ಆಮದು ಕಾರ್‌ಗಳ ಮೇಲಿನ ಸುಂಕವನ್ನು ಶೇ. 40 ಇಳಿಸಲು ಭಾರತ ನಿರ್ಧಾರ; ಬಿಎಂಡಬ್ಲ್ಯು, ವೋಕ್ಸ್ ವ್ಯಾಗನ್ ಕಾರ್ ಬೆಲೆ ಅಗ್ಗವಾಗುವ ಸಾಧ್ಯತೆ
ಯುರೋಪಿಯನ್ ಒಕ್ಕೂಟದೊಂದಿಗಿನ ವ್ಯಾಪಾರ ಒಪ್ಪಂದದ ಮಾತುಕತೆ ಮುಕ್ತಾಯವಾಗಿದ್ದು, ಯುರೋಪಿಯನ್ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವ ಕಾರುಗಳ ಮೇಲಿನ ಸುಂಕವನ್ನು ಶೇ. 110ರಿಂದ 40ಕ್ಕೆ ಇಳಿಸಲು ಭಾರತ ನಿರ್ಧರಿಸಿದೆ. ಇದರಿಂದ ಯುರೋಪಿಯನ್ ವಾಹನ ತಯಾರಕ ಕಂಪೆನಿಗಳಾದ ವೋಕ್ಸ್‌ವ್ಯಾಗನ್, ರೆನಾಲ್ಟ್, ಸ್ಟೆಲ್ಲಾಂಟಿಸ್, ಮರ್ಸಿಡಿಸ್, ಬೆನ್ಜ್ ಮತ್ತು ಬಿಎಂಡಬ್ಲ್ಯೂ ಕಾರುಗಳ ಬೇಡಿಕೆಗೆ ಉತ್ತೇಜನ ದೊರೆಯಲಿದೆ.
ಸಂಗ್ರಹ ಚಿತ್ರ -
ನವದೆಹಲಿ: ಯುರೋಪಿಯನ್ ಒಕ್ಕೂಟ (European Union) ರಾಷ್ಟ್ರಗಳಿಂದ ಆಮದು ಮಾಡುವ ಕಾರುಗಳ (Tariffs On Cars) ಮೇಲಿನ ಸುಂಕವನ್ನು ಶೇ. 110ರಿಂದ 40ಕ್ಕೆ ಇಳಿಸಲು ಭಾರತ ನಿರ್ಧರಿಸಿದೆ. ವ್ಯಾಪಾರ ಒಪ್ಪಂದ (Trade Deal) ಮಾತುಕತೆ ಕಳೆದ ಮಂಗಳವಾರ ಆರಂಭಗೊಂಡು ಇದೀಗ ಮುಕ್ತಾಯಗೊಂಡಿದ್ದು, ಇದರ ಬೆನ್ನಲ್ಲೇ ಯುರೋಪಿಯನ್ ರಾಷ್ಟ್ರಗಳಿಂದ ಭಾರತ ಆಮದು ಮಾಡುವ ಕಾರುಗಳ ಮೇಲಿನ ಸುಂಕವನ್ನು ಇಳಿಸಲು ಯೋಜಿಸಿದೆ. ಇದರಿಂದ ಯುರೋಪಿಯನ್ ವಾಹನ ತಯಾರಕ ಕಂಪೆನಿಗಳಾದ ವೋಕ್ಸ್‌ವ್ಯಾಗನ್, ರೆನಾಲ್ಟ್, ಸ್ಟೆಲ್ಲಾಂಟಿಸ್, ಮರ್ಸಿಡಿಸ್, ಬೆನ್ಜ್ ಮತ್ತು ಬಿಎಂಡಬ್ಲ್ಯೂ ಕಾರುಗಳ ಬೇಡಿಕೆಗೆ ಉತ್ತೇಜನ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.
ಯುರೋಪಿಯನ್ ಒಕ್ಕೂಟದೊಂದಿಗೆ ಮಾತುಕತೆ ಅಂತಿಮಗೊಂಡ ತಕ್ಷಣವೇ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು 27 ರಾಷ್ಟ್ರಗಳ ಒಕ್ಕೂಟದಿಂದ 16.27 ಲಕ್ಷ ರೂ. ಆಮದು ಬೆಲೆಯೊಂದಿಗೆ ಸೀಮಿತ ಸಂಖ್ಯೆಯ ಕಾರುಗಳ ಮೇಲಿನ ತೆರಿಗೆಯನ್ನು ತಕ್ಷಣ ಕಡಿಮೆ ಮಾಡಲು ಒಪ್ಪಿಕೊಂಡಿದೆ. ಮುಂದಿನ ದಿನಗಳಲ್ಲಿ ಸುಂಕವನ್ನು ಶೇ. 10% ಕ್ಕೆ ಇಳಿಸಲಾಗುವುದು ಎಂದು ತಿಳಿಸಿದೆ.
ರಷ್ಯಾದಿಂದ ತೈಲ ಖರೀದಿ ಸ್ಥಗಿತ; ಭಾರತಕ್ಕೆ ಸುಂಕ ಕಡಿತಗೊಳಿಸುವ ಭರವಸೆ ನೀಡಿದರೇ ಡೊನಾಲ್ಡ್ ಟ್ರಂಪ್ ?
