ನವದೆಹಲಿ: ಇಂಡಿಗೋ (IndiGO) ವಿಮಾನ ರದ್ದತಿ (flight cancel) ದೇಶಾದ್ಯಂತ ಸಾರಿಗೆ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ. ಇದನ್ನು ಸರಿಪಡಿಸಿಕೊಳ್ಳಲು ಇದೀಗ ಭಾರತೀಯ ರೈಲ್ವೆಯು (Indian Railways) ಮುಂದಾಗಿದೆ. ವಿಮಾನಯಾನ ಸಂಸ್ಥೆಯ ಕಾರ್ಯಾಚರಣೆಯಲ್ಲಿ ಸಾಕಷ್ಟು ಅಡಚಣೆಗಳನ್ನು ಎದುರಾಗಿದ್ದು, ಶುಕ್ರವಾರ ಮಧ್ಯರಾತ್ರಿಯವರೆಗೆ ಇಂಡಿಗೋ ದೆಹಲಿ ವಿಮಾನ ನಿಲ್ದಾಣದಿಂದ (Delhi airport) ಹೊರಡುವ ಎಲ್ಲಾ ದೇಶೀಯ ವಿಮಾನಗಳನ್ನು (domestic flights) ರದ್ದುಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ವಿಮಾನ ಸಾರಿಗೆಗೆ ಪರ್ಯಾಯವಾಗಿ ಭಾರತೀಯ ರೈಲ್ವೆಯು ಸಂಚಾರದಲ್ಲಿ ಹೆಚ್ಚುವರಿ ಬೋಗಿಗಳನ್ನು ಸೇರ್ಪಡೆ ಮಾಡಿದೆ.
ಸಾವಿರಕ್ಕೂ ಹೆಚ್ಚು ಇಂಡಿಗೊ ವಿಮಾನ ರದ್ದುಗೊಂಡ ಬಳಿಕ ಭಾರತೀಯ ರೈಲ್ವೆಯು 37 ರೈಲುಗಳಿಗೆ 116 ಬೋಗಿಗಳನ್ನು ಸೇರಿಸಿದೆ. ಕಳೆದ ಸೋಮವಾರದಿಂದ ಇಂಡಿಗೊ ವಿಮಾನ ಸಂಚಾರದಲ್ಲಿ ಭಾರಿ ಅಡಚಣೆಗಳು ಎದುರಾಗಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆಯು ದೇಶಾದ್ಯಂತ ರೈಲು ಸಾರಿಗೆ ವಿಸ್ತರಣೆಗೆ ಕ್ರಮ ಕೈಗೊಂಡಿದೆ.
ಮುಂದುವರಿದ ಇಂಡಿಗೋ ಸಮಸ್ಯೆ: ತನಿಖೆಗೆ ಸರ್ಕಾರದಿಂದ ಸಮಿತಿ ರಚನೆ
ಇಂಡಿಗೋ ವಿಮಾನಯಾನ ಸಂಸ್ಥೆಯ ಕಾರ್ಯಾಚರಣೆಯಲ್ಲಿ ಉಂಟಾದ ಅಡಚಣೆಯಿಂದಾಗಿ ದೇಶಾದ್ಯಂತ ಸಾವಿರಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದುಗೊಂಡಿದೆ. ಶುಕ್ರವಾರ ಮಧ್ಯರಾತ್ರಿಯವರೆಗೆ ದೆಹಲಿ ವಿಮಾನ ನಿಲ್ದಾಣದಿಂದ ಹೊರಡುವ ಎಲ್ಲಾ ದೇಶೀಯ ವಿಮಾನಗಳನ್ನು ಇಂಡಿಗೋ ರದ್ದುಗೊಳಿಸಿದೆ.
ವಿಮಾನ ಸಾರಿಗೆ ರದ್ದುಗೊಂಡ ಬಳಿಕ ಪ್ರಯಾಣಿಕರ ಬೇಡಿಕೆಯಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆಯು ದೇಶಾದ್ಯಂತ 114 ಹೆಚ್ಚುವರಿ ಟ್ರಿಪ್‌ಗಳನ್ನು ನಿರ್ವಹಿಸಲು 37 ಪ್ರೀಮಿಯಂ ರೈಲುಗಳಲ್ಲಿ 116 ಹೆಚ್ಚುವರಿ ಬೋಗಿಗಳನ್ನು ಅಳವಡಿಸಿದೆ.
