ಬೆಂಗಳೂರು: ದೇಶಾದ್ಯಂತ ಹಲವಾರು ಪ್ರಮುಖ ಹಣಕಾಸು, ಆಡಳಿತಾತ್ಮಕ ಬದಲಾವಣೆಗಳು ಜುಲೈ 1ರಿಂದ ಆಗಲಿದೆ. ಇದು ನೌಕರರ ಭವಿಷ್ಯ ನಿಧಿ (Employees' Provident Fund Organisation), ಆಧಾರ್ ಹೊಂದಿರುವವರು, ಪಾಸ್‌ಪೋರ್ಟ್ (Passport Fees) ಅರ್ಜಿದಾರರು ಮತ್ತು ಆದಾಯ ತೆರಿಗೆದಾರರ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಸರ್ಕಾರಿ ಅಧಿಕಾರಿಗಳು ಹೊರಡಿಸಿದ ಈ ಅಧಿಸೂಚನೆಗಳಲ್ಲಿ ಆಗಿರುವ ಬದಲಾವಣೆಗಳನ್ನು ತಿಳಿದುಕೊಂಡರೆ ಜೇಬಿಗೆ ಹೆಚ್ಚಿನ ಹೊರೆಯಾಗುವುದನ್ನು ತಪ್ಪಿಸಬಹುದಾಗಿದೆ. ಜುಲೈ 1ರಿಂದ ಯಾವೆಲ್ಲ ಹಣಕಾಸು ನಿಯಮಗಳಲ್ಲಿ (New rules) ಏನೆಲ್ಲಾ ಬದಲಾವಣೆಗಳು ಆಗಿವೆ ಎಂಬುದರ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
ಇಪಿಎಫ್‌ಒ ಆನ್‌ಲೈನ್ ಸೇವೆಗಳ ಆರಂಭ
ಸಿಸ್ಟಮ್ ಅಪ್ಡೇಟ್ ಬಳಿಕ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ)ಯು ತನ್ನ ಆನ್‌ಲೈನ್ ಸೇವೆಗಳನ್ನು ಮತ್ತೆ ಆರಂಭಿಸಿದೆ. ಹಿಂದಿನ ವ್ಯವಸ್ಥೆಯಲ್ಲಿ ಇಪಿಎಫ್‌ಒ ಸದಸ್ಯರ ಪೋರ್ಟಲ್, ಉದ್ಯೋಗದಾತ ಪೋರ್ಟಲ್ ಮತ್ತು ಹಲವಾರು ಡಿಜಿಟಲ್ ಸೇವೆಗಳು ಲಭ್ಯವಿರಲಿಲ್ಲ. ಇವುಗಳಲ್ಲಿ ದಕ್ಷತೆ, ಭದ್ರತೆ ಮತ್ತು ಸೇವೆ ವ್ಯವಸ್ಥೆಯನ್ನು ಸುಧಾರಿಸಲು ನವೀಕರಣವನ್ನು ನಡೆಸಲಾಗಿದೆ.
ಡಿಜಿಟಲ್ ಭಾರತದ ಮತ್ತೊಂದು ಮೈಲಿಗಲ್ಲು: ಪ್ರತಿದಿನ 75 ಕೋಟಿ ಯುಪಿಐ ವ್ಯವಹಾರ, 107 ಕೋಟಿ ಇಂಟರ್‌ನೆಟ್ ಸಂಪರ್ಕ
ಆಧಾರ್ ಇಮೇಲ್ ಅಪ್ಡೇಟ್
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್ ಮೊಬೈಲ್ ಅಪ್ಲಿಕೇಶನ್ ಮೂಲಕ ಆಧಾರ್ ಸಂಖ್ಯೆಗೆ ಲಿಂಕ್ ಮಾಡಲಾದ ಇಮೇಲ್ ವಿಳಾಸವನ್ನು ನವೀಕರಿಸಲು ವಿಧಿಸಲಾಗುವ ಶುಲ್ಕವನ್ನು ಮನ್ನಾ ಮಾಡಿದೆ. ಜೂನ್ 19 ರಂದು ಹೊರಡಿಸಲಾದ ಅಧಿಸೂಚನೆ ಪ್ರಕಾರ ಈ ವಿನಾಯಿತಿ ಜುಲೈ 1 ರಿಂದ ಡಿಸೆಂಬರ್ 31ರವರೆಗೆ ಜಾರಿಯಲ್ಲಿರುತ್ತದೆ.
