ಜೊಮಾಟೊ ಸಿಇಒ ಹುದ್ದೆಗೆ ದೀಪಿಂದರ್ ಗೋಯಲ್ ರಾಜೀನಾಮೆ; ಕಾರಣವೇನು?
Zomato CEO: ದೀಪಿಂದರ್ ಗೋಯಲ್ ಜೊಮಾಟೊ ಪೋಷಕ ಸಂಸ್ಥೆಯಾಗಿರುವ ಎಟರ್ನಲ್‍ನ ಗ್ರೂಪ್ ಸಿಇಒ ಹುದ್ದೆಯಿಂದ ಹಿಂದೆ ಸರಿದಿದ್ದಾರೆ. ಹೊಸ ಆಲೋಚನೆಗಳು ಮತ್ತು ಪ್ರಯೋಗಗಳನ್ನು ಸಂಸ್ಥೆಯ ಹೊರಗಡೆ ಅನ್ವೇಷಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಷೇರುದಾರರ ಅನುಮೋದನೆಗೆ ಒಳಪಟ್ಟಂತೆ, ಅವರು ನಿರ್ದೇಶಕ ಮಂಡಳಿಯಲ್ಲಿ ಉಪಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.
ದೀಪಿಂದರ್ ಗೋಯಲ್ (ಸಂಗ್ರಹ ಚಿತ್ರ) -
ನವದೆಹಲಿ, ಜ. 21: ಜನಪ್ರಿಯ ಆಹಾರ ವಿತರಣಾ ಆ್ಯಪ್ ಜೊಮಾಟೊದ ಪೋಷಕ ಸಂಸ್ಥೆಯಾಗಿರುವ ಎಟರ್ನಲ್‍ನ (Eternal) ಗ್ರೂಪ್ ಸಿಇಒ ಹುದ್ದೆಗೆ ದೀಪಿಂದರ್ ಗೋಯಲ್ ರಾಜೀನಾಮೆ ನೀಡಿದ್ದಾರೆ (Zomato CEO Deepinder Goyal). ದೀಪಿಂದರ್ ಗೋಯಲ್ ಎಟರ್ನಲ್‌ನ ನಾಯಕತ್ವ ಬದಲಾವಣೆಗಳ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಹೊಸ ಆಲೋಚನೆಗಳು ಮತ್ತು ಯೋಜನೆಗಳನ್ನು ಎಟರ್ನಲ್ ಹೊರಗಡೆ ಅನ್ವೇಷಿಸುವ ಉದ್ದೇಶದಿಂದ ತಾವು ಗ್ರೂಪ್ ಸಿಇಒ ಹುದ್ದೆಯಿಂದ ಹಿಂದೆ ಸರಿಯುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಜತೆಗೆ ತಮ್ಮ ಸ್ಥಾನವನ್ನು ಭರ್ತಿ ಮಾಡುವ ಮುಂದಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಹೆಸರನ್ನೂ ಘೋಷಿಸಿದ್ದಾರೆ.