ಈ ಕುರಿತು ಮಾಹಿತಿ ನೀಡಿರುವ ರೈಲ್ವೆ ಸಚಿವಾಲಯ, ದಕ್ಷಿಣ ರೈಲ್ವೆಯಲ್ಲಿ (SR) ಅತಿ ಹೆಚ್ಚು ಸಂಖ್ಯೆಯ ಸುಧಾರಣೆಗಳನ್ನು ಮಾಡಲಾಗಿದೆ ಎಂದು ತಿಳಿಸಿದೆ. ದಕ್ಷಿಣ ರೈಲ್ವೆಯ 18 ರೈಲುಗಳಲ್ಲಿ ಹೆಚ್ಚು ಬೇಡಿಕೆಯಿರುವ ಮಾರ್ಗಗಳಲ್ಲಿ ಹೆಚ್ಚುವರಿ ಚೇರ್ ಕಾರ್ ಮತ್ತು ಸ್ಲೀಪರ್ ಕ್ಲಾಸ್ ಕೋಚ್‌ಗಳನ್ನು ನಿಯೋಜಿಸಲಾಗಿದೆ. ಇದು ಡಿಸೆಂಬರ್ 6ರಿಂದಲೇ ಜಾರಿಗೆ ತರಲಾಗಿದೆ.
ಉತ್ತರ ರೈಲ್ವೆಯ (NR) ಎಂಟು ರೈಲುಗಳಲ್ಲಿ 3ಎಸಿ ಮತ್ತು ಚೇರ್ ಕಾರ್ ಕೋಚ್‌ಗಳನ್ನು ಸೇರಿಸಲಾಗಿದೆ. ಪಶ್ಚಿಮ ರೈಲ್ವೆಯಲ್ಲಿ (WR) 3ಎಸಿ ಮತ್ತು 2ಎಸಿ ಕೋಚ್‌ಗಳನ್ನು ಸೇರಿಸಲಾಗಿದೆ. ಇದರಿಂದ ನಾಲ್ಕು ರೈಲುಗಳಲ್ಲಿ ಹೆಚ್ಚಿನ ಸೌಲಭ್ಯವನ್ನು ಒದಗಿಸಿದಂತಾಗಿದೆ. ಪೂರ್ವ ಮಧ್ಯ ರೈಲ್ವೆಯಲ್ಲಿ (ECR) ಡಿಸೆಂಬರ್ 6ರಿಂದ 10ರವರೆಗೆ ಐದು ಟ್ರಿಪ್‌ಗಳಲ್ಲಿ ಹೆಚ್ಚುವರಿ 2ಎಸಿ ಕೋಚ್‌ಗಳನ್ನು ಅಳವಡಿಸಲಾಗಿದೆ. ರಾಜೇಂದ್ರ ನಗರ ಮತ್ತು ನವದೆಹಲಿ ನಡುವಿನ 12309 ರೈಲಿನ ಸಾಮರ್ಥ್ಯವನ್ನು ವೃದ್ಧಿಸಲಾಗಿದ್ದು, ಇದರಿಂದ ಬಿಹಾರ ಮತ್ತು ದೆಹಲಿ ವಲಯ ಸಂಚಾರಕ್ಕೆ ಹೆಚ್ಚಿನ ಬಲ ನೀಡಿದಂತಾಗಿದೆ.
ಪೂರ್ವ ಕರಾವಳಿ ರೈಲ್ವೆಯ (ECOR) ಭುವನೇಶ್ವರ ಮತ್ತು ನವದೆಹಲಿ ನಡುವೆ ಪ್ರಯಾಣಿಸುವ ರೈಲುಗಳಾದ 20817, 20811, 20823 ರ ಐದು ಟ್ರಿಪ್‌ಗಳಲ್ಲಿ 2ಎಸಿ ಕೋಚ್‌ಗಳನ್ನು ಸೇರಿಸಲಾಗಿದ್ದು, ಒಡಿಶಾ ಮತ್ತು ರಾಜಧಾನಿ ನಡುವಿನ ಸಂಪರ್ಕ ಸೌಲಭ್ಯವನ್ನು ಸುಧಾರಿಸಿದೆ.
