ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇಂಡಿಗೋಗೆ ಬಿಗ್‌ ಶಾಕ್‌; ವಿಮಾನಯಾನ ಸಂಸ್ಥೆಗಳಿಗೆ ಹೊಸ ಸುರಕ್ಷತಾ ನಿಯಮ ಜಾರಿ, ಕಾನೂನು ಹೇಳೋದೇನು?

ಕಳೆದ ಸೋಮವಾರ ಜಾರಿಗೆ ಬಂದಿರುವ ಹೊಸ ಸುರಕ್ಷತಾ ನಿಯಮವು ಇಂಡಿಗೋಗೆ ಭಾರಿ ಹೊಡೆತ ನೀಡಿದೆ. ದೇಶಾದ್ಯಂತ 500ಕ್ಕೂ ಹೆಚ್ಚು ಇಂಡಿಗೋ ವಿಮಾನಗಳು ಸಂಚಾರ ರದ್ದುಗೊಳಿಸಿದ ಬಳಿಕ ಪ್ರಯಾಣಿಕರ ಆಕ್ರೋಶ ಮುಗಿಲು ಮುಟ್ಟಿದೆ. ವಿಮಾನಯಾನ ಸಂಸ್ಥೆಯಿಂದ ಸರಿಯಾದ ಸ್ಪಂದನೆ ಇಲ್ಲದೇ ಇರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಯಾಕೆ ಹೀಗಾಯಿತು ಎನ್ನುವುದಕ್ಕೆ ಕಾರಣ ಇಲ್ಲಿದೆ.

(ಸಂಗ್ರಹ ಚಿತ್ರ)

ನವದೆಹಲಿ: ದೇಶಾದ್ಯಂತ ಕಾರ್ಯ ನಿರ್ವಹಿಸುವ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಕಳೆದ ಸೋಮವಾರದಿಂದ ಹೊಸ ಸುರಕ್ಷತಾ ನಿಯಮಗಳನ್ನು(New safty rules) ಜಾರಿಗೆಗೊಳಿಸಲಾಗಿದೆ. ಇದು ಇಂಡಿಗೋ (IndiGo Flight) ಸಂಸ್ಥೆಗೆ ಭಾರಿ ಹೊಡೆತವನ್ನು ನೀಡಿದೆ. ದೇಶಾದ್ಯಂತ ಪ್ರತಿನಿತ್ಯ ಸುಮಾರು 2,200 ವಿಮಾನಗಳನ್ನು ನಿರ್ವಹಿಸುವ ಇಂಡಿಗೋದ ಹಲವಾರು ವಿಮಾನಗಳ ಹಾರಾಟ ರದ್ದುಗೊಂಡಿದ್ದು (Flight cancel), ಅನೇಕ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದರು. ಅಲ್ಲದೇ ಈ ಸಂದರ್ಭದಲ್ಲಿ ಅವರಿಗೆ ಸರಿಯಾದ ಸ್ಪಂದನೆ ಸಿಗದೇ ಇದ್ದುದರಿಂದ ವಿಮಾನಯಾನ ಸಂಸ್ಥೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಯಿತು.

ಅನೇಕ ಪ್ರಯಾಣಿಕರು ಕೋಪ, ಹತಾಶೆಗಳನ್ನು ವ್ಯಕ್ತಪಡಿಸಿದ್ದು, ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿನ ಇಂಡಿಗೋ ಕೌಂಟರ್‌ಗಳಲ್ಲಿ ಅವ್ಯವಸ್ಥೆ ಉಂಟಾಗಿದೆ. ಒಂದೆಡೆ ವಿಮಾನಯಾನ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಇನ್ನೊಂದೆಡೆ ನೂರಾರು ವಿಮಾನಗಳ ವಿಳಂಬ, ರದ್ದುಗೊಳ್ಳುತ್ತಿದೆ. ಸಾವಿರಾರು ವಿಮಾನಯಾನ ಸಂಸ್ಥೆಗಳಿಗೆ ವಿಮಾನ ನಿಲ್ದಾಣದಲ್ಲಿ ತೊಂದರೆಗಳು ಎದುರಾಗುತ್ತಿವೆ.

IndiGo Flights Cancellations:‌ ನಾಲ್ಕನೇ ದಿನಕ್ಕೆ ಮುಂದುವರಿದ ಇಂಡಿಗೋ ವಿಮಾನ ರದ್ದತಿ, 550ಕ್ಕೂ ಹೆಚ್ಚು ಫ್ಲೈಟ್‌ ಕ್ಯಾನ್ಸಲ್

ಏನು ಕಾರಣ?

