ಭಾರತ–ಇಯು ವ್ಯಾಪಾರ ಒಪ್ಪಂದಕ್ಕೆ ಸಹಿ: ಅಮೆರಿಕದ ಮೇಲೆ ಪರಿಣಾಮವೇನು?
ಭಾರತ–ಐರೋಪ್ಯ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದವು ಜಾಗತಿಕ ರಾಜಕೀಯ ಮತ್ತು ಆರ್ಥಿಕತೆಯಲ್ಲಿ ಮಹತ್ವದ ತಿರುವು ಎನಿಸಿಕೊಂಡಿದೆ. ಇದು ಭಾರತ ಮತ್ತು ಯುರೋಪ್ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಮಾತ್ರವಲ್ಲ ಅಮೆರಿಕ ಹಾಗೂ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ದ್ವಿಪಕ್ಷೀಯ ವ್ಯಾಪಾರವನ್ನು ಉತ್ತೇಜಿಸುವ ಜತೆಗೆ ನಿಯಮಾಧಾರಿತ ಮತ್ತು ವೈವಿಧ್ಯಮಯ ಜಾಗತಿಕ ವಾಣಿಜ್ಯದತ್ತ ದಾರಿ ಮಾಡಿಕೊಡುತ್ತದೆ.
ಇಯು ಜತೆ ಭಾರತದ ಒಪ್ಪಂದ -
ದೆಹಲಿ, ಜ. 27: ಜಾಗತಿಕ ಆರ್ಥಿಕತೆಯಲ್ಲಿ ಅಸ್ಥಿರತೆ ಮತ್ತು ಭದ್ರತಾ ಚಿಂತೆ ಹೆಚ್ಚುತ್ತಿರುವ ಹೊತ್ತಿನಲ್ಲಿ ಭಾರತ ಮತ್ತು ಐರೋಪ್ಯ ಒಕ್ಕೂಟ (India EU Deal) ದೀರ್ಘ ಕಾಲದಿಂದ ಬಾಕಿ ಇದ್ದ ಐತಿಹಾಸಿಕ 'ಮುಕ್ತ ವ್ಯಾಪಾರ ಒಪ್ಪಂದ’ಕ್ಕೆ (Free Trade Agreement - FTA) ಸಹಿ ಹಾಕುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ. ಭಾರತದ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೆಯೆನ್ ಮತ್ತು ಯುರೋಪಿಯನ್ ಸಮಿತಿ ಆಧ್ಯಕ್ಷ ಆ್ಯಂಟೋನಿಯಾ ಕೋಸ್ಟಾ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದು, ದೆಹಲಿ ಈಗ ಜಾಗತಿಕ ರಾಜತಾಂತ್ರಿಕತೆ ಹಾಗೂ ವಾಣಿಜ್ಯದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುತ್ತಿರುವುದರ ಸಂಕೇತ ಎನಿಸಿಕೊಂಡಿದೆ.
ಈ ಒಪ್ಪಂದದೊಂದಿಗೆ ಎರಡು ದಶಕಗಳ ಕಾಲ ನಡೆದ ಮಾತುಕತೆಗಳಿಗೆ ತೆರೆ ಬಿದ್ದಿದ್ದು, ಭಾರತ–ಯುರೋಪ್ ಸಂಬಂಧಗಳಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಜಾಗತಿಕ ಆರ್ಥಿಕತೆಯಲ್ಲಿ ಭಾರಿ ಏರಿಳಿತ ಆಗುತ್ತಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ಸುಂಕ ನೀತಿಗಳು ಮಾರುಕಟ್ಟೆಗಳಲ್ಲಿ ಅಸ್ಥಿರತೆಯನ್ನುಂಟುಮಾಡಿದ್ದರೆ, ರಷ್ಯಾ–ಉಕ್ರೇನ್ ಯುದ್ಧದಿಂದ ಪೂರೈಕೆ ಸರಪಳಿಯೂ ದುರ್ಬಲಗೊಂಡಿದೆ. ಇಂತಹ ಸಂದರ್ಭದಲ್ಲಿ ಭಾರತ–ಐರೋಪ್ಯ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದವು ಮುಕ್ತ, ನಂಬಿಕಸ್ತ ಮತ್ತು ವಿವಿಧ ವ್ಯಾಪಾರ ಸಂಬಂಧಗಳ ಅಗತ್ಯವನ್ನು ಜಾಗತಿಕವಾಗಿ ಸಾರುವ ಕೆಲಸ ಮಾಡಿದೆ.
ಭಾರತ–ಇಯು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ:
🔥 THE MOTHER OF ALL TRADE DEALS - DONE.