ಇದರ ಹೊರತಾಗಿಯೂ, ಷೇರುದಾರರು ಅನುಮತಿಸಿದರೆ ನಿರ್ದೇಶಕರ ಮಂಡಳಿಯಲ್ಲಿ ಉಳಿಯುವುದಾಗಿ ಗೋಯಲ್ ಹೇಳಿದರು. ಗುಂಪಿನ ದೀರ್ಘಕಾಲೀನ ಕಾರ್ಯತಂತ್ರದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಆದರೂ ಗುಂಪಿನ ಕಾರ್ಯಾಚರಣಾ ನಿರ್ಧಾರಗಳನ್ನು ಹೊಸ ಸಿಇಒ ತೆಗೆದುಕೊಳ್ಳುತ್ತಾರೆ ಎಂದು ಅವರು ಎಟರ್ನಲ್‌ನ ಷೇರುದಾರರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ದೀಪಿಂದರ್ ಗೋಯಲ್ ಅವರ ಪತ್ರ:
An important update on leadership changes at Eternal. pic.twitter.com/CALn2QQFWE
— Deepinder Goyal (@deepigoyal) January 21, 2026
ಅವರ ಪತ್ರದ ಬಗ್ಗೆ ಮಾಹಿತಿ ಇಲ್ಲಿದೆ
ಆತ್ಮೀಯ ಷೇರುದಾರರೇ,
ಇಂದು, ನಾನು ಗ್ರೂಪ್ ಸಿಇಒ ಹುದ್ದೆಯಿಂದ ಕೆಳಗಿಳಿಯಲಿದ್ದೇನೆ ಮತ್ತು ಷೇರುದಾರರ ಅನುಮೋದನೆಗೆ ಒಳಪಟ್ಟಂತೆ, ನಿರ್ದೇಶಕರ ಮಂಡಳಿಯಲ್ಲಿ ಉಪಾಧ್ಯಕ್ಷನಾಗಿ ಮುಂದುವರಿಯುತ್ತೇನೆ. ಅಲ್ಬಿಂದರ್ ದಿಂಡ್ಸಾ (ಅಲ್ಬಿ) ಎಟರ್ನಲ್‌ನ ಹೊಸ ಗ್ರೂಪ್ ಸಿಇಒ ಆಗಿರುತ್ತಾರೆ ಎಂದು ಅವರು ಹೇಳಿದ್ದಾರೆ.
ಈ ಬದಲಾವಣೆ ಏಕೆ?
ಅನ್ವೇಷಣೆ ಮತ್ತು ಪ್ರಯೋಗಗಳನ್ನು ಒಳಗೊಂಡ ಹೊಸ ಆಲೋಚನೆಗಳತ್ತ ನಾನು ಹೆಚ್ಚು ಆಕರ್ಷಿತನಾಗಿದ್ದೇನೆ. ಇಂತಹ ಆಲೋಚನೆಗಳನ್ನು ಎಟರ್ನಲ್‍ನಂತಹ ಸಾರ್ವಜನಿಕ ಕಂಪನಿಯ ಹೊರಗೆ ಅನುಸರಿಸುವುದೇ ಉತ್ತಮಎಂದಿದ್ದಾರೆ.
ಈ ಆಲೋಚನೆಗಳು ಎಟರ್ನಲ್‌ನ ತಂತ್ರಾತ್ಮಕ ವ್ಯಾಪ್ತಿಯೊಳಗೆ ಬರುತ್ತಿದ್ದರೆ, ನಾನು ಅವನ್ನು ಕಂಪನಿಯೊಳಗೆಯೇ ಮುಂದುವರಿಸುತ್ತಿದ್ದೆ. ಆದರೆ ಅವು ಹಾಗಿಲ್ಲ. ಎಟರ್ನಲ್ ತನ್ನ ಪ್ರಸ್ತುತ ವ್ಯವಹಾರ ಕ್ಷೇತ್ರಕ್ಕೆ ಸಂಬಂಧಿಸಿದ ಹೊಸ ಬೆಳವಣಿಗೆ ಅವಕಾಶಗಳನ್ನು ಅನ್ವೇಷಿಸುವಾಗ, ಕೇಂದ್ರೀಕೃತವಾಗಿಯೂ ಶಿಸ್ತಿನಿಂದಲೂ ಮುಂದುವರಿಯಬೇಕಾಗಿದೆ ಎಂದು ತಿಳಿಸಿದ್ದಾರೆ.
ನಾನು ವೈಯಕ್ತಿಕವಾಗಿ ಎಟರ್ನಲ್‍ನಲ್ಲಿ ಈಗ ಮಾಡುತ್ತಿರುವ ಕೆಲಸವನ್ನು ಮುಂದುವರಿಸುವ ಜತೆಗೆ ಅದರ ಹೊರಗಡೆ ಹೊಸ ಆಲೋಚನೆಗಳನ್ನು ಅನ್ವೇಷಿಸುವಷ್ಟು ಸಾಮರ್ಥ್ಯ ಇದೆ ಎಂಬ ನಂಬಿಕೆ ನನಗಿದೆ. ಆದರೆ ಭಾರತದಲ್ಲಿ ಸಾರ್ವಜನಿಕ ಕಂಪನಿಯ ಸಿಇಒ ಆಗುವ ಕಾನೂನು ಮತ್ತು ಇತರ ನಿರೀಕ್ಷೆಗಳು ಏಕೀಕೃತ ಗಮನವನ್ನು ಬಯಸುತ್ತವೆ ಎಂದು ಹೇಳಿದರು.