ಇಂಡಿಗೋ ವಿಮಾನಯಾನ ಸಂಸ್ಥೆಯ ಈ ದುಸ್ಥಿತಿಗೆ ತಂತ್ರಜ್ಞಾನ ದೋಷಗಳು, ಚಳಿಗಾಲಕ್ಕೆ ಸಂಬಂಧಿಸಿದ ವೇಳಾಪಟ್ಟಿ ಬದಲಾವಣೆ, ಪ್ರತಿಕೂಲ ಹವಾಮಾನ ಪರಿಸ್ಥಿತಿ, ವಾಯುಯಾನ ವ್ಯವಸ್ಥೆಯಲ್ಲಿ ಹೆಚ್ಚಿದ ದಟ್ಟಣೆ, ಸಿಬ್ಬಂದಿಗೆ ವಿಧಿಸಲಾದ ಹೊಸ ಕರ್ತವ್ಯ ನಿಯಮಗಳು ಕಾರಣವಾಗಿದೆ. ಹೊಸ ನಿಯಮವು ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಇದಕ್ಕಾಗಿ ಪೈಲಟ್ ಮತ್ತು ಸಿಬ್ಬಂದಿಗೆ ಸಾಕಷ್ಟು ವಿಶ್ರಾಂತಿಗೆ ಆದ್ಯತೆ ನೀಡಲಾಗಿದೆ.

ಹೊಸ ನಿಯಮದ ಪ್ರಕಾರ ವಿಮಾನಯಾನ ಸಿಬ್ಬಂದಿಗೆ ವಾರಕ್ಕೊಮ್ಮೆ ಕರ್ತವ್ಯ ಅವಧಿ ಮರು ಹೊಂದಿಕೆ, ವಿಶ್ರಾಂತಿ ಅವಧಿ, ರಾತ್ರಿ ಅವಧಿಯಲ್ಲಿ ಒಂದು ಗಂಟೆ ವಿಸ್ತರಣೆ, ವಿಮಾನ ಕರ್ತವ್ಯ ಅವಧಿಯಲ್ಲಿ ಮಿತಿ, ರಾತ್ರಿ ಪಾಳಿ ಎರಡು ಪಟ್ಟು ಕಡಿಮೆ ಮಾಡಲಾಗಿದೆ. ಈ ನಿಯಮ ಜಾರಿಯಾದ ಬಳಿಕ ವಿಮಾನಯಾನ ಸಂಸ್ಥೆಯ ಹಿಂದಿನ ವೇಳಾಪಟ್ಟಿಗಳಲ್ಲಿ ಕರ್ತವ್ಯದಲ್ಲಿದ್ದ ಅನೇಕ ಸಿಬ್ಬಂದಿ ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಇದರಿಂದ ಅವ್ಯವಸ್ಥೆ ಉಂಟಾಗಿ ಹಲವಾರು ವಿಮಾನ ಹಾರಾಟ ರದ್ದುಗೊಳ್ಳಲು, ವಿಳಂಬವಾಗಲು ಕಾರಣವಾಯಿತು.

ಇಂಡಿಗೋ ಮೇಲೆ ಪರಿಣಾಮ ಬೀರಿದ್ದು ಯಾಕೆ?

ದೇಶಾದ್ಯಂತ ಇಂಡಿಗೋ ಪ್ರತಿದಿನ 2,200 ಕ್ಕೂ ಹೆಚ್ಚು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳನ್ನು ನಿರ್ವಹಿಸುತ್ತಿದೆ. ಇದು ದೇಶದಲ್ಲಿ ಕಾರ್ಯನಿರ್ವಹಿಸುವ ಇತರ ವಿಮಾನಯಾನ ಸಂಸ್ಥೆಗಳ ವಿಮಾನಗಳಿಗಿಂತ ಎರಡು ಪಟ್ಟು ಹೆಚ್ಚು. ಹೀಗಾಗಿ ಇಂಡಿಗೋ ವಿಮಾನಯಾನ ಸಂಸ್ಥೆಯ ಶೇ. 10- 20 ರಷ್ಟು ವಿಮಾನಗಳು ರದ್ದಾದರೂ ಸಂಪೂರ್ಣ ವಿಮಾನಯಾನ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.

ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಇಂಡಿಗೋ ಸಾಮಾನ್ಯವಾಗಿ ಹೆಚ್ಚಿನ ಹಾರಾಟವನ್ನು ರಾತ್ರಿ ವೇಳೆ ನಿರ್ವಹಿಸುತ್ತದೆ. ರಾತ್ರಿ ಅದರ ಹಾರಾಟದ ಸಮಯ ಗರಿಷ್ಠವಾಗಿದೆ. ಆದರೆ ಹೊಸ ನಿಯಮಗಳಿಗೆ ಇದು ವಿರುದ್ಧವಾಗಿರುವುದು ಈ ಅವ್ಯವಸ್ಥೆಗೆ ಕಾರಣವಾಗಿದೆ.

