Stock Market: 1000 ಕ್ಕೂ ಹೆಚ್ಚು ಷೇರುಗಳ ದರ 30% ಇಳಿಕೆ, ಖರೀದಿಗೆ ಯಾವುದು ಬೆಸ್ಟ್?
ಭಾರತದ ಷೇರು ಮಾರುಕಟ್ಟೆಯಲ್ಲಿ ಈಗ 1,000ಕ್ಕೂ ಹೆಚ್ಚು ಷೇರುಗಳು ತಮ್ಮ 52 ವಾರಗಳ ಉನ್ನತ ಮಟ್ಟದಿಂದ 30% ಡಿಸ್ಕೌಂಟ್ ದರದಲ್ಲಿ ಸಿಗುತ್ತಿವೆ. ಇಲ್ಲಿ ನಾವು ಇಂಥದ್ದೇ ಷೇರಿನಲ್ಲಿ ಇನ್ವೆಸ್ಟ್ ಮಾಡಿ ಎಂದು ಶಿಫಾರಸು ಮಾಡುವುದಿಲ್ಲ. ಆದರೆ ಎಚ್‌ಎಸ್‌ಬಿಸಿ ಮತ್ತು ಬಿಎನ್‌ಪಿ ಪಾರಿಬಾ ಸಂಸ್ಥೆ ನೀಡಿರುವ ವರದಿಯ ಪ್ರಕಾರ ಯಾ ಷೇರುಗಳಲ್ಲಿ ಹೂಡಿಕೆ ಮಾಡಲು ಪರಿಶೀಲಿಸಬಹುದು ಎಂಬ ಪಟ್ಟಿಯನ್ನು ಇಲ್ಲಿ ನೀಡುತ್ತಿದ್ದೇವೆ. ಹೂಡಿಕೆಯ ಅಂತಿಮ ತೀರ್ಮಾನ ನಿಮ್ಮ ವಿವೇಚನೆಗೆ ಬಿಟ್ಟ ವಿಚಾರ.
![1000ಕ್ಕೂ ಹೆಚ್ಚು ಷೇರುಗಳ ದರ 30% ಇಳಿಕೆ, ಖರೀದಿಗೆ ಯಾವುದು ಬೆಸ್ಟ್?](https://cdn-vishwavani-prod.hindverse.com/media/original_images/stock_market_5.jpg)
ಷೇರು ಮಾರುಕಟ್ಟೆ
![Profile](https://vishwavani.news/static/img/user.png)
ಮುಂಬೈ: ಭಾರತದ ಷೇರು ಮಾರುಕಟ್ಟೆಯಲ್ಲಿ(Stock Market) ಈಗ 1,000ಕ್ಕೂ ಹೆಚ್ಚು ಷೇರುಗಳು ತಮ್ಮ 52 ವಾರಗಳ ಉನ್ನತ ಮಟ್ಟದಿಂದ 30% ಡಿಸ್ಕೌಂಟ್ ದರದಲ್ಲಿ ಸಿಗುತ್ತಿವೆ. ಹೀಗಾಗಿ ಈಗ ಯಾವ ಷೇರುಗಳನ್ನು ಖರೀದಿಸಿದ್ರೆ ಭವಿಷ್ಯದ ದಿನಗಳಲ್ಲಿ ಲಾಭವಾಗಬಹುದು ಎಂಬುದನ್ನು ನೋಡೋಣ. ಜತೆಗೆ ಐಸಿಐಸಿಐ ಪ್ರುಡೆನ್ಷಿಯಲ್ ಮ್ಯೂಚುವಲ್ ಫಂಡ್‌ನ ಫಂಡ್ ಮ್ಯಾನೇಜರ್ ಎಸ್. ನರೇನ್ ಅವರು ಮ್ಯೂಚುವಲ್ ಫಂಡ್ ಸಿಪ್ ಹೂಡಿಕೆದಾರರಿಗೆ ಏನು ಸಲಹೆ ಕೊಟ್ಟಿದ್ದಾರೆ ಎಂಬುದನ್ನೂ ತಿಳಿಯೋಣ. ಇಲ್ಲಿ ನಾವು ಇಂಥದ್ದೇ ಷೇರಿನಲ್ಲಿ ಇನ್ವೆಸ್ಟ್ ಮಾಡಿ ಎಂದು ಶಿಫಾರಸು ಮಾಡುವುದಿಲ್ಲ. ಆದರೆ ಎಚ್‌ಎಸ್‌ಬಿಸಿ ಮತ್ತು ಬಿಎನ್‌ಪಿ ಪಾರಿಬಾ ಸಂಸ್ಥೆ ನೀಡಿರುವ ವರದಿಯ ಪ್ರಕಾರ ಯಾ ಷೇರುಗಳಲ್ಲಿ ಹೂಡಿಕೆ ಮಾಡಲು ಪರಿಶೀಲಿಸಬಹುದು ಎಂಬ ಪಟ್ಟಿಯನ್ನು ಇಲ್ಲಿ ನೀಡುತ್ತಿದ್ದೇವೆ. ಹೂಡಿಕೆಯ ಅಂತಿಮ ತೀರ್ಮಾನ ನಿಮ್ಮ ವಿವೇಚನೆಗೆ ಬಿಟ್ಟ ವಿಚಾರ.
