ನವದೆಹಲಿ, ಮಾ. 20: ಆಹಾರ ವಿತರಣಾ ಸಂಸ್ಥೆ ಝೊಮೆಟೊ (Zomato) ತನ್ನ ಬಳಕೆದಾರರಿಗೆ ವಿಧಿಸುವ ಪ್ಲಾಟ್‌ಫಾರ್ಮ್ ಶುಲ್ಕವನ್ನು ಪ್ರತಿ ಆರ್ಡರ್‌ಗೆ 2.40 ರುಪಾಯಿ ಹೆಚ್ಚಿಸಿದೆ. ಆ ಮೂಲಕ 12.50 ರುಪಾಯಿ ಇದ್ದ ಝೊಮೆಟೊ ಪ್ಲಾಟ್‌ಫಾರ್ಮ್ ಫೀಸ್ 14.90 ರುಪಾಯಿ ಆಗಿದೆ. ಈ ಹಿಂದೆ ಆಹಾರ ವಿತರಣೆ ಸಂಸ್ಥೆ ಝೊಮೆಟೊ (Online food delivery) ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತನ್ನ ಪ್ಲಾಟ್‌ಫಾರ್ಮ್ ಶುಲ್ಕವನ್ನು ಪ್ರತಿ ಆರ್ಡರ್‌ಗೆ 2.40 ರುಪಾಯಿ ಹೆಚ್ಚಿಸಿತ್ತು. ಈಗ ಶುಲ್ಕವು 12.50 ರುಪಾಯಿಯಿಂದ 14.90 ರುಪಾಯಿಗೆ (ಜಿಎಸ್‌ಟಿ ಮೊದಲು) ಏರಿಕೆಯಾಗಿದೆ.
ಪ್ರತಿಸ್ಪರ್ಧಿ ಸ್ವಿಗ್ಗಿ ತನ್ನ ಬಳಕೆದಾರರಿಂದ ಜಿಎಸ್‌ಟಿ ಸೇರಿದಂತೆ 14.99 ರುಪಾಯಿಯನ್ನು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗೆ ವಿಧಿಸುತ್ತಿದೆ. ಝೊಮೆಟೊ ಕಾರ್ಯನಿರ್ವಹಿಸುವ ಎಲ್ಲ ಮಾರುಕಟ್ಟೆಗಳಲ್ಲಿ ಪ್ಲಾಟ್‌ಫಾರ್ಮ್ ಶುಲ್ಕ ಹೆಚ್ಚಳವು ಪ್ಯಾನ್-ಇಂಡಿಯಾ ಆಧಾರದ ಮೇಲೆ ಆಗಿದೆ. ಅದು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೊನೆಯ ಬಾರಿಗೆ ತನ್ನ ಪ್ಲಾಟ್‌ಫಾರ್ಮ್ ಶುಲ್ಕವನ್ನು ಹೆಚ್ಚಿಸಿತ್ತು.
ಮೂರನೇ ಅತಿದೊಡ್ಡ ಆಹಾರ ವಿತರಣೆ ಸಂಸ್ಥೆಯಾಗಿರುವ ಮ್ಯಾಜಿಕ್‌ಪಿನ್, ಪ್ರತಿ ಆರ್ಡರ್‌ಗೆ 14.20 ಪ್ಲಾಟ್‌ಫಾರ್ಮ್ ಶುಲ್ಕ ವಸೂಲಿ ಮಾಡುತ್ತಿದ್ದು, ಸದ್ಯದ ಮಟ್ಟಿಗೆ ಶುಲ್ಕ ಹೆಚ್ಚಿಸುವ ಯೋಚನೆ ಇಲ್ಲ ಎಂದು ತಿಳಿಸಿದೆ.
ʼʼಆಹಾರ ವಿತರಣೆ ವ್ಯವಸ್ಥೆಯಲ್ಲಿ ಹೆಚ್ಚುತ್ತಿರುವ ವೆಚ್ಚಗಳ ನಡುವೆ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವ ನಮ್ಮ ರೆಸ್ಟೋರೆಂಟ್ ಪಾಲುದಾರರಿಗೆ ಬೆಂಬಲ ನೀಡಲು ಮತ್ತು ಗ್ರಾಹಕರಿಗೆ ಆಹಾರ ವಿತರಣೆ ಸುಲಭವಾಗಿರಲು ನಾವು ಪ್ಲಾಟ್‌ಫಾರ್ಮ್ ಶುಲ್ಕವನ್ನು ಹೆಚ್ಚಿಸದಿರುವ ನಿರ್ಧಾರವನ್ನು ತೆಗೆದುಕೊಂಡಿದ್ದೇವೆʼʼ ಎಂದು ಮ್ಯಾಜಿಕ್‌ಪಿನ್‌ನ ಸಿಇಒ ಮತ್ತು ಸಂಸ್ಥಾಪಕ ಅಂಶೂ ಶರ್ಮಾ ಹೇಳಿದರು.