— Political Satellite (@polsatellite) January 27, 2026
India-EU FTA signed after 17+ years of negotiations.
Geopolitical Context:
➡️EU locks in Asia's democratic powerhouse amid US-China decoupling
➡️India gains €450B+ market access as manufacturing alternative
➡️Strategic counter to Belt &… pic.twitter.com/Bkfn7as4xD
ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವೆ ಈಗಾಗಲೇ ಗಟ್ಟಿಯಾದ ಆರ್ಥಿಕ ಸಂಬಂಧವಿದ್ದು, ಸರಕು ವ್ಯಾಪಾರದಲ್ಲಿ ಯುರೋಪ್ ಭಾರತಕ್ಕೆ ಅತಿದೊಡ್ಡ ಪಾಲುದಾರ ಎನಿಸಿಕೊಂಡಿದೆ. 2024–25ರಲ್ಲಿ ದ್ವಿಪಕ್ಷೀಯ ವ್ಯಾಪಾರ ಸುಮಾರು 136 ಬಿಲಿಯನ್ ಡಾಲರ್ (ಸುಮಾರು 12.5 ಲಕ್ಷ ಕೋಟಿ ರೂ.) ತಲುಪಿದೆ.
ಕಳೆದ ದಶಕದಲ್ಲಿ ಯುರೋಪಿನ ಕಂಪನಿಗಳು ಭಾರತದಲ್ಲಿ ಉತ್ಪಾದನೆ, ಹಸಿರು ಇಂಧನ ಹಾಗೂ ಡಿಜಿಟಲ್ ವಲಯಗಳಲ್ಲಿ ಹೂಡಿಕೆ ವಿಸ್ತರಿಸಿದ್ದರೆ, ಭಾರತದ ಐಟಿ ಮತ್ತು ಔಷಧೋದ್ಯಮ ಕಂಪನಿಗಳು ಯುರೋಪ್‌ನಲ್ಲಿ ಪ್ರಾಬಲ್ಯ ಸಾಧಿಸಿವೆ. ಆದರೂ ಎರಡೂ ದೊಡ್ಡ ಮಾರುಕಟ್ಟೆಗಳ ಸಾಮರ್ಥ್ಯಕ್ಕೆ ತಕ್ಕ ಮಟ್ಟಿಗೆ ವ್ಯಾಪಾರ ವಿಸ್ತಾರವಾಗಿಲ್ಲ ಎಂಬ ಅಭಿಪ್ರಾಯ ಇತ್ತು. ಈ ಒಪ್ಪಂದದಿಂದ ಸುಂಕ ಕಡಿತ, ನಿಯಂತ್ರಣ ಅಡೆತಡೆಗಳ ನಿವಾರಣೆ ಹಾಗೂ ಭಾರತಕ್ಕೆ 45 ಕೋಟಿಗೂ ಹೆಚ್ಚು ಖರೀದಿ ಸಾಮರ್ಥ್ಯ ಹೊಂದಿದ ಯುರೋಪಿನ ಗ್ರಾಹಕರ ಮಾರುಕಟ್ಟೆಗೆ ಸುಲಭ ಪ್ರವೇಶ ದೊರೆಯಲಿದೆ.
ಕಾಂಗ್ರೆಸ್‌ನಲ್ಲಿ ಏನೂ ಸರಿಯಿಲ್ಲ, ಹೈಕಮಾಂಡ್ ಭೇಟಿಯಾಗುವುದೇ ಕಷ್ಟ; ಹೊಸ ಬಾಂಬ್ ಸಿಡಿಸಿದ ಕೈ ನಾಯಕ
ಈ ಎಫ್‌ಟಿಎ ಆರ್ಥಿಕ ಲಾಭಕ್ಕಿಂತಲೂ ಹೆಚ್ಚಿನ ಅರ್ಥ ಹೊಂದಿದೆ. ರಕ್ಷಣಾ ಸಹಕಾರ, ಸಾಗರ ಭದ್ರತೆ, ಹಸಿರು ಇಂಧನ ಮತ್ತು ತಂತ್ರಜ್ಞಾನ ವಲಯಗಳಲ್ಲಿ ಸಹಭಾಗಿತ್ವಕ್ಕೆ ಇದು ಬಲವಾದ ಆಧಾರವಾಗಲಿದ್ದು, ಅಮೆರಿಕದ ನಂತರ, ಯುರೋಪ್ ತನ್ನ ಎರಡನೇ ‘ವ್ಯಾಪಾರ ಮತ್ತು ತಂತ್ರಜ್ಞಾನ ಮಂಡಳಿ’ಯನ್ನು (ಟಿಟಿಸಿ) ಭಾರತದೊಂದಿಗೆ ಮಾತ್ರ ಸ್ಥಾಪಿಸಿರುವುದು ಇದರ ಮಹತ್ವವನ್ನು ಸಾರಿ ಹೇಳಿದೆ. ಜತೆಗೆ ‘ಭಾರತ–ಮಧ್ಯಪ್ರಾಚ್ಯ–ಯುರೋಪ್ ಆರ್ಥಿಕ ಕಾರಿಡಾರ್’ (ಐಎಂಇಸಿ) ಯೋಜನೆಗೂ ಈ ಒಪ್ಪಂದ ನೆರವಾಗಲಿದೆ.