ಪಾಸ್‌ಪೋರ್ಟ್ ಅರ್ಜಿ ಶುಲ್ಕ ಪರಿಷ್ಕರಣೆ
ವಿದೇಶಾಂಗ ಸಚಿವಾಲಯವು ಜುಲೈ 1 ರಿಂದ ಪಾಸ್‌ಪೋರ್ಟ್ ಅರ್ಜಿ ಶುಲ್ಕದಲ್ಲಿ ಪರಿಷ್ಕರಣೆಯನ್ನು ಜಾರಿಗೆ ತಂದಿದೆ. 2012ರ ಬಳಿಕ ಮೊದಲ ಬಾರಿಗೆ ಪಾಸ್‌ಪೋರ್ಟ್ ಶುಲ್ಕಗಳಲ್ಲಿ ಹೆಚ್ಚಳವನ್ನು ಮಾಡಲಾಗಿದೆ. ಇದರ ಅಡಿಯಲ್ಲಿ 36 ಪುಟಗಳ ಪಾಸ್‌ಪೋರ್ಟ್ ಕಿರುಪುಸ್ತಕದ ಶುಲ್ಕವು 1,500 ರೂ.ಗಳಿಂದ 2,500 ರೂ.ಗಳಿಗೆ ಏರಿಕೆಯಾಗಿದೆ. ಆದರೆ ಅದೇ ಕಿರುಪುಸ್ತಕದ ತತ್ಕಾಲ್ ಶುಲ್ಕವು 5,000 ರೂ.ಗಳಿಗೆ ಹೆಚ್ಚಿಸಲಾಗಿದೆ. 60 ಪುಟಗಳ ಪಾಸ್‌ಪೋರ್ಟ್‌ಗಳು, ಮೈನರ್ ಪಾಸ್‌ಪೋರ್ಟ್‌ಗಳು ಮತ್ತು ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರಗಳ ಶುಲ್ಕವನ್ನು ಸಹ ಹೆಚ್ಚಿಸಲಾಗಿದೆ. ಭಾರತ ಮತ್ತು ವಿದೇಶಗಳ ಪಾಸ್‌ಪೋರ್ಟ್ ಸೇವೆಗಳಿಗೆ ಪರಿಷ್ಕೃತ ದರಗಳು ಅನ್ವಯಿಸುತ್ತವೆ ಎಂದು ಪ್ರಕಟಣೆ ತಿಳಿಸಿದೆ.
ಐಟಿಆರ್ ಸಲ್ಲಿಕೆಗೆ ಕೊನೆಯ ದಿನ
ಐಟಿಆರ್-1 ಮತ್ತು ಐಟಿಆರ್-2 ಅಡಿಯಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ವೈಯಕ್ತಿಕ ತೆರಿಗೆದಾರರು ಜುಲೈ 31ರವರೆಗೆ ದಂಡವಿಲ್ಲದೆ ತಮ್ಮ ರಿಟರ್ನ್ಸ್ ಸಲ್ಲಿಸಬಹುದು. ಐಟಿಆರ್-1 ಸಾಮಾನ್ಯವಾಗಿ ಬ್ಯಾಂಕ್ ಬಡ್ಡಿಯಂತಹ ಸೀಮಿತ ಹೆಚ್ಚುವರಿ ಆದಾಯ ಮೂಲಗಳನ್ನು ಹೊಂದಿರುವ ಸಂಬಳ ಪಡೆಯುವ ವ್ಯಕ್ತಿಗಳಿಗೆ ಅನ್ವಯಿಸುತ್ತದೆ. ಐಟಿಆರ್-2 ಬಂಡವಾಳ ಲಾಭಗಳು, ಬಹು ಮನೆ ಆಸ್ತಿಗಳು ಅಥವಾ ವಾರ್ಷಿಕ ಆದಾಯ 50 ಲಕ್ಷ ರೂ. ಗಿಂತ ಹೆಚ್ಚಿನ ತೆರಿಗೆದಾರರಿಗೆ ಅನ್ವಯಿಸುತ್ತದೆ.
ಬೆಂಗಳೂರಿನ 3 ಸೇರಿ ದೇಶದ 5 ಸ್ಟಾರ್ಟಪ್‌ಗಳೊಂದಿಗೆ ಕೈಜೋಡಿಸಿದ ‘ಮಾರುತಿ ಸುಜುಕಿ’: ಕಂಪನಿಯ ಪ್ಲ್ಯಾನ್ ಏನು?
ಎಲ್‌ಪಿಜಿ, ಪಿಎನ್‌ಜಿ ನಿಯಮ ಬದಲಾವಣೆ
ಎಲ್‌ಪಿಜಿ ಮತ್ತು ಪಿಎನ್‌ಜಿ ಎರಡೂ ಸಂಪರ್ಕಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಜೂನ್ 30 ಅನ್ನು ಸಂಪೂರ್ಣವಾಗಿ ಪಿಎನ್‌ಜಿಗೆ ಬದಲಾಯಿಸಲು ಗಡುವು ನೀಡಲಾಗಿದೆ. ಇದು ಜುಲೈ ತಿಂಗಳಿನಿಂದ ಜಾರಿಯಾದರೂ ಎಲ್‌ಪಿಜಿ ಪೂರೈಕೆ ಸ್ಥಗಿತಗೊಳಿಸುವ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಡಿಸಲಾಗಿಲ್ಲ. ಪಿಎನ್‌ಜಿ ಸೇವೆಗಳು ಲಭ್ಯವಿಲ್ಲದ ಪ್ರದೇಶಕ್ಕೆ ಸ್ಥಳಾಂತರಗೊಂಡರೆ ಅವರು ಹಿಂದೆ ಪಡೆದಿರುವ ಎಲ್‌ಪಿಜಿ ಸಂಪರ್ಕವನ್ನು ಮರಳಿ ಪಡೆಯಬಹುದಾಗಿದೆ.