ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಯುಪಿಎ ತೈಲ ಬಾಂಡ್‌ನ ಅಸಲು ಬಡ್ಡಿ ಕಟ್ಟಿದ್ದ ಎನ್‌ಡಿಎ!

Oil Bonds: 18 ವರ್ಷಗಳ ಹಿಂದೆ 2008ರ ಜುಲೈಯಲ್ಲಿ ತೈಲ ದರ 147 ಡಾಲರ್‌ಗೆ ಏರಿಕೆಯಾಗಿತ್ತು. 2014ರ ಜನವರಿಯಲ್ಲಿ ಸಬ್ಸಿಡಿಯುಕ್ತ ಎಲ್‌ಪಿಜಿ ಸಿಲಿಂಡರ್‌ಗೆ 400 ರುಪಾಯಿ ಮತ್ತು ಸಬ್ಸಿಡಿ ರಹಿತ ಸಿಲಿಂಡರ್‌ ದರ 1,200 ರುಪಾಯಿ ದಾಟಿತ್ತು! ಆಗ ಯುಪಿಎ ಸರ್ಕಾರಕ್ಕೆ ತೈಲ ದರ ಏರಿಕೆಯ ಆಘಾತದಿಂದ ಜನರನ್ನು ರಕ್ಷಿಸಲು ತೈಲ ಬಾಂಡ್‌ ಸಹಕಾರಿಯಾಗಿತ್ತು.

ಸಾಂದರ್ಭಿಕ ಚಿತ್ರ

ದೆಹಲಿ, ಮಾ. 14: ಕಚ್ಚಾ ತೈಲದ ದರ ಈಗ ಪ್ರತಿ ಬ್ಯಾರೆಲ್‌ಗೆ 103 ಡಾಲರ್‌ಗೆ ಏರಿಕೆಯಾಗಿದೆ. ಈ ಹಿಂದೆ 18 ವರ್ಷಗಳ ಹಿಂದೆ 2008ರ ಜುಲೈಯಲ್ಲಿ 147 ಡಾಲರ್‌ಗೆ ಏರಿಕೆಯಾಗಿತ್ತು! 2014ರ ಜನವರಿಯಲ್ಲಿ ಸಬ್ಸಿಡಿಯುಕ್ತ ಎಲ್‌ಪಿಜಿ ಸಿಲಿಂಡರ್‌ಗೆ 400 ರುಪಾಯಿ ಮತ್ತು ಸಬ್ಸಿಡಿ ರಹಿತ ಸಿಲಿಂಡರ್‌ ದರ 1,200 ರುಪಾಯಿ ದಾಟಿತ್ತು! ಆಗ ಯುಪಿಎ (UPA) ಸರ್ಕಾರಕ್ಕೆ ತೈಲ ದರ ಏರಿಕೆಯ ಆಘಾತದಿಂದ ಜನರನ್ನು ರಕ್ಷಿಸಲು ತೈಲ ಬಾಂಡ್‌ (Oil Bonds) ಸಹಕಾರಿಯಾಗಿತ್ತು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಷ್ಟು ಪೂರೈಕೆಯಲ್ಲಿ ಕೊರತೆ ಇದ್ದುದರಿಂದ ದರ ಗಗನಕ್ಕೇರಿತ್ತು. ಆದರೆ ಪ್ರತಿ ಸಿಲಿಂಡರ್‌ಗೆ ಜನ ಸಾಮಾನ್ಯರು ಆಗ 1,200 ರುಪಾಯಿಗಳನ್ನು ಹೇಗೆ ಕೊಡಬಲ್ಲರು? ಆದ್ದರಿಂದ ಯುಪಿಎ ಸರಕಾರ ಸಾರ್ವಜನಿಕ ತೈಲ ಕಂಪನಿಗಳಿಗೆ ತೈಲ ಬಾಂಡ್‌ಗಳನ್ನು ವಿತರಿಸಿತು. ತೈಲ ಬಾಂಡ್‌ ಅನ್ನು ಖರೀದಿಸಿದ ತೈಲ ಕಂಪನಿಗಳು, ಸಬ್ಸಿಡಿ ದರದಲ್ಲಿ ತೈಲ-ಎಲ್‌ಪಿಜಿ ವಿತರಿಸಿದವು. ಸಬ್ಸಿಡಿ ಹೊರೆಯನ್ನು ನಿಭಾಯಿಸಲು ಯುಪಿಎ ಸರ್ಕಾರ ಕಂಪನಿಗಳಿಗೆ ನೇರವಾಗಿ ನಗದು ಕೊಡಲಿಲ್ಲ. ಬದಲಿಗೆ ದೀರ್ಘಾವಧಿಯಲ್ಲಿ ಮೆಚ್ಯೂರ್‌ ಆಗುವ ತೈಲ ಬಾಂಡ್‌ಗಳನ್ನು ವಿತರಿಸಿತು. 2005-2010 ಅವಧಿಯಲ್ಲಿ 1.34 ಲಕ್ಷ ಕೋಟಿ ರುಪಾಯಿಗಳ ತೈಲ ಬಾಂಡ್‌ ಅನ್ನು ವಿತರಿಸಲಾಗಿತ್ತು. ಐಒಸಿಎಲ್‌, ಎಚ್‌ಪಿಸಿಎಲ್‌, ಬಿಪಿಸಿಎಲ್‌ಗೆ ತೈಲ ಬಾಂಡ್‌ ನೀಡಲಾಗಿತ್ತು.