ಏಕೆಂದರೆ ಷೇರು ಪೇಟೆಯಲ್ಲಿ ಸೂಚ್ಯಂಕಗಳು ಮತ್ತಷ್ಟು ಕುಸಿಯಲೂ ಬಹುದು. ನಿಖರವಾಗಿ ಯಾರಿಗೂ ಗೊತ್ತಿಲ್ಲ. ಆದರೆ ವಿದೇಶಿ ಸಾಂಸ್ಥಿಕ ಹೂಡಿಕೆಯ ಹೊರ ಹರಿವು, ಟ್ರಂಪ್ ಟ್ರೇಡ್ ವಾರ್, ಮಂದಗತಿಯ ಆರ್ಥಿಕ ಬೆಳವಣಿಗೆ, ಹೈ ವಾಲ್ಯುಯೇಶನ್ಸ್ ಪರಿಣಾಮ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿದಿದೆ. ಈ ಹಂತದಲ್ಲಿ ನಿಮ್ಮ ಪೋರ್ಟ್‌ಫೋಲಿಯೊವನ್ನು ರಿವ್ಯೂ ಮಾಡುವ ಅವಕಾಶ ಬಂದಿದೆ. ಪ್ರಬಲ ಕಂಪನಿಗ ಷೇರುಗಳನ್ನು ಮತ್ತು ಕೆಲವು ಮ್ಯೂಚುವಲ್ ಫಂಡ್‌ಗಳಲ್ಲಿ ದೀರ್ಘಕಾಲೀನವಾಗಿ ಹೂಡಿಕೆ ಮಾಡುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು.
ಸ್ಟಾಕ್ಸ್ ಮಾರುಕಟ್ಟೆಯಲ್ಲಿ 52 ವಾರಗಳು ಅಥವಾ ಒಂದು ವರ್ಷದ ಅವಧಿಯಲ್ಲಿ ಷೇರಿನ ಏರಿಳಿತವನ್ನು ಗಮನಿಸುವ ವಾಡಿಕೆ ಇದೆ. 52 ವಾರಗಳ ಎತ್ತರದಿಂದ ಎಷ್ಟು ಕೆಳಗಿದೆ ಎಂಬುದು ಹೂಡಿಕೆದಾರರಿಗೆ ಮುಖ್ಯವಾಗುತ್ತದೆ. ಮಾರುಕಟ್ಟೆ ಡೌನ್ ಆಗಿದ್ದಾಗ ಫಂಡಮೆಂಟಲ್ ಆಗಿ ಉತ್ತಮ ಷೇರುಗಳು ಡಿಸ್ಕೌಂಟ್ ರೇಟಿನಲ್ಲಿ ಸಿಗುತ್ತವೆ. ಅಂಥವುಗಳನ್ನು ಹುಡುಕಿ ಖರೀದಿಸಿದ್ರೆ, ಮುಂದೆ ಮಾರುಕಟ್ಟೆ ಸೂಚ್ಯಂಕ ಏರಿದಾಗ ಲಾಭ ಗಳಿಸಬಹುದು.
