ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರಿನ 3 ಸೇರಿ ದೇಶದ 5 ಸ್ಟಾರ್ಟಪ್‌ಗಳೊಂದಿಗೆ ಕೈಜೋಡಿಸಿದ ‘ಮಾರುತಿ ಸುಜುಕಿ’: ಕಂಪನಿಯ ಪ್ಲ್ಯಾನ್‌ ಏನು?

Maruti Suzuki: ಭಾರತದ ಪ್ರಮುಖ ಆಟೋಮೊಬೈಲ್ ಕಂಪನಿ 'ಮಾರುತಿ ಸುಜುಕಿ ಇಂಡಿಯಾ ಲಿ.' ಮಹತ್ವದ ಹೆಜ್ಜೆ ಇಟ್ಟಿದ್ದು, ತನ್ನ ವ್ಯವಹಾರಗಳನ್ನು ಇನ್ನಷ್ಟು ಸುಧಾರಿಸಲು ಮತ್ತು ಗ್ರಾಹಕರ ಅನುಭವವನ್ನು ಉತ್ತಮಗೊಳಿಸಲು ಕಂಪನಿಯು 5 ವಿನೂತನ ಸ್ಟಾರ್ಟ್ಅಪ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ದೇಶದ 5 ಸ್ಟಾರ್ಟ್ಅಪ್‌ಗಳೊಂದಿಗೆ ಕೈಜೋಡಿಸಿದ ‘ಮಾರುತಿ ಸುಜುಕಿ’

ಬೆಂಗಳೂರಿನ 3 ಸೇರಿ ದೇಶದ 5 ಸ್ಟಾರ್ಟ್ಅಪ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡ ‘ಮಾರುತಿ ಸುಜುಕಿ’ -

Profile
Siddalinga Swamy Jun 29, 2026 5:26 PM

ಬೆಂಗಳೂರು, ಜೂ.29: ಭವಿಷ್ಯದ ಸವಾಲುಗಳನ್ನು ಎದುರಿಸಲು ಮತ್ತು ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರಲು ಭಾರತದ ಪ್ರಮುಖ ಆಟೋಮೊಬೈಲ್ ಕಂಪನಿ 'ಮಾರುತಿ ಸುಜುಕಿ ಇಂಡಿಯಾ ಲಿ.' (Maruti Suzuki) ಮಹತ್ವದ ಹೆಜ್ಜೆ ಇಟ್ಟಿದೆ. ತನ್ನ ವ್ಯವಹಾರಗಳನ್ನು ಇನ್ನಷ್ಟು ಸುಧಾರಿಸಲು ಮತ್ತು ಗ್ರಾಹಕರ ಅನುಭವವನ್ನು ಉತ್ತಮಗೊಳಿಸಲು ಕಂಪನಿಯು 5 ವಿನೂತನ ಸ್ಟಾರ್ಟಪ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಮಿನಿಮೈನ್ಸ್, ಈಸ್‌ವರ್ಕ್ ಎಐ, ಸರ್ವಮ್ ಎಐ, ಸಿಫ್ಟ್ಲಿ ಮತ್ತು ಕೋಡ್‌ಮೇಟ್ ಎಐ ಎಂಬ ಐದು ಸ್ಟಾರ್ಟಪ್‌ಗಳನ್ನು ಮಾರುತಿ ಸುಜುಕಿಯ 5ನೇ ಹಂತದ ಇನ್‌ಕ್ಯುಬೇಶನ್ ಪ್ರೋಗ್ರಾಂ ಅಡಿಯಲ್ಲಿ ಆಯ್ಕೆ ಮಾಡಲಾಗಿದೆ. ಇದರಲ್ಲಿ ಮೂರು - ಸರ್ವಮ್‌ ಎಐ, ಈಸ್‌ವರ್ಕ್‌ ಎಐ, ಮಿನಿಮೈನ್ಸ್‌ - ಬೆಂಗಳೂರು ಮೂಲದ ಸ್ಟಾರ್ಟಪ್‌ಗಳಾಗಿವೆ. ಐಐಎಂ ಬೆಂಗಳೂರಿನ ಉದ್ಯಮಶೀಲತೆ ಬೆಂಬಲ ಕೇಂದ್ರವಾದ NSRCELನ ಪಾಲುದಾರಿಕೆಯೊಂದಿಗೆ ಮಾರುತಿ ಸುಜುಕಿ ಇಂಡಿಯಾ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಯಾವ ಸ್ಟಾರ್ಟಪ್‌ನಿಂದ ಏನು ಲಾಭ?

ಮಾರುತಿ ಸುಜುಕಿ ಆಯ್ಕೆ ಮಾಡಿರುವ ಈ ಐದು ಸ್ಟಾರ್ಟಪ್‌ಗಳು ಭಿನ್ನ-ವಿಭಿನ್ನ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ್ದು, ಕಂಪನಿಯ ಬೆಳವಣಿಗೆಗೆ ಹಲವು ರೀತಿಯಲ್ಲಿ ನೆರವಾಗಲಿವೆ.

ಮಿನಿಮೈನ್ಸ್: ಇದು ಹಳೆಯ ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಪರಿಸರ ಸ್ನೇಹಿಯಾಗಿ ಮರುಬಳಕೆ ಮಾಡುವ ಮತ್ತು ಅದರಿಂದ ಬೆಲೆಬಾಳುವ ವಸ್ತುಗಳನ್ನು ಬೇರ್ಪಡಿಸುವ ಕೆಲಸ ಮಾಡಲಿದೆ.

