ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪಾಕ್‌, ಶ್ರೀಲಂಕಾಗಿಂತಲೂ ಅಗ್ಗ ಭಾರತೀಯ ರೈಲ್ವೆ ಪ್ರಯಾಣ; ದರ ಹೆಚ್ಚದರೆ ಬೊಕ್ಕಸಕ್ಕೆ ಲಾಭ ಎಷ್ಟಾಗುತ್ತೆ ಗೊತ್ತಾ?

Indian Railway Ticket Price Hike: ರೈಲ್ವೆ ಇಲಾಖೆಯು ಡಿಸೆಂಬರ್‌ 26ರಿಂದ ಟಿಕೆಟ್‌ ದರದಲ್ಲಿ ಅತ್ಯಲ್ಪ ಏರಿಕೆ ಮಾಡಿದೆ. ಸಾಮಾನ್ಯ ದರ್ಜೆಯ ಪ್ರಯಾಣದಲ್ಲಿ 215 ಕಿ.ಮೀಟರ್‌ ತನಕ ಟಿಕೆಟ್‌ ದರ ಏರಿಕೆ ಇರುವುದಿಲ್ಲ. ಬಳಿಕ ಪ್ರತಿ ಕಿ.ಮೀಗೆ 2 ಪೈಸೆಯಂತೆ ಏರಿಸಲಾಗಿದೆ. ರೈಲ್ವೆ ದರಗಳ ಪರಿಷ್ಕರಣೆಯ ಬಳಿಕವೂ ಭಾರತೀಯ ರೈಲ್ವೆಯ ಟಿಕೆಟ್‌ ದರಗಳು ಪ್ರಪಂಚದಲ್ಲಿಯೇ ಅತ್ಯಂತ ಅಗ್ಗವಾಗಿವೆ.

ಸಂಗ್ರಹ ಚಿತ್ರ

ನವದೆಹಲಿ: ರೈಲ್ವೆ ಇಲಾಖೆಯು ಡಿಸೆಂಬರ್‌ 26ರಿಂದ ಟಿಕೆಟ್‌ ದರದಲ್ಲಿ ಅತ್ಯಲ್ಪ ಏರಿಕೆ ಮಾಡಿದೆ. ಸಾಮಾನ್ಯ (Indian Railway Ticket Price Hike) ದರ್ಜೆಯ ಪ್ರಯಾಣದಲ್ಲಿ 215 ಕಿ.ಮೀಟರ್‌ ತನಕ ಟಿಕೆಟ್‌ ದರ ಏರಿಕೆ ಇರುವುದಿಲ್ಲ. ಬಳಿಕ ಪ್ರತಿ ಕಿ.ಮೀಗೆ 2 ಪೈಸೆಯಂತೆ ಏರಿಸಲಾಗಿದೆ. ಉಪನಗರ ರೈಲ್ವೆ ಮತ್ತು ಮಾಸಿಕ ಸೀಸನ್‌ ಟಿಕೆಟ್‌ ದರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಏಸಿ ಕ್ಲಾಸ್‌ಗಳಿಗೆ ಪ್ರತಿ ಕಿಲೋಮೀಟರ್‌ಗೆ 2 ಪೈಸೆ ಏರಿಕೆ ಮಾಡಲಾಗಿದೆ.

ರೈಲ್ವೆ ದರಗಳ ಪರಿಷ್ಕರಣೆಯ ಬಳಿಕವೂ ಭಾರತೀಯ ರೈಲ್ವೆಯ ಟಿಕೆಟ್‌ ದರಗಳು ಪ್ರಪಂಚದಲ್ಲಿಯೇ ಅತ್ಯಂತ ಅಗ್ಗವಾಗಿವೆ. ನೆರೆಹೊರೆಯ ದೇಶಗಳಲ್ಲಿ ಪ್ರತಿ ಕಿಲೋಮೀಟರ್‌ ರೈಲು ಪ್ರಯಾಣಕ್ಕೆ 350/- ವೆಚ್ಚವಾದರೆ, ಭಾರತದಲ್ಲಿ 123/- ಮಾತ್ರ ಆಗುತ್ತದೆ. ಪ್ರತಿ ಕಿಲೋಮೀಟರ್‌ ರೈಲ್ವೆ ಪ್ರಯಾಣದ ವೆಚ್ಚ ಪಾಕಿಸ್ತಾನದಲ್ಲಿ 436/-, ಬಾಂಗ್ಲಾದೇಶದಲ್ಲಿ 323/- ಮತ್ತು ಶ್ರೀಲಂಕಾದಲ್ಲಿ 413/- ಆಗಿದೆ. ಭಾರತದಲ್ಲಿ 2014ರಲ್ಲಿ 248 ಕಿಲೋಮೀಟರ್‌ ನೆಟ್‌ ವರ್ಕ್‌ ಆಗಿದ್ದ ಮೆಟ್ರೊ ರೈಲು ವ್ಯವಸ್ಥೆ ಈಗ 1,090 ಕಿಲೋಮೀಟರ್‌ಗೆ ಏರಿಕೆಯಾಗಿದೆ. ಕಳೆದ 11 ವರ್ಷಗಳಲ್ಲಿ ಕೇವಲ 4ನೇ ಬಾರಿಗೆ ಮಾತ್ರ ರೈಲ್ವೆ ದರ ಪರಿಷ್ಕರಣೆಯಾಗುತ್ತಿದೆ. ಅದೂ ಅತ್ಯಲ್ಪ ಪ್ರಮಾಣದಲ್ಲಿ ಆಗಿದೆ. 1,337 ಸ್ಟೇಶನ್‌ಗಳನ್ನು ಆಧುನೀಕರಣಗೊಳಿಸಲಾಗಿದೆ.

