#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Stock Market: ಟ್ರಂಪ್‌ ಟ್ರೇಡ್‌ ವಾರ್‌ಗೆ ತತ್ತರಿಸಿದ ಸ್ಟಾಕ್‌ ಮಾರ್ಕೆಟ್‌- ಒಂದೇ ದಿನ 9 ಲಕ್ಷ ಕೋಟಿ ನಷ್ಟ!

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಾಣಿಜ್ಯ ನೀತಿಗಳು ಈಗ ಜಾಗತಿಕ ಷೇರು ಮಾರುಕಟ್ಟೆಯನ್ನು ಅಲ್ಲೋಲಕಲ್ಲೋಲಗೊಳಿಸಿವೆ. ಸತತ ಐದು ದಿನಗಳಿಂದ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್‌ ಮತ್ತು ನಿಫ್ಟಿ ಪತನವಾಗಿದೆ. ಫೆಬ್ರವರಿ 11ರ ಮಂಗಳವಾರ ಸೆನ್ಸೆಕ್ಸ್‌ 1,018 ಅಂಕ ನಷ್ಟಕ್ಕೀಡಾಗಿದೆ. ಇದರ ಪರಿಣಾಮ ಒಂದೇ ದಿನ ಹೂಡಿಕೆದಾರರಿಗೆ 9 ಲಕ್ಷ ಕೋಟಿ ರುಪಾಯಿ ನಷ್ಟವಾಗಿದೆ.

ಟ್ರಂಪ್‌ ಟ್ರೇಡ್‌ ವಾರ್‌ಗೆ ಷೇರುಪೇಟೆ ತಲ್ಲಣ- 9 ಲಕ್ಷ ಕೋಟಿ ನಷ್ಟ!