ಸುಂಕ ಇಳಿಕೆಯಿಂದಾಗಿ ಮುಂದಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಗೆ ವೋಕ್ಸ್‌ವ್ಯಾಗನ್, ಮರ್ಸಿಡಿಸ್, ಬೆನ್ಜ್ ಮತ್ತು ಬಿಎಂಡಬ್ಲ್ಯೂ ನಂತಹ ಯುರೋಪಿಯನ್ ವಾಹನ ತಯಾರಕರಿಗೆ ಪ್ರವೇಶ ಸುಲಭವಾಗಲಿದೆ ಎನ್ನಲಾಗಿದೆ. ಕೊನೆಯ ಕ್ಷಣದಲ್ಲಿ ಕೆಲವು ಬದಲಾವಣೆ ಸಾಧ್ಯತೆಗಳಿರುವುದರಿಂದ ಈ ಕುರಿತು ಪ್ರತಿಕ್ರಿಯೆ ನೀಡಲು ಭಾರತದ ವಾಣಿಜ್ಯ ಸಚಿವಾಲಯ ಮತ್ತು ಯುರೋಪಿಯನ್ ಆಯೋಗ ನಿರಾಕರಿಸಿದೆ.
ಶೀಘ್ರದಲ್ಲೇ ಭಾರತ ಮತ್ತು ಯುರೋಪಿಯನ್ ಒಕ್ಕೂಟವು ಈ ಕುರಿತು ಅಂತಿಮ ತೀರ್ಮಾನ ಪ್ರಕಟಿಸುವ ನಿರೀಕ್ಷೆಯಿದೆ. ಈ ಒಪ್ಪಂದವು ದ್ವಿಪಕ್ಷೀಯ ವ್ಯಾಪಾರವನ್ನು ವಿಸ್ತರಿಸಬಹುದು. ಅಲ್ಲದೇ ಆಗಸ್ಟ್ ಅಂತ್ಯದಿಂದ ಯುಎಸ್ ಸುಂಕಗಳಿಂದ ಪ್ರಭಾವ ಬೀರಿರುವ ಜವಳಿ ಮತ್ತು ಆಭರಣಗಳಂತಹ ಸರಕುಗಳ ಭಾರತೀಯ ರಫ್ತುಗಳನ್ನು ಹೆಚ್ಚಿಸಬಹುದು ಎನ್ನಲಾಗುತ್ತಿದೆ.
ಯುಎಸ್ ಮತ್ತು ಚೀನಾದ ಬಳಿಕ ಭಾರತ ವಿಶ್ವದ ಮೂರನೇ ಅತಿದೊಡ್ಡ ಕಾರು ಮಾರುಕಟ್ಟೆಯಾಗಿದೆ. ದೇಶೀಯ ಆಟೋ ಉದ್ಯಮವು ಅತ್ಯಂತ ಸಂರಕ್ಷಿತ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಪ್ರಸ್ತುತ ಆಮದು ಮಾಡಿಕೊಳ್ಳುವ ಕಾರುಗಳ ಮೇಲೆ ಶೇ. 70ರಿಂದ ಶೇ. 110ರಷ್ಟು ಸುಂಕಗಳನ್ನು ವಿಧಿಸಲಾಗುತ್ತಿದೆ.
ಯುರೋಪಿಯನ್ ಒಕ್ಕೂಟದಿಂದ ಆಮದು ಮಾಡಿಕೊಳ್ಳುವ ಕಾರುಗಳಿಗೆ ಸುಂಕ ಇಳಿಸುವುದರೊಂದಿಗೆ ಮಹೀಂದ್ರಾ ಮತ್ತು ಮಹೀಂದ್ರಾ, ಟಾಟಾ ಮೋಟಾರ್ಸ್‌ನಂತಹ ದೇಶೀಯ ಕಂಪೆನಿಗಳ ಮೇಲಿನ ಹೂಡಿಕೆಗಳನ್ನು ರಕ್ಷಿಸಲು ಎಲೆಕ್ಟ್ರಿಕ್ ವಾಹನಗಳನ್ನು ಮೊದಲ ಐದು ವರ್ಷಗಳ ಕಾಲ ಆಮದು ಸುಂಕದಿಂದ ಹೊರಗಿಡಲಾಗುತ್ತದೆ. ಐದು ವರ್ಷಗಳ ಅನಂತರ ವಿದ್ಯುತ್ ವಾಹನಗಳಿಗೂ ಇದೇ ರೀತಿಯ ಸುಂಕ ಕಡಿತ ಮಾಡಲಾಗುತ್ತದೆ.
ಭಾರತದ ವಾರ್ಷಿಕ 4.4 ಮಿಲಿಯನ್ ಯೂನಿಟ್‌ಗಳ ಕಾರು ಮಾರುಕಟ್ಟೆಯಲ್ಲಿ ಯುರೋಪಿಯನ್ ಕಾರು ತಯಾರಕರು ಪ್ರಸ್ತುತ ಶೇ. 4ಕ್ಕಿಂತ ಕಡಿಮೆ ಪಾಲನ್ನು ಹೊಂದಿದ್ದಾರೆ. ಇದರಲ್ಲಿ ಜಪಾನ್‌ನ ಸುಜುಕಿ ಮೋಟಾರ್ ಹಾಗೂ ದೇಶೀಯ ಬ್ರ್ಯಾಂಡ್‌ಗಳಾದ ಮಹೀಂದ್ರಾ ಮತ್ತು ಟಾಟಾ ಒಟ್ಟಾಗಿ ಮೂರನೇ ಎರಡರಷ್ಟು ಪಾಲು ಹೊಂದಿವೆ. 2030ರ ವೇಳೆಗೆ ಭಾರತೀಯ ಮಾರುಕಟ್ಟೆ ವರ್ಷಕ್ಕೆ 6 ಮಿಲಿಯನ್ ಯೂನಿಟ್‌ಗಳಿಗೆ ಬೆಳೆಯುವ ನಿರೀಕ್ಷೆ ಇದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.