಣಿ ಮನಿ' (Vishwavani money) ಯೂಟ್ಯೂಬ್ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು ಹೊಸ ವರ್ಷದಲ್ಲಿ ಯಾವ ರೀತಿಯ ಹೂಡಿಕೆ ಮಾಡಬೇಕು, ಎಲ್ಲಿ, ಹೇಗೆ ಮಾಡಬೇಕು ಎನ್ನುವ ಕುರಿತು ವಿಸ್ತೃತವಾದ ಮಾಹಿತಿಯನ್ನು ನೀಡಿದರು.
ಸಾಮಾನ್ಯವಾಗಿ ಹೊಸ ವರ್ಷ ಎಂದಾಗ ಎಲ್ಲಿ ಖರ್ಚು ಮಾಡಬೇಕು ಎಂದೇ ಯೋಚನೆ ಬರುತ್ತದೆ. ಇದರಲ್ಲಿ ಜಿಮ್, ವಾಕಿಂಗ್, ಆರೋಗ್ಯ, ಪ್ರವಾಸ.. ಹೀಗೆ ಹಲವು ಸಂಕಲ್ಪವಿರುತ್ತದೆ. ಆದರೆ ಇದಕ್ಕಿಂತಲೂ ಹೆಚ್ಚು ನಾವು ಆದ್ಯತೆ ನೀಡಬೇಕಿರುವುದು ಹೂಡಿಕೆಗೆ ಎನ್ನುತ್ತಾರೆ ಅಶೋಕ್.
ಕ್ರಿಪ್ಟೋದಲ್ಲಿ ಹೂಡಿಕೆ ಮಾಡುವುದೇ ಬೇಡ ಎನ್ನುತ್ತಾರೆ ತಜ್ಞರು; ಕಾರಣವೇನು?
ಹೂಡಿಕೆ ಎನ್ನುವುದು ದೀರ್ಘಾವಧಿಯ ಪ್ರಯಾಣವಾಗಿದೆ. ಹೀಗಾಗಿ ಇಲ್ಲಿ ತಾಳ್ಮೆ ಬಹಳ ಮುಖ್ಯ. ಸುಮಾರು 20-25 ವರ್ಷಗಳ ಹಿಂದೆ ಉಳಿತಾಯಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿತ್ತು. ಆದರೆ ಈಗ ಖರ್ಚು ಮಾಡುವುದೇ ಫ್ಯಾಶನ್ ಆಗಿದೆ. ನಮ್ಮ ಆಸೆಗಳಿಗೆ ಮಿತಿಯೇ ಇಲ್ಲ ಎಂಬಂತಾಗಿದೆ. ವಾರದಲ್ಲೊಮ್ಮೆ ಶಾಪಿಂಗ್ ಮಾಲ್ ಸುತ್ತುವುದು ಸಂಪ್ರದಾಯವಾಗಿಬಿಟ್ಟಿದೆ ಎಂದರು.
ಕಳೆದ ಹತ್ತು ವರ್ಷಗಳ ಹಿಂದೆ ದೇಶದ ಒಟ್ಟು ಆದಾಯದಲ್ಲಿ ಶೇ. 25ರಷ್ಟು ಹಣ ಉಳಿತಾಯಕ್ಕೆ ಹೋಗುತ್ತಿತ್ತು. ಆದರೆ ಈಗ ಅದು ಶೇ. 18ಕ್ಕೆ ಇಳಿದಿದೆ. ಇದೇ ರೀತಿಯಾಗಿ ಮುಂದುವರಿದರೆ ಮುಂದಿನ ದಶಕದಲ್ಲಿ ಇದು ಶೇ. 10ಕ್ಕೆ ಇಳಿಯಬಹುದು. ಇದು ಏನನ್ನು ಸೂಚಿಸುತ್ತದೆ ಎಂದರೆ ಜನರು ಉಳಿತಾಯದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಅಮೆರಿಕದಲ್ಲಿ ಒಬ್ಬ ವ್ಯಕ್ತಿ ತಿಂಗಳ ಸಂಬಳ ಪಡೆಯೋದು ಹಿಂದಿನ ತಿಂಗಳ ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟೋಕೆ. ಈ ಸಂಪ್ರದಾಯ ಈಗ ಭಾರತೀಯರಲ್ಲೂ ಬೆಳೆಯುತ್ತಿದೆ. ನಮ್ಮ ಹಿರಿಯರು ಉಳಿತಾಯಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದರು. ಇದನ್ನು ನಾವು ಪಾಲಿಸಬೇಕಿದೆ ಎಂದು ಅಶೋಕ್ ದೇವಾನಾಂಪ್ರಿಯ ತಿಳಿಸಿದರು.
