RBI: ನಿಮ್ಮ ಸಾಲದ ಬಡ್ಡಿ ಇಳಿಕೆ ? RBI ರೇಟ್ ಕಟ್ ಆದ್ರೆ ನೀವೇನು ಮಾಡಬೇಕು ಗೊತ್ತಾ?
ಕೇಂದ್ರ ಬಜೆಟ್‌ನಲ್ಲಿ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತೆ ಕೇಂದ್ರ ಸರಕಾರ 12 ಲಕ್ಷ ರುಪಾಯಿ ತನಕ ಟ್ಯಾಕ್ಸ್ ಫ್ರೀ ಮಾಡಿದೆ. ಮುಂದಿನ ಹಂತದಲ್ಲಿ ಆರ್‌ಬಿಐನಿಂದ ಬಡ್ಡಿ ದರದ ಇಳಿಕೆಯ ಬೆನಿಫಿಟ್ ಸಿಗುವ ಸಾಧ್ಯತೆ ಇದೆ. ಆಗ ಗೃಹ ಸಾಲ, ವಾಹನ ಸಾಲ, ಕಾರ್ಪೊರೇಟ್ ಸಾಲದ ಬಡ್ಡಿ ದರಗಳು ಇಳಿಕೆಯಾಗುವ ನಿರೀಕ್ಷೆ ಇದೆ.
![RBI](https://cdn-vishwavani-prod.hindverse.com/media/images/RBI.max-1280x720.jpg)
![Profile](https://vishwavani.news/static/img/user.5c7ca8245eec.png)
ನವದೆಹಲಿ: ಕೇಂದ್ರ ಬಜೆಟ್‌ನಲ್ಲಿ(Centre Budget) ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತೆ ಕೇಂದ್ರ ಸರಕಾರ(Centre Government) 12 ಲಕ್ಷ ರುಪಾಯಿ ತನಕ ಟ್ಯಾಕ್ಸ್ ಫ್ರೀ ಮಾಡಿದೆ. ಮುಂದಿನ ಹಂತದಲ್ಲಿ ಆರ್‌ಬಿಐನಿಂದ(RBI) ಬಡ್ಡಿ ದರದ ಇಳಿಕೆಯ ಬೆನಿಫಿಟ್ ಸಿಗುವ ಸಾಧ್ಯತೆ ಇದೆ. ಆಗ ಗೃಹ ಸಾಲ, ವಾಹನ ಸಾಲ, ಕಾರ್ಪೊರೇಟ್ ಸಾಲದ ಬಡ್ಡಿ(RBI Rate Cut) ದರಗಳು ಇಳಿಕೆಯಾಗುವ ನಿರೀಕ್ಷೆ ಇದೆ. ನಿಮ್ಮ ಗೃಹ ಸಾಲದ ಇಎಂಐಯನ್ನು ನೀವು ಪ್ರತಿ ತಿಂಗಳು ಕಟ್ಟುತ್ತಾ ಇರಬಹುದು. ಮತ್ತೆ ಕೆಲವು ಬುದ್ಧಿವಂತರು ಪ್ರತಿ ವರ್ಷ ಭಾಗಶಃ ಸಾಲವನ್ನು ಹೆಚ್ಚುವರಿಯಾಗಿ ತೀರಿಸುತ್ತಿರಬಹುದು. ಇದೀಗ ಫೆಬ್ರವರಿ 7ರಂದು ಎಲ್ಲರೂ ಮತ್ತೊಂದು ಪಾಸಿಟಿವ್ ನ್ಯೂಸ್ ಅನ್ನು ನಿರೀಕ್ಷಿಸಬಹುದು.
ಏಕೆಂದರೆ ಆರ್‌ಬಿಐನ ಹೊಸ ಗವರ್ನರ್(Governor) ಸಂಜಯ್ ಮಲ್ಹೋತ್ರಾ(Sanjay Malhotra) ತಮ್ಮ ಮೊದಲ ಪಾಲಿಸಿ ಮೀಟಿಂಗ್ ಅನ್ನು ಕರೆದಿದ್ದು, ಫೆಬ್ರವರಿ 7ರಂದು ಬಡ್ಡಿ ದರ ಇಳಿಕೆಯನ್ನು ಘೋಷಿಸುವ ನಿರೀಕ್ಷೆ ಇದೆ. ರೆಪೊ ರೇಟ್ 6.5 ಪರ್ಸೆಂಟ್‌ನಿಂದ 6.25 ಪರ್ಸೆಂಟಿಗೆ ಇಳಿದರೆ, ಸಾಲಗಾರಿಗೆ ರಿಲೀಫ್ ಸಿಗಲಿದೆ. ಅವರ ಇಎಂಐ ಅನ್ನು ಕಡಿಮೆ ಮಾಡಬಹುದು, ಅಥವಾ ಸಾಲದ ಅವಧಿಯನ್ನು ಇಳಿಸಬಹುದು.