ಐರೋಪ್ಯ ಒಕ್ಕೂಟದ ಉನ್ನತ ನಾಯಕರೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳಾಗಿ ಭಾಗವಹಿಸಿರುವುದು, ಭಾರತವನ್ನು ಕೇವಲ ಮಾರುಕಟ್ಟೆಯಾಗಿ ಅಲ್ಲದೆ ಇಂಡೋ–ಪೆಸಿಫಿಕ್ ಹಾಗೂ ಜಾಗತಿಕ ಕಾರ್ಯತಂತ್ರದ ಪ್ರಮುಖ ಕೇಂದ್ರೀಯ ಪಾತ್ರಧಾರಿಯಾಗಿ ಯುರೋಪ್ ಕಾಣುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿದೆ.
ಈ ಹಿಂದೆ ಮಾರುಕಟ್ಟೆ ಪ್ರವೇಶ, ಕಾರ್ಮಿಕ ಮಾನದಂಡಗಳು ಮತ್ತು ಪರಿಸರ ನಿಯಮಗಳ ಕುರಿತಾಗಿ ಭಿನ್ನಾಭಿಪ್ರಾಯಗಳಿದ್ದರೂ, ಬದಲಾಗುತ್ತಿರುವ ಜಾಗತಿಕ ಸನ್ನಿವೇಶದಲ್ಲಿ ಒಂದು ದೇಶದ ಮೇಲೆ ಅತಿಯಾದ ಅವಲಂಬನೆ ತಪ್ಪಿಸಿ, ಪೂರೈಕೆ ಸರಪಳಿಯನ್ನು ಸುರಕ್ಷಿತಗೊಳಿಸಬೇಕೆಂಬ ರಾಜಕೀಯ ಇಚ್ಛಾಶಕ್ತಿ ಎರಡೂ ಕಡೆಯಿಂದ ವ್ಯಕ್ತವಾಗಿದೆ. 2025ರೊಳಗೆ ಮಾತುಕತೆ ಪೂರ್ಣಗೊಳಿಸುವ ಗುರಿ ಈಗ ಯಶಸ್ವಿಯಾಗಿ ಸಾಕಾರಗೊಂಡಿದೆ.
ಅಮೆರಿಕ ಸಿಡಿಮಿಡಿ
ಇನ್ನು ಈ ಭಾರತ–ಐರೋಪ್ಯ ಒಕ್ಕೂಟದ ವ್ಯಾಪಾರ ಒಪ್ಪಂದದಿಂದ ಅತಿದೊಡ್ಡ ಹೊಡೆತ ಅಮೆರಿಕಕ್ಕೆ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಈಗಾಗಲೇ ತನ್ನ ಅಸಮಾಧಾನ ವ್ಯಕ್ತಪಡಿಸಿದೆ. ಯುರೋಪ್ ತನ್ನ ವಿರುದ್ಧದ ಸಂಘರ್ಷಕ್ಕೆ ತಾನೇ ಹಣ ಪೂರೈಸುತ್ತಿರುವಂತೆ ನಡೆಯುತ್ತಿದೆ ಎಂದು ಟೀಕಿಸಿದ್ದು, ಭಾರತ–ಇಯು ಒಪ್ಪಂದದ ಬಗ್ಗೆ ಅಮೆರಿಕ ಕಿಡಿಕಾರಿದೆ. ಈ ಒಪ್ಪಂದ ಜಾರಿಯಾದರೆ ರಷ್ಯಾ–ಉಕ್ರೇನ್ ಸಂಘರ್ಷವನ್ನು ಇನ್ನಷ್ಟು ಉಲ್ಬಣಗೊಳಿಸಲು ಪರೋಕ್ಷವಾಗಿ ನೆರವಾಗುವಂತಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಕುರಿತು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, ಯುರೋಪ್ ಸ್ವತಃ ಯುದ್ಧದ ಬೆಂಕಿಗೆ ಇಂಧನ ಹಾಕುವ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.