ಹೊಸದಿಲ್ಲಿ: ಜಪಾನ್ ಮೂಲದ ಮಿತ್ಸುಬಿಷಿ ಯುಎಫ್‌ಜೆ ಫೈನಾನ್ಸಿಯಲ್ ಗ್ರೂಪ್ ( ಎಂಯುಎಫ್‌ಜಿ ಬ್ಯಾಂಕ್), ಶ್ರೀರಾಮ್ ಫೈನಾನ್ಸ್‌ನ 20 ಪರ್ಸೆಂಟ್ ಷೇರುಗಳನ್ನು ಖರೀದಿಸುವ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಒಟ್ಟು 4.4 ಶತಕೋಟಿ ಡಾಲರ್ ಅಥವಾ 39,618 ಕೋಟಿ ರುಪಾಯಿಗಳ ಮೆಗಾ ಡೀಲ್ ಇದಾಗಿದ್ದು, ಭಾರತೀಯ ಹಣಕಾಸು ಸೇವಾ ಕಂಪನಿಗಳ ( ಎನ್ ಬಿಎಫ್ ಸಿ) ವಲಯದಲ್ಲಿಯೇ ಅತಿ ದೊಡ್ಡ ವಿದೇಶಿ ನೇರ ಬಂಡವಾಳ ಹೂಡಿಕೆಯಾಗಿ ಇತಿಹಾಸ ಸೃಷ್ಟಿಸಿದೆ. ಶ್ರೀರಾಮ್ ಫೈನಾನ್ಸ್‌ನ ಬಂಡವಾಳ ನೆಲೆಯು ಇದರಿಂದ ಗಣನೀಯವಾಗಿ ಹೆಚ್ಚಲಿದ್ದು, ಭವಿಷ್ಯದ ಬೆಳವಣಿಗೆಗೆ ಅನುಕೂಲಕರವಾಗಲಿದೆ.
ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ಮಂಡಳಿಯಲ್ಲಿ ಇಬ್ಬರು ನಿರ್ದೇಶಕರನ್ನು ನೇಮಕ ಮಾಡುವ ಹಕ್ಕನ್ನು ಎಂಯುಎಫ್‌ಜಿ ಪಡೆಯಲಿದೆ. ಶ್ರೀರಾಮ್ ಫೈನಾನ್ಸ್ ಮಂಡಳಿಯು ಈ ಮೆಗಾ ಒಪ್ಪಂದವನ್ನು ಅನುಮೋದಿಸಿದೆ.
ಮಿತ್ಸುಬಿಷಿ ಯುಎಫ್ ಜೆ ಫೈನಾನ್ಸಿಯಲ್ ಗ್ರೂಪ್, ಎಂಯುಎಫ್ ಜಿ ಬ್ಯಾಂಕಿನ್ ಮಾತೃಸಂಸ್ಥೆಯಾಗಿದೆ. ಇದು ಭಾರತದಲ್ಲಿ ಹಲವು ದಶಕಗಳಿಂದ ಭಾರತದಲ್ಲಿ ಸೇವೆ ಸಲ್ಲಿಸುತ್ತಿದೆ.
" ಶ್ರೀರಾಮ್ ಫೈನಾನ್ಸ್ ಸಂಸ್ತೆಯ ಭವಿಷ್ಯದ ಬೆಳವಣಿಗೆಯ ದೃಷ್ಟಿಯಿಂದ ಇದು ಮಹತ್ವದ ಮೈಲುಗಲ್ಲಾಗಿದೆ. ಭಾರತದ ಹಣಕಾಸು ವಲಯದ ಮೇಲೆ ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ವಿಶ್ವಾಸವನ್ನೂ, ದೇಶದ ಆರ್ಥಿಕ ಬೆಳವಣಿಗೆಯ ಸದೃಢತೆಯನ್ನೂ ಇದು ಬಿಂಬಿಸಿದೆ. ಎಂಯುಎಫ್‌ಜಿ ಜತೆಗಿನ ಪಾಲುದಾರಿಕೆಯಿಂದಾಗಿ ಸಂಸ್ಥೆಯ ಸಾಮರ್ಥ್ಯ ಗಣನೀಯವಾಗಿ ವೃದ್ಧಿಸಲಿದೆ. ಆಡಳಿತದ ದರ್ಜೆ ಸುಧಾರಿಸಲಿದೆ ಮತ್ತು ಭವಿಷ್ಯದ ಹಣಕಾಸು ಸೇರ್ಪಡೆಯನ್ನು ಹೆಚ್ಚಿಸಲಿದೆʼʼ ಎಂದು ಶ್ರೀರಾಮ್ ಫೈನಾನ್ಸ್‌ನ ಕಾರ್ಯಕಾರಿ ಉಪಾಧ್ಯಕ್ಷ ಉಮೇಶ್ ರೇವಾಂಕರ್ ಅವರು ತಿಳಿಸಿದ್ದಾರೆ. ಈ ಒಪ್ಪಂದದಿಂದ ಎಂಯುಎಫ್ ಜಿ ಬ್ಯಾಂಕ್ ನ ಸೇವೆಯೂ ವಿಸ್ತರಣೆಯಾಗಲಿದೆ ಎಂದು ಸಂಸ್ಥೆಯ ಸಿಇಒ ಹಿರೊನೊರಿ ಕಮೆಜಾವಾ ತಿಳಿಸಿದರು.