ಹೀಗಿದ್ರೂ ಕೂಡ, ಆರ್‌ಬಿಐ ತನ್ನ ರೆಪೊ ದರವನ್ನು ಕಡಿತ ಮಾಡಿದ್ರೆ, ನೀವು ನಿಮ್ಮ ಗೃಹ ಸಾಲದ ಮೇಲೆ ಅದರ ಪರಿಣಾಮ ಆಗಿದೆಯೇ, ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಆರ್‌ಬಿಐ ರೆಪೊ ದರವನ್ನು ಕಡಿತಗೊಳಿಸಿದರೆ, ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ, ಸಾಲದ ಖಾತೆಯನ್ನು ತೆರೆಸಿ ಚೆಕ್ ಮಾಡಿ. ಬಡ್ಡಿ ದರ ಇಳಿಯದಿದ್ದರೆ, ಬ್ಯಾಂಕ್ ನಲ್ಲಿ ಸಂಬಂಧಪಟ್ಟ ಸಿಬ್ಬಂದಿಗೆ ರಿಕ್ವೆಸ್ಟ್ ಮಾಡಿ ಪರಿಷ್ಕೃತ ಬಡ್ಡಿ ದರದ ಪ್ರಯೋಜನವನ್ನು ಪಡೆಯಿರಿ. ಇಲ್ಲದಿದ್ದರೆ ಹಳೆಯ ಬಡ್ಡಿ ದರವೇ ಮುಂದುವರಿಯುವ ಅಪಾಯ ಇರುತ್ತದೆ. ಏಕೆಂದರೆ ಬಡ್ಡಿ ದರ ಏರಿದಾಗಲೂ ಇಎಂಐ ಒಂದೇ ರೀತಿ ಇರುತ್ತದೆ. ಆದರೆ ಸಾಲದ ಅವಧಿ ಹೆಚ್ಚಾಗುತ್ತದೆ. ಎಷ್ಟೋ ಜನರಿಗೆ ಇದು ಗೊತ್ತಾಗದೆ ವರ್ಷಾನುಗಟ್ಟಲೆ ಸಾಲವನ್ನು ಕಟ್ಟುತ್ತಲೇ ಇರುತ್ತಾರೆ. ಆದ್ದರಿಂದ ಸಾಲವನ್ನು ಪಡೆಯುವುದು ಎಷ್ಟು ಮುಖ್ಯವೋ, ಬಡ್ಡಿ ದರಗಳ ಏರಿಳಿತಗಳ ಮೇಲೆ ಮತ್ತು ಅದು ನಿಮ್ಮ ಸಾಲದ ಮೇಲೆ ಬೀರುವ ಪರಿಣಾಮಗಳನ್ನು ನಿಯಮಿತವಾಗಿ ಪರಿಶೀಲಿಸುತ್ತಾ ಇರಬೇಕು.