ಹೊಸ ನಿಯಮಗಳಿಗೆ ಅನುಗುಣವಾಗಿ 15 ದಿನಗಳ ಮುಂಚಿತವಾಗಿ ಸಿಬ್ಬಂದಿ ಪಟ್ಟಿ ಮರು ಹೊಂದಿಸುವುದರಲ್ಲಿ ಇಂಡಿಗೋ ವಿಫಲವಾಗಿದ್ದು, ಸಂಪೂರ್ಣ ಕಾರ್ಯಯೋಜನೆಯ ಮೇಲೆ ಪರಿಣಾಮ ಬೀರಿದೆ. ಹೊಸ ನಿಯಮ, ಹೆಚ್ಚಿದ ವಿಶ್ರಾಂತಿ ಅವಧಿ ಮತ್ತು ಇತರ ನಿರ್ಬಂಧಗಳನ್ನು ಪಾಲಿಸಲು ಅಗತ್ಯವಿರುವ ಒಟ್ಟು ಪೈಲಟ್‌ಗಳ ಸಂಖ್ಯೆ ಹೆಚ್ಚಿಸಲಾಗಿಲ್ಲ. ಇದು ಪ್ರಸ್ತುತ ಉದ್ಭವವಾಗಿರುವ ಸಮಸ್ಯೆಗೆ ಮುಖ್ಯ ಕಾರಣವಾಗಿದೆ.

ಎಷ್ಟು ವಿಮಾನಗಳ ಮೇಲೆ ಪರಿಣಾಮ?

ಕಳೆದ 48 ಗಂಟೆಗಳಲ್ಲಿ 300 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಶುಕ್ರವಾರ ಸುಮಾರು 100 ವಿಮಾನಗಳು ರದ್ದುಗೊಂಡಿವೆ. ಇದರಿಂದ ತೊಂದರೆಗೆ ಒಳಗಾಗಿರುವ ಹಲವಾರು ವಿಮಾನ ಯಾತ್ರಿಕರು ವಿಮಾನ ನಿಲ್ದಾಣದಲ್ಲಿ ಎದುರಾಗುತ್ತಿರುವ ತೊಂದರೆಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಈ ನಡುವೆಯೇ ಇಂಡಿಗೋ ಮುಂದಿನ 48 ಗಂಟೆಗಳಲ್ಲಿ ತನ್ನ ಕಾರ್ಯಾಚರಣೆಗಳನ್ನು ಸಾಮಾನ್ಯಗೊಳಿಸಲಾಗುವುದು ಎಂದು ಭರವಸೆ ನೀಡಿದೆ. ಇದಕ್ಕಾಗಿ ನಮ್ಮ ತಂಡಗಳು 24X7 ಗಂಟೆ ಕೆಲಸ ಮಾಡುತ್ತಿದೆ. ಪ್ರಯಾಣಿಕರಿಗೆ ಆಗಿರುವ ತೊಂದರೆಗಳಿಗೆ ಕ್ಷಮೆಯಾಚಿಸುವುದಾಗಿ ತಿಳಿಸಿದೆ.

ರೂಪಾಯಿ ಮೌಲ್ಯ ಕುಸಿತ: ಆರ್ ಬಿಐನಿಂದ ರೆಪೋ ದರ ಇಳಿಕೆ

ಪ್ರಯಾಣಕ್ಕೆ ಯೋಜನೆ ಹೀಗಿರಲಿ

ವಿಮಾನ ಪ್ರಯಾಣ ಮಾಡುವವರು ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ವಿಮಾನದ ಸ್ಥಿತಿಯನ್ನು ಪರಿಶೀಲಿಸುವುದು ಒಳ್ಳೆಯದು. ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣಕ್ಕೆ ತೆರಳಲು ಪ್ರಯತ್ನಿಸಿ. ವಿಮಾನ ರದ್ದಾದರೆ ಮತ್ತು ನೀವು ವಿಮಾನ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಳೆಯಬೇಕಾದ ಪರಿಸ್ಥಿತಿ ಬಂದರೆ ತಿಂಡಿ, ನೀರು, ಔಷಧಗಳು ಸೇರಿದಂತೆ ಅಗತ್ಯ ವಸ್ತುಗಳು ಜೊತೆಯಲ್ಲಿರಲಿ. ಅವಕಾಶವಿದ್ದರೆ ಪ್ರಯಾಣದ ದಿನ ಬದಲಾವಣೆ ಮಾಡಿಕೊಳ್ಳಿ. ಟಿಕೆಟ್‌ಗಳನ್ನು ಬುಕ್ ಮಾಡದೇ ಇದ್ದರೆ ಮರುಪಾವತಿಸಬಹುದಾದ ಯೋಜನೆಗಳು ಅಥವಾ ಪರ್ಯಾಯ ವಿಮಾನಗಳನ್ನು ಆಯ್ಕೆ ಮಾಡುವ ಅವಕಾಶಗಳನ್ನು ಬಳಸಿಕೊಳ್ಳಬಹುದು. ಹೆಚ್ಚಿನ ಮಾಹಿತಿ ಮತ್ತು ನಿರಂತರ ಅಪ್ಡೇಟ್ ಗಾಗಿ ಇಂಡಿಗೋದ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ಟ್ರ್ಯಾಕ್ ಮಾಡುತ್ತಿರುವುದು ಉತ್ತಮ.

ವಿದ್ಯಾ ಇರ್ವತ್ತೂರು

View all posts by this author