ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರೈತರಿಗೆ ಅವಕಾಶದ ಬಾಗಿಲು ತೆರೆಯಲಿದೆ ಭಾರತ- ಅಮೆರಿಕ ಒಪ್ಪಂದ: ಪಿಯೂಷ್ ಗೋಯಲ್

ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದಕ್ಕೆ ಒಪ್ಪಿಗೆ ನೀಡಲಾಗಿದ್ದು, ಈ ಒಪ್ಪಂದವು ರೈತರಿಗೆ ಭಾರಿ ಅವಕಾಶವನ್ನು ತೆರೆಯಲಿದೆ. ಅಲ್ಲದೇ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇಕಡಾ 25 ರಿಂದ ಶೇಕಡಾ 18 ಕ್ಕೆ ಇಳಿಸಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮಂಗಳವಾರ ತಿಳಿಸಿದ್ದಾರೆ.

ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ (ಸಂಗ್ರಹ ಚಿತ್ರ)

ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವು (India- US Trade Deal) ಅಂತಿಮಗೊಂಡಿದೆ. ಇದು ರೈತರಿಗೆ ಭಾರಿ ಅವಕಾಶಗಳ ಬಾಗಿಲು ತೆರೆಯಲಿದೆ. ಈ ಒಪ್ಪಂದದಿಂದಾಗಿ ಭಾರತೀಯ ಸರಕುಗಳ ಮೇಲಿನ ಸುಂಕವು (US tariff) ಪ್ರಸ್ತುತ ಶೇಕಡಾ 25ರಷ್ಟಿದ್ದು, ಇದನ್ನು ಶೇಕಡಾ 18ಕ್ಕೆ ಇಳಿಸಲಿದೆ. ರೈತರು, ಎಂಎಸ್‌ಎಂಇಗಳು, ಉದ್ಯಮಿಗಳು ಮತ್ತು ಕೌಶಲ್ಯಪೂರ್ಣ ಕೆಲಸಗಾರರಿಗೆ ಇದು ಅಪಾರ ಅವಕಾಶಗಳನ್ನು ನೀಡಲಿದ್ದು, ಈ ಮೂಲಕ ಮೇಕ್ ಇನ್ ಇಂಡಿಯಾ ಉಪಕ್ರಮವನ್ನು ಉತ್ತೇಜಿಸಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ (Commerce and Industry Minister Piyush Goyal) ತಿಳಿಸಿದರು.

ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಕುರಿತು ಮಂಗಳವಾರ ಸಾಮಾಜಿಕ ಮಾಧ್ಯಮವಾದ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿರುವ ಸಚಿವ ಪಿಯೂಷ್ ಗೋಯಲ್, ಈ ಒಪ್ಪಂದದ ಅಡಿಯಲ್ಲಿ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ವಾಷಿಂಗ್ಟನ್ ಶೇಕಡಾ 25 ರಿಂದ 18ಕ್ಕೆ ಇಳಿಸಲಿದೆ. ಈ ಕುರಿತು ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ ಎಂದು ಹೇಳಿದರು.



ಭಾರತದ ಮೇಲಿನ ಸುಂಕ ಶೇಕಡಾ 18ಕ್ಕೆ ಇಳಿಸಿದ ಅಮೆರಿಕ; ಪ್ರಧಾನಿ ನರೇಂದ್ರ ಮೋದಿ ಮೊದಲ ಪ್ರತಿಕ್ರಿಯೆ

ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಿಂದ ಭಾರತಕ್ಕೆ ಅಮೆರಿಕದಿಂದ ತಂತ್ರಜ್ಞಾನದ ನೆರವು ದೊರೆಯುತ್ತದೆ. ಅಭಿವೃದ್ಧಿಯು ಎರಡು ಸಮಾನ ಮನಸ್ಕ, ನ್ಯಾಯಯುತ ವ್ಯಾಪಾರ ಪ್ರಜಾಪ್ರಭುತ್ವಗಳು ಹಂಚಿಕೆಯ ಸಮೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡುವ ಶಕ್ತಿಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಭಾರತ ಮತ್ತು ಅಮೆರಿಕ ಎರಡೂ ಮಿತ್ರ ರಾಷ್ಟ್ರಗಳಾಗಿವೆ. ಶಾಂತಿ, ಬೆಳವಣಿಗೆ ಮತ್ತು ಉಜ್ವಲ ಭವಿಷ್ಯಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ಈ ಒಪ್ಪಂದವು ಒಂದು ಹೆಗ್ಗುರುತು ಎಂದು ಗೋಯಲ್ ಹೇಳಿದರು.

ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಕುರಿತು ಮಾತನಾಡಿ, ಈ ಒಪ್ಪಂದವು ಪ್ರಜಾಪ್ರಭುತ್ವ ಪಾಲುದಾರರ ನಡುವೆ ಸಮೃದ್ಧಿ ಹಂಚಿಕೆ, ನಾವೀನ್ಯತೆ ಮತ್ತು ಬೆಳವಣಿಗೆಗೆ ಅವಕಾಶ ನೀಡುತ್ತಿಯಾದೆ. ಇದಕ್ಕಾಗಿ ಭಾರತ ಮತ್ತು ಅಮೆರಿಕ ಜನರಿಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.

ಪ್ರಸ್ತುತ ಶೇಕಡಾ 50ರಷ್ಟು ಸುಂಕ ಎದುರಿಸುತ್ತಿರುವ ಜವಳಿ, ಚರ್ಮ, ಮೀನುಗಾರಿಕೆ ವಲಯಗಳ ಕಾರ್ಮಿಕರಿಗೆ ಈ ಘೋಷಣೆ ಮಹತ್ವಪೂರ್ಣವಾಗಿದೆ. ಒಪ್ಪಂದದ ಬಗ್ಗೆ ಹೆಚ್ಚು ಸ್ಪಷ್ಟ ಚಿತ್ರಣಕ್ಕಾಗಿ ರಫ್ತುದಾರರು ಮತ್ತು ತಜ್ಞರು ಯುಎಸ್ಎ ಕಾರ್ಯನಿರ್ವಾಹಕ ಆದೇಶಕ್ಕಾಗಿ ಕಾಯುತ್ತಿದ್ದಾರೆ ಎಂದು ತಿಳಿಸಿದರು.

NSE IPO ನಡೆಸಲು ಸೆಬಿ ಒಪ್ಪಿಗೆ 22,900 ಕೋಟಿ ಗಾತ್ರ ನಿರೀಕ್ಷೆ ಕಂಪ್ಲೀಟ್‌ ಡಿಟೇಲ್ಸ್‌

ಈ ಒಪ್ಪಂದಕ್ಕೆ ಫ್ಲಾರೆನ್ಸ್ ಶೂ ಕಂಪನಿಯ ಅಧ್ಯಕ್ಷ ಮತ್ತು ಗ್ರ್ಯಾಂಡ್ ಅಟ್ಲಾಂಟಿಯಾ ಪನಪಕ್ಕಂ ಎಸ್ ಇಝೆಡ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಅಕೀಲ್ ಪನರುಣ, ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಎಸ್.ಸಿ. ರಾಲ್ಹಾನ್ ಶ್ಲಾಘಿಸಿದ್ದಾರೆ.

ಅಮೆರಿಕ ವಿಧಿಸಿದ ಹೆಚ್ಚಿನ ಸುಂಕಗಳಿಂದಾಗಿ 2025ರ ಡಿಸೆಂಬರ್ ನಲ್ಲಿ ಅಮೆರಿಕಕ್ಕೆ ಭಾರತದ ಸರಕು ರಫ್ತು ಶೇ. 1.83ರಷ್ಟು ಕುಸಿದು 6.88 ಬಿಲಿಯನ್ ಯುಎಸ್ ಡಾಲರ್‌ಗಳಿಗೆ ತಲುಪಿದೆ. ಆಮದು ಶೇ. 7.57 ರಷ್ಟು ಹೆಚ್ಚಾಗಿ 4.03 ಬಿಲಿಯನ್ ಡಾಲರ್‌ಗಳಿಗೆ ತಲುಪಿತ್ತು ಎಂದು ವಾಣಿಜ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.

ವಿದ್ಯಾ ಇರ್ವತ್ತೂರು

View all posts by this author