ಈ ಸುದ್ದಿಯನ್ನೂ ಓದಿ:Sensex Today : ಬ್ಯಾಂಕಿಂಗ್‌ಗೆ ಆರ್‌ಬಿಐ 1.5 ಲಕ್ಷ ಕೋಟಿ ರೂ. ನೆರವು ಘೋಷಣೆ, ಸೆನ್ಸೆಕ್ಸ್ 800 ಅಂಕ ಜಿಗಿತ
ಆರ್‌ಬಿಐನ ಹೊಸ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಕಳೆದ ಡಿಸೆಂಬರ್ ಮಧ್ಯ ಭಾಗದಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಅವರಿಗಿಂತ ಮೊದಲಿನ ಗವರ್ನರ್ ಶಕ್ತಿಕಾಂತ ದಾಸ್ ಅವರು ಹಣದುಬ್ಬರವನ್ನು ಶೇಕಡಾ 4ರ ಮಟ್ಟದಲ್ಲಿ ಇಡುವ ಸಲುವಾಗಿ ಎರಡು ವರ್ಷಗಳ ಕಾಲ ಬಡ್ಡಿ ದರಗಳನ್ನು ಯಥಾಸ್ಥಿತಿಯಲ್ಲಿ ಇಟ್ಟಿದ್ದರು. 2023ರ ಫೆಬ್ರವರಿಯಿಂದ ರೆಪೊ ರೇಟ್ ಬದಲಾಗಿಲ್ಲ. ಆದರೆ ಈಗಿನ ಪರಿಸ್ಥಿತಿಯಲ್ಲಿ ಹೊಸ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ರೆಪೊ ದರವನ್ನು ಶುಕ್ರ ವಾರ ಕನಿಷ್ಠ 6.25% ಕ್ಕೆ ಇಳಿಸುವ ನಿರೀಕ್ಷೆ ಇದೆ. ಸದ್ಯಕ್ಕೆ ರೆಪೊ ರೇಟ್ 6.50% ಇದೆ. ಆರ್‌ಬಿಐ ಗವರ್ನರ್ ನೇತೃತ್ವದ ಹಣಕಾಸು ನೀತಿ ಸಮಿತಿ ಅಥವಾ ಮಾನಿಟರಿ ಪಾಲಿಸಿ ಕಮಿಟಿಯು ಆರ್‌ಬಿಐನ ದರಗಳನ್ನು ನಿರ್ಧರಿಸುತ್ತದೆ.
ಹಾಗಾದ್ರೆ ಏನಿದು ರೆಪೊ ದರ? ಅಂತ ನೋಡೋಣ. ಬ್ಯಾಂಕ್‌ಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಪಡೆಯುವ ಸಾಲಕ್ಕೆ ಆರ್‌ಬಿಐ ವಿಧಿಸುವ ಬಡ್ಡಿಯೇ ರೆಪೊ ದರ. ಈ ರೆಪೊ ದರ ಇಳಿಕೆಯಾದರೆ ಬ್ಯಾಂಕ್‌ಗಳಿಗೆ ಆರ್‌ಬಿಐನಿಂದ ಸಿಗುವ ಫಂಡ್‌ಗೆ ತಗಲುವ ಬಡ್ಡಿಯ ಖರ್ಚು ಕಡಿಮೆಯಾಗುತ್ತದೆ. ಹೀಗಾಗಿ ಹೋಮ್ ಲೋನ್ ಸೇರಿದಂತೆ ನಾನಾ ಸಾಲಗಳ ಬಡ್ಡಿ ದರ ಇಳಿಯುತ್ತದೆ. ಜನರಿಗೆ ಅನುಕೂಲವಾಗುತ್ತದೆ. ಆರ್ಥಿಕ ಚಟುವಟಿಕೆಗಳು ಚುರುಕಾಗುತ್ತದೆ.
ಹಾಗಾದರೆ, ರೆಪೊ ರೇಟ್ ಕಡಿತಕ್ಕೆ ಪೂರಕವಾಗಿರುವ ಸನ್ನಿವೇಶ ಏನು?
ಕೇಂದ್ರ ಸರಕಾರ 2025ರ ಬಜೆಟ್‌ನಲ್ಲಿ ಮಧ್ಯಮ ವರ್ಗದ ತೆರಿಗೆದಾರರಿಗೆ 12 ಲಕ್ಷ ರುಪಾಯಿ ತನಕದ ಆದಾಯಕ್ಕೆ ತೆರಿಗೆಯನ್ನು ಮುಕ್ತಗೊಳಿಸಿದ್ದು, ಜನರ ಕೈಯಲ್ಲೊ ದುಡ್ಡು ಉಳಿಯುವಂತೆ ಮಾಡಿದೆ. ಇದರಿಂದ ಜನರು ಖರ್ಚು ಮಾಡುತ್ತಾರೆ ಅಥವಾ ಹಣವನ್ನು ಎಲ್ಲೋ ಇನ್ವೆಸ್ಟ್ ಮಾಡ್ತಾರೆ. ಹೀಗೆ ವ್ಯವಸ್ಥೆಯಲ್ಲಿ ವಸ್ತುಗಳು ಮತ್ತು ಸೇವೆಗಳಿಗೆ ಬೇಡಿಕೆ ಸೃಷ್ಟಿಯಾಗುತ್ತದೆ. ಕೊಡು-ಕೊಳ್ಳುವಿಕೆಯ ಆರ್ಥಿಕ ಚಟುವಟಿಕೆಗಳು ಹೆಚ್ಚುತ್ತವೆ. ಇದಕ್ಕೆ ಪೂರಕವಾಗಿ ಆರ್‌ಬಿಐ ತನ್ನ ರೆಪೊ ದರವನ್ನು ಕಡಿತಗೊಳಿಸುವ ನಿರೀಕ್ಷೆ ಇದೆ.