ಬಿಎಸ್‌ಇನಲ್ಲಿರುವ 4,000ಕ್ಕೂ ಹೆಚ್ಚು ಷೇರುಗಳಲ್ಲಿ 1,058 ಷೇರುಗಳ ದರದಲ್ಲಿ 30% ಇಳಿಕೆಯಾಗಿದೆ. ನೆನಪಿಡಿ, ಈ ಕಂಪನಿಗಳ ಕನಿಷ್ಠ ಮಾರುಕಟ್ಟೆ ಮೌಲ್ಯ 500 ಕೋಟಿ ರುಪಾಯಿ. ಹೀಗಾಗಿ ಫಂಡಮೆಂಟಲ್ ಆಗಿ ಉತ್ತಮವಾಗಿರುವ ಷೇರುಗಳೂ ಈಗ ಡಿಸ್ಕೌಂಟ್ ದರದಲ್ಲಿ ಸಿಗುತ್ತಿವೆ.
ಕಳೆದ 52 ವಾರಗಳ ಗರಿಷ್ಠ ದರಕ್ಕೆ ಹೋಲಿಸಿದರೆ, ವಾರಿ ರಿನವೆಬಲ್ ಟೆಕ್ನಾಲಜೀಸ್ ಷೇರು ದರ 70% ಇಳಿಕೆಯಾಗಿದೆ. ಹೊನ್ಸಾ ಕನ್ ಸ್ಯೂಮರ್ ಷೇರು ದರ 63% ಇಳಿದಿದೆ. ಓಲಾ ಎಲೆಕ್ಟ್ರಿಕ್, ಜ್ಯುಪಿಟರ್ ವಾಗೋನ್ಸ್, ಬಿಎಲ್‌ಎಸ್ ಇ- ಸರ್ವೀಸ್, ಅದಾನಿ ಗ್ರೀನ್, ಕೊಚ್ಚಿನ್ ಶಿಪ್‌ಯಾರ್ಡ್, ಈಸೀ ಟ್ರಿಪ್ ಪ್ಲಾನರ್ಸ್, ವೊಡಾಫೋನ್ ಐಡಿಯಾ, ಅದಾನಿ ಟೋಟಲ್ ಗ್ಯಾಸ್, ವನ್ ಮೊಬಿವಿಕ್ ಷೇರು ದರಗಳು 50% ಇಳಿದಿವೆ.
ಫಿಫ್ಟಿಯಲ್ಲಿರುವ ಬ್ಲೂ ಚಿಪ್ ಷೇರುಗಳು 2024ರ ಸೆಪ್ಟೆಂಬರ್‌ನಲ್ಲಿದ್ದ ಉನ್ನತ ಮಟ್ಟಕ್ಕೆ ಹೋಲಿಸಿದರೆ ಈಗ 12% ಇಳಿಕೆಯಾಗಿವೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆರಂಭಿಸಿರುವ ಟ್ರೇಡ್ ವಾರ್ ಷೇರು ಮಾರುಕಟ್ಟೆಯನ್ನು ಎಲ್ಲಿಗೆ ಕೊಂಡೊಯ್ಯುತ್ತದೆ ಎಂಬುದನ್ನು ಗ್ರಹಿಸಲು ಸಾಧ್ಯವಿಲ್ಲ. ಆದರೆ ಚಾರಿತ್ರಿಕ ಅಂಕಿ ಅಂಶಗಳನ್ನು ಗಮನಿಸಿದ್ರೆ ಸ್ಟಾಕ್ ಮಾರ್ಕೆಟ್‌ನಲ್ಲಿ 10-12% ಕರೆಕ್ಷನ್ ಸಾಮಾನ್ಯ. ಈಗ ಅದೇ ಆಗಿದೆ. ದೀರ್ಘಕಾಲೀನವಾಗಿ ಈಕ್ವಿಟಿ ಇನ್ವೆಸ್ಟ್ ಮೆಂಟ್ ಲಾಭ ತಂದಿರುವುದನ್ನು ಗಮನಿಸಬಹುದು. ಫ್ಯೂಚರ್ ಆಂಡ್ ಆಪ್ಷನ್ ಟ್ರೇಡಿಂಗ್ ಮಾತ್ರ ಅಪಾಯಕಾರಿ. ಅರಿತುಕೊಳ್ಳದೆ ಟ್ರೇಡಿಂಗ್‌ಗೆ ಕೈ ಹಾಕಬಾರದು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಈ ವರ್ಷ 10 ಶತಕೋಟಿ ಡಾಲರ್ ಈಕ್ವಿಟಿಗಳನ್ನು ಮಾರಿದ್ದಾರೆ. ಅಂದರೆ ಸುಮಾರು 86 ಸಾವಿರ ಕೋಟಿ ರುಪಾಯಿ ಆಗುತ್ತದೆ. ಈ ಹಂತದಲ್ಲಿ ಹೂಡಿಕೆದಾರರು ಎಚ್ಚರಿಕೆಯಿಂದ ಇರಬೇಕು. ಅವಸರದಲ್ಲಿ ಷೇರುಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡಬೇಕಿಲ್ಲ.