ಈಸ್‌ವರ್ಕ್ ಎಐ: ಎಐ ತಂತ್ರಜ್ಞಾನವನ್ನು ಬಳಸಿಕೊಂಡು ವಸ್ತುಗಳ ಖರೀದಿ ಮತ್ತು ಸಂಗ್ರಹಣಾ ಪ್ರಕ್ರಿಯೆಯನ್ನು ಸಂಪೂರ್ಣ ಆಟೊಮೇಷನ್ ಮಾಡಲಿದೆ.

ಸರ್ವಮ್ ಎಐ: ಇದು ಗ್ರಾಹಕರೊಂದಿಗೆ ಸ್ಥಳೀಯ ಭಾಷೆಗಳಲ್ಲಿ ಅತ್ಯುತ್ತಮ ಸಂವಹನ ನಡೆಸಲು 'ಜೆನ್‌ಎಐ' ತಂತ್ರಜ್ಞಾನವನ್ನು ಒದಗಿಸಲಿದೆ.

ಸಿಫ್ಟ್ಲಿ: ಮಾರುತಿ ಸುಜುಕಿ ಬ್ರ್ಯಾಂಡ್‌ನ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಲು ಜೆನರೇಟಿವ್ ಎಐ ತಂತ್ರಜ್ಞಾನವನ್ನು ಬಳಸಲಿದೆ.

ಕೋಡ್‌ಮೇಟ್ ಎಐ: ವ್ಯವಹಾರ ಪ್ರಕ್ರಿಯೆಗಳಿಗೆ ಅಗತ್ಯವಿರುವ ಸಾಫ್ಟ್‌ವೇರ್ ಅಪ್ಲಿಕೇಶನ್‌ಗಳನ್ನು ಎಐ ನೆರವಿನಿಂದ ಅತ್ಯಂತ ವೇಗವಾಗಿ ಅಭಿವೃದ್ಧಿಪಡಿಸಲಿದೆ.

ಈ ಸಹಯೋಗದ ಬಗ್ಗೆ ಮಾತನಾಡಿದ ಮಾರುತಿ ಸುಜುಕಿ ಇಂಡಿಯಾ ಲಿ.ನ ಎಂಡಿ ಮತ್ತು ಸಿಇಒ ಹಿಸಾಶಿ ಟೆಕುಚಿ, ʼಮಾರುತಿ ಸುಜುಕಿಯಲ್ಲಿ ನಾವು ನೈಜ ವ್ಯವಹಾರದ ಸವಾಲುಗಳನ್ನು ಎದುರಿಸಲು ಸ್ಟಾರ್ಟ್ಅಪ್‌ಗಳೊಂದಿಗೆ ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಈ ಐದು ಹೊಸ ಸ್ಟಾರ್ಟ್ಅಪ್‌ಗಳೊಂದಿಗಿನ ಒಪ್ಪಂದ ನಮಗೆ ಖುಷಿ ತಂದಿದೆ. ಮಿನಿಮೈನ್ಸ್ ನಮ್ಮ ಹಳೆಯ ಬ್ಯಾಟರಿಗಳನ್ನು ಸುರಕ್ಷಿತವಾಗಿ ಮರುಬಳಕೆ ಮಾಡಲು ಬೆಂಬಲಿಸಿದರೆ, ಉಳಿದ 4 ಸ್ಟಾರ್ಟ್ಅಪ್‌ಗಳು ಗ್ರಾಹಕರೊಂದಿಗಿನ ಬಾಂಧವ್ಯ ಮತ್ತು ನಮ್ಮ ವ್ಯವಹಾರದ ದಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡಲಿವೆʼ ಎಂದು ವಿವರಿಸಿದರು.‌

ಎನ್‌ಜಿಒಗಳಿಗೆ ಬರೋಬ್ಬರಿ 24 ಕೋಟಿ ರೂ. ಅನುದಾನ; ಸರ್ಕಾರೇತರ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದ ಎಚ್‌ಸಿಎಲ್ ಫೌಂಡೇಶನ್

ಕಳೆದ 7 ವರ್ಷಗಳಲ್ಲಿ ಮಾರುತಿ ಸುಜುಕಿ ಸುಮಾರು 7,400 ಕ್ಕೂ ಹೆಚ್ಚು ಸ್ಟಾರ್ಟ್ಅಪ್‌ಗಳನ್ನು ಪರಿಶೀಲಿಸಿದೆ. ಇದರಲ್ಲಿ 250ಕ್ಕೂ ಹೆಚ್ಚು ಸ್ಟಾರ್ಟ್ಅಪ್‌ಗಳ ಜತೆ ಕೆಲಸ ಮಾಡಿದ್ದು, 38 ಅತ್ಯುತ್ತಮ ಸ್ಟಾರ್ಟ್ಅಪ್‌ಗಳನ್ನು ತನ್ನ ಅಧಿಕೃತ ಪಾಲುದಾರರನ್ನಾಗಿ ಸೇರಿಸಿಕೊಂಡಿದೆ. ಇದಕ್ಕಾಗಿ ಕಂಪನಿಯು 'ಮಾರುತಿ ಸುಜುಕಿ ಆಕ್ಸಿಲರೇಟರ್' (2019), 'ಮಾರುತಿ ಸುಜುಕಿ ಇನ್‌ಕ್ಯುಬೇಶನ್ ಪ್ರೋಗ್ರಾಂ' (2020), 'ಮೊಬಿಲಿಟಿ ಚಾಲೆಂಜ್' (2021), 'ನರ್ಚರ್' (2023) ಹಾಗೂ ಐಎಸ್‌ಬಿ ಹೈದರಾಬಾದ್ ಜತೆಗೂಡಿ 'ಫಂಡ್‌ರೇಸ್' (2025) ಹೆಸರಿನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.