ಅಮೆರಿಕದ ಟ್ರೇಡ್ ವಾರ್ ಪರಿಣಾಮ ಜಾಗತಿಕ ಮಟ್ಟದಲ್ಲಿ ಆರ್ಥಿಕ ಬೆಳವಣಿಗೆಯ ಅನಿಶ್ಚಿತತೆ ಉಂಟಾಗಿದೆ. ಹೀಗಾಗಿಯೂ ಆರ್‌ಬಿಐ, ತನ್ನ ಜನರ ಹಿತ ದೃಷ್ಟಿಯಿಂದ ರೆಪೊ ದರ ಕಡಿತಕ್ಕೆ ಮುಂದಾಗಬಹುದು. ಒಟ್ಟಾರೆಯಾಗಿ, ಆರ್ಥಿಕ ಪ್ರಗತಿಗೆ ಪುಷ್ಟಿ ನೀಡಲು ಆರ್‌ಬಿಐ ರೆಪೊ ದರವನ್ನು ಕಡಿತಗೊಳಿಸುತ್ತದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್‌ಬಿಐಗೆ, ವ್ಯವಸ್ಥೆಯಲ್ಲಿ ಲಿಕ್ವಿಡಿಟಿಯನ್ನು ಹೆಚ್ಚಿಸುವ ಅಗತ್ಯ ಇದೆ ಎಂಬ ಮೆಸೇಜ್ ಅನ್ನು ನೀಡಿದ್ದಾರೆ. ಆದ್ದರಿಂದ ಆರ್‌ಬಿಐ ರೆಪೊ ದರವನ್ನು ಕಡಿಮೆ ಮಾಡಬಹುದು ಎಂಬ ನಿರೀಕ್ಷೆ ಉಂಟಾಗಿದೆ.
ಆರ್‌ಬಿಐ ಬಳಿ ಹಣದುಬ್ಬರವನ್ನು ನಿಯಂತ್ರಿಸಲು ರಿಸರ್ವ್ ಬ್ಯಾಂಕ್ ಬಳಿ ರಿವರ್ಸ್ ರೆಪೊ ರೇಟ್ ಎಂಬ ಮತ್ತೊಂದು ಅಸ್ತ್ರವೂ ಇದೆ. ಇದು ಯಾವಾಗಲೂ ರೆಪೊ ರೇಟ್‌ಗಿಂತ ಕಡಿಮೆ ಇರುತ್ತದೆ. ಈಗ ರಿವರ್ಸ್ ರೆಪೊ ರೇಟ್ 3.35% ಇದೆ. 2020ರ ಏಪ್ರಿಲ್‌ನಿಂದ ಇದು ಯಥಾಸ್ಥಿತಿಯಲ್ಲಿದೆ. ವ್ಯವಸ್ಥೆಯಲ್ಲಿನ ಹೆಚ್ಚುವರಿ ಹಣವನ್ನು ಹೀರಿಕೊಳ್ಳಲು ಆರ್‌ಬಿಐ ರಿವರ್ಸ್ ರೆಪೊ ರೇಟ್ ಅನ್ನು ಹೆಚ್ಚಿಸುತ್ತದೆ. ಹಾಗಾದ್ರೆ ಏನಿದು ರಿವರ್ಸ್ ರೆಪೊ ರೇಟ್ ಅಂತ ನೀವು ಕೇಳಬಹುದು.