ಎಚ್‌ಎಸ್‌ಬಿಸಿಯ ತಜ್ಞರ ಪ್ರಕಾರ, ಸಾಫ್ಟ್‌ವೇರ್ ವಲಯದ ಪ್ರಮುಖ ಕಂಪನಿಗಳ ಆದಾಯ ಮುಂಬರುವ ದಿನಗಳಲ್ಲಿ ಏರಿಕೆಯಾಗಬಹುದು. ಡಾಲರ್ ಎದುರು ರುಪಾಯಿ ಮೌಲ್ಯ ಇಳಿಕೆಯ ಲಾಭವನ್ನೂ ಈ ಕಂಪನಿಗಳು ಪಡೆಯಬಹುದು. ಜತೆಗೆ ಗ್ರಾಮೀಣ ಭಾಗದಲ್ಲಿ ಡಿಮಾಂಡ್ ಉಂಟಾಗಿರುವುದರಿಂದ ಎಫ್‌ಎಂಸಿಜಿ ವಲಯದ ಕಂಪನಿಗಳೂ ಲಾಭ ಗಳಿಸಬಹುದು.
ಈ ಸುದ್ದಿಯನ್ನೂ ಓದಿ: Stock Market: ಟ್ರಂಪ್ ಟ್ರೇಡ್ ವಾರ್‌ಗೆ ತತ್ತರಿಸಿದ ಸ್ಟಾಕ್ ಮಾರ್ಕೆಟ್- ಒಂದೇ ದಿನ 9 ಲಕ್ಷ ಕೋಟಿ ನಷ್ಟ!
ಎಚ್‌ಎಸ್‌ಬಿಸಿ ವರದಿಯ ಪ್ರಕಾರ ಈಗ ಖರೀದಿಸಬಹುದಾದ 5 ಷೇರುಗಳ ಲಿಸ್ಟ್ ಹೀಗಿದೆ.
- ಡಿಕ್ಸೊನ್ ಟೆಕ್ನಾಲಜೀಸ್
- ಮಾರುತಿ ಸುಜುಕಿ,
- ಪಿಬಿ ಫಿನ್‌ಟೆಕ್
- ಗೋದ್ರೇಜ್ ಪ್ರಾಪರ್ಟೀಸ್
- ಎಲ್‌ಟಿಐ ಮೈಂಡ್ ಟ್ರೀ
ಎಚ್‌ಎಸ್‌ಬಿಸಿ ಗ್ಲೋಬಲ್ ರಿಸರ್ಚ್ ಸಂಸ್ಥೆಯ ಪ್ರಕಾರ, ಮುಂದಿನ 6 ತಿಂಗಳು ಸ್ಟಾಕ್ ಮಾರುಕಟ್ಟೆ ದುರ್ಬಲವಾಗಿ ಇರಲಿದೆ. ಹೀಗಿದ್ದರೂ, ಡಾಲರ್ ಎದುರು ರುಪಾಯಿ ದರ್ಬಲವಾಗಿರುವುದರಿಂದ ಸಾಫ್ಟ್‌ವೇರ್ ಕಂಪನಿಗಳಿಗೆ ಲಾಭದಾಯಕವಾಗಲಿದೆ.
ಎಚ್‌ಎಸ್‌ಬಿಸಿ ಗ್ಲೋಬಲ್ ರಿಸರ್ಚ್ ಪ್ರಕಾರ ಎಲೆಕ್ಟ್ರಾನಿಕ್ಸ್ ಉತ್ಪಾದಕ ಡಿಕ್ಸಾನ್ ಟೆಕ್ನಾಲಜೀಸ್ ಷೇರು ಲಾಭದಾಯಕವಾಗುವ ಸಾಧ್ಯತೆ ಇದೆ. ಇಂಡಸ್ಟ್ರಿಯ ಟ್ರೆಂಡ್, ಫೇವರೆಬಲ್ ಪಾಲಿಸಿಗಳು ಇದಕ್ಕೆ ಕಾರಣ ಎಂದು ವರದಿ ತಿಳಿಸಿದೆ.