Profile Rakshita Karkera Feb 11, 2025 5:45 PM

ಮುಂಬೈ: ಸತತ ಐದು ದಿನಗಳಿಂದ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್‌ ಮತ್ತು ನಿಫ್ಟಿ ಪತನವಾಗಿದೆ. ಫೆಬ್ರವರಿ 11ರ ಮಂಗಳವಾರ ಸೆನ್ಸೆಕ್ಸ್‌ 1,018 ಅಂಕ ನಷ್ಟಕ್ಕೀಡಾಗಿದೆ. ಇದರ ಪರಿಣಾಮ ಒಂದೇ ದಿನ ಹೂಡಿಕೆದಾರರಿಗೆ 9 ಲಕ್ಷ ಕೋಟಿ ರುಪಾಯಿ ನಷ್ಟವಾಗಿದೆ. ಸೆನ್ಸೆಕ್ಸ್‌ 76,293 ಅಂಕಗಳಿಗೆ ಕುಸಿದಿದ್ದರೆ, ನಿಫ್ಟಿ 309 ಅಂಕಗಳನ್ನು ಕಳೆದುಕೊಂಡು 23,071ಕ್ಕೆ ಇಳಿದಿದೆ. ಬ್ಯಾಂಕಿಂಗ್‌, ಆಟೊಮೊಬೈಲ್‌, ಲೋಹ ಮತ್ತು ಐಟಿ ಕ್ಷೇತ್ರದ ಷೇರುಗಳು ಭಾರಿ ದರ ಇಳಿಕೆಯನ್ನು ದಾಖಲಿಸಿವೆ. ಅಮೆರಿದ ವಾಣಿಜ್ಯ ನೀತಿ, ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಷೇರುಗಳ ವ್ಯಾಪಕ ಮಾರಾಟದ ಪರಿಣಾಮ ಸೂಚ್ಯಂಕಗಳು ಕುಸಿಯುತ್ತಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಉಕ್ಕು ಮತ್ತು ಅಲ್ಯುಮಿನಿಯಂ ಆಮದಿನ ಮೇಲೆ ತೆರಿಗೆಯನ್ನು ಏರಿಸಿದ್ದಾರೆ. ಇದೆಲ್ಲವೂ ಸ್ಟಾಕ್‌ ಮಾರ್ಕೆಟ್‌ ಮೇಲೆ ನಕಾರಾತ್ಮಕ ಪ್ರಭಾವ ಬೀರಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಾಣಿಜ್ಯ ನೀತಿಗಳು ಈಗ ಜಾಗತಿಕ ಷೇರು ಮಾರುಕಟ್ಟೆಯನ್ನು ಅಲ್ಲೋಲಕಲ್ಲೋಲಗೊಳಿಸಿವೆ. ಟ್ರಂಪ್‌ ಅವರು ಚೀನಾ, ಕೆನಡಾ, ಮೆಕ್ಸಿಕೊ ವಿರುದ್ಧ ಈಗಾಗಲೇ ವಾಣಿಜ್ಯ ತೆರಿಗೆಯ ಸಮರವನ್ನು ಘೋಷಿಸಿದ್ದಾರೆ. ಇದೀಗ ಅಮೆರಿಕಕ್ಕೆ ಆಮದಾಗುವ ಅಲ್ಯುಮಿನಿಯಂ ಮತ್ತು ಉಕ್ಕಿನ ಮೇಲೆ 25% ಆಮದು ತೆರಿಗೆ ವಿಧಿಸಲಾಗುವುದು ಎಂದು ಘೋಷಿಸಿದ್ದಾರೆ. ಇದು ಷೇರು ಮಾರುಕಟ್ಟೆ ಮೇಲೆ ಪ್ರಭಾವ ಬೀರಿದೆ. ಭಾರತವು ಅಮೆರಿಕಕ್ಕೆ 95 ಸಾವಿರ ಟನ್‌ ಉಕ್ಕನ್ನು ರಫ್ತು ಮಾಡುತ್ತದೆ. ಹೀಗಾಗಿ ಟ್ರಂಪ್‌ ನೀತಿ ಭಾರತದ ಉಕ್ಕು ಸೆಕ್ಟರ್‌ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆ ಇದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಅಥವಾ ಫಾರಿನ್‌ ಇನ್‌ಸ್ಟಿಟ್ಯೂಷನಲ್‌ ಇನ್ವೆಸ್ಟರ್ಸ್‌ ಭಾರತದ ಷೇರು ಮಾರುಕಟ್ಟೆಯ ಮೇಲೆ ಬೀರುವ ಪ್ರಭಾವ ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗಿದೆ. ಸಂಕ್ಷಿಪ್ತವಾಗಿ ಇದನ್ನು ಎಫ್‌ ಐಐ ಎನ್ನುತ್ತಾರೆ. ಇದಕ್ಕೆ ಕಾರಣ ದೇಶೀಯ ಹೂಡಿಕೆದಾರರು, ಅಂದರೆ ನಮ್ಮವರೇ ಹೆಚ್ಚಿನ ಸಂಖ್ಯೆಯಲ್ಲಿ ಡಿಮ್ಯಾಟ್‌ ಖಾತೆ ತೆರೆದು ನೇರವಾಗಿ ಷೇರುಗಳಲ್ಲಿ ಮಾಡುತ್ತಿರುವ ಹೂಡಿಕೆ ಮತ್ತು ಮ್ಯೂಚುವಲ್‌ ಫಂಡ್‌ ಸಿಪ್‌ ಮೂಲಕ ಹರಿದು ಬರುತ್ತಿರುವ ಹೂಡಿಕೆ. ಹೀಗಿದ್ದರೂ, ಈಗಲೂ ಭಾರತೀಯ ಷೇರು ಮಾರುಕಟ್ಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 800 ಶತಕೋಟಿ ಡಾಲರ್‌ ಹೂಡಿಕೆಯನ್ನು ಹೊಂದಿದ್ದಾರೆ. ರುಪಾಯಿ ಲೆಕ್ಕದಲ್ಲಿ 68 ಲಕ್ಷ ಕೋಟಿ ರುಪಾಯಿ ಆಗುತ್ತದೆ. ಹೀಗಾಗಿ, ಈಗಲೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ಷೇರುಗಳನ್ನು ಮಾರಿದರೆ ಸೆನ್ಸೆಕ್ಸ್‌ ಮತ್ತು ನಿಫ್ಟಿ ಕುಸಿಯುತ್ತದೆ.