ಇರಾನ್ ಸಂಘರ್ಷದಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಸಮಸ್ಯೆ ಕಾಡದೇ ಇದ್ದರೂ ಎಲ್‌ಪಿಜಿಗೆ ಕೊರತೆಯಾಗಿರುವುದೇಕೆ?

ಇದರಿಂದ ಯುಪಿಎ ಸರ್ಕಾರಕ್ಕೆ ಪ್ರಯೋಜನ ಇತ್ತು. ಅದೇನೆಂದರೆ, ಕಂಪನಿಗಳಿಗೆ ನೇರವಾಗಿ ಕ್ಯಾಶ್‌ ಕೊಡಬೇಕಿರಲಿಲ್ಲ. ನಗದು ರೂಪದಲ್ಲಿ ಕೊಟ್ಟಿದ್ದರೆ ಬಜೆಟ್‌ನಲ್ಲಿ ವಿತ್ತೀಯ ಕೊರತೆಯಾಗಿ ದಾಖಲಾಗುತ್ತಿತ್ತು. ಹೀಗಿದ್ದರೂ, ಈ ತೈಲ ಬಾಂಡ್‌ಗಳ ಅಸಲು ಮತ್ತು ಬಡ್ಡಿಯನ್ನು ಮರು ಪಾವತಿಸುವ ಜವಾಬ್ದಾರಿ, 2014ರಲ್ಲಿ ಅಸ್ತಿತ್ವಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೃತೃತ್ವದ ಎನ್‌ಡಿಎ ಸರಕಾರದ ಹೆಗಲಿಗೇರಿತು. 2026ರ ಮಾರ್ಚ್‌ ಒಳಗೆ 36,913 ಕೋಟಿ ರುಪಾಯಿಗಳ ಅಂತಿಮ ಕಂತಿನ ಬಡ್ಡಿಯನ್ನು ಕೇಂದ್ರ ಸರ್ಕಾರವು ತೈಲ ಕಂಪನಿಗಳಿಗೆ ಪಾವತಿಸಬೇಕಾಗಿದೆ.

ಯುಪಿಎ ಅವಧಿಯಲ್ಲಿ ಒಟ್ಟಾರೆ 1.34 ಲಕ್ಷ ಕೋಟಿ ರುಪಾಯಿ ಮೊತ್ತದ ತೈಲ ಬಾಂಡ್‌ ವಿತರಿಸಲಾಗಿತ್ತು. ಅದಕ್ಕೆ ಬಡ್ಡಿ ಸೇರಿ 2.6 ಲಕ್ಷ ಕೋಟಿ ರುಪಾಯಿಗಳಾಗಿತ್ತು. ಬಡ್ಡಿ ದರ ಶೇಕಡಾ 6.35- 8.4 ಶ್ರೇಣಿಯಲ್ಲಿತ್ತು.

ಒಂದು ವೇಳೆ ತೈಲ ಕಂಪನಿಗಳಿಗೆ ತೈಲ ಬಾಂಡ್‌ ನೀಡದಿರುತ್ತಿದ್ದರೆ ಏನಾಗುತ್ತಿತ್ತು? ಯುಪಿಎ ಸರ್ಕಾರ ಕ್ಯಾಶ್‌ ಕೊಡಬೇಕಿತ್ತು. ಅದನ್ನೂ ಕೊಡದಿದ್ದರೆ, ಕಂಪನಿಗಳು ನೇರವಾಗಿ ಗ್ರಾಹಕರ ಮೇಲೆ ಮಾರುಕಟ್ಟೆ ದರವನ್ನು ಹೇರುತ್ತಿದ್ದವು. ಅದನ್ನು ಜನರಿಗೆ ಭರಿಸುವುದು ದುಸ್ತರವಾಗುತ್ತಿತ್ತು. ಮತ್ತಷ್ಟು ಬೆಲೆ ಏರಿಕೆಯಾಗುತ್ತಿತ್ತು.

ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ನ ಲೇಖನ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಕೇಶವ ಪ್ರಸಾದ್​ ಬಿ

View all posts by this author