ಬೆಂಗಳೂರು: ಇನ್ನು ಮುಂದೆ ಮನೆ, ಕಚೇರಿಯನ್ನು ಬಾಡಿಗೆಗೆ (rent) ಕೊಡುವ ಮಾಲೀಕರು ಹೆಚ್ಚಿನ ಮೊತ್ತದ ಭದ್ರತೆಯನ್ನು (deposit) ಕೇಳುವಂತಿಲ್ಲ. ಈ ನಿಟ್ಟಿನಲ್ಲಿ ಮುಂಬೈ (Mumbai) ಮತ್ತು ಬೆಂಗಳೂರಿನ (Bengaluru) ಮಹಾನಗರಗಳಲ್ಲಿ ಹೊಸ ನಿಯಮವನ್ನು (New rental rules) ಜಾರಿಗೆ ತರಲಾಗಿದೆ. ಬಾಡಿಗೆದಾರರು ಕೇವಲ 2 ತಿಂಗಳ ಭದ್ರತೆ ಮೊತ್ತವನ್ನು ಪಾವತಿಸಿದರೆ ಸಾಕು. 2025ರ ಹೊಸ ಬಾಡಿಗೆ ಒಪ್ಪಂದದ ಪ್ರಕಾರ ಭದ್ರತಾ ಠೇವಣಿಗಳನ್ನು ಎರಡು ತಿಂಗಳ ಬಾಡಿಗೆಗೆ ಮಿತಿಗೊಳಿಸಲಾಗಿದೆ. ಇದರಲ್ಲಿ ನೋಂದಣಿ, ಬಾಡಿಗೆ ಹೆಚ್ಚಳ, ಡಿಜಿಟಲ್ ಪಾವತಿಗಳು ಮತ್ತು ವಿವಾದ ಪರಿಹಾರದ ಕುರಿತು ಸ್ಪಷ್ಟ ನಿಯಮಗಳನ್ನು ಉಲ್ಲೇಖಿಸಲಾಗಿದೆ.
ಮುಂಬೈ, ಬೆಂಗಳೂರಿನಂತಹ ಮಹಾ ನಗರಗಳಲ್ಲಿ ಬಾಡಿಗೆ ಒಂದು ಬೃಹತ್ ಮಟ್ಟದ ಉದ್ಯಮವಾಗಿ ಬೆಳೆದಿದೆ. ಈ ನಿಟ್ಟಿನಲ್ಲಿ ಯಾವುದೇ ರೀತಿಯ ಕಠಿಣ ನಿಯಮಗಳು ಈವರೆಗೆ ಜಾರಿಯಾಗದೇ ಇರುವುದರಿಂದ ಅನೇಕ ಆಸ್ತಿ ಮಾಲೀಕರು ಅನಿಯಂತ್ರಿತ ರೀತಿಯಲ್ಲಿ ಭದ್ರತೆ ಪಾವತಿಗಳನ್ನು ಪಡೆಯುತ್ತಿದ್ದರು. ಆದರೆ ಇನ್ನು ಮುಂದೆ ಇದು ಸಾಧ್ಯವಾಗುವುದಿಲ್ಲ.
ರೈಲಿನಲ್ಲಿ ಲಗೇಜ್ ಮರೆತರೆ ಚಿಂತೆ ಬೇಡ ಹುಡುಕಲು ಸಹಾಯ ಮಾಡುತ್ತೆ 24X7 ಹೆಲ್ಪ್ ಲೈನ್
ಬೆಂಗಳೂರು ಮತ್ತು ಮುಂಬೈನಂತಹ ಸ್ಥಳಗಳಲ್ಲಿ ಬಾಡಿಗೆದಾರರು ಭಾರಿ ಪ್ರಮಾಣದ ಭದ್ರತೆ ಮೊತ್ತವನ್ನು ಪಾವತಿಸಲು ಸಾಕಷ್ಟು ಹೋರಾಡಬೇಕಾಗಿತ್ತು. 2025ರ ಹೊಸ ಮನೆ ಬಾಡಿಗೆ ನಿಯಮಗಳ ಪ್ರಕಾರ ಇನ್ನು ಮುಂದೆ ಬಾಡಿಗೆದಾರರು ಮತ್ತು ಮನೆ ಮಾಲೀಕರು ವ್ಯವಹಾರವನ್ನು ಹೆಚ್ಚು ಪಾರದರ್ಶಕವಾಗಿ ನಡೆಸಬೇಕಾಗುತ್ತದೆ. ಅಲ್ಲದೇ ದೊಡ್ಡ ಮೊತ್ತದ ಮುಂಗಡ ಪಾವತಿಗಳನ್ನು ಕಡಿಮೆ ಮಾಡಿ ಎಲ್ಲರನ್ನೂ ಒಂದೇ ನಿಯಮದಡಿಯಲ್ಲಿ ತರಲು ಯೋಜನೆ ಜಾರಿಗೆಗೊಳಿಸಲಾಗಿದೆ.
ಏನಿದೆ ನಿಯಮ?