ಎಫ್‌ಐಐಗಳಲ್ಲಿ ವಿದೇಶಿ ಮೂಲದ ಇನ್ವೆಸ್ಟ್‌ಮೆಂಟ್‌ ಫಂಡ್ಸ್‌, ಮ್ಯೂಚುವಲ್‌ ಫಂಡ್ಸ್‌, ಹೆಡ್ಜ್‌ ಫಂಡ್ಸ್‌ ಮತ್ತು ಪೆನ್ಷನ್‌ ಫಂಡ್‌ಗಳು, ರಿಯಲ್‌ ಎಸ್ಟೇಟ್‌ ಇನ್ವೆಸ್ಟ್‌ಮೆಂಟ್‌ ಪಂಡ್ಸ್‌, ಇವೆ. ಡೊಮೆಸ್ಟಿಕ್‌ ಇನ್‌ಸ್ಟಿಟ್ಯೂಷನ್‌ ಫಂಡ್ಸ್‌ಗಳು ದೇಶೀಯ ಇನ್ವೆಸ್ಟ್‌ಮೆಂಟ್‌ ಫಂಡ್ಸ್‌, ಮ್ಯೂಚುವಲ್‌ ಪಂಡ್ಸ್‌ ಮತ್ತು ಪೆನ್ಷನ್‌ ಫಂಡ್ಸ್‌ಗಳನ್ನು ಒಳಗೊಂಡಿವೆ. ಈ ವರ್ಷ ಈಗಾಗಲೇ 85,369 ಕೋಟಿ ರುಪಾಯಿಗಳ ಹೂಡಿಕೆಯನ್ನು ಹಿಂತೆಗೆದುಕೊಂಡಿದ್ದಾರೆ.

ಜಾಗತಿಕ ಬಿಕ್ಕಟ್ಟಿನ ಪರಿಣಾಮ ಈ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೂಡಿಕೆಯನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ. ಜನವರಿಯಲ್ಲಿ 78,027 ಕೋಟಿ ರುಪಾಯಿ ಮತ್ತು ಫೆಬ್ರವರಿಯಲ್ಲಿ 7,342 ಕೋಟಿ ರುಪಾಯಿಯನ್ನು ಹಿಂತೆಗೆದುಕೊಳ್ಳಲಾಗಿತ್ತು. ಅಮೆರಿಕದ ವಾಣಿಜ್ಯ ನೀತಿಯೇ ಈ ವಿದೇಶಿ ಹೂಡಿಕೆದಾರರ ಕಳವಳಕ್ಕೆ ಮುಖ್ಯ ಕಾರಣವಾಗಿದೆ.

ಆಟೊಮೊಬೈಲ್‌, ರಿಯಾಲ್ಟಿ ಮತ್ತು ಫಾರ್ಮಾ ವಲಯದ ಷೇರುಗಳು ಒತ್ತಡದಲ್ಲಿವೆ. ಕಳೆದ ಅಕ್ಟೋಬರ್-ಡಿಸೆಂಬರ್‌ ಅವಧಿಯಲ್ಲಿ ಈ ಸೆಕ್ಟರ್‌ನ ಕಂಪನಿಗಳ ಆದಾಯ ಕಡಿಮೆಯಾಗಿರುವುದು ಇದಕ್ಕೆ ಕಾರಣ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರುಪಾಯಿಯ ಮೌಲ್ಯ ಕುಸಿತ ಕೂಡ ನಕಾರಾತ್ಮಕ ಪರಿಣಾಮ ಬೀರಿದೆ.