ಬಿಎನ್‌ಪಿ ಪರಿಬಾ ಸಂಸ್ಥೆಯ ವರದಿಯ ಪ್ರಕಾರ ಮಾರುತಿ ಸುಜುಕಿ ಇಂಡಿಯಾ, ಮಹೀಂದ್ರಾ ಆಂಡ್ ಮಹೀಂದ್ರಾ, ಟಿಸಿಎಸ್,ಇನ್ಫೋಸಿಸ್, ಡಿಒಎಂಎಸ್ ಇಂಡಸ್ಟ್ರೀಸ್, ಎಚ್‌ಯುಎಲ್, ಟೈಟನ್, ರಿಲಯನ್ಸ್ ಇಂಡಸ್ಟ್ರೀಸ್, ಭಾರ್ತಿ ಏರ್‌ಟೆಲ್, ಹ್ಯಾವೆಲ್ಸ್, ಎಲ್ &ಟಿ, ಎಚ್‌ಡಿಎಫ್‌ಸಿ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್ ಷೇರುಗಳನ್ನು ಖರೀದಿಸಬಹುದು.
ಮೋತಿಲಾಲ್ ಓಸ್ವಾಲ್ ಸಂಸ್ಥೆಯ ಪ್ರಕಾರ, ಟೈಟನ್,ಮಹೀಂದ್ರಾ & ಮಹೀಂದ್ರಾ, ಮಾರುತಿ, ಐಸಿಐಸಿಐ ಬ್ಯಾಂಕ್, ಎಸ್‌ಬಿಐ, ಎಚ್‌ಸಿಎಲ್ ಟೆಕ್, ಭಾರ್ತಿ ಏರ್‌ಟೆಲ್, ಸನ್ ಫಾರ್ಮಾ, ಟ್ರೆಂಟ್, ಎಚ್‌ಯುಎಲ್ ಷೇರುಗಳಲ್ಲಿ ಹೂಡಿಕೆಗೆ ಪರಿಶೀಲಿಸಬಹುದು.
ಷೇರು ಮಾರುಕಟ್ಟೆಯಲ್ಲಿ ಕಳೆದ ವರ್ಷ ಸೆಪ್ಟೆಂಬರ್ ಬಳಿಕ ತೀವ್ರ ಏರಿಳಿತ ಆರಂಭವಾಯಿತು. ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿಯುತ್ತಾ ಬಂತು. ಹೀಗಾಗಿ ಕಳೆದ ಡಿಸೆಂಬರ್‌ನಿಂದೀಚೆಗಿನ ಅಂಕಿ ಅಂಶಗಳನ್ನು ಗಮನಿಸಿದ್ರೆ, ಮ್ಯೂಚುವಲ್ ಫಂಡ್ ಸಿಪ್ ಮೂಲಕ ಹೂಡಿಕೆ ದಾಖಲೆಯ ಮಟ್ಟದಲ್ಲಿ ಇಳಿದಿದೆ. ಡಿಸೆಂಬರ್‌ನಲ್ಲಿ 45 ಲಕ್ಷದಷ್ಟು ಸಿಪ್ ಅಕೌಂಟ್‌ಗಳು ಕ್ಲೋಸ್ ಆಗಿವೆ.