ಹೊಸ ನಿಯಮಗಳ ಪ್ರಕಾರ ಭದ್ರತಾ ಠೇವಣಿಗಳನ್ನು ಎರಡು ತಿಂಗಳ ಬಾಡಿಗೆಗೆ ಮಿತಿಗೊಳಿಸಲಾಗಿದೆ. ಇದು ಮುಂಬೈ ಮತ್ತು ಬೆಂಗಳೂರಿನಲ್ಲಿವಾಸಿಸುತ್ತಿರುವ ಬಾಡಿಗೆದಾರರಿಗೆ ದೊಡ್ಡ ಪರಿಹಾರವಾಗಿದೆ. ಸಾಮಾನ್ಯವಾಗಿ ಇಲ್ಲಿ ಠೇವಣಿಗಳು ಒಂದು ವರ್ಷದ ಬಾಡಿಗೆಗೆ ಸಮಾನವಾಗಿ ಇರುತ್ತಿತ್ತು. ಇದನ್ನು ಈಗ ಕಾನೂನುಬಾಹಿರವೆಂದು ಪರಿಗಣಿಸಲಾಗಿದೆ. ಹೀಗಾಗಿ ಇದು ಬಾಡಿಗೆದಾರರ ಮೇಲಿನ ಆರ್ಥಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.
ಬಾಡಿಗೆ ಒಪ್ಪಂದಗಳ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ. ನಗರಗಳಲ್ಲಿ ವಿಶೇಷವಾಗಿ ಮೌಖಿಕ ಭರವಸೆ ಅಥವಾ ಕೈಬರಹದ ಕಾಗದದ ಮೂಲಕ ಮನೆಗಳನ್ನು ಬಾಡಿಗೆಗೆ ನೀಡುವುದು ಚಾಲ್ತಿಯಲ್ಲಿದೆ. ಆದರೆ ಹೊಸ ನಿಯಮದಲ್ಲಿ ಇದಕ್ಕೆ ಅವಕಾಶವಿಲ್ಲ. ಮನೆ ಬಾಡಿಗೆಗೆ ನೀಡಿದ ಎರಡು ತಿಂಗಳೊಳಗೆ ನೋಂದಾಯಿಸಬೇಕು. ಇದನ್ನು ಆನ್‌ಲೈನ್‌ನಲ್ಲಿ ಅಥವಾ ಸ್ಥಳೀಯ ರಿಜಿಸ್ಟ್ರಾರ್‌ನಲ್ಲಿ ಮಾಡಬಹುದಾಗಿದೆ.
ಒಂದು ವೇಳೆ ನೋಂದಣಿ ನಿಯಮ ಪಾಲಿಸದೇ ಇದ್ದರೆ 5,000 ರೂ. ದಂಡವನ್ನು ಪಾವತಿಸಬೇಕಾಗುತ್ತದೆ. ಅನೌಪಚಾರಿಕ ವ್ಯವಹಾರಗಳು ಹೆಚ್ಚಾಗಿ ಜಗಳಕ್ಕೆ ಕಾರಣವಾಗುತ್ತದೆ. ಇದರಿಂದ ಈ ನಿಯಮವನ್ನು ಕಡ್ಡಾಯ ಮಾಡಲಾಗಿದೆ. ಅಲ್ಲದೇ ಒಪ್ಪಂದಗಳಲ್ಲಿ ಕೊನೆಯ ಕ್ಷಣಗಳಲ್ಲಿ ಕೆಲವು ಬದಲಾವಣೆ ಮಾಡುವುದನ್ನು ತಪ್ಪಿಸಲು ಸರ್ಕಾರವು ಪ್ರಮಾಣಿತ ಬಾಡಿಗೆ ಒಪ್ಪಂದದ ಟೆಂಪ್ಲೇಟ್ ಅನ್ನು ಪರಿಚಯಿಸಿದೆ.
Physical Assault: ಕಾಂಗ್ರೆಸ್ ಶಾಸಕನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ; ರಾಹುಲ್ ಮಮ್‌ಕೂಟತಿಲ್ ನಾಪತ್ತೆ
ಹೊಸ ನಿಯಮದ ಪ್ರಕಾರ ಹಠಾತ್ ಬಾಡಿಗೆ ಹೆಚ್ಚಳ ಮಾಡುವಂತಿಲ್ಲ. ವರ್ಷಕ್ಕೆ ಒಂದು ಬಾರಿ ಮಾತ್ರ ಹೆಚ್ಚಳ ಮಾಡಬಹುದು. ಬಾಡಿಗೆ ಹೆಚ್ಚಳಕ್ಕೆ 90 ದಿನಗಳ ಮೊದಲು ಸೂಚನೆ ನೀಡಬೇಕು. 5,000 ರೂ. ಗಿಂತ ಹೆಚ್ಚಿನ ಬಾಡಿಗೆಗೆ ಡಿಜಿಟಲ್ ಪಾವತಿ ಕಡ್ಡಾಯವಾಗಿದೆ. ಬಾಡಿಗೆ 50,000 ರೂ. ಗೂ ಅಧಿಕವಿದ್ದರೆ ಟಿಡಿಎಸ್ ಅನ್ವಯಾವಾಗುತ್ತದೆ. ಯಾಕೆಂದರೆ ಇದು ದುಬಾರಿ ಬಾಡಿಗೆ ಮನೆಗಳನ್ನು ಸ್ಪಷ್ಟ ತೆರಿಗೆ ನಿಯಮಗಳ ಅಡಿಯಲ್ಲಿ ತರಲಿದೆ.
ಇನ್ನು ಬಾಡಿಗೆ ಮನೆಗೆ ಸಂಬಂಧಿಸಿದ ವ್ಯಾಜ್ಯಗಳನ್ನು ವಿಶೇಷ ಬಾಡಿಗೆ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳು 60 ದಿನಗಳಲ್ಲಿ ಇತ್ಯರ್ಥಪಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.