ಆರ್‌ಬಿಐ ಬಳಿ ಬ್ಯಾಂಕ್‌ಗಳು ಡೆಪಾಸಿಟ್ ಇಡಬಹುದು. ಹಾಗೂ ಅದಕ್ಕೆ ಸ್ವತಃ ಆರ್‌ಬಿಐ ಬಡ್ಡಿಯನ್ನು ಬ್ಯಾಂಕ್‌ಗಳಿಗೆ ಕೊಡುತ್ತದೆ. ಇದನ್ನು ರಿವರ್ಸ್ ರೆಪೊ ರೇಟ್ ಎನ್ನುತ್ತಾರೆ. ಹಣದುಬ್ಬರ ಹೆಚ್ಚಾದಾಗ ಆರ್‌ಬಿಐ, ರಿವರ್ಸ್ ರೆಪೊ ರೇಟ್ ಅನ್ನು ಹೆಚ್ಚಿಸುತ್ತದೆ. ಆಗ ಬ್ಯಾಂಕ್‌ಗಳು ಆರ್‌ಬಿಐನಲ್ಲಿ ಹೆಚ್ಚಿನ ಹಣವನ್ನು ಡೆಪಾಸಿಟ್ ಇಡುತ್ತವೆ. ಚಲಾವಣೆಯಲ್ಲಿರುವ ಹಣ ಕಡಿಮೆಯಾಗುತ್ತದೆ. ಆಗ ವಸ್ತುಗಳ ಮತ್ತು ಸೇವೆಗಳ ದರ ಸ್ಥಿರತೆಗೆ ಬರುತ್ತದೆ. ಹಣದುಬ್ಬರ ಇಳಿಕೆಗೆ ಸಹಕಾರಿಯಾಗುತ್ತದೆ. ಹೀಗಿದ್ದರೂ, ಒಂದು ಹಂತದ ತನಕ ಮಾತ್ರ ಇದು ಪರಿಣಾಮಕಾರಿಯಾಗುತ್ತದೆ. ಒಟ್ಟಾರೆಯಾಗಿ ಆರ್ಥಿಕತೆಯ ಪ್ರಗತಿಗೆ ಉತ್ಪಾದನೆ, ಜನರ ಖರೀದಿ ಸಾಮರ್ಥ್ಯ ಎರಡೂ ಚುರುಕಾಗಬೇಕಾಗುತ್ತದೆ ಎಂಬುದನ್ನು ಮರೆಯುವಂತಿಲ್ಲ.
ನಮ್ಮ ದೇಶದ ಆರ್ಥಿಕ ವ್ಯವಸ್ಥೆ ಮತ್ತು ಷೇರು ಮಾರುಕಟ್ಟೆಯ ಮೇಲೆ ಈ ವರ್ಷ ಎರಡು ವಿಚಾರಗಳು ಪ್ರಭಾವ ಬೀರುವ ಸಾಧ್ಯತೆ ಇದೆ. ಅವುಗಳು ಯಾವುದೆಂದರೆ ಹಣದುಬ್ಬರ ಮತ್ತು ಅಮೆರಿಕದ ವಾಣಿಜ್ಯ ತೆರಿಗೆ ಸಮರ. ಅಮೆರಿಕದ ಹಣಕಾಸು ಸಂಸ್ಥೆ ಜೆಪಿ ಮೋರ್ಗಾನ್ ಚೇಸ್‌ನ ವರದಿ ಇದನ್ನು ತಿಳಿಸಿದೆ. ಅಮೆರಿಕದ ಟ್ರೇಡ್ ವಾರ್‌ನಿಂದ ಗ್ಲೋಬಲ್ ಸ್ಟಾಕ್ ಮಾರ್ಕೆಟ್ ಅಲುಗಾಡಲು ಆರಂಭವಾಗಿದೆ ಹಾಗೂ ಈ ವರ್ಷ ಅನಿಶ್ಚಿತತೆ ಹೆಚ್ಚು ಇರಬಹುದು ಎಂದು ಜೆಪಿ ಮೋರ್ಗಾನ್ ಹೇಳಿದೆ. ಹೀಗೆ ಒಂದು ಕಡೆ ಟ್ರಂಪ್ ಅವರು ಕೆನಡಾ, ಮೆಕ್ಸಿಕೊ ಮತ್ತು ಚೀನಾ ವಿರುದ್ಧ ಆರಂಭಿಸಿರುವ ಟಾರಿಫ್ ವಾರ್‌ನ ಪರಿಣಾಮ ಏನಾಗಬಹುದು ಎಂಬ ಲೆಕ್ಕಾಚಾರ ನಡೆಯುತ್ತಿದೆ. ಮತ್ತೊಂದು ಕಡೆ ಕೇಂದ್ರ ಸರಕಾರ 2025ರ ಬಜೆಟ್‌ನಲ್ಲಿ ಮಧ್ಯಮ ವರ್ಗದ ಜನರಿಗೆ ಟ್ಯಾಕ್ಸ್ ರಿಲೀಫ್ ನೀಡಿದೆ. ಆರ್ಥಿಕತೆಗೆ ಪುಷ್ಟಿ ಕೊಟ್ಟಿದೆ. ಬಂಡವಾಳ ವೆಚ್ಚವನ್ನೂ ಕಡಿಮೆಯಂತೂ ಮಾಡಿಲ್ಲ.