ನಾವು ಹೆಚ್ಚಾಗಿ ನಮ್ಮ ಜೀವನ ಶೈಲಿ, ಖರ್ಚಿನ ಮೇಲೆ ಹೋಲಿಕೆ ಮಾಡುತ್ತೇವೆ. ಇದು ತುಂಬಾ ತಪ್ಪು. ಪ್ರಸ್ತುತ ಭಾರತೀಯ ಮಾರುಕಟ್ಟೆ ಸ್ಥಿರವಾಗಿದೆ. ಹೀಗಾಗಿ ನಮ್ಮ ಜೀವನ ಸುಖಮಯವಾಗಿದೆ. ಆದರೆ ಮುಂದೆಯೂ ಪರಿಸ್ಥಿತಿ ಹೀಗೆ ಇರುತ್ತದೆ ಎನ್ನಲು ಸಾಧ್ಯವಿಲ್ಲ. ಈಗಾಗಲೇ ಚಿನ್ನ, ಬೆಳ್ಳಿ ದರ ಹೆಚ್ಚಳವಾಗಿದೆ. ಹೀಗಿರುವಾಗ ಅದು ಸ್ವಲ್ಪ ಇಳಿಕೆಯಾಗುವುದಕ್ಕೆ ನಾವು ಅವಕಾಶ ಕೊಡಬೇಕು ಎಂದು ಅವರು ತಿಳಿಸಿದರು.
ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸುವವರು ಅಂದರೆ ಮೊದಲ ಬಾರಿಗೆ ಮಾರುಕಟ್ಟೆಗೆ ಪ್ರವೇಶ ಪಡೆಯುವಾಗ ವ್ಯವಸ್ಥಿತ ಹೂಡಿಕೆ ಯೋಜನೆ ಅಂದರೆ ಎಸ್ ಐಪಿ ಅನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಇದರಲ್ಲಿ 25 ವರ್ಷದ ವ್ಯಕ್ತಿ ತಿಂಗಳಿಗೆ ಕನಿಷ್ಠ 1000 ರೂ. ಹೂಡಿಕೆ ಮಾಡಿದರೂ ನಿವೃತ್ತಿಯಾಗುವಾಗ ಒಂದು ಕೋಟಿ ರೂ. ಗಳಿಸಬಹುದು ಎಂದು ಅವರು ತಿಳಿಸಿದರು.
ಈಗ ಹೂಡಿಕೆ ಮಾಡಲು ಬಯಸುವವರು ದೀರ್ಘಾವಧಿಯ ಅವಶ್ಯಕತೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುತ್ತಿಲ್ಲ. ಅವರಿಗೆ ಏನಿದ್ದರೂ ರಾತ್ರೋರಾತ್ರಿ ಕೋಟ್ಯಧಿಪತಿಯಾಗಬೇಕು ಎನ್ನುವ ಆಸೆ ಹೆಚ್ಚಾಗಿದೆ. ಹೂಡಿಕೆ ಎನ್ನುವುದು ದೀರ್ಘಾವಧಿಯ ಪ್ರಯಾಣ. ಇಲ್ಲಿ ರಾತ್ರೋರಾತ್ರಿ ಹಣ ಮಾಡಲು ಸಾಧ್ಯವಿಲ್ಲ. ಇಲ್ಲಿ ಲೋ ರಿಸ್ಕ್ ಲೋ ರಿವಾರ್ಡ್, ಮೀಡಿಯಂ ರಿಸ್ಕ್ ಮೀಡಿಯಂ ರಿವಾರ್ಡ್, ಹೈ ರಿಸ್ಕ್ ಹೈ ರಿವಾರ್ಡ್ ಎನ್ನುವ ನಿಯಮವಿದೆ. ಇದನ್ನು ನೋಡಿಕೊಂಡು ಸರಿಯಾಗಿ ಯೋಜನೆ ಮಾಡಿದರೆ ಅತ್ಯಧಿಕ ಲಾಭ ಪಡೆಯಬಹುದು ಎಂದರು.
ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ರಿಸ್ಕ್ ತೆಗೆದುಕೊಳ್ಳದೆ ಇರುವುದೇ ದೊಡ್ಡ ರಿಸ್ಕ್ . ಭಾರತದ ಶೇ. 90ರಷ್ಟು ಮಂದಿ ರಿಸ್ಕ್ ತೆಗೆದುಕೊಳ್ಳಲು ಮುಂದೆ ಬರುವುದಿಲ್ಲ. ಹೀಗಾಗಿ ಹೆಚ್ಚಿನವರ ಹಣ ಕೆಲವೊಂದು ಯೋಜನೆಗಳಲ್ಲಿ ಹೆಚ್ಚಿನ ಲಾಭ ಪಡೆಯದೆ ಕುಳಿತಿದೆ. ಹೂಡಿಕೆ ಮಾಡುವ ಯೋಚನೆ ಮಾಡಿದಾಗ ಮೊದಲು ಸಣ್ಣದಾಗಿ ಶುರು ಮಾಡಿ, ಮಾರುಕಟ್ಟೆಯನ್ನು ಅರ್ಥ ಮಾಡಿಕೊಳ್ಳಿ. ಬಳಿಕ ದೊಡ್ಡ ಹೂಡಿಕೆಗೆ ಮುಂದಾಗಬಹುದು ಎನ್ನುತ್ತಾರೆ ಅಶೋಕ್.
ಹೊಸ ವರ್ಷದಿಂದ ಗೃಹೋಪಯೋಗಿ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಸ್ಟಾರ್ ರೇಟಿಂಗ್ ಕಡ್ಡಾಯ
ಹೂಡಿಕೆ ಮಾಡಲು ಮೊದಲು ನಮ್ಮ ಮನಸ್ಸನ್ನು ಸ್ಥಿರವಾಗಿರಿಸಿಕೊಳ್ಳುವುದು ಮುಖ್ಯ ಮತ್ತು ಹಣ ವಹಿವಾಟಿನಲ್ಲಿ ಶಿಸ್ತು ಪಾಲನೆ ಮುಖ್ಯವಾಗಿರುತ್ತದೆ. ಸಾಮಾನ್ಯವಾಗಿ ನಮ್ಮ ಕೈಯಲ್ಲಿರುವ ಹಣದಲ್ಲಿ ಗೊತ್ತಾಗದೆ ಖರ್ಚಾಗುವ ಮೊತ್ತವೇ ಹೆಚ್ಚಾಗಿದೆ. ಇವುಗಳನ್ನು ನಾವು ಹೂಡಿಕೆಗೆ ಬಳಸಬಹುದು. ಈಗ ಹೂಡಿಕೆ ಮಾಡುವುದು ತುಂಬಾ ಸುಲಭ. ಮೊಬೈಲ್ ಆಪ್ ಮೂಲಕವೇ ಕುಳಿತಲ್ಲೇ ಮಾಡಬಹುದು. ರಿಸ್ಕ್ ಗೆ ಅನುಗುಣವಾಗಿ ಹೂಡಿಕೆ ಮಾಡಬೇಕು. ಹೂಡಿಕೆ ಮಾಡುವಾಗ ಮಾರುಕಟ್ಟೆಯ ಅಪಾಯ ಮತ್ತು ಹೂಡಿಕೆದಾರನ ವಯಸ್ಸು ಬಹಳ ಮುಖ್ಯವಾಗಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ ಮಾಡಿದರೆ ಲಾಭ ಗಳಿಸಬಹುದು. ಇದಕ್ಕಾಗಿ ಹಣಕಾಸು ತಜ್ಞರ ಸಲಹೆ ಪಡೆಯಿರಿ ಎಂದು ಅವರು ತಿಳಿಸಿದ್ದಾರೆ.