ಬೆಂಗಳೂರು: ಇನ್ನು ಮುಂದೆ ಊಟ, ತಿಂಡಿಗೆಂದು ಹೋಟೆಲ್ ಗೆ ಹೋಗುವ ಮುನ್ನ ಜೇಬನ್ನು ಒಮ್ಮೆ ನೋಡಿಕೊಳ್ಳುವುದು ಒಳ್ಳೆಯದು. ಯಾಕೆಂದರೆ ಈಗಾಗಲೇ ಹೋಟೆಲ್ ತಿನಿಸುಗಳ (Hotel food) ದರ (food price) ಹೆಚ್ಚಳದಿಂದ ಕಂಗೆಟ್ಟಿರುವ ಹೋಟೆಲ್ ಗ್ರಾಹಕರಿಗೆ (hotel customer) ಮತ್ತೊಮ್ಮೆ ಬರೆ ಎಳೆಯಲು ಹೋಟೆಲ್ ಮಾಲೀಕರು (Hotel owner) ಸಿದ್ದತೆ ನಡೆಸುತ್ತಿದ್ದಾರೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಣಾಮ ಎಲ್‌ಪಿಜಿ ದರ (LPG rate) ನಿರಂತರ ಹೆಚ್ಚಳವಾಗುತ್ತಿದೆ. ಇದು ಹೋಟೆಲ್ ತಿಂಡಿ ತಿನಿಸುಗಳ ಮೇಲೆಯೂ ಪರಿಣಾಮ ಬೀರುತ್ತಿದೆ.
ಬೆಳಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಊಟ ತಿಂಡಿಗಾಗಿ ಹೋಟೆಲ್ ಅನ್ನೇ ಅವಲಂಬಿಸಿರುವ ಗ್ರಾಹಕರಿಗೆ ಮತ್ತೊಮ್ಮೆ ಶಾಕ್ ನೀಡಲಿದ್ದಾರೆ ಹೋಟೆಲ್ ಮಾಲೀಕರು. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಸಂಘರ್ಷದ ಪರಿಣಾಮ ಈಗಾಗಲೇ ಒಮ್ಮೆ ಹೋಟೆಲ್ ತಿನಿಸುಗಳ ದರ ಹೆಚ್ಚಳ ಮಾಡಲಾಗಿತ್ತು. ಇದೀಗ ಮತ್ತೆ ಬೆಲೆ ಹೆಚ್ಚಿಸುವ ಚಿಂತನೆ ನಡೆಯುತ್ತಿದೆ.
ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರ ನಿರಂತರವಾಗಿ ಹೆಚ್ಚಳವಾಗುತ್ತಿದ್ದು, ಇದರ ಪರಿಣಾಮ ಬೆಂಗಳೂರಿನ ಹಲವು ಭಾಗಗಳಲ್ಲಿ ಹೋಟೆಲ್ ಊಟ, ತಿಂಡಿ, ಕಾಫಿ, ಟೀ ದರಗಳನ್ನು 5 ರೂ. ನಿಂದ 20 ರೂ. ವರೆಗೆ ಹೆಚ್ಚಿಸಲಾಗಿದೆ. ಇದೀಗ ಇದನ್ನು ಮತ್ತೊಮ್ಮೆ ಇನ್ನಷ್ಟು ಹೆಚ್ಚಳ ಮಾಡಲು ಹೋಟೆಲ್ ಮಾಲೀಕರು ಮುಂದಾಗಿದ್ದಾರೆ.
ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ಸಂಘರ್ಷ ಪ್ರಾರಂಭವಾಗಿ ಮೂರು ತಿಂಗಳಾಗಿದೆ. ಜಲ ಮಾರ್ಗದ ಮೇಲೆ ಇರಾನ್ ನಿಯಂತ್ರಣ ಹೇರಿರುವುದು ನಿರಂತರವಾಗಿ ಕಚ್ಚಾ ತೈಲ ಸೇರಿದಂತೆ ಸರಕು ಸಾಗಾಟಕ್ಕೆ ಅಡ್ಡಿಯಾಗಿದೆ. ಇದರ ಪರಿಣಾಮ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಗುತ್ತಿದೆ. ಇದರಿಂದಾಗಿ ದೇಶದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಕೇವಲ ಮೂರು ತಿಂಗಳಲ್ಲಿ 1,240 ರೂ. ಏರಿಕೆಯಾಗಿದೆ. ಸದ್ಯ 3,198 ರೂ. ಇರುವ ಸಿಲಿಂಡರ್ ದರ 4,000 ರೂ. ಆಗುವ ಭೀತಿ ಹೆಚ್ಚಿಸಿದೆ. ಹೀಗಾಗಿ ಹೋಟೆಲ್ ತಿಂಡಿಗಳಲ್ಲಿ ಇಡ್ಲಿ, ವಡೆ, ದೋಸೆ ಹಾಗೂ ರೈಸ್ ಐಟಂಗಳ ಮೇಲೆ 5 ರೂ. ನಿಂದ 20 ರೂ. ಮತ್ತು ಕಾಫಿ, ಚಹಾ ಬೆಲೆಯನ್ನು 2 ರೂ. ನಿಂದ 3 ರೂ. ಹೆಚ್ಚಳ ಮಾಡಲು ಹೋಟೆಲ್ ಮಾಲೀಕರು ಸಿದ್ಧತೆ ನಡೆಸುತ್ತಿದ್ದಾರೆ.
ಸೈಬರ್ ದಾಳಿಗೆ ಸವಾಲೊಡ್ಡಿದ ಸಿಬಿಎಸ್‌ಇ; ವಿದ್ಯಾರ್ಥಿಗಳ ಅರ್ಜಿ ಸ್ವೀಕಾರ ಪ್ರಕ್ರಿಯೆ ನಿರಾತಂಕ
ಹೋಟೆಲ್ ಬಳಕೆಯ ವಾಣಿಜ್ಯ ಸಿಲಿಂಡರ್ ದರ ಕಳೆದ ತಿಂಗಳು 991 ರೂ. ಹೆಚ್ಚಳವಾಗಿತ್ತು. ಜೂನ್ 1 ರಂದು ಮತ್ತೆ 46 ರೂ. ಏರಿಕೆ ಮಾಡಲಾಗಿದೆ. ಇನ್ನು ಕೆಲವು ದಿನಗಳಲ್ಲಿ 800 ರೂ. ಹೆಚ್ಚಳವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹೀಗಾಗಿ ದರ ಏರಿಕೆ ಬಿಸಿ ಹೋಟೆಲ್ ಮಾಲೀಕರನ್ನು ತಟ್ಟಿದ್ದು, ಅವರು ಅದರ ಹೊರೆಯನ್ನು ಗ್ರಾಹಕರಿಗೆ ಹೊರಿಸಲು ಮುಂದಾಗಿದ್ದಾರೆ.
ಅಡುಗೆ ಅನಿಲವಿಲ್ಲದೆ ಹೋಟೆಲ್ ಗಳಲ್ಲಿ ಅಡುಗೆ ಮಾಡಲು ಸಾಧ್ಯವಿಲ್ಲ. ಅಡುಗೆ ಅನಿಲದ ಬೆಲೆ ನಿರಂತರ ಹೆಚ್ಚಳವಾಗುತ್ತಿದೆ. ಇದರಿಂದ ಹೋಟೆಲ್ ಉದ್ಯಮ ನಡೆಸುವುದೇ ಕಷ್ಟವಾಗುತ್ತಿದೆ. ಹೀಗಾಗಿ ದರ ಏರಿಕೆ ಮಾಡುವುದು ಅನಿವಾರ್ಯ ಎನ್ನುತ್ತಾರೆ ಹೋಟೆಲ್ ಮಾಲೀಕರು.