ಡೆಲಿವರಿ ನೀಡಲು ಹೋದವನಿಗೆ ಸರ್ಪ್ರೈಸ್ ; ಜೊಮ್ಯಾಟೊ ಏಜೆಂಟ್ ಭಾವುಕರಾದ ವಿಡಿಯೊ ವೈರಲ್!
ಈ ಬದಲಾವಣೆ ಎಟರ್ನಲ್ ಸಂಸ್ಥೆಗೆ ತನ್ನ ಗುರಿಗಳ ಮೇಲೆ ತೀಕ್ಷ್ಣವಾಗಿ ಕೇಂದ್ರೀಕೃತವಾಗಿರುವ ಅವಕಾಶವನ್ನು ನೀಡುತ್ತದೆ. ಜತೆಗೆ ಎಟರ್ನಲ್‌ನ ಸ್ವರೂಪಕ್ಕೆ ಹೊಂದಿಕೆಯಾಗದ ಹೊಸ ಆಲೋಚನೆಗಳನ್ನು ನಾನು ಅನ್ವೇಷಿಸಲು ಮುಂದಾಗಿದ್ದೇನೆ ಎಂದು ತಿಳಿಸಿದರು.
ಏನು ಬದಲಾಗುವುದಿಲ್ಲ?
ಈ ಕಂಪನಿಯನ್ನು ಕಟ್ಟಲು ನಾನು ಹದಿನೆಂಟು ವರ್ಷಗಳನ್ನು, ನನ್ನ ಜೀವನದ ಅರ್ಧದಷ್ಟು ಸಮಯವನ್ನು ಕಳೆದಿದ್ದೇನೆ. ಈ ಕೆಲಸವನ್ನು ನಾನು ಮುಂದುವರಿಸುತ್ತಲೇ ಇರುತ್ತೇನೆ. ಅಲ್ಬಿ, ಅಕ್ಷಾಂತ್ ಮತ್ತು ನಾನು ಎಂದಿನಂತೆ ನಿಕಟವಾಗಿ ಕೆಲಸ ಮಾಡುತ್ತಲೇ ಇರುತ್ತೇವೆ. ನಮ್ಮ ಪಾಲುದಾರಿಕೆ, ಹಂಚಿಕೊಂಡ ಸಂದರ್ಭ ಮತ್ತು ನಂಬಿಕೆ ಬದಲಾಗದೆ ಉಳಿದಿದೆ. ನಮ್ಮ ಎಲ್ಲ ವ್ಯವಹಾರ ಸಿಇಒಗಳು ಇದುವರೆಗೂ ಹೊಂದಿದ್ದ ಸ್ವಾಯತ್ತತೆಯೊಂದಿಗೆ ಮುಂದುವರಿದು ಕಾರ್ಯನಿರ್ವಹಿಸುತ್ತಾರೆ ಎಂದರು.
ದೀರ್ಘಕಾಲೀನ ಕಾರ್ಯತಂತ್ರ, ಸಂಸ್ಕೃತಿ, ನಾಯಕತ್ವ ಅಭಿವೃದ್ಧಿ ಹಾಗೂ ನೈತಿಕತೆ ಮತ್ತು ಆಡಳಿತ ವಿಷಯಗಳಲ್ಲಿ ನನ್ನ ಭಾಗವಹಿಸುವಿಕೆ ಮುಂದುವರಿಯುತ್ತದೆ. ಇತ್ತೀಚಿನ ದಿನಗಳಲ್ಲಿ ನಾನು ಹೆಚ್ಚಾಗಿ ಗಮನಹರಿಸಿದ್ದ ಕ್ಷೇತ್ರಗಳೂ ಇವೆ ಎಂದು ಹೇಳಿದರು.