ಯಾಕೆ ಹೀಗಾಗಿದೆ ಅಂತ ನೋಡೋಣ. ಸಿಪ್ ಅಥವಾ ಸಿಸ್ಟಮ್ಯಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ ಅಂದರೆ ಮ್ಯೂಚುವಲ್ ಫಂಡ್‌ನಲ್ಲಿ ಪ್ರತಿ ತಿಂಗಳೂ ನಿಗದಿತ ಮೊತ್ತವನ್ನು ದೀರ್ಘಾವಧಿಗೆ ಹೂಡಿಕೆ ಮಾಡುತ್ತಾ ಹೋಗುವುದು. ಆದರೆ ಮಾರುಕಟ್ಟೆಯ ಇತ್ತೀಚಿನ ತಲ್ಲಣಗಳನ್ನು ಕಂಡು ಹೂಡಿಕೆದಾರರು ದೀರ್ಘಕಾಲೀನ ಹೂಡಿಕೆಯಿಂದ ಆದಾಯ ಬರಬಹುದು ಎಂಬ ನಂಬಿಕೆಯ ಖಾತರಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಹೂಡಿಕೆದಾರರು ಮ್ಯೂಚುವಲ್ ಫಂಡ್‌ಗಳ ಹಿಂದಿನ ರಿಟನ್ಸ್ ಅನ್ನು ನೋಡಿಕೊಂಡು ಹೂಡಿಕೆ ಮಾಡುತ್ತಾರೆ. ಒಂದು ವೇಳೆ ಮಾರುಕಟ್ಟೆ ಮಂದಗತಿಯಿಂದಾಗಿ ಫಂಡ್‌ನ ರಿಟರ್ನ್ಸ್ ಕಡಿಮೆಯಾದರೆ ನಿರಾಸೆಯಿಂದ ಸಿಪ್ ಅಕೌಂಟ್ ಅನ್ನೇ ಕ್ಲೋಸ್ ಮಾಡುತ್ತಾರೆ. 2024ರ ಡಿಸೆಂಬರ್‌ನಲ್ಲಿ 10 ಲಕ್ಷದ 32 ಸಾವಿರದಷ್ಟಿದ್ದ ಸಿಪ್ ಅಕೌಂಟ್‌ಗಳ ಸಂಖ್ಯೆ ಹೊಸ ವರ್ಷ ಜನವರಿಯಲ್ಲಿ 10 ಲಕ್ಷದ 26 ಸಾವಿರಕ್ಕೆ ಇಳಿದಿದೆ.
ಹೀಗಿದ್ದರೂ ಕೂಡ 2025ರ ಜನವರಿಯ ಅಂಕಿ ಅಂಶಗಳನ್ನು ಗಮನಿಸಿದ್ರೆ ಮ್ಯೂಚುವಲ್ ಸಿಪ್ ಮೂಲಕ ದಾಖಲೆಯ 26,400 ಕೋಟಿ ರುಪಾಯಿ ಹೂಡಿಕೆ ಹರಿದು ಬಂದಿದೆ. ಹೀಗಾಗಿ ಕೂಲ್ ಆಗಿ ಮ್ಯೂಚುವಲ್ ಫಂಡ್ ಸಿಪ್‌ಗಳನ್ನು ಮುಂದುವರಿಸುವುದು ಉತ್ತಮ ಎನ್ನುತ್ತಾರೆ ತಜ್ಞರು.
ಐಸಿಐಸಿಐ ಪ್ರುಡೆನ್ಷಿಯಲ್ ಮ್ಯೂಚುವಲ್ ಫಂಡ್‌ನ ಹೆಸರಾಂತ ಫಂಡ್ ಮ್ಯಾನೇಜರ್ ಎಸ್. ನರೇನ್ ಅವರ ಪ್ರಕಾರ, ಮಿಡ್ ಮತ್ತು ಸ್ಮಾಲ್ ಕ್ಯಾಪ್ ಸ್ಟಾಕ್ಸ್‌ಗಳಲ್ಲಿ ಸಿಪ್ ಮೂಲಕ ಹೂಡಿಕೆ ಮಾಡಿರುವವರು ಎಚ್ಚರಿಕೆ ವಹಿಸಬೇಕು. ಮಿಡ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳಿಗೆ 2008ರ ಬಳಿಕ 2025 ಅತ್ಯಂತ ಅಪಾಯಕಾರಿ ವರ್ಷ ಆಗಬಹುದು. ಆದ್ದರಿಂದ ಹೈಬ್ರಿಡ್ ಮ್ಯೂಚುವಲ್ ಫಂಡ್ ಸಿಪ್‌ನಲ್ಲಿ ಹೂಡಿಕೆ ಮಾಡುವುದು ಉತ್ತಮ ಎನ್ನುತ್ತಾರೆ ನರೇನ್ ಅವರು. ಹಾಗಾದ್ರೆ ಏನಿದು ಹೈಬ್ರಿಡ್ ಫಂಡ್? ಹೈಬ್ರಿಡ್ ಫಂಡ್ ಎಂದರೆ ಈಕ್ವಿಟಿ, ಡೆಟ್ ಮತ್ತು ಇತರ ಅಸೆಟ್‌ಗಳಲ್ಲಿ ವೈವಿಧ್ಯಮಯ ಹೂಡಿಕೆಯನ್ನು ಮಾಡುವ ಮ್ಯೂಚುವಲ್ ಫಂಡ್‌ಗಳು.