ಈ ಸುದ್ದಿಯನ್ನೂ ಓದಿ: ‌Mohan Vishwa Column: ಉಕ್ರೇನ್‌ನೊಂದಿಗೆ ಟ್ರಂಪ್‌ ಹೊಸ ಡೀಲ್

ಇವತ್ತು ಪವರ್‌ ಗ್ರಿಡ್‌, ಜೊಮ್ಯಾಟೊ, ಟಾಟಾ ಮೋಟಾರ್ಸ್‌, ಅಲ್ಟ್ರಾ ಟೆಕ್‌ ಸಿಮೆಂಟ್‌, ಬಜಾಕ್‌ ಫಿನ್‌ ಸರ್ವ್‌ ಷೇರುಗಳ ದರ ಇಳಿದಿದೆ. ನಿಫ್ಟಿ ಆಟೊ, ಫಾರ್ಮಾ, ಪಿಎಸ್‌ಯು ಬ್ಯಾಂಕ್‌, ಹೆಲ್ತ್‌ ಕೇರ್‌ ಸೆಕ್ಟರ್‌ ಷೇರುಗಳ ದರ ಇಳಿದಿದೆ. ಐಟಿ ಕ್ಷೇತ್ರದ ಷೇರುಗಳು ಮಾತ್ರ ಚೇತರಿಸಿತ್ತು. ಇಂಥ ಸಂದರ್ಭದಲ್ಲಿ ಸ್ಟಾಕ್‌ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡುವವರಿಗೆ ತಾಳ್ಮೆ ಬಹಳ ಮುಖ್ಯ. ಸ್ಮಾರ್ಟ್‌ ಇನ್ವೆಸ್ಟರ್ಸ್‌ ಮಾರುಕಟ್ಟೆಯಲ್ಲಿ ಸೂಚ್ಯಂಕಗಳು ಬಿದ್ದಾಗ, ಅವಕಾಶಗಳಿಗೆ ಕಾಯುತ್ತಿರುತ್ತಾರೆ. ಮಾರುಕಟ್ಟೆಯಲ್ಲಿ ಒಂದು ಡ್ರಾಪ್‌ ಆಯಿತೆಂದರೆ, ಡಿಸ್ಕೌಂಟ್‌ ಸೇಲ್‌ ಎಂದರ್ಥ. ಆದ್ದರಿಂದ ಸ್ಮಾರ್ಟ್‌ ಹೂಡಿಕೆದಾರರು ಪ್ರತಿ ಸಲ ಮಾರ್ಕೆಟ್‌ ಕರೆಕ್ಷನ್‌ ಆದಾಗ ಚಿಂತೆ ಮಾಡುವುದಿಲ್ಲ. ಬದಲಿಗೆ ಈಗ ಯಾವ ಷೇರುಗಳನ್ನು ಡಿಸ್ಕೌಂಟ್‌ ಬೆಲೆಗೆ ಖರೀದಿಸಬಹುದು ಎಂದು ಬುದ್ಧಿವಂತಿಕೆಯಿಂದ ಆಲೋಚಿಸುತ್ತಾರೆ. ಕಂಪನಿಗಳ ಹಿನ್ನೆಲೆ, ಬ್ಯಾಲೆನ್ಸ್‌ ಶೀಟ್‌, ಮಾರುಕಟ್ಟೆ ಟ್ರೆಂಡ್‌ಗಳನ್ನು ಅಧ್ಯಯನ ನಡೆಸುತ್ತಾರೆ. ಹಾಗೂ ಹೂಡಿಕೆಯನ್ನು ಮುಂದುವರಿಸುತ್ತಾರೆ.

ಎರಡನೆಯದಾಗಿ ಸ್ಟಾಕ್‌ ಇನ್ವೆಸ್ಟ್‌ಮೆಂಟ್‌ ಅಥವಾ ಟ್ರೇಡಿಂಗ್‌ ಒಂದರಲ್ಲಿಯೇ ನಿಮ್ಮೆಲ್ಲ ಹೂಡಿಕೆಯನ್ನು ಮಾಡದಿರಿ. ಚಿನ್ನ, ರಿಯಲ್‌ ಎಸ್ಟೇಟ್‌, ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆಯನ್ನು ಹಂಚುವುದು ಸೂಕ್ತ. ಮುಖ್ಯವಾಗಿ ಗೊತ್ತಿಲ್ಲದೆಯೇ ಫ್ಯೂಚರ್‌ ಆಂಡ್‌ ಆಪ್ಷನ್‌ನಲ್ಲಿ ಟ್ರೇಡಿಂಗ್‌ ಮಾಡುವುದು ಅಥವಾ ಮಾರ್ಜಿನಲ್‌ ಟ್ರೇಡಿಂಗ್‌ ಇಲ್ಲವೇ ಸಾಲದ ಹಣದಲ್ಲಿ ಸ್ಟಾಕ್‌ ಇನ್ವೆಸ್ಟ್‌ಮೆಂಟ್‌ ಮಾಡುವುದು ಬೇಡವೇ ಬೇಡ. ಇವೆಲ್ಲಕ್ಕಿಂತ ಮುಖ್ಯವಾಗಿ ಕಂಪನಿಗಳ ತ್ರೈಮಾಸಿಕ ಆದಾಯವನ್ನು ಗಮನಿಸಿ. ಉತ್ತಮ ಅದಾಯ, ಲಾಭ ಇರುವ ಕಂಪನಿಗಳ ಷೇರುಗಳನ್ನು ಹೂಡಿಕೆಯ ಆಯ್ಕೆಯಾಗಿ ಪರಿಗಣಿಸುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು.