ಇಂಥ ಸಂದರ್ಭದಲ್ಲಿ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡಿದವರು ಏನು ಮಾಡಬಹುದು? ಎಂಬ ಪ್ರಶ್ನೆ ಮೂಡುತ್ತದೆ. ತಜ್ಞರ ಪ್ರಕಾರ ಕಂಪನಿಗಳ ಲಾಭ, ಅದಾಯ ಮತ್ತು ಸೆಕ್ಟರ್‌ಗಳಲ್ಲಿನ ಟ್ರೆಂಡ್ ಬಗ್ಗೆ ಹೂಡಿಕೆದಾರರು ಸ್ವಲ್ಪ ಅಧ್ಯಯನ ಮಾಡಬೇಕು. ಇದು ಕಷ್ಟಕರ ಎಂದು ಭಾವಿಸುತ್ತಿದ್ದರೆ, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡೋದು ಉತ್ತಮ. ರಾಜ್ಯದಲ್ಲಿ ಇತ್ತೀಚೆಗೆ ಮೈಕ್ರೊ ಫೈನಾನ್ಸ್ ಸಂಸ್ಥೆಗಳು ಸಾಲಗಾರರಿಗೆ ವಿಧಿಸುತ್ತಿರುವ ಭಾರಿ ಬಡ್ಡಿ ದರ ಮತ್ತು ಸಾಲ ವಸೂಲಾತಿಯಲ್ಲಿ ಕಿರುಕುಳ ಮತ್ತು ದೌರ್ಜನ್ಯ ಮಾಡುತ್ತಿರುವ ಪ್ರಕರಣಗಳು ಭಾರಿ ಸುದ್ದಿಯಾಗಿವೆ. ಹಲವಾರು ಮಂದಿ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ನಡುವೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಅಥವಾ ನಾನ್-ಬ್ಯಾಂಕಿಂಗ್ ಹಣಕಾಸು ಸಂಸ್ಥೆಗಳು ತಮ್ಮ ಪ್ರತೊಯೊಂದು ಸಾಲದ ಪ್ರಾಡಕ್ಟ್‌ನಲ್ಲೂ ಬಡ್ಡಿ ದರ ಮತ್ತು ಇತರ ಶುಲ್ಕಗಳ ವಿವರವನ್ನು ಬಹಿರಂಗಪಡಿಸಬೇಕು ಎಂದು ಸೂಚಿಸಿದೆ.
ಜತಗೆ ಈ ಎನ್‌ಬಿಎಫ್‌ಸಿಗಳು ಗರಿಷ್ಠ ಬಡ್ಡಿ ದರವನ್ನು ವಿಧಿಸುವ ಮೊದಲು ತಮ್ಮ ಆಡಳಿತ ಮಂಡಳಿಯ ಅನುಮೋದನೆ ಪಡೆಯಬೇಕು ಎಂದು ಆರ್‌ಬಿಐ ಸೂಚಿಸಿದೆ. ಸಾಲದ ಬಡ್ಡಿ ದರ, ಇನ್ಷೂರೆನ್ಸ್ ಖರ್ಚು, ಪ್ರೊಸೆಸಿಂಗ್ ಫೀಸ್ ಬಗ್ಗೆ ತಿಳಿಸಬೇಕು. ವಾಹನ ಸಾಲ, ಪ್ರಾಪರ್ಟಿ ಲೋನ್, ಗೋಲ್ಡ್ ಲೋನ್, ಶಿಕ್ಷಣ ಸಾಲ ಇತ್ಯಾದಿ ಎಲ್ಲ ಸಾಲಗಳ ವಿಚಾರದಲ್ಲೂ ಇದು ಅನ್ವಯವಾಗುತ್ತದೆ ಎಂದು ಆರ್‌ಬಿಐ ತಿಳಿಸಿದೆ.