215 ಕಿ.ಮೀ ನಂತರ ಪ್ರತಿ ಕಿಲೋಮೀಟರ್‌ಗೆ 1-2 ಪೈಸೆ ಮಾತ್ರ ಏರಿಕೆ ಮಾಡಿರುವುದರಿಂದ ದೀರ್ಘ ಪ್ರಯಾಣದಲ್ಲಿ 10-20 ರುಪಾಯಿ ಮಾತ್ರ ಹೆಚ್ಚಳವಾಗಲಿದೆ. ರೈಲ್ವೆಯಲ್ಲಿ ಪ್ರಯಾಣಿಕನೊನ್ನನ ಸರಾಸರಿ ಪ್ರಯಾಣವು 154 ಕಿಲೋಮೀಟರ್‌ ಮಾತ್ರ. 215 ಕಿಲೋಮೀಟರ್‌ ತನಕ ಮಿತಿ ಹಾಕಿರುವುದರಿಂದ ಬಹುತೇಕ ಪ್ರಯಾಣಿಕರು ಅದರೊಳಗೆಯೇ ಬರುತ್ತಾರೆ ಮತ್ತು ಅವರಿಗೆ ದರ ಹೆಚ್ಚಳವಾಗುವುದಿಲ್ಲ. 500 ಕಿಲೋಮೀಟರ್‌ ನಾನ್- ಏಸಿ ರೈಲ್ವೆ ಪ್ರಯಾಣಕ್ಕೆ ಕೇವಲ 10 ರುಪಾಯಿ ಹೆಚ್ಚುವರಿ ವೆಚ್ಚವಾಗಲಿದೆ. ಅದೇ ರೀತಿ ಪ್ರತಿ 1000 ಕಿಲೋಮೀಟರ್‌ ದೂರದ ಪ್ರಯಾಣಕ್ಕೆ ಕೇವಲ 20 ರುಪಾಯಿ ಮಾತ್ರ ಹೆಚ್ಚುವರಿ ವೆಚ್ಚವಾಗಲಿದೆ. ಒಂದು ಕಪ್‌ ಚಹಾಕ್ಕೆ ಸಮಾನವಷ್ಟೇ. ಇದರಿಂದ ರೈಲ್ವೆ ಇಲಾಖೆಗೆ ಪ್ರತಿ ವರ್ಷ 600 ಕೋಟಿ ರುಪಾಯಿ ಆದಾಯ ಸಿಗುವ ನಿರೀಕ್ಷೆ ಇದೆ.

ದೇಶದಲ್ಲಿ ರೈಲ್ವೆ ಪ್ರಯಾಣ ದರವನ್ನು ಈಗಾಗಲೇ ಗಣನೀಯವಾಗಿ ಸಬ್ಸಿಡಿಗೊಳಿಸಲಾಗಿದೆ. 100 ರುಪಾಯಿ ತಗಲುವ ಸೇವೆಗೆ ಪ್ರಯಾಣಿಕರು ಕೇವಲ 45 ರುಪಾಯಿಗಳನ್ನು ಮಾತ್ರ ಕೊಡುತ್ತಾರೆ. ಪ್ರಯಾಣಿಕರಿಗೆ 47% ಸಬ್ಸಿಡಿ ನೀಡಲಾಗುತ್ತಿದ್ದು, ಇದಕ್ಕಾಗಿ ವಾರ್ಷಿಕ 60,000 ಕೋಟಿ ರುಪಾಯಿ ವೆಚ್ಚವಾಗುತ್ತದೆ. ಭಾರತೀಯ ರೈಲ್ವೆಗೆ ರೈಲ್ವೆ ಸೇವೆ ನೀಡಲು ಭಾರಿ ವೆಚ್ಚವಾಗುತ್ತದೆ. ಸಿಬ್ಬಂದಿ ವೇತನ, ನಿರ್ವಹಣೆ, ಸುರಕ್ಷತಾ ಕ್ರಮಗಳು, ಪಿಂಚಣಿ ಇತ್ಯಾದಿಗೆ ಪ್ರತಿ ವರ್ಷ 2 ಲಕ್ಷದ 60 ಸಾವಿರ ಕೋಟಿ ರುಪಾಯಿ ವೆಚ್ಚವಾಗುತ್ತದೆ. ಕಳೆದ ಒಂದು ವರ್ಷದಲ್ಲಿ ರೈಲ್ವೆಯು ತನ್ನ ಸುರಕ್ಷತೆಗೆ 1 ಲಕ್ಷದ 78 ಸಾವಿರ ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಿತ್ತು. ಹಳಿಗಳ ನವೀಕರಣ, ವಿದ್ಯುದೀಕರಣ, ಕವಚ್ ವ್ಯವಸ್ಥೆಯ ಅಳವಡಿಕೆಗೆ ವೆಚ್ಚವಾಗಿತ್ತು. ಇದರ ಪರಿಣಾಮ‌ 2014-15ರಲ್ಲಿ 135 ರಷ್ಟಿದ್ದ ರೈಲು ಅಪಘಾತ ಪ್ರಮಾಣವು 2025-26ರಲ್ಲಿ ಕೇವಲ 10ಕ್ಕೆ ಇಳಿದಿತ್ತು.

ಕೇಶವ ಪ್ರಸಾದ್​ ಬಿ

View all posts by this author