ಇತ್ತೀಚಿನ ಆನ್‌ಲೈನ್ ಪ್ಲಾಟ್‌ಫಾರ್ಮ್ ಶುಲ್ಕದ ಏರಿಕೆಯಿಂದ ದೇಶದಾದ್ಯಂತ ಲಕ್ಷಾಂತರ ಬಳಕೆದಾರರಿಗೆ ಆಹಾರ ಆರ್ಡರ್ ಮಾಡುವುದು ಇನ್ನಷ್ಟು ದುಬಾರಿಯಾಗಲಿದೆ. ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವ ಸಮಯದಲ್ಲಿ ಝೊಮೆಟೊ ಈ ಶುಲ್ಕ ಹೆಚ್ಚಳವನ್ನು ಮಾಡಿದೆ. ಇಂಧನದ ಹೆಚ್ಚಿದ ವೆಚ್ಚದಿಂದ ಡೆಲಿವರಿ ಕಾರ್ಯಾಚರಣೆಗಳ ಖರ್ಚು ಕೂಡ ಹೆಚ್ಚುವ ಸಾಧ್ಯತೆ ಇದೆ.
ಗ್ಯಾಸ್ ಶುಲ್ಕವನ್ನೂ ಹೊರಿಸಿದ ಹೋಟೆಲ್‌ಗಳು
ಇತ್ತೀಚೆಗೆ ರೆಸ್ಟೋರೆಂಟ್‌ವೊಂದರಲ್ಲಿ ಬ್ರೇಕ್‌ಫಾಸ್ಟ್ ಮಾಡಿದವರಿಗೆ ಗ್ಯಾಸ್ ಶುಲ್ಕ ಸೇರಿಸಿ ಬಿಲ್ ನೀಡಲಾಗಿತ್ತು. ಗ್ರಾಹಕರೊಬ್ಬರು ಬಿಲ್ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಎಲ್ಲೆಡೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಹಲವು ಹೋಟೆಲ್‌ಗಳು ಈ ರೀತಿ ಶುಲ್ಕ ವಿಧಿಸುತ್ತಿವೆ.
ಬಿಲ್ ಹಂಚಿಕೊಂಡ ವ್ಯಕ್ತಿ ಇಡ್ಲಿ, ವಡೆಯನ್ನು ತೆಗೆದುಕೊಂಡಿದ್ದಾರೆ. ಬಿಲ್‌ನಲ್ಲಿ ಗ್ಯಾಸ್ ಶುಲ್ಕವನ್ನು ಸಹ ನಮೂದು ಮಾಡಲಾಗಿದೆ. ಈ ಬಿಲ್ ಚೆನ್ನೈನ ತಿರುವೆಂಕಡನಗರ್, ಎಂ.ಜಿ.ಆರ್. ಸಾಲೈ ಪೆರುಂಗುಡಿಯ ಗ್ರೀರಾಸ್ ರೆಸ್ಟೋರೆಂಟ್‌ಗೆ ಸೇರಿದ್ದಾಗಿದೆ. ಇದರಲ್ಲಿ ದಿನಾಂಕ 12/03/2026, ಸಮಯ 08:32 ಎಂದು ಇದೆ. ಗ್ಯಾಸ್‌ಗೆ 9.52 ರುಪಾಯಿ ಶುಲ್ಕ ಸೇರಿಸಲಾಗಿದೆ. ರೆಸ್ಟೋರೆಂಟ್‌ಗಳು ತೆರಿಗೆಗಳಲ್ಲದೆ ತಮ್ಮ ಖರ್ಚುವೆಚ್ಚಗಳನ್ನು ತೋರಿಸಲು ಈ ರೀತಿ ವಿಭಿನ್ನ ಹೆಸರಿನಲ್ಲಿ ಶುಲ್ಕ ವಿಧಿಸುತ್ತವೆ ಎನ್ನಲಾಗಿದೆ.