ಎನ್‌ಬಿಎಫ್‌ಸಿ ದಿಗ್ಗಜ ಶ್ರೀರಾಮ್ ಫೈನಾನ್ಸ್:
ಬ್ಯಾಂಕೇತರ ಹಣಕಾಸು ವಲಯದ (ಎನ್‌ಬಿಎಫ್‌ಸಿ) ದಿಗ್ಗಜ ಶ್ರೀರಾಮ್ ಫೈನಾನ್ಸ್ 2.81 ಲಕ್ಷ ಕೋಟಿ ರುಪಾಯಿಗಳ ಸಂಪತ್ತನ್ನು ನಿರ್ವಹಿಸುತ್ತಿದೆ. ದೇಶಾದ್ಯಂತ 3,225 ಶಾಖೆಗಳನ್ನು ಒಳಗೊಂಡಿದೆ. 78 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ.
ಶ್ರೀರಾಮ್ ಫೈನಾನ್ಸ್ 47 ವರ್ಷಗಳ ಇತಿಹಾಸವನ್ನು ಹೊಂದಿದ್ದು, ದೇಶದ ಅತಿ ದೊಡ್ಡ ರಿಟೇಲ್ ಬ್ಯಾಂಕೇತರ ಹಣಕಾಸು ಸಂಸ್ಥೆ (ಎನ್‌ಬಿಎಫ್‌ಸಿ) ಆಗಿದೆ. ವಾಣಿಜ್ಯೋದ್ದೇಶದ ವಾಹನ ಸಾಲ, ಕಾರು ಸಾಲ, ದ್ವಿಚಕ್ರ ವಾಹನ ಸಾಲ, ಮನೆ ಸಾಲ, ಚಿನ್ನದ ಸಾಲ, ವೈಯಕ್ತಿಕ ಸಾಲ, ಕೃಷಿ ಯಂತ್ರೋಪಕರಣ ಸಾಲ, ಸಣ್ಣ ಉದ್ದಿಮೆಗೆ ಸಾಲವನ್ನು ಶ್ರೀರಾಮ್ ಫೈನಾನ್ಸ್ ವಿತರಿಸುತ್ತದೆ. ಇದು 50 ವರ್ಷಗಳ ಹಳೆಯ ಶ್ರೀರಾಮ್ ಗ್ರೂಪ್ ನ ಭಾಗವಾಗಿದೆ. ಶ್ರೀರಾಮ್ ಫೈನಾನ್ಸ್‌ನಲ್ಲಿ ಸಾಲ ಮಾತ್ರವಲ್ಲದೆ, ಫಿಕ್ಸೆಡ್ ಡೆಪಾಸಿಟ್, ಫಿಕ್ಸೆಡ್ ಇನ್ವೆಸ್ಟ್‌ಮೆಂಟ್ ಪ್ಲಾನ್‌ಗಳನ್ನೂ ಗ್ರಾಹಕರು ಪಡೆಯಬಹುದು.
Meesho IPO: ಸ್ಟಾಕ್ ಮಾರ್ಕೆಟ್‌ನಲ್ಲಿ ಬೆಂಗಳೂರಿನ ಮೀಶೊ IPO ಹವಾ
ಶ್ರೀರಾಮ್ ಚಿಟ್ ಫಂಡ್ಸ್ ಮನೆ ಮಾತು:
ಶ್ರೀರಾಮ್ ಚಿಟ್ ಪಂಡ್ಸ್ 1974ರಿಂದ ಅಸ್ತಿತ್ವದಲ್ಲಿದ್ದು, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಮನೆಮಾತಾಗಿದೆ. ಇದು ಶ್ರೀರಾಮ್ ಗ್ರೂಪ್‌ನ ಭಾಗವಾಗಿದ್ದು, ಜನರಲ್ಲಿ ಸಣ್ಣ ಉಳಿತಾಯದ ಅಭ್ಯಾಸ ರೂಢಿಯಾಗಲು ಸಹಕರಿಸಿದೆ. ಶ್ರೀರಾಮ್ ಚಿಟ್ಸ್ ದೇಶಾದ್ಯಂತ 465 ಶಾಖೆಗಳನ್ನು ಮತ್ತು 5,000 ಕ್ಕೂ ಹೆಚ್ಚು ಸಿಬ್ಬಂದಿಯನ್ನುHB ಒಳಗೊಂಡಿದೆ. ಸಮಗ್ರವಾಗಿ ಆನ್ ಲೈನ್ ಸೇವೆಯನ್ನೂ ಸಂಸ್ಥೆ ನೀಡುತ್ತಿದೆ.