ಪೂರ್ವ ರೈಲ್ವೆಯ ಮೂರು ರೈಲುಗಳ ಆರು ಟ್ರಿಪ್ ಗಳಲ್ಲಿ ಡಿಸೆಂಬರ್ 7 ಮತ್ತು 8ರಂದು ಸ್ಲೀಪರ್ ಕ್ಲಾಸ್ ಕೋಚ್‌ಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಈ ಮೂಲಕ ಪೂರ್ವದಲ್ಲಿ ಹೆಚ್ಚಿನ ಪ್ರಾದೇಶಿಕ ಮತ್ತು ಅಂತರರಾಜ್ಯ ಪ್ರಯಾಣದ ಬೇಡಿಕೆಯನ್ನು ಪೂರೈಸಲಾಗಿದೆ.
ಈಶಾನ್ಯ ಗಡಿನಾಡು ರೈಲ್ವೆಯ (NFR) ಎರಡು ಪ್ರಮುಖ ರೈಲುಗಳಲ್ಲಿ ಡಿಸೆಂಬರ್ 6ರಿಂದ 13ರವರೆಗೆ ತಲಾ ಎಂಟು ಟ್ರಿಪ್‌ಗಳಲ್ಲಿ 3ಎಸಿ ಮತ್ತು ಸ್ಲೀಪರ್ ಕೋಚ್‌ಗಳನ್ನು ಹೆಚ್ಚುವರಿಯಾಗಿ ಅಳವಡಿಸಲಾಗಿದೆ ಎಂದು ಭಾರತೀಯ ರೈಲ್ವೆ ಪ್ರಕಟಣೆ ತಿಳಿಸಿದೆ.
Donald Trump: ನೊಬೆಲ್ ಸಿಗದಿದ್ದರೇನು? ಕೊನೆಗೂ ಫಿಫಾ ಶಾಂತಿ ಪ್ರಶಸ್ತಿ ತನ್ನದಾಗಿಸಿಕೊಂಡ ಟ್ರಂಪ್
ಇದರೊಂದಿಗೆ ನಾಲ್ಕು ವಿಶೇಷ ರೈಲು ಸೇವೆಗಳನ್ನು ಒದಗಿಸಲಾಗುತ್ತಿದೆ. ಇವುಗಳಲ್ಲಿ ಗೋರಖ್‌ಪುರ- ಆನಂದ್ ವಿಹಾರ್ ಟರ್ಮಿನಲ್ ಗೋರಖ್‌ಪುರ ವಿಶೇಷ ರೈಲು 05591, 05592 ಡಿಸೆಂಬರ್ 7 ಮತ್ತು 9 ರ ನಡುವೆ ನಾಲ್ಕು ಟ್ರಿಪ್‌ಗಳನ್ನು ನಿರ್ವಹಿಸಲಿದೆ. ನವದೆಹಲಿ ಹುತಾತ್ಮ ಕ್ಯಾಪ್ಟನ್ ತುಷಾರ್ ಮಹಾಜನ್ ವಂದೇ ಭಾರತ ವಿಶೇಷ ರೈಲು 02439, 02440 ಡಿಸೆಂಬರ್ 6 ರಂದು ಜಮ್ಮುವಿಗೆ ಸಂಪರ್ಕ ಕಲ್ಪಿಸಲಿದೆ.
ಪಶ್ಚಿಮ ವಲಯದಲ್ಲಿ ನವದೆಹಲಿ -ಮುಂಬೈ ಸೆಂಟ್ರಲ್- ನವದೆಹಲಿ ರಿಸರ್ವ್ಡ್ ಸೂಪರ್‌ಫಾಸ್ಟ್ ಸ್ಪೆಷಲ್ ರೈಲು 04002, 04001 ಡಿಸೆಂಬರ್ 6 ಮತ್ತು 7 ರಂದು ಹಾಗೂ ಹಜರತ್ ನಿಜಾಮುದ್ದೀನ್ ತಿರುವನಂತಪುರಂ ಸೆಂಟ್ರಲ್ ರಿಸರ್ವ್ಡ್ ಸೂಪರ್‌ಫಾಸ್ಟ್ ಸ್ಪೆಷಲ್ ರೈಲು 04080 ಡಿಸೆಂಬರ್ 6 ರಂದು ದಕ್ಷಿಣಕ್ಕೆ ಸಂಪರ್ಕ ಕಲ್ಪಿಸಲಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.