ಈ ನಡುವೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಹತ್ವದ ಅಮೆರಿಕ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಜತೆ ಮಾತುಕತೆ ನಡೆಸಲಿದ್ದಾರೆ. ಇದರಿಂದ ಭಾರತದ ಐಟಿ ಕ್ಷೇತ್ರ ಮತ್ತು ಫಾರ್ಮಾ ಸೆಕ್ಟರ್‌ ಗೆ ಪ್ರಯೋಜನ ಆಗಲಿದೆ ಎಂಬ ನಿರೀಕ್ಷೆ ಇದೆ. ಜಾಗತಿಕ ಅನಿಶ್ಚಿತತೆಯ ಪರಿಣಾಮ ಬಂಗಾರದ ದರ ಏರಿಕೆಯಾಗುತ್ತಿದೆ. ಬಂಗಾರದ ದರ 10 ಗ್ರಾಮ್‌ಗೆ 88,500 ರುಪಾಯಿಗೆ ಏರಿದೆ.

ಹೂಡಿಕೆದಾರರಿಗೆ ಆತಂಕ

ಷೇರು ಮಾರುಕಟ್ಟೆಯಲ್ಲಿ ನಿಫ್ಟಿ ಸೂಚ್ಯಂಕವು ತನ್ನ ಉನ್ನತ ಮಟ್ಟದಿಂದ 12% ಇಳಿಕೆಯಾಗಿದೆ. ಸ್ಮಾಲ್‌ ಮತ್ತು ಮಿಡ್‌ ಕ್ಯಾಪ್‌ ಸ್ಟಾಕ್‌ಗಳು ಒತ್ತಡದಲ್ಲಿವೆ. ಕಳೆದ 25 ವರ್ಷಗಳ ಇತಿಹಾಸದ ಅಂಕಿ ಅಂಶಗಳನ್ನು ಗಮನಿಸಿದರೆ ಸ್ಟಾಕ್‌ ಮಾರ್ಕೆಟ್‌ನಲ್ಲಿ ಸೂಚ್ಯಂಕಗಳ 10% ಕುಸಿತ ಸಾಮಾನ್ಯ. ಹೀಗಿದ್ದರೂ, ಮುಂದೇನು ಮಾಡಬಹುದು ಎಂಬ ಪ್ರಶ್ನೆ ಹೂಡಿಕೆದಾರರಲ್ಲಿದೆ.

ನಿಫ್ಟಿ ಸೂಚ್ಯಂಕವು 2024ರ ಸೆಪ್ಟೆಂಬರ್‌ 27ರಂದು ದಾಖಲೆಯ 26,277 ಅಂಕಗಳ ಎತ್ತರದಲ್ಲಿತ್ತು. ಆದರೆ ಆ ಎತ್ತರವನ್ನು ಕಾಪಾಡಿಕೊಳ್ಳುವಲ್ಲಿ ವಿಫಲವಾಗಿದೆ. 2025ರ ಫೆಬ್ರವರಿ 11ಕ್ಕೆ 23,071ಕ್ಕೆ ಇಳಿದಿತ್ತು. ಅಂದರೆ 12% ಗೂ ಹೆಚ್ಚು ಇಳಿದಿದೆ. ಕಳೆದ 25 ವರ್ಷಗಳ ಸ್ಟಾಕ್‌ ಮಾರ್ಕೆಟ್‌ ಇತಿಹಾಸವನ್ನು ಗಮನಿಸಿದರೆ 10% ಕರೆಕ್ಷನ್‌ ಸಾಮಾನ್ಯವಾಗಿದೆ. 25 ವರ್ಷಗಳಲ್ಲಿ 22 ಸಲ 10%ಗೂ ಹೆಚ್ಚು ಸಲ ಕರೆಕ್ಷನ್‌ ಆಗಿದೆ. ಮಾರುಕಟ್ಟೆಯಲ್ಲಿ ಸ್ಮಾಲ್‌ ಮತ್ತು ಮಿಡ್‌ ಕ್ಯಾಪ್‌ ಸ್ಟಾಕ್ಸ್‌ ಒತ್ತಡದಲ್ಲಿವೆ. ಆದರೆ ಲಾರ್ಜ್‌ ಕ್ಯಾಪ್‌ ಷೇರುಗಳು ಸ್ಥಿರವಾಗಿವೆ. ಸದ್ಯಕ್ಕೆ ಸೂಚ್ಯಂಕಗಳು ಕುಸಿಯುತ್ತಿದ್ದರೂ, ಇದು ತಾತ್ಕಾಲಿಕ ಎನ್ನುತ್ತಾರೆ ತಜ್ಞರು.